ಶನಿವಾರ, ಏಪ್ರಿಲ್ 17, 2021
31 °C

ಹಾಡುಹಕ್ಕಿಗಳ ಬ್ಯಾನ್ಡ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಡುಹಕ್ಕಿಗಳ ಬ್ಯಾನ್ಡ್ ತಂಡ

ಮೈಯಲ್ಲಿ ಹರಿಯುವ ಬಿಸಿರಕ್ತ ಮನಸ್ಸಿನಲ್ಲಿ ಮೂಡುವ ಸಾವಿರ ಯೋಚನೆಗಳು ಏನೋ ಹೊಸತನ್ನು ಮಾಡಲು ತುಡಿಯುವ ಮನಸ್ಥಿತಿಯ ಹುಡುಗರಿವರು.ದಿನಾ ಎಂಟು ಗಂಟೆ ದುಡಿ, ವಾರಾಂತ್ಯದ ಎರಡು ರಜೆಯಲ್ಲಿ ಬ್ಯಾಗ್ ಏರಿಸಿಕೊಂಡು ಟ್ರೆಕಿಂಗ್ ಹೋಗು ಇಲ್ಲವೇ ಗೆಳೆಯರ ಜತೆ ಸೇರಿ ಮೋಜು ಮಸ್ತಿ ಮಾಡು ಎಂಬ ಬದುಕಿನಿಂದ ದೂರವಿದ್ದು, ತಮ್ಮದೇ ಸಂಗೀತ ತಂಡ  ಕಟ್ಟಿಕೊಂಡವರು.ಈ ತಂಡದ ಹೆಸರು `ಲೈವ್ ಬ್ಯಾನ್ಡ್~. ಹೆಸರೇ ನಿಮಗೆ ವಿಚಿತ್ರ ಅನ್ನಿಸುತ್ತೆ ಅಲ್ವಾ? ಈ ಐಡಿಯಾ ಹುಟ್ಟಿದ ಸಂದರ್ಭವೂ ತಮಾಷೆಯದ್ದು. ಧೀರೂ ಮತ್ತು ಅಮೃತ್ ಒಂದು ಆಲ್ಬಂ ರೆಕಾರ್ಡ್ ಮಾಡುತ್ತಿರುವಾಗ ಒಂದು ತಂಡ ಕಟ್ಟಿ ಅದರಲ್ಲಿ ಎಲ್ಲಾ ಹಾಡುಗಳನ್ನು ಮಿಶ್ರ ಮಾಡಿದರೆ ಹೇಗಿರುತ್ತದೆ.

 

ಅದಕ್ಕೆ ಲೈವ್ ಬ್ಯಾನ್ಡ್ ಎಂದು ಹೆಸರಿಟ್ಟರೆ ಹೇಗೆ ಎಂದು ತಮಾಷೆ ಮಾಡಿಕೊಂಡರಂತೆ. ಮನೆಗೆ ಬಂದರೂ ಅದೇ ಯೋಚನೆ. ಆ ನಾದಲಹರಿಯ ಸುರುಳಿ ಮನಸಿನಿಂದಾಚೆ ಹೋಗಲೊಲ್ಲದು. ಯಾಕೆ ತಂಡ ಕಟ್ಟಬಾರದು? ಎಂಬ ಮನಸಿನ ಸವಾಲಿಗೆ ಉತ್ತರವಾಗಿಯೇ ತಂಡ ಹುಟ್ಟಿಕೊಂಡಿತಂತೆ.ಅಮೃತ್ ರಾವ್ (ಗಾಯಕ), ಧೀರೇಂದ್ರ (ಡ್ರಮ್ಸ), ಶ್ರೀಧರ್ (ಗಿಟಾರ್), ಸಿದ್ಧಾರ್ಥ್ ಕಾಮತ್ (ಕೀಬೋರ್ಡ್ಸ್), ರವೀಶ್ ಟಿರ್ಕಿ (ಬೇಸ್ ಗಿಟಾರ್) ಈ ತಂಡದ ಸದಸ್ಯರು. ತಂಡದ ಬಗ್ಗೆ ಅಮೃತ್ ಮಾತಿನಲ್ಲಿಯೇ ಕೇಳಿ.ಸಂಗೀತ ಮತ್ತು ಮಗುವಿನ ಪ್ರೀತಿ

`ನಮ್ಮದು ಐದು ಜನರ ತಂಡ. ನಮ್ಮ ಈ ಕನಸಿನ ಕೂಸಿಗೆ ಎರಡು ವರ್ಷದ ಸಂಭ್ರಮ. ಸಂಗೀತ ಮಗುವಿನಂತೆ. ನಾವು ಅಕ್ಕರೆಯಿಂದ ಅಪ್ಪಿದರೆ ಮಾತ್ರ ಅದು ನಮ್ಮನ್ನೂ ತಬ್ಬಿಕೊಳ್ಳುತ್ತದೆ. ಸಂಗೀತದ ಒಂದೊಂದು ರಾಗವೂ ನಮ್ಮಳಗೆ  ಸೇರಿಕೊಳ್ಳುವ ಹಾಗೆ ನಮ್ಮ ಮನಸ್ಥಿತಿ ಇರಬೇಕು.

 

ಒಂದು ವರ್ಷದಲ್ಲಿ 50 ಶೋ ಕೊಟ್ಟಿದ್ದೇವೆ. ಇದು ದೊಡ್ಡ ಸಾಧನೆ ಎಂದು ಹೊಗಳಿಕೊಳ್ಳುತ್ತಿಲ್ಲ. ಆದರೆ ತಾಯಿಗೆ ತನ್ನ ಮಗು ಯಾವುದೇ ಹಂಗಿಲ್ಲದೇ ಹೆಜ್ಜೆ ಇಟ್ಟಾಗ ಎಷ್ಟು ಖುಷಿಯಾಗುತ್ತದೆಯೋ ಅಷ್ಟೇ ಖುಷಿ ನನಗಾಗಿತ್ತು. ನಮ್ಮ ತಂಡದಲ್ಲಿ ಇರುವವರೆಲ್ಲರೂ ಎಂಜಿನಿಯರ್ಸ್‌. ಆದರೆ ಆ ಕೀಬೋರ್ಡ್ ಬದಲಿಗೆ ಸಂಗೀತದ ಉಪಕರಣ ಹಿಡಿದಿದ್ದೀವಿ.ಸಂಗೀತವನ್ನು ಹವ್ಯಾಸವಾಗಿಟ್ಟುಕೊಳ್ಳಿ, ಇನ್ನೊಂದು ಕಡೆ ಕೆಲಸ ಮಾಡಿ, ಎಂಜಿನಿಯರ್ ಉದ್ಯೋಗ ಯಾಕೆ ಬಿಡುವಿರಿ ಎಂಬ ಸಲಹೆಗಳೂ ಇದ್ದವು. ಆದರೆ ನನಗೆ ಇದು ಹವ್ಯಾಸವಲ್ಲ, ಪಾರ್ಟ್ ಟೈಂ ಕೆಲಸವೂ ಅಲ್ಲ. ಸಂಗೀತ ನನ್ನ ಉಸಿರು. ಸಂಗೀತ ಕ್ಷೇತ್ರದ ಮೇಲೇ ಮನಸ್ಸನ್ನು ಕೇಂದ್ರೀಕರಿಸಬೇಕು ಎಂಬ ಉದ್ದೇಶದಿಂದ ಇದನ್ನು ಆರಿಸಿಕೊಂಡೆ.ಇದನ್ನು ಮೊದಲು ಶುರು ಮಾಡಿದ್ದು ನಾನು ಮತ್ತು ಧೀರೂ (ಧೀರೇಂದ್ರ). ಆಮೇಲೆ ಉಳಿದವರು ಸೇರಿಕೊಂಡರು. ನಮ್ಮಲ್ಲಿ ಯಾವತ್ತೂ ಬೇಧಭಾವ ಬರಲಿಲ್ಲ. ಇಲ್ಲಿ ಎಲ್ಲರ ಯೋಚನೆಗೂ ವೇದಿಕೆ ದೊರೆಯಿತು. ದೇವರು ಎಲ್ಲರಿಗೂ ತಲೆಕೊಟ್ಟಿದ್ದಾನೆ. ತಂಡದವರು ಮಾಡಿದ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಶ್ರಮಪಡುತ್ತೇವೆ.ಚಿಕ್ಕವಯಸ್ಸಿನಲ್ಲಿಯೇ ಸಂಗೀತದೆಡೆಗೆ ನನಗೆ ಆಸಕ್ತಿ ಬೆಳೆದಿತ್ತು. ಅಪ್ಪ ಕೂಡ ಹಾಡುಗಾರ. ಸಂಗೀತದ ಗಾಳಿ ಕುಟುಂಬದಿಂದ ಬೀಸಿತ್ತು. ಗುರು ಎಂದು ಯಾರೂ ಇಲ್ಲ. ನನ್ನ ಮನಸ್ಸೇ ನನಗೆ ಗುರು. ಎಡವುತ್ತಾ ಕಲಿತದ್ದೇ ಜಾಸ್ತಿ. ಸುಮ್ಮನೇ ಕುಳಿತಾಗ ಎಲ್ಲಾ ರೀತಿಯ ಸಂಗೀತವನ್ನು ಕೇಳುತ್ತಾ ಇರುತ್ತೇನೆ. ಶೋ ಇರುವಾಗ ಯಾವತ್ತೂ ಗಡಿಬಿಡಿಯಲ್ಲಿ ತಯಾರಿ ಮಾಡಿಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ನಗುತ್ತಾ ಮನಸ್ಸಿನ ಒತ್ತಡ ಕಳೆದುಕೊಳ್ಳುತ್ತೇವೆ. ನಮ್ಮದು ಭಿನ್ನ ರೀತಿಯ ತಂಡ. ಇಲ್ಲಿ ಎಲ್ಲಾ ರೀತಿಯ ಸಂಗೀತವಿದೆ.ಧೀರೂ ಮಾತಿನಲ್ಲಿಯೂ ಸಂಗೀತದ ಸೆಳಹು ಕಾಣುತ್ತದೆ. `ಬಿ.ಇ ಎರಡನೇ ವರ್ಷದಲ್ಲಿಯೇ ನನಗೊಂದು ಸತ್ಯ ಗೊತ್ತಾಯಿತು. ಓದಿಗಿಂತಲೂ ಇನ್ಯಾವುದೋ ಶಕ್ತಿ ನನ್ನನ್ನು ಕರೆಯುತ್ತಿದೆ ಎಂದು. ಅದೇ ಸಂಗೀತ! ಕಷ್ಟಪಟ್ಟು ಬಿ.ಇ ಮುಗಿಸಿದೆ. ಕೊನೆಗೂ ಮನೆಯಲ್ಲಿ ತೋರಿಸಲು ಓದಿಗೊಂದು ಪ್ರಮಾಣಪತ್ರ ಸಿಕ್ಕಿತು. ಇನ್ನು ನಾನು ಸ್ವತಂತ್ರ ಹಕ್ಕಿ. ಯಾವುದೇ ಟ್ರೈನಿಂಗ್ ತೆಗೆದುಕೊಳ್ಳದೇ ಡ್ರಮ್ಸ ಬಾರಿಸಲು ಶುರುಮಾಡಿದೆ. ಈಗ ಅದು ಕರತಲಾಮಲಕ.ಸಂಗೀತ ತಂಡ ಕಟ್ಟುತ್ತೇನೆ ಎಂದಾಗ ಮನೆಯಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಕೊನೆಗೆ ನನ್ನ ಮಾತಿಗೆ ಬೆಲೆ ಸಿಕ್ಕಿತು. ಆಗ ವಿರೋಧ ಮಾಡಿದವರು ಈಗ ಬೆಂಬಲ ನೀಡುತ್ತಿದ್ದಾರೆ. ಕಾಲ ಎಲ್ಲವನ್ನು ಸರಿಮಾಡುತ್ತದೆ.ಹಾಡಿನೊಂದಿಗೆ ಮನರಂಜನೆಯನ್ನೂ ನೀಡಬೇಕೆಂಬ ಉದ್ದೇಶ ನಮ್ಮದು. ಹಾಡನ್ನು ನಾವೇ ಸಂಯೋಜನೆ ಮಾಡುತ್ತೇವೆ. ಅದಕ್ಕೆ ಜೀವ ತುಂಬಲು ಭಿನ್ನವಾಗಿ ವೇಷಭೂಷಣ ಧರಿಸುತ್ತೇವೆ. ಗ್ಲಾಸಿಲ್ಲದ ಕನ್ನಡಕ, ತಲೆಗೆ ಬಣ್ಣದ ಕೂದಲಿನ ವಿಗ್ ಹಾಕಿಕೊಳ್ಳುವುದು, ಪ್ಯಾಂಟ್ ಮೇಲೆ ಲುಂಗಿ ಉಟ್ಟುಕೊಳ್ಳುವುದು ಹೀಗೆ ಏನಾದರೂ ಹೊಸತನ್ನು ಮಾಡಿ ನಗಿಸಬೇಕು ಎಂಬುದು ನಮ್ಮ ಗುರಿ.ತಂಡ ಎಂದ ಕೂಡಲೇ ಅಲ್ಲಿ ಹಲವು ಅಭಿಪ್ರಾಯಗಳು ಬರುತ್ತವೆ. ಆದರೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶ್ರೀಧರ್ ಗಿಟಾರ್ ಚೆನ್ನಾಗಿ ಬಾರಿಸುತ್ತಾರೆ. ಸಿದ್ಧಾರ್ಥ್, ರವೀಶ್ ಎಲ್ಲರೂ ಒಟ್ಟಿಗೆ ಸೇರಿಕೊಂಡು ಕೆಲಸ ಮಾಡುತ್ತೇವೆ. ಒಂದು ಕುಟುಂಬದ ಹಾಗೇ ಇದ್ದೇವೆ~ ಎಂದು ಧೀರೂ ಹೇಳುತ್ತಾರೆ.ಸಂಗೀತ ಬಿಟ್ಟು ಬೇರೇನೂ ಬೇಡ ಎಂದು ಹೇಳುವ ಈ ತಂಡ ಆಟೊ ಡ್ರೈವರ್ ಕುರಿತು ಕಟ್ಟಿದ ಹಾಡು ಕೂಡ ಎಲ್ಲರೂ ಗುನುಗುನಿಸುವ ಹಾಗೇ ಇದೆ. ಹಾಡಿನ ಜತೆ ಮನರಂಜನೆಯನ್ನೂ ನೀಡುವ ಇವರ ಪುಟ್ಟ ತಂಡಕ್ಕೆ ಭಿನ್ನವಾಗಿರುವುದನ್ನು ಮಾಡುತ್ತಾ ಜನರ ಮೊಗದಲ್ಲಿ ನಗು ತರಿಸುವುದೇ ಇಷ್ಟವಂತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.