ಹಾದಿ ತಪ್ಪಿದರೆ ದಂಡ

7

ಹಾದಿ ತಪ್ಪಿದರೆ ದಂಡ

Published:
Updated:

ವಿದ್ಯಾವಂತ ಜನರೇ ಹೆಚ್ಚಿರುವ ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪ್ರತಿ ವರ್ಷವೂ ಏರಿಕೆಯಾಗುತ್ತಲೇ ಇವೆ.

2009ನೇ ವರ್ಷಕ್ಕೆ ಹೋಲಿಸಿದರೆ ಸುಮಾರು ಹತ್ತು ಕೋಟಿ ರೂಪಾಯಿ ಹೆಚ್ಚಿನ ದಂಡದ ಮೊತ್ತವನ್ನು ಪೊಲೀಸರು 2010ರಲ್ಲಿ ವಸೂಲಿ ಮಾಡಿದ್ದಾರೆ. ವಾಹನ ಸವಾರರ ಹಿತಕ್ಕೆಂದೇ ಮಾಡಿರುವ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ ಈ ಬೆಳವಣಿಗೆ ನಗರದ ಜನರಿಗೆ ಶೋಭೆ ತರುವಂತಹದಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.‘ಅಪಘಾತಗಳನ್ನು ತಗ್ಗಿಸುವುದು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದ್ದು ಈ ವರ್ಷವೂ ಅದನ್ನು ಮುಂದುವರೆಸಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.2010ರಲ್ಲಿ 33.33 ಲಕ್ಷ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ 47.56 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ (2009ರಲ್ಲಿ 37.06 ಕೋಟಿ ವಸೂಲಿ ಮಾಡಲಾಗಿತ್ತು). ಹಿಂದಿನ ವರ್ಷಗಳ ಹಾಗೆಯೇ 2010ರಲ್ಲೂ ಸಿಗ್ನಲ್ ಜಂಪ್ ಮಾಡಿದವರ ವಿರುದ್ಧ ಅತಿ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಕ್ಕಾಗಿ ಒಟ್ಟು 5.20 ಲಕ್ಷ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ. ಕ್ರಮವಲ್ಲದ ಪಾರ್ಕಿಂಗ್ ಮಾಡಿದ (ರಾಂಗ್ ಪಾರ್ಕಿಂಗ್) 5.20 ಲಕ್ಷ ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ. ನೋ ಎಂಟ್ರಿಯಲ್ಲಿ ನುಗ್ಗಿದ 4.50 ಲಕ್ಷ ಸವಾರರು ದಂಡ ಕಟ್ಟಿದ್ದಾರೆ.ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ವಾಹನ ಎಳೆದುಕೊಂಡು ಹೋಗಿದ್ದಕ್ಕೆ (ಟೈಗರ್ ವಾಹನದಲ್ಲಿ ಎಳೆದೊಯ್ಯುವುದು) ಸುಮಾರು ಮೂರು ಕೋಟಿ ರೂಪಾಯಿಯನ್ನು ಪೊಲೀಸರು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.ಪಾನಮತ್ತ ಚಾಲನೆ ಬೇಡ

ಪಾನಮತ್ತ ವಾಹನ ಚಾಲನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಂತಹ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಿಬ್ಬಂದಿ ಬಿಗಿ ತಪಾಸಣೆ ಕೈಗೊಳ್ಳಲಿದ್ದಾರೆ.ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಕೋರ್ಟ್‌ನಲ್ಲಿ ಮೊಕದ್ದಮೆ ಎದುರಿಸುವುದು ಅನಿವಾರ್ಯ. ಏಕೆಂದರೆ ಇದೊಂದು ಅಪರಾಧದಲ್ಲಿ ಸ್ಥಳದಲ್ಲಿಯೇ ದಂಡ ಸಂಗ್ರಹಿಸಿ ಬಿಡಲು ಕಾಯ್ದೆಯಂತೆ ಅವಕಾಶವಿಲ್ಲ. 2009ರಲ್ಲಿ 38,665 ಮಂದಿ ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದರೆ 2010ರಲ್ಲಿ 66,930 ಚಾಲಕರ ಮೇಲೆ ಕೇಸು ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.ಪಾನಮತ್ತ ಚಾಲನೆ ಮಾಡುವವರು ಸ್ವತಃ ಅಪಘಾತಕ್ಕೀಡಾಗಬಹುದು ಅಥವಾ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೊಬ್ಬರ ಪ್ರಾಣಕ್ಕೆ ಎರವಾಗಬಹುದು. ಆದ್ದರಿಂದ ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವರ್ಷ ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಪಾನಮತ್ತ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎನ್ನುವುದು ಪೊಲೀಸರ ಎಚ್ಚರಿಕೆ.ಆಟೊ ಚಾಲಕರಿಗೂ ಬಿಸಿ


ಆಟೊ ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ಜಗಳ ನಡೆಯುವುದು ನಗರದಲ್ಲಿ ಸಾಮಾನ್ಯ. ಕರೆದ ಕಡೆ ಬಾರದ, ಬಂದರೂ ಹೆಚ್ಚಿನ ಹಣ ಕೇಳುವ ಆಟೊ ಚಾಲಕರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಂತೆಯೇ ಹೆಚ್ಚಿನ ಹಣ ಕೇಳಿದ, ಕರೆದ ಸ್ಥಳಕ್ಕೆ ಬರಲು ಒಪ್ಪದ, ದೋಷಯುಕ್ತ ಮೀಟರ್ ಹೊಂದಿದ ಒಟ್ಟು 74 ಸಾವಿರ ಆಟೊ ಚಾಲಕರ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ.ಆಟೊ ಚಾಲಕರಿಂದ ತೊಂದರೆ ಆಯಿತು ಎಂದು ಹೆಚ್ಚಿನ ಮಂದಿ ಆರೋಪಿಸುತ್ತಾರೆ. ಆದರೆ ಇವರಲ್ಲಿ ಹೆಚ್ಚಿನವರು ಪೊಲೀಸರಿಗೆ ದೂರು ನೀಡುವುದಿಲ್ಲ. ದೂರು ನೀಡದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದು. ಚಾಲಕರಿಂದ ಯಾವುದೇ ರೀತಿಯ ತೊಂದರೆಯಾದರೂ ದೂರು ನೀಡಿ ಎಂದು ಪೊಲೀಸರು ಮನವಿ ಮಾಡುತ್ತಾರೆ.ಹೆಮ್ಮೆಯ ಸಂಗತಿ ಅಲ್ಲ...

‘ವಿದ್ಯಾವಂತ ಜನರು ಹೆಚ್ಚಿರುವ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಿರುವುದು ವಿಷಾದದ ಸಂಗತಿ. 2010ರಲ್ಲಿ 47.5 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಇದು ಅಭಿಮಾನದಿಂದ ಹೇಳುವ ಸಂಗತಿಯಲ್ಲ; ಅವಮಾನ ಪಡಬೇಕಾದ ಸಂಗತಿ.’‘ಎಲ್ಲರೂ ಸಂಚಾರ ನಿಯಮ ಪಾಲಿಸಬೇಕೆಂಬುದು ನಮ್ಮ ಉದ್ದೇಶವೇ ಹೊರತು ದಂಡ ವಿಧಿಸಿ ಹಣ ವಸೂಲು ಮಾಡುವುದಲ್ಲ. ಆದರೆ ನಿಯಮ ಉಲ್ಲಂಘಿಸಿದಾಗ ದಂಡ ವಿಧಿಸದೆ ಬೇರೆ ದಾರಿಯಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ನಿಯಮಗಳನ್ನು ಪಾಲಿಸುವುದು ಉತ್ತಮ. ಇಲ್ಲವಾದರೆ ಕ್ರಮ ಅನಿವಾರ್ಯ’ ಎನ್ನುತ್ತಾರೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry