ಹಾನಿಕಾರಕ ಔಷಧ ಮಾರಾಟ; ಕಠಿಣ ಕ್ರಮದ ಎಚ್ಚರಿಕೆ

7
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಜೀವರಾಜ್

ಹಾನಿಕಾರಕ ಔಷಧ ಮಾರಾಟ; ಕಠಿಣ ಕ್ರಮದ ಎಚ್ಚರಿಕೆ

Published:
Updated:

ಬೆಂಗಳೂರು: `ವೈದ್ಯಕೀಯ ಅಥವಾ ಔಷಧಿಗೆ ಸಂಬಂಧಿಸಿದಂತೆ ಜೀವಕ್ಕೆ ಹಾನಿಯಾಗುವಂತಹ ಪ್ರಕರಣಗಳಲ್ಲಿ ರಾಜಿಯಾಗದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊ4ಳ್ಳಲಾಗುವುದು' ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಡಿ.ಎನ್.ಜೀವರಾಜ್ ಹೇಳಿದರು.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ `ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2012' ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಶುದ್ಧತೆ, ಧಾರಣೆ, ಗುಣಮಟ್ಟ ಎಲ್ಲವನ್ನು ನ್ಯಾಯಯುತವಾಗಿ ಪಡೆಯುವುದು, ತಾನು ನೀಡಿದ ಹಣದಂತೆ ವಸ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದೆ. ಯಾವುದೇ ಸಾಮಗ್ರಿಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದರು.`ತಂತ್ರಜ್ಞಾನವು ಬೆಳೆಯುತ್ತಿದ್ದಂತೆ ಮೋಸವೂ ಕೂಡ ಬೆಳೆಯುತ್ತಿದೆ. ಆದ್ದರಿಂದ, ಇಲಾಖೆಯು ಪ್ರತಿ ಕಾರ್ಯವನ್ನು ಪಾರದರ್ಶಕಗೊಳಿಸಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಬಯೋ ಮೆಟ್ರಿಕ್ಸ್ ಯಂತ್ರ ಅಳವಡಿಸಿ ಗ್ರಾಹಕರಿಗೆ ನ್ಯಾಯಯುತವಾದ ಸೇವೆಯನ್ನು ನೀಡಲಾಗಿದೆ. ವೆಬ್‌ಸೈಟ್‌ನಲ್ಲಿ ಇಲಾಖೆಯ ಪ್ರತಿಯೊಂದು ಮಾಹಿತಿಯು ಸಾಮಾನ್ಯ ಜನರಿಗೂ ತಲುಪುವಂತೆ ಅಳವಡಿಸಲಾಗಿದೆ. ಈ ರೀತಿಯಲ್ಲಿ ನಮ್ಮ ರಾಜ್ಯವು ಮಾದರಿ ರಾಜ್ಯವಾಗಿದೆ' ಎಂದರು.`ಪಡಿತರ ಚೀಟಿಯಲ್ಲಿ ಇದ್ದ ಬೇನಾಮಿ 50 ಲಕ್ಷ ಕಾರ್ಡುಗಳನ್ನು ತೆಗೆಯಲಾಗಿದೆ. ಈಗ 1.29 ಕೋಟಿ ಪಡಿತರ ಚೀಟಿಗಳಿವೆ. 50 ಲಕ್ಷ ಕಾರ್ಡುಗಳನ್ನು ತೆಗೆದೆವು ಅನ್ನುವುದಕ್ಕಿಂತ ಅವುಗಳಲ್ಲಿ ದಾಖಲೆಗಳಿಲ್ಲದೆ ಅವೇ ಬಿಟ್ಟು ಹೋದವು. ಈಗಲೂ ಸರಿಯಾದ ದಾಖಲೆಗಳನ್ನು ನೀಡಿದರೆ ಅಂತಹ ಕಾರ್ಡುಗಳಿಗೆ ಮರುಜೀವ ನೀಡುವ ವ್ಯವಸ್ಥೆ ಮಾಡಲಾಗುವುದು' ಎಂದು ಹೇಳಿದರು.`ಗ್ರಾಹಕರು ತಾವು ಕೊಳ್ಳುವ ವಸ್ತುವಿನ ಬಗ್ಗೆ ಜಾಗರೂಕರಾಗಿರಬೇಕು. ಅವುಗಳ ಮೇಲಿರುವ ತೂಕ ಎಲ್ಲಕ್ಕಿಂತ ಮುಖ್ಯವಾಗಿ ಅದರ ಮೇಲಿರುವ ಅವಧಿ ಮುಗಿಯುವ ದಿನಾಂಕವನ್ನು ಗಮನಿಸಿ ತೆಗೆದುಕೊಳ್ಳಬೇಕು. ಇದು ಪ್ರತಿಯೊಬ್ಬ ಗ್ರಾಹಕನು ಗಮನಿಸಬೇಕಾದ ಅಂಶವಾಗಿದೆ' ಎಂದರು.`ಜನರು ತಾವು ಕೊಳ್ಳುವ ವಸ್ತುವಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ತಮಗೆ ಅನ್ಯಾಯವಾದಾಗ ಅದನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಅವರಿಗಾಗಿ ಗ್ರಾಹಕರ ನ್ಯಾಯಾಲಯಗಳಿವೆ. ಅಲ್ಲಿ ತಮಗಾದ ಸಮಸ್ಯೆಯನ್ನು ದಾಖಲಿಸಿ ಸೂಕ್ತವಾದ ಪರಿಹಾರವನ್ನು ಪಡೆಯಬಹುದು' ಎಂದು ಹೇಳಿದರು.ಮೂರನೇ ಜಿಲ್ಲಾ ಅಪರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಡಿ.ರಾಜಶೇಖರಯ್ಯ ಮಾತನಾಡಿ, `ಬೆಂಗಳೂರು ನಗರದಲ್ಲಿ ವಾರದಲ್ಲಿ 500 ಪ್ರಕರಣಗಳು ದಾಖಲಾಗುತ್ತವೆ. ಆದರೆ, ಬೇರೆ ಕಡೆಗಳಲ್ಲಿ 5 ಅಥವಾ 6 ಪ್ರಕರಣಗಳು ಮಾತ್ರ ದಾಖಲಾಗುತ್ತವೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾಹಕರ ನ್ಯಾಯಾಲಯವನ್ನು ಸ್ಥಾಪಿಸಬೇಕೆಂಬುದರ ಬಗ್ಗೆ ಯೋಚಿಸಬೇಕಾಗುತ್ತದೆ' ಎಂದು ಹೇಳಿದರು.`ತೊಂದರೆಗೊಳಗಾದ ಗ್ರಾಹಕನು ಅಂಚೆ ಪತ್ರದಲ್ಲಿ ತನ್ನ ಸಮಸ್ಯೆಯನ್ನು ತಿಳಿಸಿದರೆ ಸಾಕು, ಆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ. ಅವರು ಕೋರ್ಟ್‌ಗೆ ಬಂದು ಅಲೆಯಬೇಕಾದ ಪ್ರಸಂಗವೇ ಬರುವುದಿಲ್ಲ. ಎಲ್ಲ ದಾಖಲಾತಿಗಳನ್ನು ಅಂಚೆಯ ಮೂಲಕ ಕಳುಹಿಸಿದರೆ ಸಾಕು ಪ್ರಕರಣವನ್ನು ಇತ್ಯರ್ಥಪಡಿಸಿ ನ್ಯಾಯವನ್ನು ದೊರಕಿಸಿಕೊಡಲಾಗುವುದು' ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry