ಭಾನುವಾರ, ಜೂಲೈ 12, 2020
28 °C

ಹಾನಿ ತಡೆಗಟ್ಟಿ-ಇಲ್ಲವೇ ಯುಪಿಸಿಎಲ್ ಮುಚ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಿ ತಡೆಗಟ್ಟಿ-ಇಲ್ಲವೇ ಯುಪಿಸಿಎಲ್ ಮುಚ್ಚಿ

ಸಾಂತೂರು(ಉಡುಪಿ): ‘ಉಷ್ಟ ವಿದ್ಯುತ್ ಸ್ಥಾವರದ ಪರಿಸರದಲ್ಲಿ ಜನರ ಸಮಸ್ಯೆ ಪರಿಹಾರವಾಗಿದೆ ಎಂದು ಸುಳ್ಳು ಹೇಳಿದ್ದ ಯುಪಿಸಿಎಲ್ ಕಂಪೆನಿ ಬಗ್ಗೆ ವಿಶ್ವಾಸವೇ ಇಲ್ಲವಾಗಿದೆ. ಖುದ್ದು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಮೇಲೆ ಇಲ್ಲಿನ ಪರಿಸ್ಥಿತಿ- ಸಮಸ್ಯೆ ಮನವರಿಕೆಯಾಗಿದೆ. ಯುಪಿಸಿಎಲ್ ಅಧಿಕಾರಿಗಳು ಎಷ್ಟೇ ಸಮರ್ಥನೆ ಮಾಡಿಕೊಂಡರೂ ಇಲ್ಲಿನ ಸ್ಥಿತಿ ಸ್ವಲ್ಪವೂ ಸರಿಯಿಲ್ಲ. ಹಾನಿ ತಡೆಗಟ್ಟಲು ಸಾಧ್ಯವಿದ್ದರೆ ಮೊದಲು ಸಾಬೀತುಪಡಿಸಲಿ, ಇಲ್ಲವೇ ಕಂಪೆನಿ ಮುಚ್ಚಲಿ....’ಹೀಗೆ ಸ್ಪಷ್ಟ ಮಾತುಗಳಲ್ಲಿ ಉಡುಪಿ ಶಾಖೋತ್ಪನ್ನ ಕಂಪೆನಿ(ಯುಪಿಸಿಎ್)ಗೆ ಬುಧವಾರ ಸೂಚಿಸಿದವರು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ.ನಂದಿಕೂರಿನ ಯುಪಿಸಿಎಲ್‌ನ ಹಾರುಬೂದಿ ಹೊಂಡವಿರುವ ಸಾಂತೂರು ಹಾಗೂ ಪಾದೆಬೆಟ್ಟು ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸ್ವಾಮೀಜಿ, ಪರಿಸ್ಥಿತಿ ಅವಲೋಕಿಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.‘ಇಷ್ಟು ದಿನ ಕಂಪೆನಿಯವರು ತಾವು ಪರಿಸರಕ್ಕೆ ಹಾನಿಕಾರಕವಲ್ಲದ ರೀತಿಯಲ್ಲಿ ಎಲ್ಲವನ್ನೂ ಮಾಡಿಕೊಂಡು ಹೋಗುತ್ತಿದ್ದೇವೆ. ಹಾರುಬೂದಿ ಸಮಸ್ಯೆ ಬಗೆಹರಿಸಿದ್ದೇವೆ ಎಂದೆಲ್ಲ ಹೇಳಿದ್ದರು. ಖುದ್ದು ಪರಿಶೀಲಿಸಲು ಬಂದಿದ್ದು, ಈಗ ಇಲ್ಲಿನ ಎಲ್ಲ ಸ್ಥಿತಿಯೂ ಮನವರಿಕೆಯಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆಯೇ ಹೊರತು, ಕಂಪೆನಿಯವರು ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಕೇವಲ ಸಮರ್ಥನೆಯನ್ನಷ್ಟೇ ನೀಡುತ್ತಿದ್ದಾರೆ ಎನ್ನುವುದು ಮನದಟ್ಟಾಗಿದೆ’ ಎಂದರು.‘ಇಲ್ಲಿನ ಎಲ್ಲ ಸಮಸ್ಯೆ ಸರಿಪಡಿಸುವವರೆಗೆ ನಾನಂತೂ ಮೊನ್ನೆ ಘೋಷಿಸಿದಂತೆ ಅನಿರ್ದಿಷ್ಟಾವಧಿವರೆಗೆ ‘ನಿತ್ಯೋಪವಾಸ’ ಮುಂದುವರಿಸಲ್ಲಿದ್ದೇನೆ. ಜನರು ಇಲ್ಲಿನ ಸಮಸ್ಯೆ ನಿವಾರಣೆ ಆಗಿದೆ ಎಂದು ಹೇಳುವವರೆಗೂ ಉಪವಾಸ ಮುಂದುವರಿಯಲಿದೆ. ಬೀದಿಗಿಳಿದು ಹೋರಾಟ ಮಾಡದೇ ಇದ್ದರೂ ಕಂಪೆನಿ ವಿರುದ್ಧ ಹೋರಾಡುವವರಿಗೆ ಬೆಂಬಲವಾಗಿರುತ್ತೇನೆ. ಜನಾಂದೋಲನದೊಂದಿಗೆ ಜನಜಾಗೃತಿಗಾಗಿ ಈ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.ಸಮಸ್ಯೆಗೆ ಕೊನೆಯೇ ಕಾಣದು: ‘ಜನರ ಸಂಕಷ್ಟ ಮೊದಲು ತೀರಬೇಕು. ಆದರೆ ಕಂಪೆನಿಯವರಿಂದ ಸದ್ಯಕ್ಕೆ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಹಾರುಬೂದಿ ಹೊಂಡ ಮಳೆಗಾಲದಲ್ಲಿ ತುಂಬಿ ಮತ್ತೆ ಉಕ್ಕಲಿದೆ. ಕೃಷಿಭೂಮಿಗೆ ಮತ್ತೆ ಸಮಸ್ಯೆಯಾಗಲಿದೆ. ಈ ಸಮಸ್ಯೆಗೆ ಕೊನೆಯೇ ಕಾಣುತ್ತಿಲ್ಲ’ ಎಂದು ಸ್ವಾಮೀಜಿ ವಿಷಾದಿಸಿದರು.ಸ್ವಾಮೀಜಿ ಭೇಟಿ ಹಿನ್ನೆಲೆಯಲ್ಲಿ ಸಾಂತೂರಿನಲ್ಲಿನ ‘ಹಾರುಬೂದಿ’ ಹೊಂಡವನ್ನು ಸಾಕಷ್ಟು ಸುಧಾರಿತ ರೂಪಕ್ಕೆ ತಂದಿರುವುದು ಗಮನ ಸೆಳೆಯಿತು. ಸುತ್ತ ಕಿಂಚಿತ್ತೂ ಬೂದಿ ಹಾರದಂತೆ ನೀರು ಹಾಯಿಸಲಾಗಿದ್ದಿತು. ಯುಪಿಸಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಕಂಪೆನಿ ವ್ಯವಹಾರಗಳ ಉಪಾಧ್ಯಕ್ಷ ಕಿಶೋರ್ ಆಳ್ವಾ ಸೇರಿದಂತೆ ಕಂಪೆನಿ ಪ್ರತಿನಿಧಿಗಳು ಸ್ವಾಮೀಜಿಗೆ ‘ಎಲ್ಲವೂ ಸರಿಯಿದೆ’  ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಸ್ಥಳೀಯರು ‘ಇಲ್ಲಿನ ಪರಿಸ್ಥಿತಿ ಕಿಂಚಿತ್ತೂ ಸರಿಯಿಲ್ಲ’ ಎಂದು ಸ್ವಾಮೀಜಿಗೆ ಮನವರಿಕೆ ಮಾಡಿಕೊಟ್ಟರು.ಬಳಿಕ ಸ್ವಾಮೀಜಿ ಪಾದೆಬೆಟ್ಟು ಪ್ರದೇಶಕ್ಕೆ ತೆರಳಿ ಯುಪಿಸಿಎಲ್‌ನಿಂದಾಗಿರುವ ಸಮಸ್ಯೆಗಳ ಕುರಿತು ರೈತರ ಅಹವಾಲು ಆಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.