ಬುಧವಾರ, ಮಾರ್ಚ್ 3, 2021
19 °C

ಹಾಡುವ ಅಲೆಯಲ್ಲಿ ಅಪ್ಪು

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಹಾಡುವ ಅಲೆಯಲ್ಲಿ ಅಪ್ಪು

‘ಮೊದಲು ನನ್ನ ಸಿನಿಮಾಗಳಿಗೆ ಹಾಡುತ್ತಿದ್ದೆ. ಇತ್ತೀಚೆಗೆ ಬೇರೆ ಸಿನಿಮಾಗಳಲ್ಲೂ ಹಾಡುತ್ತಿದ್ದೇನೆ. ಇದಕ್ಕೆ ಅಮ್ಮನೇ ಕಾರಣ. ಅವರಿಗೆ ನನ್ನ ಮೊದಲ ಧನ್ಯವಾದ’ ಎಂದು ನಗುತ್ತಾ ಮಾತು ಆರಂಭಿಸಿದರು ನಟ ಪುನೀತ್‌ ರಾಜಕುಮಾರ್.ನಗರದಲ್ಲಿ ಇತ್ತೀಚೆಗೆ ‘ಗೋದ್ರೇಜ್ ಇಂಟೀರಿಯೊ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೆಟ್ರೊ’ದೊಂದಿಗೆ ಮನಬಿಚ್ಚಿ ಮಾತನಾಡಿದರು. ‘ನಟರಾಜ ಸರ್ವೀಸ್’ ಸಿನಿಮಾದ ಶೀರ್ಷಿಕೆ ಗೀತೆಗೆ ದನಿಯಾಗಿರುವ ಅಪ್ಪುಗೆ ಹಾಡುವುದು ಹೆಚ್ಚು ಖುಷಿ ಕೊಡುವ ಸಂಗತಿಯಂತೆ.‘ರಿಷಿ’ ಸಿನಿಮಾದಲ್ಲಿ ಶಿವರಾಜಕುಮಾರ್ ಅವರಿಗೆ ಹಾಡಿದ ನಂತರ ನಟ ಯೋಗೇಶ್ ಸಿನಿಮಾದ ಹಾಡೊಂದಕ್ಕೆ ಪುನೀತ್ ದನಿಯಾಗಿದ್ದರು. ಆ ನಂತರ ಈ ಪಟ್ಟಿ ಬೆಳೆಯುತ್ತಾ ಹೋಯಿತು. ಪುನೀತ್ ಅವರ ಒಂದು ಹಾಡು ಚಿತ್ರದಲ್ಲಿದ್ದರೆ ಅದು ಗೆಲುವಿನ ದಡ ಮುಟ್ಟಿಸುವ ಒಂದು ಸಾಧನ ಎಂಬ ನಂಬಿಕೆಯೇ ಇದಕ್ಕೆಲ್ಲ ಕಾರಣ. ಅದರಂತೆಯೇ ಹಿಟ್ ಲಿಸ್ಟ್‌ಗೆ ಸೇರುವ ಪುನೀತ್ ಹಾಡುಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈಚೆಗಷ್ಟೇ ಅವರು ಜೂಮ್, ನಟರಾಜ ಸರ್ವೀಸ್ ಚಿತ್ರಗಳಿಗೂ ಹಾಡಿದ್ದರು.‘ಯಾರ ಸಿನಿಮಾ ಆದರೂ ನಿನಗೆ ಇಷ್ಟವಿದ್ದರೆ ಒಪ್ಪಿಕೊ ಎಂದು ನನ್ನ ತಾಯಿ ಸಲಹೆ ನೀಡಿದರು. ಆಗ ಹಾಡಲು ಶುರು ಮಾಡಿದೆ. ಗಣೇಶ್, ಶರಣ್ ಅವರ ಸಿನಿಮಾಗಳಲ್ಲೂ ಹಾಡಿದೆ. ಹಾಡುವುದರಿಂದ ನನಗೂ ಖುಷಿ ಸಿಗುತ್ತದೆ. ಅದರಿಂದ ಬರುವ ಹಣ ನನ್ನ ತಂದೆಯ ಟ್ರಸ್ಟ್‌ಗೆ ಹೋಗುತ್ತದೆ. ಇದು ಎರಡು ರೀತಿಯಿಂದಲೂ ತೃಪ್ತಿ ಸಿಗುವ ಮಾರ್ಗ ನನಗೆ’ ಎಂದರು.ಪ್ರತಿದಿನ ಕಾರಿನಲ್ಲಿ ಓಡಾಡಬೇಕಾದರೆ ಕನ್ನಡ ಹಾಡುಗಳನ್ನೇ ಕೇಳುತ್ತಾರಂತೆ. ರೇಡಿಯೊ ಎಂದರೆ ತುಂಬಾ ಇಷ್ಟ. ಎಲ್ಲಾ ಎಫ್.ಎಂ ಸ್ಟೇಷನ್‌ಗಳ ಹಾಡನ್ನೂ ತಪ್ಪದೇ ಕೇಳುವ ಅವರು, ‘ಆ  ಹಾಡುಗಳಲ್ಲಿ ನಾನು ಹಾಡಿದ ಹಾಡೂ  ಇರುತ್ತದೆ. ಆಗೆಲ್ಲಾ ಖುಷಿಯಾಗುತ್ತದೆ. ಜೊತೆಗೆ ಬೇರೆಯವರಿಗಾಗಿ ಹಾಡಿದ್ದು ಎಂಬ ಸಮಾಧಾನವೂ ಅದರಲ್ಲಿ ತುಂಬಿರುತ್ತದೆ’ ಎಂದರು ನಗುತ್ತಾ.‘ದೊಡ್ಮನೆ ಹುಡ್ಗ’, ‘ರಾಜಕುಮಾರ್’ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ಅವರು, ‘ಕನ್ನಡದ ಕೋಟ್ಯಧಿಪತಿ’ ನಂತರ ಬೇರಾವ ರಿಯಾಲಿಟಿ  ಷೋಗಳಲ್ಲೂ ಕಾಣಿಸಿಕೊಂಡಿಲ್ಲ. ಇದೇ ಪ್ರಶ್ನೆಯನ್ನು ಮುಂದಿಟ್ಟಾಗ, ಪುನೀತ್ ಅವರು ಉತ್ತರಿಸಿದ್ದು ಹೀಗೆ...‘ಕೋಟ್ಯಧಿಪತಿ’ ರಿಯಾಲಿಟಿ ಷೋ ನನಗೆ ಬಹಳ ಇಷ್ಟದ ಷೋ. ಅದನ್ನು ಒಪ್ಪಿಕೊಳ್ಳಲು ತುಂಬಾ ಮುಖ್ಯವಾದ ಕಾರಣವಿತ್ತು. ಅಮಿತಾಭ್‌ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ‘ಕೌನ್ ಬನೇಗಾ ಕರೋಡ್‌ಪತಿ’ ಎಲ್ಲರಿಗೂ ಚಿರಪರಿಚಿತ. ನಾನು ಅಮಿತಾಭ್‌ ಬಚ್ಚನ್ ಅಭಿಮಾನಿ. ಜೊತೆಗೆ 80ರ ದಶಕದಲ್ಲಿ ನಾವೆಲ್ಲಾ ನೋಡುತ್ತಿದ್ದ, ಕ್ವಿಜ್‌ ಮಾಸ್ಟರ್‌ ಎಂದು ಕರೆಸಿಕೊಂಡಿದ್ದ ಸಿದ್ಧಾರ್ಥ ಬಸು ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದ್ದು ಎರಡನೇ ಕಾರಣ.ಹಾಗಾಗಿ ಕಾರ್ಯಕ್ರಮವನ್ನು  ತುಂಬಾ ಇಷ್ಟಪಟ್ಟು ನಡೆಸಿಕೊಟ್ಟೆ. ಬೇರೆ ರಿಯಾಲಿಟಿ ಷೋಗಳನ್ನು ಮಾಡಬಾರದು ಅಂತೇನಿಲ್ಲ. ಒಳ್ಳೆ ಪರಿಕಲ್ಪನೆಯ ಷೋ ಸಿಕ್ಕಿ, ಒಪ್ಪಿಗೆಯಾದರೆ ಖಂಡಿತ ಮಾಡುವೆ’.ವಿನಯ್ ರಾಜಕುಮಾರ್ ಅವರ ‘ರನ್ ಆ್ಯಂಟನಿ’ ಸಿನಿಮಾ ಕುರಿತೂ ಪುನೀತ್ ಒಂದೆರಡು ಮಾತನಾಡಿದರು. ರಾಜ್‌ ಅವರ ಕುಟುಂಬದ ಮೂರನೇ ತಲೆಮಾರು ಸಿನಿಮಾಗೆ ಬಂದಿದ್ದು ಅವರಲ್ಲಿ ಸಂತೋಷ ತುಂಬಿದೆ.‘ವಿನಯ್‌ ನನ್ನ ಮಗನಂತೆ. ಅವನು ಈ ಕ್ಷೇತ್ರಕ್ಕೆ ಬಂದಿದ್ದು ತುಂಬಾ ಖುಷಿ ವಿಷಯ. ಯಾವುದೇ ಕ್ಷೇತ್ರವಾಗಿರಲಿ, ನಾವು ಚೆನ್ನಾಗಿ ಕೆಲಸ ಮಾಡಬೇಕು, ಸಂತೋಷದಿಂದ ಮುನ್ನಡೆಸಿಕೊಂಡು ಹೋಗಬೇಕು ಎಂಬುದು ಮುಖ್ಯ’ ಎಂದು ಕಿವಿಮಾತನ್ನೂ ಹೇಳಿದರು.‘ದೊಡ್ಮನೆ ಹುಡ್ಗ’ ಶೂಟಿಂಗ್ ಅನುಭವ ಅವರಲ್ಲಿ ಸಾಕಷ್ಟು ಉತ್ಸಾಹ ತಂದಿದೆಯಂತೆ. ‘ದೊಡ್ಮನೆ ಹುಡುಗ’ ನಿರ್ದೇಶಕ ಸೂರಿಯವರೊಂದಿಗೆ ಪುನೀತ್ ಅಭಿನಯದ ಮೂರನೇ ಸಿನಿಮಾ. ಪುನೀತ್, ತುಂಬಾ ಇಷ್ಟಪಡುವ ಹಾಗೂ ಕಂಫರ್ಟಲ್ ಆಗಿರುವ ನಿರ್ದೇಶಕರಲ್ಲಿ ಸೂರಿಯವರೂ ಇದ್ದಾರೆ.ಸೂರಿ ಅವರೊಂದಿಗೆ ಕೆಲಸ ಮಾಡುವುದು ಒಂದು ವಿಷಯವಾದರೆ,  ಅಂಬರೀಷ್ ಅವರಂಥ ಹಿರಿಯ ನಟರೊಂದಿಗೆ  ಅಭಿನಯಿಸಿರುವುದು ಸಂತೋಷ ಇಮ್ಮಡಿಯಾಗಲು ಮುಖ್ಯ ಕಾರಣ.‘ಮೊದಲಿನಿಂದಲೂ ಅಂಬರೀಷ್ ಅವರ ಜೊತೆ ಅಭಿನಯಿಸಬೇಕು ಎಂಬ ಆಸೆ ಇತ್ತು. ಶಿವಣ್ಣ, ಸುದೀಪ್, ದರ್ಶನ್, ಯಶ್ ಅವರೆಲ್ಲಾ ಅಂಬರೀಷ್ ಅವರ ಜೊತೆ ಮಾಡಿದ್ದರು. ನನಗೂ ಅವರೊಂದಿಗೆ ಅಭಿನಯಿಸುವ ಆಸೆ ಇತ್ತು. ಈ ಸಿನಿಮಾ ಮೂಲಕ  ಆ ಅವಕಾಶ ಸಿಕ್ಕಿದ್ದು ಖುಷಿ ಆಗಿದೆ.ಶೂಟಿಂಗ್ ಸಮಯದಲ್ಲಿ ಪ್ರತಿದಿನ ಅವರೊಂದಿಗೇ ಕಾಲ ಕಳೆಯುತ್ತಿದ್ದೆ. ಸುಮಲತಾ ಅಂಬರೀಷ್ ಅವರೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದೊಡ್ಡಮ್ಮನಾಗಿ ಭಾರತಿ ಅವರು ನಟಿಸಿದ್ದಾರೆ. ದೊಡ್ಡ ದೊಡ್ಡ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವುದು ಅತ್ಯುತ್ತಮ ಅನುಭವ’ ಎಂದು ಭಾವುಕವಾಗಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.