ಹಾಡಲ್ಲ, ಬಾಳ ಪಾಡು

ಸೋಮವಾರ, ಮೇ 27, 2019
33 °C

ಹಾಡಲ್ಲ, ಬಾಳ ಪಾಡು

Published:
Updated:

ಕನ್ನಡ ಮಾತನಾಡುವ ಪ್ರದೇಶಗಳು ಒಂದಾಗಿ `ಮೈಸೂರು~ ರಾಜ್ಯ ರೂಪುಗೊಂಡು ಒಂದು ದಶಕ ಕಳೆದಿತ್ತು. ಆದರೆ, ಗಡಿ ಸಮಸ್ಯೆಯ ಕಾವು ಕಡಿಮೆಯಾಗಿರಲಿಲ್ಲ.ಸೊಲ್ಲಾಪುರದ ಕಾರಣಕ್ಕಾಗಿ ಮಹಾರಾಷ್ಟ್ರ- ಮೈಸೂರು ನಡುವೆ ಹಾಗೂ ಕಾಸರಗೋಡು ಕಾರಣಕ್ಕಾಗಿ ಮೈಸೂರು- ಕೇರಳ ನಡುವೆ `ಬಿಸಿ~ ಮುಂದುವರೆದಿತ್ತು. ಅದೇ ಹೊತ್ತಿಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು. `ಮೈಸೂರು~ ರಾಜ್ಯದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ಸಮಸ್ಯೆಯ ಅಧ್ಯಯನ ನಡೆಸಲು ಏಕಸದಸ್ಯ ಆಯೋಗ ರಚನೆಗೆ ಒಪ್ಪಿಗೆ ಸೂಚಿಸಿದ್ದರು. ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ್ದು ಲೇಖಕಿ ಜಯದೇವಿತಾಯಿ ಲಿಗಾಡೆ. ಏಕೀಕರಣಕ್ಕಾಗಿ ಹೋರಾಟ ನಡೆಸಿ ಅದು ಕೈಗೂಡಿದ ನಂತರವೂ ಸೊಲ್ಲಾಪುರದ ಕನ್ನಡಿಗರು `ಪರಕೀಯ~ರಾಗಿ ಬದುಕಬೇಕಾದ ಸ್ಥಿತಿ ಬಂದದ್ದು ಜಯದೇವಿ ಅವರು ಕೆರಳುವಂತೆ ಮಾಡಿತ್ತು.1966 ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜಯದೇವಿತಾಯಿ ಅವರು ಮುಂಚೂಣಿಯಲ್ಲಿದ್ದರು. ಕೆಂಪೇಗೌಡ ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಿದರು. ನಂತರ ಫಲಕ ಹಿಡಿದು ಮುಖ್ಯಮಂತ್ರಿಗಳು ಸಭೆ ನಡೆಸುತ್ತಿದ್ದ ಎಂಪಿಸಿಸಿ ಭವನ (ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ)ದ ಕಡೆಗೆ ಮೆರವಣಿಗೆಯಲ್ಲಿ ನಡೆದರು. ಅವರ ಜೊತೆ ಪುತ್ರಿ ಲಲ್ಲೇಶ್ವರಿ ಮೂಗಿ ಮತ್ತು ಸಾವಿರಾರು ಜನ ಪ್ರತಿಭಟನಕಾರರಿದ್ದರು. `ಏಕಸದಸ್ಯ ಆಯೋಗ ಬಹಿಷ್ಕಾರ~ ಹಾಕುವ ಕುರಿತು ಘೋಷಣೆ ಹಾಕುತ್ತ ಪ್ರತಿಭಟನೆಕಾರರು ಎಂಪಿಸಿಸಿ ಭವನ ತಲುಪಿದರು. ಎಂದಿನಂತೆ ಪೊಲೀಸರು ಪ್ರತಿಭಟನೆಕಾರರನ್ನು ಮಾರ್ಗಮಧ್ಯದಲ್ಲಿಯೇ ತಡೆದರು. ಜಯದೇವಿತಾಯಿ ಮಾತ್ರ ಪೊಲೀಸರ ತಡೆಯನ್ನೂ ಲೆಕ್ಕಿಸದೇ ಮುನ್ನುಗಿದ್ದರು. ಅರೆಕ್ಷಣ ತಬ್ಬಿಬ್ಬಾಗುವ ಸರದಿ ಪೊಲೀಸರದಾಗಿತ್ತು. ಜಯದೇವಿ ಮತ್ತು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯುತ್ತಿರುವ ಸಂಗತಿ ಅರಿತ ಮುಖ್ಯಮಂತ್ರಿಗಳೇ ಸ್ವತಃ ತಾವು ನಡೆಸುತ್ತಿದ್ದ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದು ಬಂದರು.ಮುಖ್ಯಮಂತ್ರಿಗಳ ಜೊತೆಗೆ ನಡೆದ ಮಾತುಕತೆಯಲ್ಲಿ ಜಯದೇವಿ ಅವರು `ಏಕಸದಸ್ಯ ಆಯೋಗ ಬಹಿಷ್ಕಾರ~ಕ್ಕೆ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನಿಜಲಿಂಗಪ್ಪ ಅವರು, `ಕನ್ನಡ ಮಾತನಾಡುವ ಪ್ರದೇಶಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ~ ಎಂಬ ಹೇಳಿಕೆಗೆ ಜಯದೇವಿ ಅವರು ಮಣಿಯಲಿಲ್ಲ. ಕೊನೆಯಲ್ಲಿ ಏಕಸದಸ್ಯ ಆಯೋಗದ ತೀರ್ಪು ರಾಜ್ಯದ ವಿರುದ್ಧ ಬಂದರೆ ಇಡೀ ಸಚಿವ ಸಂಪುಟದ ಸದಸ್ಯರು ರಾಜೀನಾಮೆ ನೀಡುವ ಭರವಸೆ ಪಡೆದ ನಂತರವೇ  ಪ್ರತಿಭಟನೆ ಹಿಂದೆ ಪಡೆದರು. ಏಕಸದಸ್ಯ ಆಯೋಗದ ವರದಿ ರಾಜ್ಯದ ಪರವಾಗಿ ಬಂದ ನಂತರವೂ ಸೊಲ್ಲಾಪುರವು `ಮೈಸೂರು~ ರಾಜ್ಯಕ್ಕೆ ಸೇರ್ಪಡೆ ಆಗಲಿಲ್ಲ.ಇದರಿಂದ ನೊಂದ ಜಯದೇವಿ ಅವರು ಸೊಲ್ಲಾಪುರವನ್ನು ತ್ಯಜಿಸಿ ತಮಗೆ ಪ್ರಿಯವಾಗಿ ಬಸವಣ್ಣನ ನಾಡು `ಕಲ್ಯಾಣ~ಕ್ಕೆ ಬಂದು ನೆಲೆಸಿದರು. ಬಸವಕಲ್ಯಾಣದ `ಭಕ್ತಿ ಭವನ~ದಲ್ಲಿ ಕೊನೆಯ ದಿನಗಳನ್ನು ಕಳೆದರು.ನ್ಯಾಯೋಚಿತ ಬೇಡಿಕೆಗಳಿಗಾಗಿ ಹೋರಾಟ, ಪ್ರತಿಭಟನೆಗಳಲ್ಲಿ ಜಯದೇವಿ ತಾಯಿ ಲಿಗಾಡೆ ಅವರು ನೇರವಾಗಿ ಭಾಗವಹಿಸಿದ್ದು ಅದೇ ಮೊದಲೇನಲ್ಲ. ಅದು ಕೊನೆಯದೂ ಆಗಿರಲಿಲ್ಲ. ಜಯದೇವಿ ಅವರ ಬದುಕು ನಿಜವಾದ ಅರ್ಥದಲ್ಲಿ ಹೋರಾಟದ ಹಾದಿ. ಅದರಲ್ಲಿ ಸ್ವಾತಂತ್ರ್ಯ, ಕನ್ನಡ, ಏಕೀಕರಣ, ಸ್ತ್ರೀಶಿಕ್ಷಣ, ದಲಿತ ವಿಮೋಚನೆ, ಕಾರ್ಮಿಕ ಕಲ್ಯಾಣ ಹೀಗೆ ಹತ್ತು ಹಲವು. ಕವಿಯಾಗಿದ್ದ ಜಯದೇವಿ ಅವರು `ಧ್ಯಾನರಸ ಕುಡಿಕುಡಿದು~ ಬರೆದದ್ದು ಬರೀ ಸಾಹಿತ್ಯ ಅಲ್ಲ. ಅದು `ಹಾಡಲ್ಲ ಬಾಳ ಪಾಡು~. ಕೇವಲ ಹಾಡುತ್ತ ಕುಳಿತವರಿಗೆ ಎಚ್ಚರಿಸಲೆಂದೇ `ಕನ್ನಡ ನಾಡು ಚೆಲುವಾಗಲೆಂದು ಬರಿದೆ ಹಾಡುವಿರೇಕೆ, ಚೆಲುವು ಮಾಡಿರಿ~ ಎಂದು ಸೂಚಿಸಿದ್ದರು.ಸರಿಯಾಗಿ ನೂರು ವರ್ಷಗಳ ಹಿಂದೆ 1912 ಜೂನ್ 23ರಂದು ಸೊಲ್ಲಾಪುರದ `ಇಂದ್ರಭವನ~ದಲ್ಲಿ ಜನಿಸಿದ ಜಯದೇವಿತಾಯಿ ಅವರು ಸಿರಿವಂತ ಕುಟುಂಬಕ್ಕೆ ಸೇರಿದವರು. ಜಯದೇವಿ ಅವರ ಅಜ್ಜ (ತಾಯಿಯ ತಂದೆ) ವಾರದ ಮಲ್ಲಪ್ಪ ಅವರು ವಿಕ್ಟೋರಿಯಾ ರಾಣಿಯ ಆಡಳಿತದ ಅವಧಿಯಲ್ಲಿ ಭಾರತದ 12 ಪ್ರತಿಷ್ಠಿತ ಶ್ರೀಮಂತರದಲ್ಲಿ ಒಬ್ಬರಾಗಿದ್ದರು. ವಾರದ ಮಲ್ಲಪ್ಪನವರ ವಾಡೆ `ಇಂದ್ರಭವನ~ ಇಂದು ಸೊಲ್ಲಾಪುರ ನಗರಸಭೆಯ ಕಚೇರಿಯಾಗಿದೆ. ವಾರದ ಮಲ್ಲಪ್ಪ ಅವರ ಪುತ್ರಿ ಸಂಗವ್ವ ಮಡಕಿ ಹಾಗೂ ಚೆನ್ನಬಸಪ್ಪ ಮಡಕಿ ಅವರ ಪುತ್ರಿ ಜಯದೇವಿ ಅವರು ಬಾಲ್ಯದ ದಿನಗಳನ್ನು ಕಳೆದದ್ದು `ತೋಟದ ಮನೆ~ಯಲ್ಲಿ. ಹಸಿರುವನರಾಶಿಯ ನಡುವೆ ಕೃಷಿಕರು, ಕೆಲಸಗಾರರ ನಡುವೆ ಬೆಳೆದ ಜಯದೇವಿ ಅವರಿಗೆ ಹಾಡು-ಹಸೆ, ಧಾರ್ಮಿಕ ಸಂಸ್ಕಾರಗಳು ಆಯಾಚಿತವಾಗಿ ದೊರೆತವು. ಅಜ್ಜ ಆರಂಭಿಸಿದ ಸ್ತ್ರೀಶಿಕ್ಷಣ ಚಳವಳಿಯ ಲಾಭ ದೊರೆತು ಮರಾಠಿ ಪ್ರಾಥಮಿಕ ಶಾಲೆ ಸೇರಿದರು.ಹದಿನಾಲ್ಕನೇ ವಯಸ್ಸಿನಲ್ಲಿ ಸೊಲ್ಲಾಪುರದ ಲಿಗಾಡೆ ಮನೆತನಕ್ಕೆ ಸೇರಿದ ಚನ್ನಮಲ್ಲಪ್ಪ ಅವರೊಂದಿಗೆ ಮದುವೆ ನಡೆಯಿತು. ಲಿಗಾಡೆ ಮನೆತನ ಕೂಡ ಸಿರಿವಂತಿಕೆಗೆ ಕಡಿಮೆಯದೇನಾಗಿರಲಿಲ್ಲ. ಆದರೆ, ಕಿರುಕುಳ ನೀಡಬೇಕೆನ್ನುವ ಮಲಅತ್ತೆಯ ಕಾರಣದಿಂದ ಬೆಲೆಬಾಳುವ ಒಡವೆ, ವಸ್ತುಗಳು ಸಿಗಲಿಲ್ಲ. ಅದನ್ನು ಜಯದೇವಿ ಹಚ್ಚಿಕೊಳ್ಳಲಿಲ್ಲ ಕೂಡ.ಸೊಸೆಯ ಸರಳ ಸ್ವಭಾವ ಅರಿತು ಆಭರಣ ಮರಳಿಸಲು ಬಂದಾಗ ಜಯದೇವಿ ಅವುಗಳನ್ನು ತೊರೆದು ಬಹಳ ದೂರ ಬಂದಾಗಿತ್ತು. ರುದ್ರಾಕ್ಷಿ ಮಾಲೆಯೊಂದೇ ಅವರ ಜೊತೆಗಿದ್ದದ್ದು. ದೊಡ್ಡ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಹೆಗಲ ಮೇಲಿತ್ತು. ಮೂರು ಮಕ್ಕಳ ತಾಯಿಯಾದ ನಂತರ ಸೊನ್ನಲಿಗೆ ಸಿದ್ಧರಾಮ ಬರೆದ ವಚನಗಳ ಕನ್ನಡ ಕಲಿಯುವ ಆಸೆ ಹುಟ್ಟಿತು. ಹೀಗೆ ಹುಟ್ಟಿದ ಆಸೆ ಈಡೇರಲು ಹೆಚ್ಚು ಕಾಲ ಹಿಡಿಯಲಿಲ್ಲ. ಕೇವಲ ಕನ್ನಡ ಕಲಿಕೆಗೆ ಮಾತ್ರ ಸೀಮಿತವಾಗದೆ ಅದನ್ನು ವಿಸ್ತರಸಿ ಕವಿತೆ- ಕಾವ್ಯ ಬರೆಯುವವರೆಗೂ ಹರಡಿತು. ತ್ರಿಪದಿಯಲ್ಲಿ ಜಯದೇವಿ ರಚಿಸಿದ `ಸಿದ್ಧರಾಮ ಪುರಾಣ~ ಕಾವ್ಯವು ಕೇವಲ ವಚನ ಸಾಹಿತ್ಯದಲ್ಲಿ ಆಸಕ್ತಿ ಇರುವವರನ್ನು ಮಾತ್ರವಲ್ಲದೆ ಇಡೀ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆಯಿತು. `ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಇವರೊಬ್ಬರೇ~ ಎಂದು ಜಿ.ಪಿ.ರಾಜರತ್ನಂ ಸ್ಮರಿಸಿದರೆ ಮತ್ತೊಬ್ಬ ಸಾಹಿತಿ ನಿರಂಜನ ಅವರು `ಜಯದೇವಿತಾಯಿ ಅವರು ಜನಪದ ಕಾವ್ಯವನ್ನು ಹೊಸ ಎತ್ತರಕ್ಕೆ ಒಯ್ದು ಮುಟ್ಟಿಸಿದ್ದಾರೆ~ ಎಂದಿದ್ದರು.ಜಯದೇವಿ ಅವರು- `ಜಯಗೀತೆ (1952), `ತಾಯಿಯ ಪದಗಳು~ (1959), ತಾರಕ ತಂಬೂರಿ (1968), ಬಂದೇವ ಕಲ್ಯಾಣಕ (1982), ಸಾವಿರದ ಪದಗಳು (1986) ಕಾವ್ಯಸಂಗ್ರಹದ ಮೂಲಕ ಸಾಹಿತ್ಯಪ್ರಿಯರ ಮನ್ನಣೆ ಗಳಿಸಿದರು. 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ 48ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾದರು. ಈ ಮನ್ನಣೆಗೆ ಪಾತ್ರರಾದ ಮೊದಲ ಲೇಖಕಿ ಎಂಬ ಹೆಗ್ಗಳಿಕೆ ಅವರದು. ವಚನಗಳನ್ನು ಮರಾಠಿಗೆ ತರ್ಜುಮೆ ಮಾಡಿ ಪ್ರಕಟಿಸಿ ಕನ್ನಡದ ಸೊಗಡನ್ನು ನೆರನಾಡಿಗೂ ಪರಿಚಯಿಸಿದರು. `ಸಮೃದ್ಧ ಕರ್ನಾಟಕಾಂಚೀ ರೂಪರೇಷಾ~ (1954), ಸಿದ್ಧರಾಮಾಂಚೀ ತ್ರಿವಿಧಿ (1958), ಬಸವ ವಚನಾಮೃತ (1966) ಜಯದೇವಿ ಅವರ ಮರಾಠಿ ಪುಸ್ತಕಗಳು.

ಈ ಮೊದಲೇ ಪ್ರಸ್ತಾಪಿಸಿದಂತೆ ಜಯದೇವಿ ಅವರ ಕಾರ್ಯಕ್ಷೇತ್ರ ಕೇವಲ ಬರವಣಿಗೆ ಆಗಿರಲಿಲ್ಲ. ಗಾಂಧೀಜಿ ಅವರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದ ಅವರು ನಂತರದ ದಿನಗಳಲ್ಲಿ ಹೈದರಾಬಾದ್ ನಿಜಾಂ ಆಡಳಿತ ಪ್ರದೇಶದಲ್ಲಿ ರಜಾಕಾರರ ಹಾವಳಿಯಿಂದ ನಲುಗಿದ ಜನರಿಗೆ ಸೊಲ್ಲಾಪುರದಲ್ಲಿ ಆಶ್ರಯ ನೀಡಿದರು. ಕನ್ನಡ ಮಾತನಾಡುವ ಪ್ರದೇಶಗಳು ಒಂದಾಗಬೇಕು ಎಂದು ನಡೆದ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿದ್ದ ಜಯದೇವಿ ಅವರು ಮೈಸೂರು ರಾಜ್ಯ ಸ್ಥಾಪನೆಯ ನಂತರ `ಕನ್ನಡದ ಭಾಗಗಳನ್ನು ಕಳೆದುಕೊಂಡು ಪ್ರಾಂತ ರಚನೆಗೆ ನಾವು ಸಿದ್ಧರಿಲ್ಲ. ಆಡಳಿತದ ಅನುಕೂಲತೆಯೆಂಬ ಅಸ್ತ್ರದಿಂದ ಕನ್ನಡಿಗರ ಕರುಳನ್ನು ಕೊಯ್ಯಲಾಗಿದೆ~ ಎಂದು ವಿಷಾದಿಸಿದ್ದರು.ಜಯದೇವಿ ತಾಯಿ ಅವರ ಸಾಹಿತ್ಯ-ಬರವಣಿಗೆಯನ್ನು ಕುರಿತು ಚೆನ್ನವೀರ ಕಣವಿ ಕವಿತೆಯ ಸಾಲಿನೊಂದಿಗೆ ನೂರರ ನುಡಿನಮನ.`ಎದೆ ತುಂಬಿ ಹಾಡಿದರೆ ಹಾಲ-ಹಳ್ಳವೆ ಹರಿದು

ಮುಳ್ಳು ಕಂಟಿಗಳೆದೆಯ ಕೊಳ್ಳವೂ ತುಂಬುವುದು

ತುಳುಕುವುದು ಸೊನ್ನಲಾಪುರದ ಸಿದ್ಧರಾಮನ ಕೆರೆ~.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry