ಹಾಡಿನ `ಪಂದ್ಯ'

7

ಹಾಡಿನ `ಪಂದ್ಯ'

Published:
Updated:
ಹಾಡಿನ `ಪಂದ್ಯ'

`ಪಂದ್ಯ' ಎಂದ ಕೂಡಲೇ ಆಟಕ್ಕೆ ಸಂಬಂಧಿಸಿದ್ದು ಎಂದುಕೊಳ್ಳಬೇಕಾಗಿಲ್ಲ. ಇದು ಜೀವನದ ಆಟಕ್ಕೆ ಸಂಬಂಧಿಸಿದ ಚಿತ್ರ' ಎಂದು ಆರಂಭದಲ್ಲೇ ಸ್ಪಷ್ಟನೆ ನೀಡಿದರು ನಿರ್ದೇಶಕ ದೇವು. ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ `ಪಂದ್ಯ' ಚಿತ್ರದ ಶೀರ್ಷಿಕೆ ವಿನ್ಯಾಸ ಸಹ ಇದೊಂದು ಕ್ರೀಡೆಗೆ ಸಂಬಂಧಿಸಿದ ಚಿತ್ರ ಎಂಬ ಊಹೆಯನ್ನು ಹುಟ್ಟುಹಾಕಿತ್ತು. ಆದರೆ ಕಥೆ ಬೇರೆಯೇ ಇದೆ ಎಂಬ ಸುಳಿವು ನೀಡಿದರು ದೇವು. ಜೀವನವನ್ನೇ ಆಟ ಎಂದುಕೊಂಡು ಕಾಲ ಕಳೆಯುವ ನಾಲ್ವರು ಗೆಳೆಯರ ಬದುಕಿನಲ್ಲಿ ನಡೆಯುವ ಘಟನೆಯಿಂದ ಚಿತ್ರಣ ಬದಲಾಗುತ್ತದೆ ಎಂಬ ವಿವರಣೆ ಅವರದು.ತಮ್ಮ ಚಿತ್ರದ ಹಾಡುಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತಿಗಿಳಿದ ಅವರಲ್ಲಿ ಆತ್ಮವಿಶ್ವಾಸ ತುಸು ಹೆಚ್ಚಾಗಿಯೇ ಇತ್ತು. ಚಿತ್ರವನ್ನು ವೀಕ್ಷಿಸಿ ಸ್ವತಃ ಅವರೇ ದಂಗಾದರಂತೆ. ಅಷ್ಟು ಅದ್ಭುತವಾಗಿ ಸಿನಿಮಾ ಮೂಡಿಬರುತ್ತದೆ ಎಂಬ ಕಲ್ಪನೆಯೂ ಅವರಲ್ಲಿ ಇರಲಿಲ್ಲವಂತೆ. ಇನ್ನು ನಾಯಕಿ ಮಾನಸಿ ನಟನೆ ನೋಡಿ ಅವರು `ಕಳೆದೇ' ಹೋದರಂತೆ. ಮನೆಮಂದಿಯೆಲ್ಲಾ ಕುಳಿತು ನೋಡುವ ಮುದ ನೀಡುವ ಚಿತ್ರ ಎಂದವರು ಹೇಳಿದರು. ಕೆಲವು ನೈಜ ಘಟನೆಗಳು ಅವರ ಚಿತ್ರಕ್ಕೆ ಸ್ಫೂರ್ತಿ ನೀಡಿವೆಯಂತೆ. ನಿರ್ದೇಶನದ ಜೊತೆ ಆರು ಹಾಡುಗಳ ಪೈಕಿ ಐದಕ್ಕೆ ಅವರೇ ಸಾಲುಗಳನ್ನು ಹೊಸೆದಿದ್ದಾರೆ.ನಾಲ್ವರು ಯುವಕರ ಗುಂಪಿನಲ್ಲಿ ಚಂದ್ರು ಅವರದು ಪ್ರಮುಖ ಪಾತ್ರ. ಕೆಳಮಧ್ಯಮ ವರ್ಗದ ಹುಡುಗರ ಬದುಕಿನ ಪ್ರತಿಫಲನ ಇಲ್ಲಿದೆ. ಇದು ಪಕ್ಕಾ ಮನರಂಜನೆಯ ಚಿತ್ರ ಎನ್ನುವುದು ಅವರ ಬಣ್ಣನೆ. ಸುಕುಮಾರ್, ಸ್ವಾಮಿ ಮತ್ತು ರವಿಶಂಕರ್ ಅವರ ಜೊತೆಯಾಗಿದ್ದಾರೆ. ಮಾನಸಿ ಮತ್ತು ಸ್ಫೂರ್ತಿ ಚಿತ್ರದ ನಾಯಕಿಯರು. ಯಜ್ಞಾಶೆಟ್ಟಿ ಹಾಡೊಂದಕ್ಕೆ ಹೆಜ್ಜೆಹಾಕಿದ್ದಾರೆ.ಗೀತೆಗಳಿಗೆ ಮಟ್ಟು ಹಾಕಿರುವ ಗೋಪಿಕೃಷ್ಣ ಅವರಿಗೆ ಸಂಗೀತ ಸಂಯೋಜನೆ ತುಸು ಕಷ್ಟವಾಗಿತ್ತು. ಏಕೆಂದರೆ ನಿರ್ದೇಶಕರು ಮೊದಲೇ ಸಾಹಿತ್ಯ ರಚಿಸಿ ಅವರ ಕೈಗೆ ಒಪ್ಪಿಸಿದ್ದರು. ಸಿದ್ಧ ಸಾಹಿತ್ಯಕ್ಕೆ ಸಂಗೀತ ಹೆಣೆಯುವ ಕಾರ್ಯ ಅವರ ಪಾಲಿಗೆ ಸುಲಭವಾಗಿರಲಿಲ್ಲ. ಆದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂಬ ವಿಶ್ವಾಸ ಅವರದು.

ನಟರಾದ ಶ್ರೀನಗರ ಕಿಟ್ಟಿ, ಮೋಹನ್, ನಿರ್ಮಾಪಕ ಉಮೇಶ್ ಬಣಕಾರ್ ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಹಿಂದೆ ಈ ಚಿತ್ರತಂಡದ ಹಲವರೊಂದಿಗೆ ಕಿರುತೆರೆ ಹಂಚಿಕೊಂಡಿದ್ದ ಪ್ರೀತಿಯಿಂದ ಶ್ರೀನಗರ ಕಿಟ್ಟಿ ಆಗಮಿಸಿದ್ದರು. ತವರು ಮನೆ ಹುಡುಗರಿಗೆ ಒಳಿತಾಗಲಿ ಎಂಬ ಶುಭಹಾರೈಕೆ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry