ಬುಧವಾರ, ಅಕ್ಟೋಬರ್ 16, 2019
28 °C

ಹಾಜರಾತಿ ಗೊಂದಲ: ತನಿಖೆಗೆ ಆದೇಶ

Published:
Updated:

ಬೆಂಗಳೂರು: ಗೊಟ್ಟಿಗೆರೆ ಬಳಿ ಇರುವ ಟಿ.ಜಾನ್ ಕಾಲೇಜಿನಲ್ಲಿನ ಹಾಜರಾತಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.ಎಂಬಿಎ ವಿದ್ಯಾರ್ಥಿಗಳಾದ ಸಿದ್ಧರಾಮೇಶ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಈ ಆದೇಶ ಹೊರಡಿಸಿದ್ದಾರೆ.`ಕಾಲೇಜಿಗೆ ಪ್ರತಿದಿನ ಹಾಜರಾಗಿದ್ದರೂ ತಾವು ಲ್ಯಾಪ್‌ಟಾಪ್ ಹೊಂದಿಲ್ಲ, ಕಾಲೇಜು ಕೇಳಿದಾಗಲೆಲ್ಲ ಹೆಚ್ಚುವರಿ ಶುಲ್ಕ ನೀಡಲಿಲ್ಲ ಎಂಬ ಕಾರಣಕ್ಕೆ ಹಾಜರಾತಿ ಕಡಿತಗೊಳಿಸಿ ತಮಗೆ ಪರೀಕ್ಷೆ ತೆಗೆದುಕೊಳ್ಳಲು ಕಾಲೇಜು ಅನುಮತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಕಾಲೇಜು ಈ ಆರೋಪಗಳನ್ನು ಅಲ್ಲಗಳೆದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಅಗತ್ಯ ಇದೆ~ ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.ನಾಲ್ಕು ವಾರಗಳಲ್ಲಿ ತನಿಖೆ ನಡೆಸಿ ಹೈಕೋರ್ಟ್‌ಗೆ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ ಅವರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.ಹಾಜರಾತಿ ಕಡಿಮೆ ಇರುವ ನೆಪ ಒಡ್ಡಿ ಗುರುವಾರದಿಂದ (ಜ.5) ನಡೆಯುತ್ತಿರುವ 3ನೇ ಸೆಮಿಸ್ಟರ್ ಪರೀಕ್ಷೆಗೆ ತಮಗೆ ಕುಳಿತುಕೊಳ್ಳಲು ಕಾಲೇಜು ಅವಕಾಶ ನೀಡುತ್ತಿಲ್ಲ ಎನ್ನುವುದು ಅರ್ಜಿದಾರರ ಆರೋಪ. ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ನ್ಯಾಯಮೂರ್ತಿಗಳು ಅನುಮತಿ ನೀಡಿದ್ದಾರೆ.ಈ ವಿದ್ಯಾರ್ಥಿಗಳ ಹಾಜರಾತಿ ಕುರಿತು ಹಾಜರಾತಿ ಪುಸ್ತಕವನ್ನು ಪರಿಶೀಲಿಸಲು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಬಯಸಿದ್ದರು. ಆದರೆ ತಾವು ಕಂಪ್ಯೂಟರ್‌ನ ಮೂಲಕ ಹಾಜರಾತಿ ಹಾಕುತ್ತಿದ್ದೇವೆ ಇತ್ಯಾದಿಯಾಗಿ ಕಾಲೇಜು ಸಮಜಾಯಿಷಿ ನೀಡಿತು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು ತನಿಖೆ ನಡೆಸುವುದೇ ಸೂಕ್ತ ಎಂದಿದ್ದಾರೆ.

Post Comments (+)