ಶುಕ್ರವಾರ, ಮೇ 7, 2021
25 °C

ಹಾಡುಗಾರ ಈ ಐದರ ಪೋರ

-ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಚೆಂಡು, ಗೊಂಬೆ, ಕಾರು ಎನ್ನುತ್ತಾ ಆಡುವ ವಯಸ್ಸು. ನುಡಿವ ತೊದಲು ನುಡಿಗೆ ಆ ಹಾಲು ಗಲ್ಲ ನೇವರಿಸುತ್ತಾ ಆನಂದಿಸುವವರೆ ಎಲ್ಲರೂ. ಆದರೆ ಈ ಪುಟಾಣಿ ಚೋರ ಆಟೋಟಗಳಿಗೂ ಅಂಟಿಕೊಂಡು ಹಾಡಿಗೂ ಸರದಾರನಾಗಿದ್ದಾನೆ.ಅಧೀಶ್ ಐದು ವರ್ಷದ ಪೋರ. ಎರಡು ವರ್ಷದ ಸುಮಾರಿಗೆ ಈತನದ್ದು ತೊದಲು ನುಡಿ ಪ್ರಾರಂಭವಾಯಿತು. ಜೊತೆಗೆ ತನ್ನಷ್ಟಕ್ಕೆ ಹಾಡೊಂದನ್ನು ಗುನುಗುತ್ತಲೇ ಇದ್ದ ಈತನ ಚೇಷ್ಟೆಗಳಿಗೆ ಅಪ್ಪ ಅಮ್ಮನಿಂದ ಪ್ರೀತಿಯ ನಗುವಿನ ಪ್ರತಿಕ್ರಿಯೆ ಅಷ್ಟೆ. ಈತನದ್ದು ಹಾಡುವ ಮನಸ್ಸು, ಹಾಡಲು ಕಾತರಿಸುತ್ತಿರುವ ಕಂಠ ಎಂಬ ಸುಳಿವೂ ಅವರಿಗೆ ಇರಲಿಲ್ಲ. `ಶಾಲೆಗಳಲ್ಲಿ ತುಂಬಾ ಹಾಡುತ್ತಿದ್ದನಂತೆ. ಶಿಕ್ಷಕಿಯರೆಲ್ಲಾ ಚೆನ್ನಾಗಿ ಹಾಡುತ್ತಾನೆ. ಸಂಗೀತ ಕಲಿಸಿ ಎನ್ನುತ್ತಿದ್ದರು. ಸಂಗೀತ ಶಾಲೆಗೆ ಸೇರಿಸಿದೆ. ತುಂಬಾ ಚೇಷ್ಟೆ ಮಾಡುತ್ತಾನೆ. ಒಂದು ವಿಷಯದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುವಂತೆ ನಾವು ಹೇಳುತ್ತಲೇ ಇರಬೇಕು' ಎಂದು ನಗುತ್ತಾರೆ ಅಧೀಶ್ ಅಮ್ಮ ಪೂರ್ಣಿಮಾ.ಗೃಹಿಣಿ ಪೂರ್ಣಿಮಾ ಹಾಗೂ ಎಂಜಿನಿಯರ್ ವಿಜಯ್ ಅವರ ಪುತ್ರ ಅಧೀಶ್ ನಗರದಲ್ಲಿ ಈಗಾಗಲೇ ನಾಲ್ಕೈದು ಕಾರ್ಯಕ್ರಮಗಳನ್ನು ನೀಡಿದ್ದಾನೆ. ವಯಸ್ಸು ಚಿಕ್ಕದು. ಕಲಿಯುವುದು ಬೇಕಾದಷ್ಟಿದೆ. ಹೀಗಾಗಿ ರಿಯಾಲಿಟಿ ಶೋಗಳಲ್ಲಿ ಈ ಪುಟಾಣಿ ಭಾಗವಹಿಸಿಲ್ಲ.ಈತ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಕಿಕ್ಕೇರಿ ಕೃಷ್ಣಮೂರ್ತಿ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾನೆ.`ಅಧೀಶನ ಅಮ್ಮ ಸಂಗೀತಾಭ್ಯಾಸಕ್ಕೆ ಅಂತ ಬಂದರು. ಮಗನನ್ನೂ ಕರೆದುಕೊಂಡು ಬರುತ್ತಿದ್ದರು. ತುಂಬಾ ಚೇಷ್ಟೆ ಮಾಡುತ್ತಿದ್ದ. ಇನ್ನುಮುಂದೆ ಕರೆದುಕೊಂಡು ಬರಬೇಡಿ. ತರಗತಿಗೆ ತೊಂದರೆಯಾಗುತ್ತದೆ ಎಂದೆ. ಆಗ ಅವರು ಇಲ್ಲ ಈತನಿಗಾಗಿಯೇ ನಾನು ಸಂಗೀತಾಭ್ಯಾಸ ಶುರುಮಾಡಿದೆ. ಇವನಿಗೆ ಹಾಡುವ ಬಗ್ಗೆ ತುಂಬಾ ಆಸಕ್ತಿ ಎಂದರು. ಐದು ವರ್ಷದ ನಂತರ ಅಕಾಡೆಮಿಗೆ ಸೇರಿಸಿಕೊಳ್ಳುವ ನಿಯಮವಿದೆ ನಮ್ಮಲ್ಲಿ. ಹೀಗಾಗಿ ಮೊದಲಿಗೆ ನಾನು ಒಪ್ಪಿಕೊಳ್ಳಲೇ ಇಲ್ಲ' ಎಂದು ಪ್ರಿಯ ಶಿಷ್ಯನ ಬಗ್ಗೆ ಮಾತಿಗಿಳಿದರು ಕೃಷ್ಣಮೂರ್ತಿ.ಈ ಪುಟಾಣಿಗೆ ಎಲ್ಲಿ ಹಾಡುವುದಕ್ಕೆ ಆಗುತ್ತದೆ ಎಂದು ಗುರುಗಳು ಹೇಳಿದ್ದೆ ತಡ, `ಯಾಕಾಗಲ್ಲ ಸರ್, ನಾನು ಬೇರೆ ಹಾಡುಗಳನ್ನೆಲ್ಲಾ ಹಾಡ್ತೀನಿ. ನೋಡಿ ಬೇಕಾದರೆ' ಎಂದು ದಾಸರ ಪದವೊಂದನ್ನು ಹಾಡಿ ತೋರಿಸಿದನಂತೆ ಅಧೀಶ್. ಅಂದಿನಿಂದ ಶಿಷ್ಯನನ್ನಾಗಿ ಸ್ವೀಕರಿಸಿದ ಕೃಷ್ಣಮೂರ್ತಿ ಅವರು ಈಗ ಇದೇ ಪೋರನನ್ನು ನಿರಂತರವಾಗಿ ಒಂದು ಗಂಟೆ ಕಾರ್ಯಕ್ರಮ ನೀಡುವಷ್ಟು ತಯಾರು ಮಾಡಿದ್ದಾರೆ. ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಆತ್ಮವಿಶ್ವಾಸದಿಂದ ಅಧೀಶ್ ಹಾಡಿದ್ದು ಅವರ ಈ ಧೈರ್ಯಕ್ಕೆ ಕಾರಣವಂತೆ.ನಾಡಗೀತೆ ಹಾಗೂ ರೈತಗೀತೆಗಳನ್ನು ಕಲಿಸಿದಾಗ ಪ್ರತಿ ಸಾಲುಗಳನ್ನೂ ನೆನಪಿಟ್ಟುಕೊಂಡು ಹಾಡಿದ್ದನಂತೆ. ಕುಮಾರನ್ಸ್ ಕಾನ್ವೆಂಟ್‌ನಲ್ಲಿ ಕಲಿಯುವ ಈ ಹುಡುಗನಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ಎಂಬ ನೋವು ಗುರುವಿನದ್ದು.ಆದರೂ ನೆನಪಿಟ್ಟು ಹಾಡುತ್ತಾನಲ್ಲ ಎಂಬ ಖುಷಿ. ಒಂದು ಗಂಟೆ ಹಾಡಲು ಸಜ್ಜಾಗುತ್ತಿರುವ ಈ ಪೋರನಿಗೆ ಪ್ರತಿದಿನ ಸುಮಾರು ಮೂರು ಗಂಟೆಗಳ ಕಾಲ ಗುರುವಿನಿಂದ ಪಾಠ. ನಂತರ ಅಮ್ಮನ ತರಬೇತಿ. ಒಟ್ಟೂ 12 ಹಾಡುಗಳನ್ನು ಆತ ಒಂದು ಗಂಟೆ ಕಾರ್ಯಕ್ರಮದಲ್ಲಿ ಪಸ್ತುತಪಡಿಸಲಿದ್ದಾನೆ. ಹಾಡಲಾರ ಎಂದುಕೊಂಡಿದ್ದ ಮಗು ಎಲ್ಲವನ್ನು ಪಟಾಪಟ್ ಕಲಿಯುತ್ತಿರುವುದು ಗುರುವಾದ ಕೃಷ್ಣಮೂರ್ತಿ ಅವರಿಗೆ ಹೆಮ್ಮೆ.ಒಂದು ಹಾಡು ಹೇಳಿ ತೋರಿಸು ಎಂದಕೂಡಲೇ ಗಂಟಲು ಸರಿಮಾಡಿಕೊಂಡು ಗಣಪತಿಯ ಹಾಡೊಂದನ್ನು ಶುರುಮಾಡಿದ ಅಧೀಶನ ದನಿಯಲ್ಲಿ ಹಾಡಿನೆಡೆಗಿನ ಶೃದ್ಧೆ ಕಾಣುತ್ತಿತ್ತು. `ಹಾಡೋಕೆ ನನಗಿಷ್ಟ' ಎನ್ನುತ್ತಾ ಮತ್ತೆ ಆಟದತ್ತ ಚಿತ್ತ ಹರಿಸಿದ ಈ ಪೋರನ ತುಂಟಾಟದಲ್ಲೂ ಸಾಧನೆಯ ಗರಿ.ಅಂದಹಾಗೆ ಇದೇ ಭಾನುವಾರ (ಜೂನ್ 23) ಅಧೀಶ್ ಒಂದು ಗಂಟೆಗಳ `ಪುಟಾಣಿ ಪೋರ ಸಂಗೀತ ಚತುರ' ಕಾರ್ಯಕ್ರಮ ನೀಡಲಿದ್ದಾನೆ. ಇದು ಲಿಮ್ಕಾ ದಾಖಲೆಗೂ ನೋಂದಾವಣೆಗೊಳ್ಳುವ ಸಾಧ್ಯತೆ ಇದೆ.ಕಾರ್ಯಕ್ರಮದ ಸಾನಿಧ್ಯ- ಕೊಳದಮಠದ ಪೀಠಾಧ್ಯಕ್ಷ ಶಾತವೀರ ಸ್ವಾಮೀಜಿ. ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಅತಿಥಿಗಳಾಗಿ ಕಲಾವಿದ ಡಾ. ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರು ಭಾಗವಹಿಸಲಿದ್ದಾರೆ.ಸ್ಥಳ: ಬಿ.ಎಂ.ಶ್ರೀ. ಸಭಾಂಗಣ, ಎನ್.ಆರ್.ಕಾಲೊನಿ, ಬಸವನಗುಡಿ. ಸಂಜೆ 6.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.