ಹಾದಿಗೊಂದು ಬೀದಿಗೊಂದು ವಿಶ್ವವಿದ್ಯಾಲಯ

7

ಹಾದಿಗೊಂದು ಬೀದಿಗೊಂದು ವಿಶ್ವವಿದ್ಯಾಲಯ

Published:
Updated:

ಗ್ರಾಮೀಣಾಭಿವೃದ್ಧಿ ವಿಶ್ವ­ವಿದ್ಯಾ­ಲಯ­ವನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ ಎಂದು (ಪ್ರ.ವಾ. ಸೆ. 7)  ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್‌­ರಾಜ್‌ ಸಚಿವ ಎಚ್‌. ಕೆ. ಪಾಟೀಲ ಅವರು ಹೇಳಿದ್ದಾರೆ.ಹಿಂದಿನ ಬಿ.ಜೆ.ಪಿ. ಸರ್ಕಾರ ಹಾದಿಗೊಂದು ಬೀದಿಗೊಂದು ವಿಶ್ವವಿದ್ಯಾಲಯವನ್ನು ತೆರೆದು, ಅವುಗಳಿಗೆ ಜಾಗವನ್ನೂ ನೀಡದೆ, ರಾತ್ರೋರಾತ್ರಿ ಕುಲಪತಿಗಳನ್ನು ನೇಮಿಸಿ ‘ಗಂಟು’ ಮಾಡಿ­ಕೊಂಡು ಹೋಯಿತು. ವಸೂಲಿ ಮಾಡಿಕೊಂಡು ತಮಗೆ ಬೇಕಾದವರನ್ನು ಕುಲಪತಿಗಳನ್ನಾಗಿಸಿ  ಓಡಾಡಲು ಒಂದು ಕಾರು ಕೊಟ್ಟರು. ಸಂಸ್ಕೃತ, ಸಂಗೀತ, ಜಾನಪದ ಹೀಗೆ ಒಂದೊಂದು ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯವನ್ನು ತೆರೆದು ವಿಶ್ವವಿದ್ಯಾಲಯವೆಂಬ ಪರಿಕಲ್ಪನೆಯೇ ಇಲ್ಲವಾಗಿಬಿಟ್ಟಿದೆ. ಇವುಗಳು ಜಾಗವಿಲ್ಲದೆ, ಹಣವಿಲ್ಲದೆ, ಮಾನವ ಸಂಪನ್ಮೂಲವಿಲ್ಲದೆ, ಈ ವಿಷಯ ವಿಶ್ವವಿದ್ಯಾಲಯಗಳಲ್ಲಿ ಏನು ಮಾಡ­ಬೇಕು ಎಂದು ತಿಳಿಯದೆ ಕಂಗಾಲಾಗಿ­ರುವುದು ಅನೇಕ ದಿನಪತ್ರಿಕೆಗಳಲ್ಲಿ ನಿತ್ಯ ವರದಿಯಾಗುತ್ತಿದೆ.ಇನ್ನು ಕಾಂಗ್ರೆಸ್‌ ಸರ್ಕಾರ ಸ್ಥಾಪಿಸಲು ಹೊರಟಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾ­ಲಯ ಕಥೆ ಇದಕ್ಕಿಂತ ಭಿನ್ನವಾಗುವ ಯಾವ ಸಾಧ್ಯತೆಯೂ ಇಲ್ಲ. ಕೃಷ್ಣದೇವರಾಯ ವಿಶ್ವ­ವಿದ್ಯಾ­­ಲಯ ಮತ್ತು ತುಮಕೂರು ವಿಶ್ವವಿದ್ಯಾ­ಲಯಗಳ ಸ್ಥಿತಿಗಳೂ ಇದಕ್ಕಿಂತ ಭಿನ್ನವಾಗಿಲ್ಲ.ಸರ್ಕಾರ ಈಗ ಮಾಡಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಈಗಾಗಲೇ ಅಸ್ತ್ಿತ್ವಕ್ಕೆ ಬಂದಿರುವ ವಿಶ್ವವಿದ್ಯಾಲಯಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಮೂಲ ಸೌಕರ್ಯ ಒದಗಿಸಿ ಸಶಕ್ತಗೊಳಿಸುವುದು. ಇದರ ಜೊತೆ ಜೊತೆಯಲ್ಲಿಯೇ ಆಗಬೇಕಾಗಿರುವ ಮತ್ತೊಂದು ಕೆಲಸವೆಂದರೆ ವಿಶ್ವವಿದ್ಯಾಲಯಗಳ ಗೌರವ ಮತ್ತು ಘನತೆಯನ್ನು ಮರುಸ್ಥಾಪಿ­ಸು­ವುದು. ಕುಲಪತಿಗಳ ನೇಮಕದಿಂದ ಆರಂಭಿಸಿ ‘ಡಿ’ ದರ್ಜೆ ನೌಕರರ ತನಕದ ಎಲ್ಲಾ ನೇಮಕಾತಿ­ಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಾಸನೆ ಹೊಡೆಯುತ್ತಿದೆ. ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳೂ ಒಂದಲ್ಲ ಒಂದು ಹಗರಣ­ದಲ್ಲಿ ಸಿಲುಕಿವೆ. ಈ ಸ್ಥಿತಿಯನ್ನು ಸುಧಾರಿಸಿದರಷ್ಟೇ ವಿ.ವಿಗಳಿಗೆ ಹಿಂದಿನ ಘನತೆ ದೊರೆತೀತು.ಇನ್ನು ವಿಷಯಕ್ಕೊಂದರಂತೆ ತೆರೆದಿರುವ ವಿಶ್ವವಿದ್ಯಾಲಯಗಳನ್ನು ಮೊದಲು ರದ್ದು  ಮಾಡಬೇಕು ಅಥವಾ ಇವುಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದೊಡನೆ ವಿಲೀನಗೊಳಿಸಬೇಕು. ಯಾಕೆಂದರೆ ಕನ್ನಡ ವಿಶ್ವವಿದ್ಯಾಲಯ ರಾಜ್ಯದ ಅಷ್ಟೇ ಅಲ್ಲ; ರಾಷ್ಟ್ರದಲ್ಲಿರುವ ಇತರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದುದು. ಅದು ಕಲಿಸುವ ಮತ್ತು ಕಲಿಯಲು ಬರುವವರಿಗೆ ಅವಕಾಶ ಕಲ್ಪಿಸುವ ವಿಶ್ವವಿದ್ಯಾಲಯ. ಜೊತೆಗೆ ಆಳವಾದ ಸಂಶೋಧನೆ, ಪ್ರಕಟಣೆ ಮತ್ತು ವಿಸ್ತರಣೆ ಕಾರ್ಯಗಳಿಗೆ ಒತ್ತುಕೊಟ್ಟಿರುವ ವಿಶ್ವವಿದ್ಯಾಲಯ.  ಡಾ. ಚಂದ್ರಶೇಖರ ಕಂಬಾರ ಅವರ ನೇತೃತ್ವದಲ್ಲಿ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಸಾಕಷ್ಟು ಸಾಧನೆ ಮಾಡಿದೆ. ಅಲ್ಲಿ ಜಾನಪದ, ಸಂಗೀತ, ಚಿತ್ರಕಲೆ, ಗ್ರಾಮೀಣಾಭಿವೃದ್ಧಿ ಇವುಗಳ ಅಧ್ಯಯನಕ್ಕೆ, ತರಬೇತಿಗೆ ಅವಕಾಶವಿದೆ.ಒಂದೊಂದು ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯ ತೆರೆಯುವುದರಿಂದ ಶೈಕ್ಷಣಿಕ­ವಾಗಿ ಅನುಕೂಲಕ್ಕಿಂತ ತೊಂದರೆಗಳೇ ಹೆಚ್ಚು.  ಇಡೀ ಜಗತ್ತು ವಿಶ್ಲೇಷಣಾ ವಿಧಾನ­ದಿಂದ ಸಂಶ್ಲೇಷಣಾ ಮಾದರಿಯ ಚಿಂತನೆ­ಯೆಡೆಗೆ ಹೊರಳುತ್ತಿರುವ ಈ ಸಂದರ್ಭದಲ್ಲಿ ವಿಷಯ ವಿಶ್ವವಿದ್ಯಾಲಯಗಳು  ಅಂತರ್‌­ಶಿಸ್ತೀಯ ಅಧ್ಯ­ಯನದ ಸಾಧ್ಯತೆಗಳಿಗೆ ಮುಳುವಾಗಿ­ಬಿಡುತ್ತವೆ.ಸಂಸ್ಕೃತವನ್ನು ಕಲಿಯುವವರು ಅದನ್ನು ಯಾವುದಾದರೊಂದು ಭಾರತೀಯ ಭಾಷೆಯ ಸಂದರ್ಭದಲ್ಲಿ ಅಥವಾ ಸಂಸ್ಕೃತವನ್ನು ಹೊರತು ಪಡಿಸಿದ ಮತ್ತೊಂದು ಅಧ್ಯಯನ ಶಿಸ್ತಿನ ಜೊತೆಗೆ ಕಲಿಯದಿದ್ದರೆ ಯಾವ ಪ್ರಯೋಜನವೂ ಇಲ್ಲ. ಸಂಸ್ಕೃತದಲ್ಲಿ ಭಾರೀ ಜ್ಞಾನವಿದೆ ಎಂಬುದನ್ನು ಒಪ್ಪಿಕೊಂಡು ಯೋಚಿಸಿದರೂ ಅದರಲ್ಲಿರುವ ಭಿನ್ನ ಶಿಸ್ತುಗಳ ಜ್ಞಾನವನ್ನು ಕೇವಲ ಸಂಸ್ಕೃತ ಭಾಷೆಯನ್ನು ಕಲಿತವರಿಂದಷ್ಟೇ ಹೊರತರಲು ಸಾಧ್ಯವೇ?ಈಗ ಸಂಸ್ಕೃತ ವಿಶ್ವವಿದ್ಯಾಲಯ ಮಾಡುತ್ತಿರುವ ಕೆಲಸಗಳಾದ ಅನುವಾದ ಮತ್ತು ಸಂಶೋಧನೆಯ ಕೆಲಸವನ್ನು ಕನ್ನಡ ವಿಶ್ವವಿದ್ಯಾ­ಲಯದಲ್ಲಿಯೂ ಮಾಡಬಹುದು.ಜಾನಪದ ವಿಶ್ವವಿದ್ಯಾಲಯದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.  ಈಗಿನ ಸ್ಥಿತಿಯಲ್ಲಿ ಕೇವಲ ಜಾನಪದ ವಿದ್ವಾಂಸರು ಮಾತ್ರ ಇಲ್ಲಿ ಸಂಶೋಧನೆ ಮತ್ತು ಸಂರಕ್ಷಣೆಯನ್ನು ಮಾಡಬಹುದಷ್ಟೇ. ಇದನ್ನು ಪುರಾತತ್ವಶಾಸ್ತ್ರ, ವೈದ್ಯವಿಜ್ಞಾನ, ಇತರ ನೈಸರ್ಗಿಕ ವಿಜ್ಞಾನಗಳ ಬೆಳಕಿನಲ್ಲಿಯೂ ನಡೆಸಬೇಕಾದ ಅಗತ್ಯವಿದೆ. ಜಾನಪದ ವೈದ್ಯವನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆ ಆಧುನಿಕ ವೈದ್ಯವಿಜ್ಞಾನದ ಮೂಲಕ ಆಗಬೇಕೇ ಹೊರತು ಕೇವಲ ಜಾನಪದ ವಿದ್ವಾಂಸರ ಮೂಲಕವಲ್ಲ. ಅಂದರೆ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿಯೇ ಜಾನಪದ ವೈದ್ಯಕ್ಕೆ ಸಂಬಂಧಿಸಿದ ಒಂದು ಅತ್ಯುತ್ತಮ ಜಾನಪದ ವೈದ್ಯ ವಿಭಾಗವಿರಬೇಕು.ಸಂಗೀತ ವಿಶ್ವವಿದ್ಯಾಲಯ ಕೇವಲ  ಸಂಗೀತಕ್ಕೆ ಮೀಸಲಾಗಿ ತನ್ನ ಚಟುವಟಿಕೆಗಳನ್ನು ನಡೆಸಿದರೆ ಸಾಕೇ? ಸಂಗೀತವನ್ನು ಸಾಹಿತ್ಯ, ಸಂಸ್ಕೃತಿ, ರಾಜಕೀಯ ಇತ್ಯಾದಿಗಳ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲವೇ? ಕೇವಲ ಸಂಗೀತಗಾರರನ್ನು ಸೃಷ್ಟಿಸುವುದಕ್ಕೆ ಸಂಗೀತ ವಿಶ್ವವಿದ್ಯಾಲಯ ಸೀಮಿತವಾಗುವುದಾದರೆ ಅದಕ್ಕೊಂದು ಸಂಗೀತ ಶಾಲೆ ಸಾಕಾಗದೇ?

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕೆಲಸಗಳನ್ನು ಕನ್ನಡ ವಿಶ್ವವಿದ್ಯಾಲಯದ ‘ಅಭಿವೃದ್ಧಿ ಅಧ್ಯಯನ ವಿಭಾಗ’ವು ಕೈಗೆತ್ತಿಕೊಳ್ಳ­ಬಹುದಾಗಿದೆ. ಹಾಗೆಯೇ ಇತರ ವಿಶ್ವ­ವಿದ್ಯಾಲಯಗಳಲ್ಲಿರುವ ಅರ್ಥಶಾಸ್ತ್ರ, ವಾಣಿಜ್ಯ­ಶಾಸ್ತ್ರ, ವ್ಯವಹಾರಾಡಳಿತ ವಿಭಾಗಗಳೂ ಈ ಕ್ರಿಯೆಗೆ ಕೈಜೋಡಿಸಬಹುದು.ವಿಶ್ವವಿದ್ಯಾಲಯ ಅನುದಾನ ಆಯೋಗ ಈ ಬಗೆಯ ಏಕ ವಿಷಯ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಇದು ನಿಯಮ. ಆದರೆ ಈಗ ಹೊಸ­ದಾಗಿ ಒಂದೊಂದು ವಿಷಯಕ್ಕೂ ಆರಂಭ­ವಾಗಿ­ರುವ ವಿಶ್ವವಿದ್ಯಾಲಯಗಳು ಯು.ಜಿ.ಸಿ. ಮಾನ್ಯತೆ ಪಡೆಯಲು ಈ ಕಾರಣದಿಂದ ವಿಫಲ­ವಾಗಿವೆ. ಅದಕ್ಕಾಗಿ ಅವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ, ‘ಸಂಗೀತ ಮತ್ತು ಇತರೆ ದೃಶ್ಯಕಲೆಗಳು’ ಎಂದೂ  ‘ಸಂಸ್ಕೃತ ಮತ್ತು ವೇದಗಳ ವಿಶ್ವವಿದ್ಯಾಲಯ’ವೆಂದೂ ‘ಜಾನಪದ ಮತ್ತು ಇತರೆ ಕಲೆಗಳು’ ಎಂದೂ ಅನಿವಾರ್ಯ­ವಾಗಿ ಹೆಸರುಗಳನ್ನು ಬದಲಾಯಿಸಿ­ಕೊಂಡು ಯು.ಜಿ.ಸಿ. ಮಾನ್ಯತೆ ಪಡೆಯಲು ಲಾಗ ಹೊಡೆಯುತ್ತಿವೆ.

ಇಂತಹ ‘ತ್ರಿಶಂಕು’ ಸ್ಥಿತಿ ನಿಮಾರ್ಣಕ್ಕೆ ಹಿಂದಿನ ಬಿ.ಜೆ.ಪಿ. ಸರ್ಕಾರವೇ ಮುಖ್ಯ ಕಾರಣವಾಗಿದೆ. ಮತ್ತೆ ಅದೇ ದಾರಿ, ಅದೇ ರಾಗವನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ ಹಾಡಲು ಹೊರಟಿರುವುದು ದುರಂತ ಎನ್ನದೇ  ಬೇರೆ ದಾರಿಯೇ ಇಲ್ಲ. ಕರ್ನಾಟಕದ ಪ್ರಜ್ಞಾವಂತ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಮತ್ತು ಅಧ್ಯಾಪಕರೆಲ್ಲಾ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಸಹ ಈ ಬಗ್ಗೆ ತಕ್ಷಣ ಆಲೋಚನೆ ಮಾಡಬೇಕಾದ ಜರೂರು ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry