ಬುಧವಾರ, ಮಾರ್ಚ್ 3, 2021
30 °C

ಹಾಕಿ: ಹರಿಯಾಣ ‘ಹ್ಯಾಟ್ರಿಕ್’ ಸಾಧನೆ

ಗಿರೀಶ ದೊಡ್ಡಮನಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಹರಿಯಾಣ ‘ಹ್ಯಾಟ್ರಿಕ್’ ಸಾಧನೆ

ಮೈಸೂರು: ಭಾನುವಾರದ ಬಿಸಿಲ ಧಗೆ ಇಳಿದು ಮುಸ್ಸಂಜೆಯ ತಂಗಾಳಿ ಬೀಸುವ ಮುನ್ನ ಹರಿಯಾಣದ ಹುಡುಗಿಯರು ರಾಷ್ಟ್ರೀಯ ಜೂನಿಯರ್ ‘ಎ’ ಡಿವಿಷನ್ ಚಾಂಪಿಯನ್‌ಷಿಪ್‌ ಗೆಲುವಿನ  ಹ್ಯಾಟ್ರಿಕ್ ಸಾಧಿಸಿದರು.ಚಾಮುಂಡಿ ವಿಹಾರದ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ನೇಹಾ ಗೋಯಲ್ ನೇತೃತ್ವದ ಹರಿಯಾಣ ತಂಡವು 2–0 ಗೋಲುಗಳಿಂದ ಹೋದ ಬಾರಿಯ ರನ್ನರ್‌ ಅಪ್ ಮಧ್ಯಪ್ರದೇಶ ಹಾಕಿ ಅಕಾಡೆಮಿಯನ್ನು ಸೋಲಿಸಿ ವಿಜಯೋತ್ಸವ ಆಚರಿಸಿತು. ಸುಮಾರು 350 ಪ್ರೇಕ್ಷಕರು ಸೇರಿದ್ದ ಗ್ಯಾಲರಿಯಲ್ಲಿದ್ದ  ಮೈಸೂರಿನ  ಎಂಟು ವರ್ಷದ ಬಾಲಕ  ‘ಭುವನ್’ ವಿಜೇತ ತಂಡದ ಆಟಗಾರ್ತಿ ಯರಿಗೆ ಸಿಹಿ ತಿನ್ನಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಿದ.ಕಳೆದ ಬಾರಿಯೂ ಹರಿಯಾಣ ಎದುರು ಫೈನಲ್‌ ನಲ್ಲಿ ಸೋಲನುಭವಿಸಿದ್ದ ಮಧ್ಯಪ್ರದೇಶ ತಂಡವು, ಮೈಸೂರಿನಲ್ಲಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಛಲದಿಂದ ಆಡಿತು. ಆದರೆ ಅವರಿಗೆ ಅದೃಷ್ಟ ಜೊತೆ ನೀಡಲಿಲ್ಲ. ಎಲ್ಲ ರೀತಿಯಿಂದಲೂ ಚಾಂಪಿಯನ್ ತಂಡಕ್ಕೆ ಪೈಪೋ ಟಿ ನೀಡಿದ ಪ್ರಿಯಾಂಕಾ ವಾಂಖೆಡೆ ನಾಯಕತ್ವದ ತಂಡ ವು ಸುಮಾರು 9 ಬಾರಿ ಗೋಲು ಗಳಿಸುವ ಅವಕಾಶ ಗಳನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತು.8ನೇ ನಿಮಿಷದಲ್ಲಿ  ಫಾರ್ವರ್ಡ್ ಲೈನ್ ಆಟಗಾರ್ತಿ ನರೀಂದರ್ ಕೌರ್, ಗೋಲ್ ಕೀಪರ್ ಮತ್ತು ಇಬ್ಬರು ರಕ್ಷಣಾ ಆಟಗಾರ್ತಿಯರನ್ನು ತಪ್ಪಿಸಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.ತದನಂತರ ಮಧ್ಯಪ್ರದೇಶ ಆಟಗಾರ್ತಿಯರು ಮತ್ತಷ್ಟು ವೇಗ ಮತ್ತು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪ್ರಥಮಾರ್ಧ ಮುಗಿಯುವ ಮುನ್ನ ಹಲವು ಬಾರಿ ‘ಡಿ’ ಪ್ರದೇಶಕ್ಕೆ ಚೆಂಡನ್ನು ಒಯ್ಯುವಲ್ಲಿ ಸಫಲರಾದರು. ಅದರಲ್ಲಿ ಆರು ಬಾರಿ ಗೋಲು ಬಾರಿಸುವ ಪ್ರಯತ್ನವು ಸ್ವಲ್ಪದರಲ್ಲಿಯೇ ತಪ್ಪಿಹೋಯಿತು. ಎಡಬದಿಯಿಂದಲೇ ರಿವರ್ಸ್ ಶಾಟ್ ಮೂಲಕ ಗೋಲು ಹೊಡೆಯುವ ಮಧ್ಯಪ್ರದೇಶ ಮುನ್ಪಡೆ ಆಟಗಾರ್ತಿಯರ ಯತ್ನಗಳೂ ಫಲ ನೀಡಲಿಲ್ಲ. ಆದರೆ ರಕ್ಷಣಾ ಆಟಗಾರ್ತಿ ದೀಕ್ಷಾ ತಿವಾರಿ (ಜರ್ಸಿ 21) ಮತ್ತು ಗೋಲ್‌ಕೀಪರ್ ದಿವ್ಯಾ ತಿಪೆ ಹರಿಯಾಣದ ಗೋಲು ಹೊಡೆಯುವ ಸಾಹಸಗಳಿಗೆ ಬಂಡೆಗಲ್ಲಿನಂತೆ ಅಡ್ಡ ನಿಂತರು.ವಾಗ್ವಾದ: ವಿರಾಮದ ಕೆಲವೇ ನಿಮಿಷಗಳ ಮುನ್ನ ಹರಿಯಾಣ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ನೀಡಿದ್ದನ್ನು ಮಧ್ಯಪ್ರದೇಶ ತಂಡದವರು  ವಿರೋಧಿಸಿ ದರು. ಈ ಸಂದರ್ಭದಲ್ಲಿ ಅಂಪೈರ್ ಅರ್ಚನಾ ಮತ್ತು ಮಾಧುರಿ ಅವರೊಂದಿಗೆ ಆಟಗಾರ್ತಿ ಯರು ವಾಗ್ವಾದ ನಡೆಸಿದರು. ಪೆನಾಲ್ಟಿ ಕಾರ್ನರ್‌ ಅವಕಾಶ ವನ್ನು ಹರಿಯಾಣ ಗೋಲ್‌ ಆಗಿ ಪರಿವರ್ತಿಸಲಿಲ್ಲ.ವಿರಾಮದ ನಂತರದ ಐದು ನಿಮಿಷದಲ್ಲಿ ಗೋಲುಗಳನ್ನು ಸಮಸ್ಥಿತಿಗೆ ತರಲು ಮಧ್ಯಪ್ರದೇಶ ತೋರಿದ ಆಟ ರೋಚಕವಾಗಿತ್ತು. ಆದರೆ ಹರಿಯಾಣದ ನಾಯಕಿ ನೇಹಾ ಗೋಯಲ್ (40ನಿ) ಆಕರ್ಷಕ ಗೋಲು ಗಳಿಸುವ ಮೂಲಕ ತಂಡಕ್ಕೆ ಮಹತ್ವದ ಮುನ್ನಡೆ ನೀಡಿದರು.ಇದರಿಂದ ಎದುರಾಳಿ ತಂಡದ ಹೋರಾಟ ಸ್ವಲ್ಪ ಮಟ್ಟಿಗೆ ಕಳೆಗುಂದಿತು. ಆದರೂ ನಾಲ್ಕು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಕೊನೆ ಕ್ಷಣದಲ್ಲಿಯೂ ಒಂದು ಬಾರಿ ಇಂತಹ ಪ್ರಯತ್ನ ಮಾಡಿದಾಗ ಗೋಲ್‌ಕೀಪರ್ ಶ್ವೇತಾ ತಡೆದರು.ರೋಚಕ ಹೋರಾಟ: ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಜಾರ್ಖಂಡ್ ತಂಡವು  ಗೆಲುವು ಸಾಧಿಸಿತು. ಜಾರ್ಖಂಡ್ ಮತ್ತು ಒಡಿಶಾ ತಂಡಗಳ ನಡುವಿನ ಪಂದ್ಯದ ನಿಗದಿತ ಅವಧಿಯಲ್ಲಿ ಒಂದೂ ಗೋಲು ದಾಖಲಾಗಲಿಲ್ಲ. ಉಭಯ ತಂಡದ ಆಟಗಾರ್ತಿಯರು ಭಾರಿ ಜಿಗುಟಿನ ಹೋರಾಟ ಪ್ರದರ್ಶಿಸಿದರು. ಆದರೆ ಟೈಬ್ರೇಕರ್‌ನಲ್ಲಿ ಒಡಿಶಾಕ್ಕೆ ಅದೃಷ್ಟ ಕೈಕೊಟ್ಟಿತು.ನೇಹಾ ಉತ್ತಮ ಗೋಲ್‌ಕೀಪರ್: ಕರ್ನಾಟಕದ ಗೋಲ್‌ಕೀಪರ್ ನಿಡುಮಾಂಡ ನೇಹಾ ಟೂರ್ನಿಯ ಉತ್ತಮ ಗೋಲ್‌ಕೀಪರ್ ಗೌರವಕ್ಕೆ ಪಾತ್ರರಾದರು. ಹರಿಯಾಣದ ಜ್ಯೋತಿ ಗುಪ್ತಾ ಟೂರ್ನಿಯ ಆಟ ಗಾರ್ತಿ ಮತ್ತು  ಒಡಿಶಾದ ರಶ್ಮಿತಾ ಮಿಂಜ್ (ಉತ್ತಮ ಡಿಫೆಂಡರ್), ಜಾರ್ಖಂಡ್‌ನ ರಜನಿ ಸೋರೆಂಗ್ (ಉತ್ತಮ ಮಿಡ್‌ಫೀಲ್ಡರ್), ಮಧ್ಯಪ್ರದೇಶದ ಪ್ರಿಯಾಂಕಾ ವಾಂಖೆಡೆ (ಉತ್ತಮ ಫಾರ್ವರ್ಡ್) ಅವರಿಗೆ ಹಾಕಿ ಕರ್ನಾಟಕವು ವಿಶೇಷ ಪ್ರಶಸ್ತಿಯಾಗಿ ಐ ಪಾಡ್‌ಗಳನ್ನು ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.