ಹಾಡಹಗಲೇ ಕುಖ್ಯಾತ ರೌಡಿ ಕೊಲೆ

7

ಹಾಡಹಗಲೇ ಕುಖ್ಯಾತ ರೌಡಿ ಕೊಲೆ

Published:
Updated:

ಬೆಂಗಳೂರು: ನಗರದ ಬೇಗೂರು ರಸ್ತೆಯಲ್ಲಿ ದುಷ್ಕರ್ಮಿಗಳು ಭಾನುವಾರ ಹಾಡಹಗಲೇ ಕುಖ್ಯಾತ ರೌಡಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದು, ಶನಿವಾರ ರಾತ್ರಿ ನಡೆದ ಮತ್ತೆರಡು ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಕೊಲೆಯಾಗಿದ್ದಾರೆ.ಸುಬ್ರಹ್ಮಣ್ಯಪುರ ಬಳಿಯ ಕೆನರಾ ಬ್ಯಾಂಕ್ ಕಾಲೊನಿ ನಿವಾಸಿ ರುದ್ರ ಅಲಿಯಾಸ್ ಶಿವ (30) ಎಂಬಾತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.



ಆತ, ಕಾರು ಚಾಲಕ ಪಗಲ್ವನ್ ಮತ್ತು ಕಮಲಾ ಎಂಬುವರ ಜತೆ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದಾಗ ಏಳೆಂಟು ಮಂದಿ ದುಷ್ಕರ್ಮಿಗಳು ಕಾರು ಹಾಗೂ ಆಟೊಗಳಲ್ಲಿ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾರೆ. ಬೇಗೂರು ರಸ್ತೆಯಲ್ಲಿ ರುದ್ರನ ಕಾರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು, ಆತನನ್ನು ವಾಹನದಿಂದ ಕೆಳಗೆ ಎಳೆದುಕೊಂಡು ಮಚ್ಚು ಲಾಂಗ್‌ಗಳಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



ರುದ್ರ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಸುಬ್ರಹ್ಮಣ್ಯಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿತ್ತು. ಯಲಹಂಕ ಉಪನಗರ ಠಾಣೆ ವ್ಯಾಪ್ತಿಯಲ್ಲಿ 2009ರ ಏಪ್ರಿಲ್‌ನಲ್ಲಿ ನಡೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ತಮ್ಮಯ್ಯ ಹಾಗೂ ಸಿಲ್ವರ್ ಜ್ಯೂಬಿಲಿ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ವೇಲು ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ರುದ್ರ ಆರೋಪಿಯಾಗಿದ್ದ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.



ವೇಲುನ ಸಹಚರರು ಪ್ರತೀಕಾರವಾಗಿ ಈ ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



ಎಲೆಕ್ಟ್ರಾನಿಕ್‌ಸಿಟಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಬ್ರಹ್ಮಣ್ಯಪುರ:
ದೊಡ್ಡಕಲ್ಲಸಂದ್ರ ಸಮೀಪದ ಅಂಬೇಡ್ಕರ್ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಅಂಬಿಕಾ (23) ಕೊಲೆಯಾದ ಮಹಿಳೆ. ಅವರ ಪತಿ ಆರೋಪಿ ರಘು ತಲೆಮರೆಸಿಕೊಂಡಿದ್ದಾನೆ.ಅಂಬಿಕಾ ಅವರ ವಿವಾಹವಾಗಿ ಮೂರು ವರ್ಷವಾಗಿತ್ತು ಮತ್ತು ಅವರಿಗೆ ದೀಪಕ್ ಎಂಬ ಎರಡು ವರ್ಷದ ಗಂಡು ಮಗುವಿದೆ.ಅಂಬಿಕಾ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ನಿರುದ್ಯೋಗಿಯಾದ ರಘು ಪ್ರತಿನಿತ್ಯ ಪಾನಮತ್ತನಾಗಿ ಬಂದು ಪತ್ನಿಯ ಜತೆ ಜಗಳವಾಡುತ್ತಿದ್ದ. ಅದೇ ರೀತಿ ರಾತ್ರಿಯೂ ಜಗಳವಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ, ಮಗುವಿನ ಎದುರೇ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಮತ್ತು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.



`ಅಕ್ಕ ಮತ್ತು ಭಾವ ಮದುವೆಯಾಗಿ ಒಂದು ವರ್ಷದವರೆಗೂ ಅನ್ಯೋನ್ಯವಾಗಿದ್ದರು. ಆ ನಂತರ ರಘು, ಅಕ್ಕನ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಅಂಬಿಕಾ ಅವರ ತಮ್ಮ ಕಿರಣ್ ಹೇಳಿಕೆ ನೀಡಿದ್ದಾರೆ. ಘಟನೆ ವೇಳೆ ತಾಯಿಯ ಪಕ್ಕದಲ್ಲೇ ಇದ್ದ ಮಗು ದೀಪಕ್ ಮೇಲೆ ಅಂಬಿಕಾ ಅವರ ರಕ್ತ ಚಿಮ್ಮಿದ್ದು, ಮಗುವಿನ ಮೇಲಿದ್ದ ರಕ್ತದ ಕಲೆಗಳು ಕೊಲೆಯ ಭೀಕರತೆಯನ್ನು ತೋರಿಸುವಂತಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



ಮತ್ತೊಂದು ಪ್ರಕರಣ: ಪರಪ್ಪನ ಅಗ್ರಹಾರ ಬಳಿಯ ದೊಡ್ಡ ನಾಗಮಂಗಲ ನಿವಾಸಿ ವೆಂಕಟೇಶ್ ಎಂಬಾತ ಪತ್ನಿ ನಾರಾಯಣಮ್ಮ (45) ಅವರನ್ನು ಕೊಲೆ ಮಾಡಿದ್ದಾನೆ.ಸೆಕ್ಯುರಿಟಿ ಗಾರ್ಡ್ ಆಗಿದ್ದ ವೆಂಕಟೇಶ್, ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನಾರಾಯಣಮ್ಮ ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾತ್ರಿ ಮದ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿ, ಅವರ ತಲೆಯನ್ನು ನಾಲ್ಕೈದು ಬಾರಿ ಗೋಡೆಗೆ ಗುದ್ದಿಸಿ ಕೊಲೆ ಮಾಡಿದ್ದಾನೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ಮಾಹಿತಿ ನೀಡಿದ್ದಾರೆ. ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry