ಬುಧವಾರ, ಏಪ್ರಿಲ್ 21, 2021
23 °C

ಹಾಡಹಗಲೇ ರೌಡಿ ಗುಪೇಂದ್ರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಖ್ಯಾತ ರೌಡಿ ಗುಪೇಂದ್ರ ಅಲಿಯಾಸ್ ಗುಪ್ಪ (40) ಎಂಬಾತನನ್ನು ಆತನ ಅಕ್ಕನ ಮಗನೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಾಟನ್‌ಪೇಟೆ ಸಮೀಪದ ಸಿದ್ದಾರ್ಥನಗರದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.ಸಿದ್ದಾರ್ಥನಗರ ನಿವಾಸಿಯಾದ ಗುಪೇಂದ್ರ ಮನೆಯ ಸಮೀಪವೇ ಮಧ್ಯಾಹ್ನ ನಡೆದು ಹೋಗುತ್ತಿದ್ದಾಗ ಆತನ ಅಕ್ಕನ ಮಗ ಅಪ್ಪು ಅಲಿಯಾಸ್ ಸೂರ್ಯ ಎಂಬಾತ ಸಹಚರರೊಂದಿಗೆ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪ್ಪು ಮತ್ತು ಆತನ ನಾಲ್ಕೈದು ಮಂದಿ ಸಹಚರರು ಗುಪೇಂದ್ರನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆತ, ಅಲ್ಲಿಂದ ಓಡಿ ಹೋಗಿ ಸಿದ್ದಾರ್ಥನಗರ ಐದನೇ ಅಡ್ಡರಸ್ತೆಯ ಮನೆಯೊಂದರಲ್ಲಿ ರಕ್ಷಣೆ ಪಡೆದುಕೊಂಡ.ಆದರೆ, ಆತನನ್ನು ಬೆನ್ನಟ್ಟಿ ಹೋದ ದುಷ್ಕರ್ಮಿಗಳು ಆ ಮನೆಯೊಳಗೆ ನುಗ್ಗಿ ಗುಪೇಂದ್ರನ ಮೇಲೆ ಮಚ್ಚು ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.`ಗುಪೇಂದ್ರನ ವಿರುದ್ಧ ಜಯನಗರ, ಚಾಮರಾಜಪೇಟೆ, ಕಾಟನ್‌ಪೇಟೆ, ಮಾಗಡಿ ರಸ್ತೆ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಕಾಟನ್‌ಪೇಟೆ ಠಾಣೆಯ ರೌಡಿಪಟ್ಟಿಯಲ್ಲಿ ಆತನ ಹೆಸರಿತ್ತು. ಅಪ್ಪು ಸಹ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಕೊಲೆ, ದರೋಡೆ ಮತ್ತಿತರ ಪ್ರಕರಣಗಳಿವೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಪೊಲೀಸರು ಅಪ್ಪುನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕೊಲೆ ಘಟನೆ ನಂತರ ಅಪ್ಪು ಮತ್ತು ಸಹಚರರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿದ ನಂತರ ಕೊಲೆಗೆ ಕಾರಣವೇನೆಂದು ಗೊತ್ತಾಗಲಿದೆ~ ಎಂದು ಹೇಳಿದರು. ಘಟನೆ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.