ಭಾನುವಾರ, ಡಿಸೆಂಬರ್ 8, 2019
21 °C

ಹಾದಿಮನಿ ಕಲೆಯ ಮುಖಗಳು

Published:
Updated:
ಹಾದಿಮನಿ ಕಲೆಯ ಮುಖಗಳು

ಕನ್ನಡದ ವಿರಳ ಕಲಾವಿದರಲ್ಲಿ ಹಾದಿಮನಿ ಒಬ್ಬರು. ತಮ್ಮ ಗೆರೆಗಳಿಂದಲೇ ಪತ್ರಿಕೆಗಳ ಮೂಲಕ ಜನಮಾನಸವನ್ನು ಮುಟ್ಟಿದ, ತಟ್ಟಿದ ಅಪರೂಪದ ಕಲಾವಿದ ಕಲಾವಿದ ಟಿ.ಎಫ್.ಹಾದಿಮನಿ. ವಿಶಿಷ್ಟ ಗೆರೆಗಳಿಂದ ಇದು `ಹಾದಿಮನಿ ಶೈಲಿ~ ಎಂದು ಜನರು ಗುರುತಿಸುವಂತಹ ಶೈಲಿ ಅವರದು.ಬೆಳಗಾವಿ ಜಿಲ್ಲೆಯ ಹೊಸಕೋಟಿಯವರಾದ ಹಾದಿಮನಿ, 1989ರಿಂದ `ಸ್ದ್ದುದಿ ಸಂಗಾತಿ~ ಪತ್ರಿಕೆಯ ಮೂಲಕ ತಮ್ಮ ರೇಖೆಗಳ ಯಾನವನ್ನು ಆರಂಭಿಸಿದರು. ಬಳಿಕ `ಲಂಕೇಶ್ ಪತ್ರಿಕೆ~, `ದಿ ವೀಕ್~ಗಳಲ್ಲಿ ಜನರೊಂದಿಗೆ ತಮ್ಮ ಗೆರೆಗಳ ಮೂಲಕ ಮಾತನಾಡಿದ್ದಾರೆ.ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕೆಗಳಲ್ಲಿ ತಮ್ಮ ರೇಖಾಚಿತ್ರ, ವ್ಯಂಗ್ಯಚಿತ್ರ, ವ್ಯಂಗ್ಯಭಾವಚಿತ್ರ (ಕ್ಯಾರಿಕೇಚರ್)ಗಳನ್ನು ರೇಖಿಸುತ್ತ ಬಂದ ಹಾದಿಮನಿ ಇದೀಗ ತಾವು ಬರೆದ ವ್ಯಂಗ್ಯಭಾವಚಿತ್ರಗಳು ಹಾಗೂ ರೇಖಾಚಿತ್ರಗಳ ಪ್ರದರ್ಶನ `ಫೇಸಸ್- ದಿ ಆರ್ಟ್ ಆಫ್ ಕ್ಯಾರಿಕೇಚರ್~ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಸೋಮವಾರದಿಂದ (ಜನವರಿ 30) ಆರಂಭಗೊಂಡಿದೆ. ಇದು ಫೆಬ್ರುವರಿ 21ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.ಪ್ರದರ್ಶನದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಲೇಖಕ ಖುಷ್ವಂತ್ ಸಿಂಗ್, ರಾಜಕೀಯ ನಾಯಕರಾದ ಮನಮೋಹನ್ ಸಿಂಗ್, ಚಂದ್ರಬಾಬು ನಾಯ್ಡು, ಕರುಣಾನಿಧಿ, ರಾಹುಲ್ ಗಾಂಧಿ, ಲಾಲೂಪ್ರಸಾದ್ ಯಾದವ್ ಮುಂತಾದವರ ವ್ಯಂಗ್ಯಭಾವ ಚಿತ್ರಗಳು ಈ ವ್ಯಕ್ತಿಗಳ ವ್ಯಕ್ತಿತ್ವವನ್ನು, ಅವರ ಸಾರ್ವಜನಿಕ ಮುಖವನ್ನು ಹಿಡಿದಿಟ್ಟಿವೆ. ಪರಿಚಿತ ಮುಖಗಳ ಚಿತ್ರಣದ ಅನನ್ಯತೆಯಿಂದಲೇ ವಿಶೇಷ ಅನಿಸುವ ಅನೇಕ ಮುಖಗಳು ಇಲ್ಲಿವೆ.ಇದರೊಂದಿಗೆ ಅವರು ರೇಖಾಚಿತ್ರಗಳನ್ನೂ ಈ ಪ್ರದರ್ಶನದಲ್ಲಿ ಇಟ್ಟಿದ್ದಾರೆ. ರೇಖೆಗಳನ್ನು ದುಂದು ಮಾಡದೆ ಭಾವನೆಗಳ ತೀವ್ರತೆಯನ್ನು, ಅದರ ಕಾವನ್ನು ಮುಟ್ಟಿಸುವುದು ಹಾದಿಮನಿಯವರ ಬಗೆ.ಅದು ಅವರ ಕಲೆಯ ಶೈಲಿಯೂ ಹೌದು. ನೋಡಿದ ತಕ್ಷಣಕ್ಕೆ ಮನಕ್ಕೆ ತಾಕುವ ಅವರ ಹಿಂದಿನ ಮತ್ತು ಇಂದಿನ ರೇಖಾಚಿತ್ರಗಳು ಪ್ರದರ್ಶನದಲ್ಲಿವೆ. ಇವೆಲ್ಲವೂ ಕನ್ನಡದ ಅಪರೂಪದ ಕಲಾವಿದ ಪ್ರಯಣಿಸಿದ ಕಲೆಯ ಹಾದಿಯ ದರ್ಶನ ಮಾಡಿಸುತ್ತವೆ.ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ನಂ, 1, ಮಿಡ್‌ಫೋರ್ಡ್ ಹೌಸ್, ಮಿಡ್‌ಫೋರ್ಡ್ ಗಾರ್ಡನ್, ಕಿಡ್ಸ್ ಕ್ಯಾಂಪ್ ಬಳಿ, ಎಂ.ಜಿ.ರಸ್ತೆ ಎದುರು. ಸಮಯ: ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ (ಭಾನುವಾರದ ಹೊರತಾಗಿ)

ಪ್ರತಿಕ್ರಿಯಿಸಿ (+)