ಶುಕ್ರವಾರ, ಫೆಬ್ರವರಿ 26, 2021
20 °C

ಹಾಡುತ್ತಾ ಬಂದ ರೋಮಿಯೋ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಡುತ್ತಾ ಬಂದ ರೋಮಿಯೋ...

`ರೋಮಿಯೊ ಎಂಬ ಸುಪ್ತಸ್ವರ

ಸಪ್ತ ದಿಕ್ಕಲ್ಲೂ ಮೊಳಗಿಸಲಿ ಝೇಂಕಾರ~

ಆಹ್ವಾನ ಪತ್ರಿಕೆಯಲ್ಲಿನ ಮಾತನ್ನು ನಿಜ ಮಾಡುವ ಹುಮ್ಮಸ್ಸಿನಲ್ಲಿದ್ದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ವಾದ್ಯಗಾರರ ಪುಟ್ಟ ತಂಡವೊಂದನ್ನು ಕಟ್ಟಿಕೊಂಡು ವೇದಿಕೆಯ ಮೇಲೆಯೇ `ರೋಮಿಯೋ~ ಗೀತಲೋಕ ಅನಾವರಣಗೊಳಿಸಿದರು. ಅರ್ಜುನ್ ಸ್ವರಗಳಿಗೆ ಅನುರಾಧ ಭಟ್, ನಕುಲ್, ಶಮಿತಾ ಮಲ್ನಾಡ್ ದನಿಯಾದರು.ಸಾಹಿತ್ಯದ ಹಂಗು ಮೀರುವಂತೆ ವಾದ್ಯಗಾರರ ನಡುವಣ ಜುಗಲ್‌ಬಂದಿಯೂ ನಡೆಯಿತು. ಗಿಟಾರ್‌ನಲ್ಲಿ ಮೃದಂಗ, ವೀಣೆಯ ದನಿಗಳನ್ನೂ, ರೈಲಿನ ಚುಕುಬುಕು ಸದ್ದನ್ನೂ ನುಡಿಸಿದ ಸ್ಟೀಫನ್ ಸಹೃದಯರಿಂದ ಚಪ್ಪಾಳೆ ಕೇಳಿ ಪಡೆದರು. ಹುಸಿ ಮೋಡ ಕವಿದ ಸಂಜೆ, ಸಂಜೆ ಹಾಡುಗಳ ಮಳೆ ಧಾರಾಕಾರ.ಅದು, `ರೋಮಿಯೋ~ ಚಿತ್ರದ ದನಿಮುದ್ರಿಕೆ ಬಿಡುಗಡೆ ಸಮಾರಂಭ. ರಮೇಶ್ ಕುಮಾರ್ ಮತ್ತು ನವೀನ್ ಚಿತ್ರದ ನಿರ್ಮಾಪಕರು.ನಿರ್ದೇಶಕ ಪಿ.ಸಿ.ಶೇಖರ್ ಅವರಲ್ಲಿ ಹೆಚ್ಚಿಗೆ ಮಾತುಗಳಿರಲಿಲ್ಲ. ಅರ್ಜುನ್ ಸಂಗೀತ ಸಮಾರಾಧನೆ ಮುಗಿದ ಮೇಲೆ ಮಾತುಗಳಿಗೆ ವ್ಯವಧಾನವೂ ಉಳಿದಿರಲಿಲ್ಲ. ಹಾಗಾಗಿ ಚಿತ್ರತಂಡದ ಎಲ್ಲರೂ ಆಡಿದ್ದು ಕಡಿಮೆ ಮಾತು.`ರೋಮಿಯೊ ಜನರನ್ನು ರಂಜಿಸುವ ವಿಶ್ವಾಸವಿದೆ. ಒಳ್ಳೆಯ ತಂಡವೊಂದರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ~ ಎಂದು ಶೇಖರ್ ಹೇಳಿದರು.`ರೋಮಿಯೋ~ ಆಗಿ ನಟಿಸಿರುವುದು ನಾಯಕ ನಟ ಗಣೇಶ್. `ಪ್ರತಿ ಹಂತದಲ್ಲೂ ರಂಜಿಸುವ ಸಿನಿಮಾ ಮಾಡಬೇಕೆಂದು ಹೊರಟು, ಅದಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದೇವೆ~ ಎಂದು ಗಣೇಶ್ ನೆನಪುಗಳ ಚಪ್ಪರಿಸಿದರು. `ಅರ್ಜುನ್ ಅವರೇನೋ ಉತ್ಸಾಹದಲ್ಲಿ ಸಂಗೀತ ಸಂಯೋಜಿಸಿದರು. ಆ ಗೀತೆಗಳಿಗೆ ಹೆಜ್ಜೆ ಹಾಕಲು ಅಷ್ಟೇನೂ ಒಳ್ಳೆಯ ನೃತ್ಯಗಾರನಲ್ಲದ ನಾನು ಸಾಕಷ್ಟು ಕಷ್ಟಪಡಬೇಕಾಯಿತು~ ಎಂದರು.ಗೀತರಚನೆಕಾರರಾದ ಕವಿರಾಜ್, ನಾಗೇಂದ್ರಪ್ರಸಾದ್ ಮತ್ತು ಅಲೆಮಾರಿ ಸಂತು ವೇದಿಕೆಯಲ್ಲಿದ್ದರು. ಮೂವರೂ ಒಕ್ಕೊರಲಿನಿಂದ ನಿರ್ದೇಶಕ ಶೇಖರ್ ಅವರ ವೃತ್ತಿಪರತೆಗೆ ಫುಲ್ ಮಾರ್ಕ್ಸ್ ನೀಡಿದರು.ಪೋಷಕ ನಟಿ ಸುಧಾ ಬೆಳವಾಡಿ ನಿರ್ದೇಶಕರ ಬಣ್ಣನೆಯಲ್ಲಿ ಹಿಂದೆ ಬೀಳಲಿಲ್ಲ- `ಶೇಖರ್ ಅವರಷ್ಟು ಹೋಂ ವರ್ಕ್ ಮಾಡಿದ ನಿರ್ದೇಶಕರನ್ನು ಕಂಡೇ ಇಲ್ಲ~ ಎಂದರು. ಕಥೆ ಹೇಳುವ ಸಮಯದಲ್ಲೇ ಪ್ರತಿ ಪಾತ್ರ, ಪ್ರತಿ ದೃಶ್ಯವನ್ನು ನಿರ್ದೇಶಕರು ಬಣ್ಣಿಸಿದ್ದನ್ನು, ತಾವು ಹೇಳಿದ್ದನ್ನು ಚಾಚೂ ತಪ್ಪದಂತೆ ಚಿತ್ರೀಕರಿಸಿದ್ದನ್ನು ಸುಧಾ ನೆನಪಿಸಿಕೊಂಡರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.