ಹಾಡುಗಳ ಕೇಳೋರಿಲ್ಲ ಮಾರಾಟದಲ್ಲಿ ಸುಖವಿಲ್ಲ

7

ಹಾಡುಗಳ ಕೇಳೋರಿಲ್ಲ ಮಾರಾಟದಲ್ಲಿ ಸುಖವಿಲ್ಲ

Published:
Updated:
ಹಾಡುಗಳ ಕೇಳೋರಿಲ್ಲ ಮಾರಾಟದಲ್ಲಿ ಸುಖವಿಲ್ಲ

‘ಕನ್ನಡ ಚಿತ್ರರಂಗದ ಆಡಿಯೊ ಮಾರುಕಟ್ಟೆ ದಿನದಿಂದ ದಿನಕ್ಕೆ ಸಾಯುತ್ತಿದೆ. ಹೀಗೆಯೇ ಬಿಟ್ಟರೆ ಸಂಗೀತಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ದಿನ ದೂರವೇನೂ ಇಲ್ಲ’. ‘ಆನಂದ್ ಆಡಿಯೊ’ ಮಾಲೀಕ ಮೋಹನ್‌ರ ಮಾತಿನಲ್ಲಿ ಆತಂಕ ಒಡೆದು ಕಾಣುತ್ತಿತ್ತು.‘ಆಡಿಯೊ ಕಂಪನಿಗಳು ಸಿನಿಮಾ ಹಾಡುಗಳನ್ನು ಎಫ್.ಎಂ. ರೇಡಿಯೊ ಚಾನಲ್‌ಗಳಿಗೆ ಮಾರಿಕೊಂಡು ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ’ ಎಂದು ನಾಯಕ ನಟ ಜಗ್ಗೇಶ್ ಇತ್ತೀಚೆಗೆ ಆರೋಪ ಮಾಡಿದ್ದರು. ‘ಜಗ್ಗೇಶರ ಮಾತು ನಿಜವಾ? ನೀವು ಎಷ್ಟು ಕೋಟಿ ಲಾಭ ಮಾಡಿಕೊಂಡಿದ್ದೀರಿ?’ ಎಂದು ‘ಸಿನಿಮಾ ರಂಜನೆ’ ಮಾತನಾಡಿಸಿದಾಗ, ಮೋಹನ್ ಎದುರಿಗಿಟ್ಟಿದ್ದೆಲ್ಲ ಆತಂಕದ ಅಂಕಿಅಂಶಗಳನ್ನೇ.‘ಕೆಲವು ವರ್ಷಗಳ ಹಿಂದೆ ಹತ್ತಾರು ಆಡಿಯೊ ಕಂಪನಿಗಳಿದ್ದವು. ಈಗ ಎಷ್ಟು ಬದುಕಿವೆ ಹೇಳಿ? ನಾವು ತಾನೆ ಮನೆ ಸುಟ್ಟುಕೊಂಡು ಎಷ್ಟು ಕಾಲವೆಂದು ದೀಪಾವಳಿ ಮಾಡುವುದು? ಕಳೆದ ಮೂರು ತಿಂಗಳಲ್ಲಿ ಐದು ಸಾವಿರ ಸೀಡಿಗಳನ್ನು ಮಾರಲಿಕ್ಕೂ ನಮಗೆ ಸಾಧ್ಯವಾಗಿಲ್ಲ. ದೊಡ್ಡ ಸಂಖ್ಯೆಯ ಮಾರಾಟದ ವಿಷಯವಿರಲಿ- ಒಂದು ಸಾವಿರ ಆಡಿಯೊ ಸೀಡಿ ಮಾರುತ್ತೇವೆ ಎಂದು ಧೈರ್ಯವಾಗಿ ಯಾವುದೇ ಸಿನಿಮಾ ಬಗ್ಗೆ ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಹೀಗಿರುವಾಗ ಲಾಭ ಎಲ್ಲಿಂದ ಬಂತು?’ - ಹೀಗೆ ಸಾಗುತ್ತದೆ ಮೋಹನರ ಅಳಲಿನ ಝರಿ.‘ಲಹರಿ’ ಸಂಸ್ಥೆಯ ವೇಲು ಅವರದೂ ಇದೇ ರಾಗ. ‘ಒಂದು ಸ್ವರ್ಣಯುಗ ಇತ್ತು ಸಾರ್. ಅದು ಹೋಯ್ತು. ಈಗ ಯಾರೂ ಸೀಡಿ ತಗೊಳ್ಳಲ್ಲ. ಸಿನಿಮಾ ಸೀಡಿ ಹುಡುಕಿಕೊಂಡು ಅಂಗಡಿಗೆ ಹೋಗುವ ರೂಢಿ ಜನರಿಗೆ ತಪ್ಪಿಹೋಗಿದೆ’ ಎನ್ನುವುದು ವೇಲು ಅಳಲು.ಹಾಡುಗಳ ಮಾರುಕಟ್ಟೆ ಕುಸಿಯಲಿಕ್ಕೆ ನಿರ್ಮಾಪಕರ ಅಭಿರುಚಿಯೂ ಕಾರಣ ಎನ್ನುವುದು ವೇಲು ಅನಿಸಿಕೆ. ‘ಇಂದಿನ ಅನೇಕ ನಿರ್ಮಾಪಕರಿಗೆ ಸಂಗೀತ ಪ್ರಜ್ಞೆ ಇಲ್ಲ. ಎಲ್ಲರಿಗೂ ಫಾಸ್ಟ್ ಫುಡ್ ಬೇಕು. ಸಾಹಿತ್ಯ ಚೆನ್ನಾಗಿರೊಲ್ಲ. ಸಂಗೀತದಲ್ಲಿ ಮಾಧುರ್ಯವಿರೊಲ್ಲ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಡುಗಳ ಗುಣಮಟ್ಟದ ಬಗ್ಗೆ ನಿರ್ಮಾಪಕರೇ ತಲೆಕೆಡಿಸಿಕೊಳ್ಳದ ಮೇಲೆ ಕೇಳುಗರು ಯಾಕೆ ಸೀಡಿ ಕೊಳ್ಳುತ್ತಾರೆ. ಫ್ರೀ ಕೊಟ್ಟರೂ ತೆಗೆದುಕೊಳ್ಳುವವರಿಲ್ಲ ಎನ್ನುವ ಸ್ಥಿತಿ ಇವತ್ತಿನದು’.‘ಒಂದು ಸಿನಿಮಾ ಹಿಟ್ ಆದರಷ್ಟೇ ಅದರ ಸೀಡಿಗೆ ಬೇಡಿಕೆ ಉಂಟಾಗಬಹುದು. ಸಿನಿಮಾ ಗೆಲ್ಲದೆ ಹೋದರೆ ಎಂಥ ಸೂಪರ್‌ಸ್ಟಾರ್ ಇದ್ದರೂ ಸೀಡಿ ಮಾರಾಟವಾಗೊಲ್ಲ’ ಎನ್ನುವ ವೇಲು- ‘ದಕ್ಷಿಣಭಾರತ ಚಿತ್ರರಂಗದಲ್ಲಿ ಯಾವುದೇ ನಿರ್ಮಾಪಕ ಆಡಿಯೊ ಕಂಪನಿಗಳಿಂದ ದೊಡ್ಡ ಮೊತ್ತ ನಿರೀಕ್ಷಿಸುವಂಥ ಸ್ಥಿತಿ ಮಾರುಕಟ್ಟೆಯಲ್ಲಿಲ್ಲ. ಅನೇಕ ಸಿನಿಮಾಗಳ ಹಾಡುಗಳಿಂದ ಐದು ರೂಪಾಯಿ ಲಾಭವೂ ಹುಟ್ಟೊಲ್ಲ. ಲಾಭ ಬಂದರೆ ಕೊಡಲಿಕ್ಕೆ ನಾವು ರೆಡಿ’ ಎಂದು ಅಡಿಗೆರೆ ಎಳೆದಂತೆ ಹೇಳುತ್ತಾರೆ.ಎಫ್.ಎಂ. ಚಾನಲ್‌ಗಳಿಂದ ಕೊಂಚ ಹಣ ಬರುತ್ತಿರುವುದನ್ನು ವೇಲು ಮುಚ್ಚುಮರೆ ಮಾಡುವುದಿಲ್ಲ. ‘ನಮ್ಮ ಸಂಸ್ಥೆಯಲ್ಲಿ ಎಪ್ಪತ್ತೈದು ಸಾವಿರ ಗೀತೆಗಳಿವೆ. ಮೂವತ್ತು ವರ್ಷಗಳ ಫಸಲಿದು. ಆದರೆ, ಎಫ್.ಎಂ.ಗಳಿಂದ ತಿಂಗಳಿಗೆ ಒಂದು ಲಕ್ಷ ರೂಪಾಯಿ ಬಂದರೆ ಹೆಚ್ಚು. ನಮ್ಮ ಸಂಸ್ಥೆ ನೂರಾರು ಉದ್ಯೋಗಿಗಳನ್ನು ಸಾಕಬೇಕಾಗಿದೆ. ಇಂಥದ್ದರಲ್ಲಿ ಈ ಮೊತ್ತ ಆನೆಯ ಹೊಟ್ಟೆಗೆ ಅರೆಪಾವು ಮಜ್ಜಿಗೆಯೇ ಸರಿ’ ಎನ್ನುತ್ತಾರೆ ವೇಲು.

ರವಿಚಂದ್ರನ್ ಆಡಿಯೊ ಕಂಪನಿ ಮಾಡಿದರು. ಆಮೇಲೆ ಸುಮ್ಮನಾದರು. ರಾಮು ಕಂಪನಿ ಮಾಡಿದರು. ಮುಚ್ಚಿದರು. ಲಾಭ ಇದ್ದಿದ್ದರೆ ಅವರೇಕೆ ತಮ್ಮ ಆಡಿಯೊ ಕಂಪನಿಗಳ ಬಾಗಿಲು ಹಾಕುತ್ತಿದ್ದರು ಎನ್ನುವುದು ವೇಲು ಪ್ರಶ್ನೆ.‘ಲಹರಿ’ಯ ವೇಲು, ‘ಆನಂದ್ ಆಡಿಯೊ’ದ ಮೋಹನ್‌ರ ಮಾತಿನ ತಾತ್ಪರ್ಯ ಇಷ್ಟೇ- ‘ಹಾಡುಗಳಿಗೆ ಮಾರುಕಟ್ಟೆಯಿಲ್ಲ, ಅವುಗಳ ಮಾರಾಟದಿಂದ ಸುಖವಿಲ್ಲ’. ಹಾಗಾದರೆ, ಆಡಿಯೊ ಮಾರುಕಟ್ಟೆ ಚೇತರಿಸಿಕೊಳ್ಳಲು ಏನು ಮಾಡಬೇಕು? ‘ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬೆಂಬಲಿಸಬೇಕು. ಪೈರಸಿಯನ್ನು ಮಟ್ಟ ಹಾಕಬೇಕು’ ಎನ್ನುವುದು ವೇಲು ಅವರ ಹಳೆಯ ಕೋರಿಕೆಯ ಪುನರುಚ್ಚಾರ. ಈ ನಿಟ್ಟಿನಲ್ಲಿ ಮೋಹನ್ ಅವರದ್ದು ಭಿನ್ನ ಐಡಿಯಾ.‘ಈಗ ಡೌನ್‌ಲೋಡ್ ಕಾಲ. ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಡುವ ಅಂಗಡಿಗಳು ರಾಜ್ಯಾದ್ಯಂತ ಇವೆ. ಇಂಥ ಸಂದರ್ಭದಲ್ಲಿ ಹಾಡುಗಳ ಡೌನ್‌ಲೋಡ್ ಅನ್ನು ಕಾನೂನುಬದ್ಧ ಮಾಡುವುದೇ ಸರಿ. ತಿಂಗಳಿಗಿಷ್ಟು ಎಂದು ಪಾವತಿಸಿ ಅಂಗಡಿಗಳು ಎಷ್ಟು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಲಿ’ - ಇದು ಮೋಹನ್‌ರ ಐಡಿಯಾ. ಇದನ್ನು ‘ಆನಂದ್ ಆಡಿಯೊ’ ವತಿಯಿಂದ ಕಾರ್ಯರೂಪಕ್ಕೆ ತರಲು ಅವರು ಪ್ರಯತ್ನಿಸಿದ್ದರಂತೆ. ಆದರೆ, ಅನುಷ್ಠಾನಕ್ಕೆ ನೂರೆಂಟು ಅಡ್ಡಿ ಎದುರಾದುದರಿಂದ, ಒಬ್ಬಂಟಿ ಅನಿಸಿದ್ದರಿಂದ ಸುಮ್ಮನಾದರಂತೆ. ಬುಡ ಅಲ್ಲಾಡುತ್ತಿರುವ ಆತಂಕದ ನಡುವೆಯೂ ಮೋಹನ್ ಹಾಗೂ ವೇಲು ಅವರದ್ದು ಒಂದೇ ಆಶಾವಾದ- ‘ನಾಳೆಗಳು ಚೆನ್ನಾಗಿರಬಹುದು’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry