ಹಾದಿ ತಪ್ಪಿಸುತ್ತಿರುವ ಎನ್‌ಜಿಒ ಹೆಸರುಗಳು!

7
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ

ಹಾದಿ ತಪ್ಪಿಸುತ್ತಿರುವ ಎನ್‌ಜಿಒ ಹೆಸರುಗಳು!

Published:
Updated:

ಹಾಸನ: ‘ಮಾನವ ಹಕ್ಕುಗಳ ರಕ್ಷಣೆ­ಗಾಗಿ ದುಡಿಯುತ್ತಿರುವ ಕೆಲವು ಸರ್ಕಾರೇತರ ಸಂಸ್ಥೆಗಳು ತಮ್ಮ ಸಂಘಟನೆಗೆ ಇಟ್ಟುಕೊಂಡಿರುವ ಹೆಸರು ಜನರನ್ನು ಹಾದಿತಪ್ಪಿಸುವಂತಿದೆ. ಈ ಬಗ್ಗೆ ಸರ್ಕಾರ ಕೆಲವು ತೀರ್ಮಾನ­ಗಳನ್ನು ಕೈಗೊಳ್ಳಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ನುಡಿದಿದ್ದಾರೆ.ಬುಧವಾರ ಇಲ್ಲಿನ ಬಂದೀಖಾನೆಗೆ ಭೇಟಿ ನೀಡಿದ ಬಳಿಕ ಅವರು ಪತ್ರಕರ್ತರೊಡನೆ ಮಾತನಾಡಿದರು.

‘ಅನೇಕ ಸಂಸ್ಥೆಗಳು ತಮ್ಮ ಸಂಘಟನೆಯ ಹೆಸರಿನ ಜತೆಗೆ ‘ಕರ್ನಾಟಕ’ ‘ಭಾರತೀಯ’ ಮುಂತಾದ ಪದಗಳನ್ನು ಬಳಸಿ ತಮ್ಮದು ಸರ್ಕಾರಿ ಸಂಸ್ಥೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಿವೆ. ಇಂಥ ಅನೇಕ ಸಂಘಟನೆಗಳು ಈಗಾಗಲೇ ನೋಂದಣಿ­ಯಾಗಿವೆ. ಹೆಸರಿನಲ್ಲೇ ಅವು ಸರ್ಕಾರೇತರ ಸಂಸ್ಥೆ ಎಂಬುದು ಜನರಿಗೆ ತಿಳಿಯುವಂತಾಗಬೇಕು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಆಗಬೇಕು’ ಎಂದರು.ಪೊಲೀಸ್‌ ದೌರ್ಜನ್ಯ ಹೆಚ್ಚು: ಹಾಸನ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಮಾನವ ಹಕ್ಕ ಉಲ್ಲಂಘನೆ ಪ್ರಕರಣ­ಗಳಲ್ಲಿ ಹೆಚ್ಚಿನವು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು. ಉಳಿದವು ಮೂಲ ಸೌಕರ್ಯಗಳ ಕೊರತೆಗೆ ಸಂಬಂಧಿಸಿ­ದವು ಎಂದು ಹುನಗುಂದ ನುಡಿದರು.ಪೊಲೀಸರ ವಿಚಾರಣಾ ಪ್ರಕ್ರಿಯೆ­ಯಲ್ಲಿ ನಾವು ಮೂಗು ತೂರಿಸುತ್ತೇವೆ ಎಂಬು ತಪ್ಪು. ನಾವು ಆ ಕೆಲಸ ಮಾಡುತ್ತಿಲ್ಲ. ಯಾವ ವ್ಯಕ್ತಿಯನ್ನಾ­ದರೂ ಅವರು ವಿಚಾರಣೆ ನಡೆಸ­ಬಹುದು. ಆದರೆ ಅದನ್ನು ಕಾನೂನು ಪ್ರಕಾರ ಮಾಡಿ ಎಂಬುದು ನಮ್ಮ ಒತ್ತಾಯ.ವ್ಯಕ್ತಿಯನ್ನು ಕರೆತಂದು ಠಾಣೆಯಲ್ಲಿಟ್ಟು, ದೌರ್ಜನ್ಯ ನಡೆಸಿ ಹೆಚ್ಚುಕಮ್ಮಿ ಆದಾಗ ಬಿಟ್ಟು ಕಳುಹಿಸಿದ ಅನೇಕ ಘಟನೆಗಳು ವರದಿಯಾಗಿವೆ. ಹೀಗಾಗಬಾರದು. ಯಾರನ್ನೇ ವಿಚಾರಣೆಗೆ ಕರೆತಂದರೂ ದೂರು ದಾಖಲಿಸಬೇಕು. ಹಚ್ಚುಕಮ್ಮಿ ಆದರೆ ಪೊಲೀಸ್‌ ಇಲಾಖೆಯೇ ಅದರ ಜವಾಬ್ದಾರಿ ಹೊರಬೇಕು ಎಂದರು.ದುದ್ದ ರಸ್ತೆ ಸೇರಿದಂತೆ ಜಿಲ್ಲೆಯ ಅನೇಕ ರಸ್ತೆಗಳು ದುಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿನ ವೈದ್ಯಕೀಯ ಕೊರತೆ, ವಿದ್ಯುತ್ ಪೂರೈಕೆ ವ್ಯತ್ಯಯ, ಮುಂತಾದ ಹಲವು ಕೊರತೆಗಳು ಹಾಸನದಲ್ಲಿವೆ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ಅದನ್ನು ಸರಿಪಡಿಸಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದರು.ಹೊರಗುತ್ತಿಗೆ ಅಮಾನವೀಯ: ಹೊರ­ಗುತ್ತಿಗೆ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಮಿಕರ ನೇಮಕಾತಿ ನಡೆಯುತ್ತಿದ್ದು ಇದು ಅಮಾನವೀಯ ಎಂದು ಹುನಗುಂದ ಅಭಿಪ್ರಾಯ­ಪಟ್ಟರು. ಹೀಗೆ ದುಡಿಯುತ್ತಿರುವ ಸಿಬ್ಬಂದಿಯ ವೇತನದಲ್ಲಿ ಸುಮಾರು ಅರ್ಧದಷ್ಟನ್ನು ಅವರನ್ನು ನೇಮಿಸಿರುವ ಸಂಸ್ಥೆಯವರೇ ಪಡೆಯುತ್ತಾರೆ. ಇಂಥ ಸಿಬ್ಬಂದಿಗೆ ಬೇರೆ ಯಾವ ಸೌಲಭ್ಯವನ್ನೂ ನೀಡುತ್ತಿಲ್ಲ. ಉದ್ಯೋಗ ಭದ್ರತೆಯೂ ಇರುವುದಿಲ್ಲ. ಈ ವ್ಯವಸ್ಥೆಯೇ ಅಮಾನ­ವೀಯ ಎಂದರು.ಪತ್ರಿಕಾಗೋಷ್ಠಿಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕಿದ್ದು ಅದಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸುವುದು ಎಲ್ಲರ ಕರ್ತವ್ಯ’ ಎಂದರು.2007 ರಿಂದ ಈವರೆಗೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 41,683 ಪ್ರಕರಣಗಳು ದಾಖ­ಲಾಗಿದ್ದು, 26,522 ಪ್ರಕರಣಗಳು ವಿಲೇವಾರಿ ಆಗಿವೆ. 15,161 ಪ್ರಕರಣಗಳು ವಿವಿಧ ಹಂತದಲ್ಲಿದ್ದು, ಶೀಘ್ರದಲ್ಲೇ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ. ಹಾಸನ  ಜಿಲ್ಲೆಯಲ್ಲಿ 2007ರಿಂದ ಈವರೆಗೆ 907 ಪ್ರಕರಣಗಳು ದಾಖಲಾಗಿದ್ದು, 602 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ. 305 ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದರು. ಪ್ರಸೂತಿ ಪೂರ್ವ ಲಿಂಗ ಪತ್ತೆ  ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿ­ಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ­ಧಿ­ಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ‘ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರತೆಗಳನ್ನು ಶೀಘ್ರವೇ ಸರಿಪಡಿಸಲು ಕ್ರಮವಹಿಸಲಾಗುವುದು’ ಎಂದರು. ಸಿಇಒ ಉಪೇಂದ್ರ ಪ್ರತಾಪ್ ಸಿಂಗ್, ಆಯೋಗದ ರಿಜಿಸ್ಟ್ರಾರ್ ಕೆ.ಎಚ್. ಮಲ್ಲೇಶ್, ಹೆಚ್ಚುವರಿ ಜಿಲ್ಲಾಧಿ­ಕಾರಿ ಡಾ. ಗೋಪಾಲಕೃಷ್ಣ ಎಸಿ ಶರತ್ ಇತರೆ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry