ಬುಧವಾರ, ನವೆಂಬರ್ 20, 2019
24 °C

ಹಾಡಹಗಲೇ ವೃದ್ಧೆಯ ಕೊಲೆ

Published:
Updated:

ಬೆಂಗಳೂರು: ಜಯನಗರ ಏಳನೇ ಹಂತದಲ್ಲಿ ದುಷ್ಕರ್ಮಿಯೊಬ್ಬ ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ಹಾಡಹಗಲೇ ನಡೆದಿದೆ.ಜಯನಗರ 27ನೇ ಅಡ್ಡರಸ್ತೆ ನಿವಾಸಿ ಚಂದ್ರಾ (78) ಕೊಲೆಯಾದವರು. ಅವರ ಮನೆಯಲ್ಲಿ ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದ ರಾಮು ಉರುಫ್ ರಾಮಚಂದ್ರನ್ ಎಂಬಾತ ಈ ಕೃತ್ಯ ಎಸಗಿದ್ದು, ಘಟನೆ ನಂತರ ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಚಂದ್ರಾ ಅವರ ಪತಿ ನರಸಿಂಹನ್ ಅವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ನರಸಿಂಹನ್ ದಂಪತಿಗೆ ಮೂವರು ಮಕ್ಕಳು. ಮಗ ವಿವೇಕ್ ಅವರು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ ಹಾಗೂ ಮಗಳು ರೇಖಾ ಅವರು ವಿವಾಹವಾಗಿ ಪತಿಯೊಂದಿಗೆ ಜಯನಗರ `ಟಿ' ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಮತ್ತೊಬ್ಬ ಮಗಳು ಡಾ.ಚಿತ್ರಾ ಅವರು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ವೈದ್ಯೆಯಾಗಿದ್ದಾರೆ.ಚಂದ್ರಾ ಅವರ ಅಕ್ಕಂದಿರಾದ ಮುನಿಲಕ್ಷ್ಮಮ್ಮ (88) ಮತ್ತು ಶಾರದಮ್ಮ (80) ಅವರು ಅವಿವಾಹಿತರು. ಅವರಿಬ್ಬರೂ ಚಂದ್ರಾ ಅವರ ಮನೆಯಲ್ಲೇ ವಾಸವಾಗಿದ್ದಾರೆ. ತಮಿಳುನಾಡು ಮೂಲದ ರಾಮು, ಚಂದ್ರಾ ಅವರ ಕುಟುಂಬಕ್ಕೆ ಹಲವು ವರ್ಷಗಳಿಂದ ಪರಿಚಿತನಾಗಿದ್ದ. ಅಲ್ಲದೇ, ಅವರ ಮನೆಯ ಅಕ್ಕಪಕ್ಕದ ಮನೆಗಳಲ್ಲೂ ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದ. ಮುನಿಲಕ್ಷ್ಮಮ್ಮ ಅವರು ನಿವೃತ್ತ ವೈದ್ಯೆ. ಚಂದ್ರಾ ಅವರ ಮನೆಯ ನೀರಿನ ಪಂಪ್ ಇತ್ತೀಚೆಗೆ ಕೆಟ್ಟು ಹೋಗಿತ್ತು.ಈ ಹಿನ್ನೆಲೆಯಲ್ಲಿ ನೀರಿನ ಪಂಪ್ ರಿಪೇರಿ ಮಾಡಲು ಹಾಗೂ ನೀರು ಸರಬರಾಜು ಕೊಳವೆಗಳ (ಪೈಪ್) ದುರಸ್ತಿ ಕಾರ್ಯಕ್ಕಾಗಿ ರಾಮು, ಹತ್ತು ದಿನಗಳಿಂದ ಪ್ರತಿನಿತ್ಯ ಅವರ ಮನೆಗೆ ಬರುತ್ತಿದ್ದ. ಅದೇ ರೀತಿ ಆತ ಬೆಳಿಗ್ಗೆ 10.30ರ ಸುಮಾರಿಗೆ ಮನೆಗೆ ಬಂದಿದ್ದ. ಈ ವೇಳೆ ಚಿತ್ರಾ ಅವರು ಆಸ್ಪತ್ರೆಗೆ ಹೋಗಿದ್ದರಿಂದ ಚಂದ್ರಾ ಮತ್ತು ಅವರ ಅಕ್ಕಂದಿರು ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಯು ಈ ಸಂದರ್ಭವನ್ನು ನೋಡಿಕೊಂಡು ಮುನಿಲಕ್ಷ್ಮಮ್ಮ ಮತ್ತು ಶಾರದಮ್ಮನನ್ನು ಕೊಳಾಯಿ ಜೋಡಿಸುವ ನೆಪದಲ್ಲಿ ಮಹಡಿಯ ಕೊಠಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಶಾರದಮ್ಮ ಅವರ ಆಭರಣಗಳನ್ನು ಕಿತ್ತುಕೊಂಡು ಕೊಠಡಿಯೊಳಗೆ ತಳ್ಳಿ ಚೀಲಕ ಹಾಕಿದ್ದಾನೆ. ಬಳಿಕ ಮುನಿಲಕ್ಷಮ್ಮ ಅವರನ್ನು ಮತ್ತೊಂದು ಕೊಠಡಿಗೆ ಎಳೆದೊಯ್ದು ಆಭರಣಗಳನ್ನು ಕಸಿದುಕೊಂಡು ಕತ್ತು ಹಿಸುಕಿ ಕೊಲೆ ಮಾಡಲೆತ್ನಿಸಿದ್ದಾನೆ. ಆಗ ಮುನಿಲಕ್ಷ್ಮಮ್ಮ ಪ್ರಜ್ಞೆ ತಪ್ಪಿದ್ದಾರೆ.ಆ ನಂತರ ಆರೋಪಿಯು ನೆಲ ಅಂತಸ್ತಿನ ಮನೆಗೆ ಬಂದು ಚಂದ್ರಾ ಅವರ ಕತ್ತು ಹಿಸುಕಿ ಕೊಲೆ ಮಾಡಿ, ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಹಡಿಯ ಕೊಠಡಿಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಮುನಿಲಕ್ಷ್ಮಮ್ಮ ಅವರು ಎಚ್ಚರಗೊಂಡು ನೆಲ ಅಂತಸ್ತಿನ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.`ನಮ್ಮ ಬಡಾವಣೆಯ ಮನೆಗಳಲ್ಲಿ ನೀರಿನ ಸಂಪರ್ಕದ ಪೈಪ್‌ಗಳ ದುರಸ್ತಿಗಾಗಿ ರಾಮುನನ್ನೇ ಕರೆಸುತ್ತಿದ್ದೆವು. ತನ್ನ ಅಣ್ಣ ಜಾನಕಿರಾಮ್ ಎಂಬುವರೊಂದಿಗೆ ವಾಸಿಸುತ್ತಿದ್ದ ಆತ ಕೆಲ ವರ್ಷಗಳ ಹಿಂದೆ ಅವರೊಂದಿಗೆ ಜಗಳವಾಡಿಕೊಂಡು ಗೊಟ್ಟಿಗೆರೆಯಲ್ಲಿ ನೆಲೆಸಿದ್ದ. ಘಟನೆ ನಂತರ ಜಾನಕಿರಾಮ್ ಅವರೇ ರಾಮುನ ಮನೆಯನ್ನು ಪೊಲೀಸರಿಗೆ ತೋರಿಸಿದ್ದಾರೆ' ಎಂದು ಚಂದ್ರಾ ಅವರ ಮನೆಯ ಪಕ್ಕದ ನಿವಾಸಿ ನರಸಿಂಹಮೂರ್ತಿ ಹೇಳಿದರು.ರಾಮು ಕುಟುಂಬ ಸದಸ್ಯರೊಂದಿಗೆ ಗೊಟ್ಟಿಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಘಟನೆ ನಂತರ ಆತನ ಮನೆಯ ಬಳಿ ಹೋಗಿ ಪರಿಶೀಲಿಸಲಾಯಿತು.  ಆ ವೇಳೆಗಾಗಲೇ ಆತ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿಕ್ಷೆಯಾಗಬೇಕು

`ಮೂವರು ಸಹೋದರಿಯರಲ್ಲಿ ಚಂದ್ರಾ ನಿಶಕ್ತಳಾಗಿದ್ದಳು. ಕೆಲ ವರ್ಷಗಳಿಂದ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಳು. ಆಕೆಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಬೇರೊಬ್ಬರ ಸಹಾಯವಿಲ್ಲದೇ ನಡೆದಾಡಲು ಕಷ್ಟವಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿದ್ದ ಆಕೆಯನ್ನು ಕೊಂದ ಪಾಪಿಗೆ ಶಿಕ್ಷೆಯಾಗಬೇಕು' ಎಂದು ಚಂದ್ರಾ ಅವರ ಅಣ್ಣ ಮುನಿಯಪ್ಪ ಒತ್ತಾಯಿಸಿದರು.ವಿಶೇಷ ತಂಡ

`ಆರೋಪಿ ರಾಮು, ಚಂದ್ರಾ ಹಾಗೂ ಅವರ ಸಹೋದರಿಯರ ಆಭರಣಗಳನ್ನು ದೋಚಿದ್ದಾನೆ. ಆಭರಣಗಳ ಮೌಲ್ಯದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆತನ ಪತ್ತೆಗೆ ಜಯನಗರ ಹಾಗೂ ಬಸವನಗುಡಿ ಠಾಣೆ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ `ಪ್ರಜಾವಾಣಿ'ಗೆ ತಿಳಿಸಿದರು. 

ಪ್ರತಿಕ್ರಿಯಿಸಿ (+)