ಹಾಡಹಗಲೇ ರೂ 1.91 ಕೋಟಿ ದರೋಡೆ

7

ಹಾಡಹಗಲೇ ರೂ 1.91 ಕೋಟಿ ದರೋಡೆ

Published:
Updated:

ಬೆಂಗಳೂರು: ಎಟಿಎಂ ಯಂತ್ರಗಳಿಗೆ ಹಣ ತುಂಬುವ ಖಾಸಗಿ ಏಜೆನ್ಸಿಯ ಸಿಬ್ಬಂದಿ ವಾಹನವನ್ನು ದುಷ್ಕರ್ಮಿಗಳು ಹಾಡಹಗಲೇ ಅಡ್ಡಗಟ್ಟಿ ರೂ1.91 ಕೋಟಿ ದರೋಡೆ ಮಾಡಿರುವ ಘಟನೆ ಆರ್.ಟಿ.ನಗರದಲ್ಲಿ  ಸೋಮವಾರ ನಡೆದಿದೆ.ಸಿಎಂಎಸ್ ಏಜೆನ್ಸಿಯ ನೌಕರರಾದ ನವೀನ್‌ಚಂದ್ರ, ಆನಂದ್‌ಕುಮಾರ್, ಕಾರು ಚಾಲಕ ವೆಂಕಟೇಶ್ ಮತ್ತು ಸೆಕ್ಯುರಿಟಿ ಗಾರ್ಡ್ ಸೋಮಣ್ಣ ಅವರು  ಕಾಕ್ಸ್‌ಟೌನ್‌ನಲ್ಲಿರುವ ಕಚೇರಿಯಿಂದ ರೂ2.04 ಕೋಟಿ ಹಣ ತೆಗೆದುಕೊಂಡು ಎಟಿಎಂ ಯಂತ್ರಗಳಿಗೆ ತುಂಬಲು ಹೋಗುತ್ತಿದ್ದರು.ಮಾರ್ಗ ಮಧ್ಯೆ ಆರ್.ಟಿ.ನಗರದ ತರಳಬಾಳು ರಸ್ತೆಯ ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ರೂ 13 ಲಕ್ಷ ಹಣ ತುಂಬಿದ ಸಿಬ್ಬಂದಿ, ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಸಿಬ್ಬಂದಿಯ ವಾಹನವನ್ನು ದುಷ್ಕರ್ಮಿಗಳು ಬೇರೆ ಕಾರುಗಳಲ್ಲಿ ಹಿಂಬಾಲಿಸಿ ಬಂದು ಆರ್.ಟಿ.ನಗರ ಎರಡನೇ ಹಂತದ ಏಳನೇ ಅಡ್ಡರಸ್ತೆ ಬಳಿ ಅಡ್ಡಗಟ್ಟಿ ಕಿಟಕಿ ಗಾಜನ್ನು ಒಡೆದು ಹಾಕಿದ್ದಾರೆ.ನಂತರ ಸೆಕ್ಯುರಿಟಿ ಗಾರ್ಡ್ ಸೋಮಣ್ಣ ಅವರ ಬಂದೂಕನ್ನು ಕಸಿದುಕೊಂಡು, ಆ ಬಂದೂಕಿನಿಂದಲೇ ಬೆದರಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಹಣವಿದ್ದ ಪೆಟ್ಟಿಗೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಉತ್ತರ ವಿಭಾಗದ ಡಿಸಿಪಿ ಎಚ್. ಎಸ್.ರೇವಣ್ಣ, ಜೆ.ಸಿ.ನಗರ ಉಪ ವಿಭಾಗದ ಎಸಿಪಿ ಓಂಕಾರಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಆನಂದ್‌ಕುಮಾರ್ ಅವರು ದೂರು ಕೊಟ್ಟಿದ್ದಾರೆ. ಆರ್.ಟಿ.ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.ಮುಸುಕುಧಾರಿಗಳು: `ಎರಡು ಕಾರುಗಳಲ್ಲಿ ಬಂದಿದ್ದ 15 ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಾರಿನ ಗಾಜು ಒಡೆದು, ಸಿಬ್ಬಂದಿ ಬಳಿ ಇದ್ದ ಬಂದೂಕನ್ನು ಕಸಿದುಕೊಂಡರು. ನಂತರ ಮೂರ‌್ನಾಲ್ಕು ನಿಮಿಷಗಳ ಅಂತರದಲ್ಲೇ ಹಣದ ಪೆಟ್ಟಿಗೆಗಳನ್ನು ಕಿತ್ತುಕೊಂಡು ಬಂದೂಕಿನೊಂದಿಗೆ ಕಾರುಗಳಲ್ಲಿ ಪರಾರಿಯಾದರು~ ಎಂದು ಘಟನೆ ಪ್ರತ್ಯಕ್ಷದರ್ಶಿ ಪ್ರೇಮ್ ಎಂಬುವವರು `ಪ್ರಜಾವಾಣಿ~ಗೆ         ತಿಳಿಸಿದರು.`ಘಟನೆ ನಡೆದಿರುವ ರೀತಿ ನೋಡಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬ ಶಂಕೆ ಮೂಡುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಿಡಿಗೇಡಿಗಳು, ಸಿಎಂಎಸ್ ಏಜೆನ್ಸಿ ಸಿಬ್ಬಂದಿಯ ಚಲನವಲನದ ಬಗ್ಗೆ ಬಹಳ ದಿನಗಳಿಂದ ಮಾಹಿತಿ ಕಲೆ ಹಾಕಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಕಾಕ್ಸ್‌ಟೌನ್‌ನಿಂದಲೇ ಸಿಬ್ಬಂದಿಯ ಕಾರನ್ನು ಹಿಂಬಾಲಿಸಿ ಬಂದು ಹಣ ದೋಚಿದ್ದಾರೆ~ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.`ದರೋಡೆಕೋರರು ಕೃತ್ಯಕ್ಕೆ ಬಳಸಿರುವ ಕಾರುಗಳ ನೋಂದಣಿ ಸಂಖ್ಯೆ ಸಿಕ್ಕಿದೆ. ಆದರೆ, ಆ ನೋಂದಣಿ ಸಂಖ್ಯೆಗಳು ಖೋಟಾ ಆಗಿವೆ. ಪ್ರತಿನಿತ್ಯ ಆರ್.ಟಿ.ನಗರ 80 ಅಡಿ ರಸ್ತೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದ ಏಜೆನ್ಸಿಯ ಸಿಬ್ಬಂದಿ, ಸೋಮವಾರ ಬದಲಿ ಮಾರ್ಗದಲ್ಲಿ ಹೊರಟಿದ್ದರು. ಅಲ್ಲದೇ ಸಿಬ್ಬಂದಿಗೆ ತೀವ್ರ ಸ್ವರೂಪದ ಗಾಯಗಳಾಗಿಲ್ಲ. ಈ ಸಂಗತಿಗಳನ್ನು ಗಮನಿಸಿದರೆ ಪ್ರಕರಣದಲ್ಲಿ ಸಿಬ್ಬಂದಿಯೇ ಭಾಗಿಯಾಗಿರುವ ಸಂದೇಹ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಆ ನಾಲ್ಕೂ ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ~ ಎಂದು ತಿಳಿಸಿದ್ದಾರೆ.ವಿಶೇಷ ತಂಡ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, `ಪ್ರಕರಣದ ತನಿಖೆಗೆ ಎಸಿಪಿ ಓಂಕಾರಯ್ಯ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖಾಧಿಕಾರಿಗಳು, ಆರ್.ಟಿ.ನಗರ ಸುತ್ತಮುತ್ತಲಿನ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry