ಭಾನುವಾರ, ಜೂನ್ 13, 2021
21 °C

ಹಾಕಿ: ಹರಿಯಾಣ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಡಿದ ಹರಿಯಾಣದ ಆಟಗಾರ್ತಿಯರು ಶನಿವಾರ ಆರಂಭವಾದ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಎ‘ ಡಿವಿಷನ್ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.ಹಾಕಿ ಕರ್ನಾಟಕದ ಆಶ್ರಯದಲ್ಲಿ ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್‌ನಲ್ಲಿ ನಡೆದ ಟೂರ್ನಿಯ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ನೇಹಾ ಗೋಯಲ್ ನೇತೃತ್ವದ ಹರಿಯಾಣ ತಂಡವು 6–0 (2–0)ಯಿಂದ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ವಿರುದ್ಧ ಸುಲಭ ಜಯ ಗಳಿಸಿತು.  ಸಮಬಲಶಾಲಿ ತಂಡಗಳು  ಎಂದೇ ಟೂರ್ನಿಯಲ್ಲಿ ಪರಿಗಣಿಸಲಾ ಗಿರುವ ತಂಡಗಳಲ್ಲಿ ಹರಿಯಾಣದ ಪ್ರಾಬಲ್ಯವೇ ಎದ್ದು ಕಂಡಿತು.ಮಧ್ಯಾಹ್ನದ ಚುರುಗುಡುವ ಬಿಸಿಲಿ ನಲ್ಲಿ ತನಗೆ ಸಿಕ್ಕ ಎಲ್ಲ ಅವಕಾಶಗಳನ್ನೂ ಗೋಲುಗಳಾದ ಪರಿವರ್ತಿಸಿದ ಹರಿಯಾಣ ತಂಡವು  ಎಸ್‌ಎಐನ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಿತು.ಕಳೆದ ಬಾರಿಯ ಚಾಂಪಿಯನ್ ಹರದೀಪ್ ಕೌರ್ (7ನಿ) ತಂಡದ ಗೋಲು ಖಾತೆಯನ್ನು ತೆರೆದರು. ಶಾರ್ಟ್‌ ಪಾಸ್‌ಗಳಲ್ಲಿ ಹರಿಯಾಣ ಹುಡುಗಿಯರು ತೋರಿದ ಚುರುಕು ತನಕ್ಕೆ ಎಸ್‌ಎಐ ಬಳಿ ಉತ್ತರವೇ ಇರಲಿಲ್ಲ. ಪೆನಾಲ್ಟಿ ಕಾರ್ನರ್‌ಗಳು ಸಿಕ್ಕಾಗಲೂ ಎಸ್‌ಎಐ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ.  ಇದರ ಫಲವಾಗಿ 16ನೇ ನಿಮಿಷದಲ್ಲಿ ನವಪ್ರೀತ್ ಕೌರ್ ತಮ್ಮ ತಂಡದ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿದರು.  ಪ್ರಥಮಾ ರ್ಧದ ನಂತರದ ವಿರಾಮದಲ್ಲಿ ಎಸ್‌ಎಐ ಕೋಚ್ ಹೀರಾ ಸಿಂಗ್ ತಮ್ಮ ತಂಡಕ್ಕೆ ಆಟದ ಪಾಠವನ್ನು ಖಡಕ್ಕಾಗಿಯೇ ಹೇಳಿಕೊಟ್ಟರು. ಆದರೂ ಪ್ರಯೋಜನವಾಗಲಿಲ್ಲ.ದ್ವಿತೀಯಾರ್ಧದದಲ್ಲಿ ಹರಿಯಾಣ ತಂಡವು 4 ಗೋಲುಗಳನ್ನು ಕೊಳ್ಳೆ ಹೊಡೆಯಿತು. ನವಪ್ರೀತ್ ಕೌರ್ (48ನಿ), ಜ್ಯೋತಿ ಗುಪ್ತಾ (52ನಿ), ರೀತ್ (58), ದೇವಿಕಾ ಸೇನ್ (62ನಿ) ಗೋಲು ಗಳಿಸಿ ಸಂಭ್ರಮಿಸಿದರು. ಇನ್ನೊಂದು ಪಂದ್ಯದಲ್ಲಿ ಮಹಾ ರಾಷ್ಟ್ರ ತಂಡವು 3–2ರಿಂದ ಉತ್ತರ ಪ್ರದೇಶ ವಿರುದ್ಧ ಗೆಲುವು ಸಾಧಿಸಿತು.ಪಂದ್ಯ ಮೂರನೇ ನಿಮಿಷದಲ್ಲಿಯೇ ಐಶ್ವರ್ಯ ಚವ್ಹಾಣ್ ಮಹಾರಾಷ್ಟ್ರಕ್ಕೆ ಮೊದಲ ಗೋಲಿನ ಕಾಣಿಕೆ ನೀಡಿದರು. 27ನೇ ನಿಮಿಷದಲ್ಲಿ ಉತ್ತರಪ್ರದೇಶದ ಸೋನಲ್ ತಿವಾರಿ ಒಂದು ಗೋಲು ಹೊಡೆದರು. ಆರು ನಿಮಿಷಗಳ ನಂತರ ಮಹಾರಾಷ್ಟ್ರದ ಪೂಜಾ ಬೋಯಾರ್ (33ನಿ) ತಂಡದ ಗೋಲು ಗಳಿಕೆಯನ್ನು 3–1ಕ್ಕೆ ಏರಿಸಿದರು.ನಂತರದ ಅವಧಿಯಲ್ಲಿ ಉತ್ತರ ಪ್ರದೇಶದ ಶ್ರೇಯಾ ಸಿಂಗ್ (69ನಿ) ಮತ್ತೊಂದು ಗೋಲು ಹೊಡೆದರಾ ದರೂ ತಂಡವನ್ನು ಸೋಲಿನಿಮದ ಪಾರು ಮಾಡಲು ಸಾಧ್ಯವಾಗಲಿಲ್ಲ.ಜಾರ್ಖಂಡ್ ಭರ್ಜರಿ ಗೆಲುವು: ಬೆಳಿಗ್ಗೆ ನಡೆದ ಮೊದಲ ಪಂದ್ಯದಲ್ಲಿ ಜಾರ್ಖಂಡ್ ತಂಡವು 19–0 (10–0) ಯಿಂದ ಪಶ್ವಿಮ ಬಂಗಾಳದ ವಿರುದ್ಧ ನಿರಾಯಾಸ ಜಯ  ಸಾಧಿಸಿತು. ನಿಶಾ ರಾಣಿ (1,28, 34ನಿ), ಕಾಂತಿ ಪ್ರಧಾನ್ (7ನಿ, 15, 31, 60, 62), ರಜನಿ ಸೋರಂಗ್ (14, 48, 54, 55), ನೇಹಾ ತೋಪ್ನೋ (16ನಿ), ರಂಜಿತಾ ಮಿಂಜ್ (32), ಸುಭಾಷಿ ಹೆಮ್ರನ್ (33ನಿ), ನೋಮಿತಾ ಅಲೆಕ್ಸೊ (49, 58, 61, 69) ಗೋಲಿನ ಕಾಣಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.