ಹಾಡಹಗಲೇ ಚಿನ್ನಾಭರಣ ದರೋಡೆ

7
ಬಿಇಎಂಎಲ್‌ ಲೇಔಟ್‌:ಐಐಎಫ್‌ಎಲ್‌ ಆಭರಣ ಅಡಮಾನ ಕಚೇರಿಯಲ್ಲಿ ನಡೆದ ಘಟನೆ

ಹಾಡಹಗಲೇ ಚಿನ್ನಾಭರಣ ದರೋಡೆ

Published:
Updated:
ಹಾಡಹಗಲೇ ಚಿನ್ನಾಭರಣ ದರೋಡೆ

ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಬಿಇಎಂಎಲ್‌ ಲೇಔಟ್‌­ನಲ್ಲಿರುವ ಇಂಡಿಯಾ ಇನ್ಫೊಲೈನ್‌ ಗೋಲ್ಡ್‌ ಲೋನ್ (ಐಐಎಫ್‌ಎಲ್) ಕಚೇರಿಗೆ ಹಾಡಹಗಲೇ ನುಗ್ಗಿದ ದುಷ್ಕರ್ಮಿ­ಗಳು ರಿವಾಲ್ವರ್‌ ಮತ್ತು ಮಾರಕಾಸ್ತ್ರಗಳಿಂದ ಕಚೇರಿ ಸಿಬ್ಬಂದಿ­ಯನ್ನು ಬೆದರಿಸಿ 9.92 ಕೆ.ಜಿ ಚಿನ್ನಾಭರಣ ಹಾಗೂ ಆರು ಲಕ್ಷ ನಗದು ದೋಚಿರುವ ಘಟನೆ ಶುಕ್ರವಾರ ನಡೆದಿದೆ.ಮಧ್ಯಾಹ್ನ 12.40ರ ಸುಮಾರಿಗೆ ಕಚೇರಿಗೆ ನುಗ್ಗಿದ ಇಬ್ಬರು ದುಷ್ಕರ್ಮಿ­ಗಳು, ಕೇವಲ 20 ನಿಮಿಷದಲ್ಲಿ ಈ ಕೃತ್ಯ ಎಸಗಿದ್ದಾರೆ. ಹೆಲ್ಮೆಟ್‌, ಗ್ಲೌಸ್‌ ಮತ್ತು ಜರ್ಕಿನ್‌ ಧರಿಸಿ ಬಂದಿದ್ದ ದರೋಡೆಕೋರರು ಕಚೇರಿಯ ಸೆಕ್ಯುರಿಟಿ ಗಾರ್ಡ್ ಶಿವಕುಮಾರ್‌, ವ್ಯವಸ್ಥಾಪಕಿ ಭಾಮಿನಿ, ಗ್ರಾಹಕರ ಸೇವಾ ವಿಭಾಗದ ಕಾರ್ಯ­ನಿರ್ವಾಹಕಿ ಉಮಾ, ನೌಕರರಾದ ಪ್ರಮೀಳಾ­ಕುಮಾರಿ ಹಾಗೂ ಗಂಗಾಧರ್‌ ಅವರಿಗೆ ರಿವಾಲ್ವರ್‌ನಿಂದ ಬೆದರಿಸಿದ್ದಾರೆ.

ನಂತರ ಅವರೆಲ್ಲರನ್ನೂ 12.52ರ ಸುಮಾರಿಗೆ ಕಚೇರಿಯ ಭದ್ರತಾ ಕೊಠಡಿಗೆ (ಲಾಕರ್‌ ರೂಂ) ಎಳೆದೊಯ್ದು ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾವನ್ನು ಜಖಂಗೊಳಿಸಿದ್ದಾರೆ. ಬಳಿಕ, ಭದ್ರತಾ ಕೊಠಡಿಯಲ್ಲಿ ಕಬ್ಬಿಣದ ಪೆಟ್ಟಿಗೆಗಳಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಹಣವನ್ನು ಎರಡು ಬ್ಯಾಗ್‌ಗಳಿಗೆ ತುಂಬಿಕೊಂಡಿದ್ದಾರೆ. ಆ ನಂತರ ಸಿಬ್ಬಂದಿಯನ್ನು ಭದ್ರತಾ ಕೊಠಡಿ­ಯಲ್ಲೇ ಕೂಡಿ ಹಾಕಿ ಆಭರಣ ಮತ್ತು ಹಣದ ಬ್ಯಾಗ್‌ಗಳೊಂದಿಗೆ ಕಚೇರಿಯಿಂದ ಹೊರ ಬಂದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.ಭದ್ರತಾ ಕೊಠಡಿಯ ಬಾಗಿಲು ಮುರಿದು ಹೊರ ಬಂದ ಸಿಬ್ಬಂದಿ, ಘಟನೆ ಬಗ್ಗೆ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಕಚೇರಿಯ ಒಳಗೆ ಮತ್ತು ಭದ್ರತಾ ಕೊಠಡಿಯಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಆರೋಪಿಗಳ ದೃಶ್ಯ ಸೆರೆಯಾಗಿದೆ. ಆದರೆ, ಅವರು ಹೆಲ್ಮೆಟ್‌ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ತಂದಿದ್ದ ಬ್ಯಾಗ್‌ಗಳು ತುಂಬಿದ್ದರಿಂದ ಪೆಟ್ಟಿಗೆಗಳಲ್ಲಿದ್ದ ಇನ್ನೂ ಒಂದು ಕೆ.ಜಿಯಷ್ಟು ಆಭರಣಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಿಇಎಂಎಲ್‌ ಲೇಔಟ್‌ನ ಜವಾಹರ­ಲಾಲ್‌ ನೆಹರೂ ರಸ್ತೆಯಲ್ಲಿರುವ ಐಐಎಫ್‌ಎಲ್ ಕಚೇರಿಯಲ್ಲಿ ಚಿನ್ನಾ­ಭರಣ ಅಡವಿಟ್ಟುಕೊಂಡು ಸಾಲ ಕೊಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ವಿಶೇಷ ತಂಡ: ‘ಪೀಣ್ಯ ಮತ್ತು ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ 2012ರಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದವು. ಚಿನ್ನಾಭರಣ ಅಡವಿಟ್ಟು­ಕೊಂಡು ಸಾಲ ಕೊಡುವ ಕಚೇರಿಗಳಿಗೆ ನುಗ್ಗಿದ್ದ ದರೋಡೆಕೋರರು ಆಭರಣ ದೋಚಿ ಪರಾರಿಯಾಗಿದ್ದರು. ಆ ಆರೋಪಿಗಳ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಅದೇ ಆರೋಪಿಗಳು ಈ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ಡಿಸಿಪಿ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.‘ಪೀಣ್ಯ ಮತ್ತು ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ದೃಶ್ಯಾವಳಿ ಹಾಗೂ ಐಐಎಫ್‌ಎಲ್‌ ಕಚೇರಿಯಲ್ಲಿ ನಡೆ­ದಿರುವ ದರೋಡೆ ಪ್ರಕರಣದ ದೃಶ್ಯಾ­ವಳಿ­ಯನ್ನು ಹೋಲಿಕೆ ಮಾಡಿ ನೋಡ­ಲಾಗುತ್ತಿದೆ. ಆರೋಪಿಗಳ ಪತ್ತೆಗೆ ಕೆಂಗೇರಿಗೇಟ್ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಘಟನೆ ಸಂಬಂಧ ವ್ಯವಸ್ಥಾಪಕಿ ಭಾಮಿನಿ ಅವರು ದೂರು ನೀಡಿದ್ದು, ರಾಜರಾಜೇಶ್ವರಿನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಭದ್ರತೆಯ ನಿರ್ಲಕ್ಷ್ಯ

‘ಐಐಎಫ್‌ಎಲ್‌ ಕಚೇರಿಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಸೆಕ್ಯುರಿಟಿ ಗಾರ್ಡ್‌ ಬಳಿ ಬಂದೂಕು ಇರಲಿಲ್ಲ ಮತ್ತು ಅವರಿಗೆ ಸೂಕ್ತ ತರಬೇತಿ ಸಹ ಕೊಟ್ಟಿರಲಿಲ್ಲ. ಅಲ್ಲದೇ ಕಚೇರಿ ಮುಂಭಾಗದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ತುರ್ತು ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಕಚೇರಿ ಸಿಬ್ಬಂದಿಗೆ ತರಬೇತಿ ನೀಡದೆ ಸಾಕಷ್ಟು ನಿರ್ಲಕ್ಷ್ಯ ತೋರಲಾಗಿದೆ’

–ಡಾ.ಡಿ.ಸಿ.ರಾಜಪ್ಪ, ಪಶ್ಚಿಮ ವಿಭಾಗದ ಡಿಸಿಪಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry