ಶುಕ್ರವಾರ, ನವೆಂಬರ್ 15, 2019
22 °C

ಹಾಫ್ ಟಿಕೆಟ್ ಕಾಲ

Published:
Updated:

ಇಡೀ ವರ್ಷ ಓದು, ಹೋಂವರ್ಕ್, ಟ್ಯೂಷನ್, ಪರೀಕ್ಷೆಗಳಲ್ಲಿ ಮುಳುಗಿದ್ದ ಮಕ್ಕಳ ಪಾಲಿಗಿದು ಖುಷಿಯ ಕಾಲ. ಇನ್ನು ಭರ್ತಿ ಎರಡು ತಿಂಗಳು ಪುಸ್ತಕಗಳಿಗೆ ಗುಡ್‌ಬೈ ಹೇಳುವ ಮಕ್ಕಳು ಇನ್ನೇನು ಮಾಡಲು ಸಾಧ್ಯ. ಕೆಲವರು ಬೇಸಿಗೆ ಶಿಬಿರಗಳಿಗೆ ಹೋಗಬಹುದು. ಇನ್ನು ಮನೆಯಲ್ಲೇ ಇದ್ದರೆ ಟೀವಿ ನೋಡಬಹುದು. ಹುಡುಗರಾದರೆ ಕ್ರಿಕೆಟ್ ಆಟ, ಹೆಣ್ಣುಮಕ್ಕಳಾದರೆ ಅಕ್ಕಪಕ್ಕದ ಮನೆ, ಪಾರ್ಕ್‌ಗಳಲ್ಲಿ ಸುತ್ತಾಟ.ಹಳ್ಳಿಗಳಿಂದ ನಗರಕ್ಕೆ ಬಂದು ನೆಲೆಸಿರುವವರು ರಜೆ ಸಿಕ್ಕಿದ ತಕ್ಷಣ ದೂರದ ಹಳ್ಳಿಯ ಅಜ್ಜಿ ಮನೆಗೆ ಗಂಟುಮೂಟೆ ಕಟ್ಟಿ ಹೊರಡುತ್ತಾರೆ. ಅವರಿನ್ನು ನಗರಕ್ಕೆ ಬರುವುದು ಶಾಲೆ ಶುರುವಾಗುವಾಗ. ಕೆಲವರು ಪೋಷಕರೊಂದಿಗೆ ಪ್ಯಾಕೇಜ್ ಟೂರ್‌ಗಳಿಗೆ, ಇನ್ನು ಕೆಲವರು ತೀರ್ಥಕ್ಷೇತ್ರಗಳಿಗೆ ಹೋಗುವವರಿದ್ದಾರೆ. ಇದೆಲ್ಲ ಹತ್ತಾರು ದಿನಗಳ ಮಟ್ಟಿಗಷ್ಟೇ. ಆದರೆ ಪೂರ್ತಿ ಎರಡು ತಿಂಗಳು ಮನೆ ಕೆಲಸದ ಜೊತೆ ಮಕ್ಕಳನ್ನು ನಿಭಾಯಿಸುವುದು ಗೃಹಿಣಿಯರಿಗೆ ಕಷ್ಟವೇ ಸರಿ.`ಇಷ್ಟು ದಿನ ಚೊಕ್ಕವಾಗಿರುತ್ತಿದ್ದ ಮನೆ ಈಗ ರಣರಂಗವಾಗುತ್ತಿದೆ. ಇಟ್ಟ ವಸ್ತು ಇಟ್ಟಲ್ಲಿ ಇರುವುದಿಲ್ಲ. ಮನೆಯೊಳಗೆ ಆಟದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ' ಎಂಬುದು ಗೃಹಿಣಿಯರ ಗೋಳು. ಇದಕ್ಕೆ ಪರಿಹಾರವಾಗಿ ಬೇಸಿಗೆ ಶಿಬಿರ, ಸಂಗೀತ, ನೃತ್ಯ, ಈಜು ತರಗತಿ, ನೆಂಟರಿಷ್ಟರ ಮನೆ ಹೀಗೆ ನಾನಾ ಕಡೆಗೆ ಮಕ್ಕಳನ್ನು ಅಟ್ಟುವುದೇ ಉಳಿದಿರುವ ದಾರಿ.ಹಳ್ಳಿಗಳಲ್ಲಿ ಮಕ್ಕಳಿಗೆ ಬೇಸಿಗೆ ಕಳೆಯಲು ಹಲವಾರು ದಾರಿಗಳಿವೆ. ಆಟವಾಡಲು ವಿಶಾಲ ಜಾಗ; ಅವರದ್ದೇ  ಆದ ಆಟಗಳಿರುತ್ತವೆ. ಆಡಲು ಸರ್ಕಾರಿ ಶಾಲಾ ಮೈದಾನವಿರುತ್ತದೆ. ಸುತ್ತಾಡಲು ನೆಂಟರಿಷ್ಟರ ಮನೆಗಳಿರುತ್ತವೆ. ಕಾಡುಮೇಡು ಸುತ್ತಾಟ, ಹೊಳೆಗಳಲ್ಲಿ ಈಜುವುದು, ಮಕ್ಕಳೆಲ್ಲ ಸೇರಿ ಲಗೋರಿ, ಕುಂಟಾಬಿಲ್ಲೆ, ಕ್ರಿಕೆಟ್ ಆಡುವುದು, ಮರ ಹತ್ತೋದು ಹೀಗೆ ಬೇಸಿಗೆ ರಜಾ ಮುಗಿಯುವುದೇ ಗೊತ್ತಾಗದಷ್ಟು ಚಟುವಟಿಕೆಗಳು. ನಗರದಲ್ಲಿ ಹಾಗಲ್ಲ. ಮನೆಗಳಲ್ಲಿ ಮಕ್ಕಳಿಗೆ ಸಮಯ ಕಳೆಯುವುದೇ ಕಷ್ಟ. ಸದಾ ಮನೆಯಿಂದ ಹೊರಗೆ ಸುತ್ತಾಡಬೇಕು ಎಂದು ಇಲ್ಲಿನ ಮಕ್ಕಳು ಬಯಸುವುದು ಸಹಜ.ಒಂದೆಡೆ ಸುಡು ಬೇಸಿಗೆ. ಮನೆಯಿಂದ ಹೊರಹೋಗಲು ಮನಸು ಕೇಳದು. ಆದರೂ ಮಕ್ಕಳ ಹಟಕ್ಕೆ ಮಣಿಯದಿರಲು ಆದೀತೆ? `ಆಂಟಿ ಮನೆಗೆ ಹೋಗೋಣ', `ಅಜ್ಜಿ ಮನೆಗೆ ಹೋಗೋಣ' ಎಂದು ಹಟ ಮಾಡುತ್ತಾರೆ. ಸಂಜೆಯಾದರೆ `ಹೋಟೆಲಿಗೆ ಹೋಗೋಣ' ಅಂತಾರೆ. ಚಾಟ್ಸ್ ತಿನ್ನಬೇಕು, ಐಸ್‌ಕ್ರೀಂ ಬೇಕು, ಹೊಸ ಬಟ್ಟೆ ಕೊಡಿಸಬೇಕು ಅಂತ ಬೇಡಿಕೆ ಇಡುತ್ತಾರೆ. ಇದು ನಿಜಕ್ಕೂ ಅಪ್ಪ ಅಮ್ಮನ ಜೇಬಿಗೆ ಕತ್ತರಿ ಬೀಳುವ ಕಾಲ. ಆದರೂ ಮಕ್ಕಳ ಆಸೆಗಳನ್ನು ಪೂರೈಸದೇ ಇರಲು ಹೆತ್ತವರ ಮನಸ್ಸು ಕೇಳುತ್ತಿಲ್ಲ. ಹಾಗಾಗಿ ಮಕ್ಕಳ ಸವಾರಿ ಹೊರಟಿದೆ.ಹಾಫ್ ಟಿಕೆಟ್‌ಗಳ ಸಂಖ್ಯೆ ಹೆಚ್ಚಳ

ಮಾರ್ಚ್ 3ನೇ ವಾರದಲ್ಲೇ ನಗರದ ಹಲವು ಖಾಸಗಿ ಶಾಲೆಗಳು ಪರೀಕ್ಷೆಗಳನ್ನು ಮುಗಿಸಿ ರಜೆ ಘೋಷಿಸಿವೆ. ನಗರದಲ್ಲಿ ಮಕ್ಕಳ ತಿರುಗಾಟ ಶುರುವಾಗಿದೆ. ಎಲ್ಲೆಲ್ಲೂ ಮಕ್ಕಳೇ ಕಾಣುತ್ತಿದ್ದಾರೆ. ಇಡೀ ವರ್ಷ ಯೂನಿಫಾರ್ಮ್‌ ತೊಟ್ಟು ಶಾಲೆಗೆ ಹೋದ ಪುಟ್ಟ ಮಕ್ಕಳಿಗೆ ಅದನ್ನು ಕಳಚಿಟ್ಟು, ಬಣ್ಣದ ಅಂಗಿ ತೊಟ್ಟು ಬಸ್‌ಗಳಲ್ಲಿ ಪ್ರಯಾಣಿಸುವ ಖುಷಿ. ಹಾಗಾಗಿ ಬಿಎಂಟಿಸಿ ಬಸ್‌ಗಳಲ್ಲಿ ಎಲ್ಲ ಸೀಟುಗಳೂ ಈಗ ಅಮ್ಮ ಮಕ್ಕಳಿಂದ ತುಂಬಿರುತ್ತವೆ. ಪೋಷಕರಿಗಿಂತ ಮೊದಲೇ ಬಸ್ ಹತ್ತಿ ಸೀಟು ಹಿಡಿಯುವ ಸ್ಪರ್ಧೆ, ಸವಾಲು ಮಕ್ಕಳಿಗೆ.ಆದರೆ, ಬಸ್‌ನ ನಿರ್ವಾಹಕರಿಗೆ ಮಕ್ಕಳ ವಯಸ್ಸು ಕೇಳಿ ಹಾಫ್ ಟಿಕೆಟ್ ನೀಡುವ ಹೆಚ್ಚುವರಿ ಕೆಲಸ. ಚಾಲಕರೂ ಅಷ್ಟೇ, ಎಂದಿನಂತೆ ನಿಲ್ದಾಣಗಳಿಂದ ವೇಗವಾಗಿ ಬಸ್ ಚಾಲನೆ ಮಾಡುವಂತಿಲ್ಲ. ಬ್ರೇಕ್ ಮೇಲೆ ಹೆಚ್ಚು ಗಮನವಿರಬೇಕಾಗುತ್ತದೆ. ಏಕೆಂದರೆ ಪುಟ್ಟ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಬಸ್‌ಗಳಲ್ಲಿ ಅವರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕೇಳಿದರೆ ಸಿಗುವ ಉತ್ತರ ಸುಲಭ. ಅಜ್ಜಿ ಮನೆ, ಅತ್ತೆ ಮನೆ, ದೊಡ್ಡಮ್ಮನ ಮನೆ, ಅಂಕಲ್ ಮನೆ. ಅಮ್ಮಂದಿರೂ ಅಷ್ಟೇ ಈ ನೆಪದಲ್ಲಿ ತಮ್ಮ ತವರು ಮನೆಗೊಮ್ಮೆ , ಅತ್ತೆ ಮನೆಗೊಮ್ಮೆ, ಗೆಳತಿಯರ ಮನೆಗೊಮ್ಮೆ ಮಕ್ಕಳನ್ನು ಕಟ್ಟಿಕೊಂಡು ಹೊರಟಿದ್ದಾರೆ. ಇದರಿಂದಾಗಿ ಬಿಎಂಟಿಸಿ ಬಸ್‌ಗಳಲ್ಲಿ ಈಗ ಯಾವ ಸಮಯದಲ್ಲಿಯೂ ಖಾಲಿ ಸೀಟುಗಳೇ ಇರುವುದಿಲ್ಲ. ನೆಂಟರ ಮನೆಗೆ ಹೋಗುವ ಮಕ್ಕಳು, ಶಿಬಿರಗಳಿಗೆ ಹೋಗಿ ಸಂಜೆ ಹಿಂತಿರುಗುವ ಮಕ್ಕಳು ಬಸ್‌ನ ತುಂಬ ಕಾಣ ಸಿಗುತ್ತಾರೆ. ಪ್ರತಿದಿನ ಶಾಲಾ ವಾಹನದಲ್ಲಿ ಒಂದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಕ್ಕಳಿಗೆ, ಬಸ್‌ಗಳಲ್ಲಿ ದೂರ ಸಂಚರಿಸುವ ಮಜಾ ಸಿಗುತ್ತಿದೆ. ಬಸ್‌ಗಳಲ್ಲಿ ಮಾತ್ರವಲ್ಲ ದ್ವಿಚಕ್ರವಾಹನಗಳಲ್ಲಿ  ಪ್ರಯಾಣಿಕರ ಸಂಖ್ಯೆ ಒಂದರಿಂದ ಮೂರು, ನಾಲ್ಕಕ್ಕೆ ಏರಿದೆ. ಕಾರುಗಳೂ ಅಷ್ಟೆ ಎಲ್ಲ ಸೀಟುಗಳೂ ಭರ್ತಿಯಾಗಿರುತ್ತವೆ.

ನಿರ್ವಾಹಕರಿಗೆ ಪೀಕಲಾಟ

`ಶಾಲೆಗಳಿಗೆ ರಜೆ ಸಿಕ್ಕಿರುವ ಕಾರಣ ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಎರಡು ತಿಂಗಳ ಕಾಲ ಅರ್ಧ ಟಿಕೆಟ್ ಪಡೆಯುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಆರು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಅರ್ಧ ಟಿಕೆಟ್  ಕಡ್ಡಾಯ. ಆದರೂ ಕೆಲ ಪೋಷಕರು ಮಕ್ಕಳಿಗೆ ಟಿಕೆಟ್ ಪಡೆಯಲು ಹಿಂದುಮುಂದು ನೋಡುತ್ತಾರೆ. ಇದು ನಿರ್ವಾಹಕರಿಗೆ ಪೀಕಲಾಟವಾಗಿದೆ. ಪ್ರತಿ ಮಕ್ಕಳ ವಯಸು ಕೇಳಿ ಟಿಕೆಟ್ ಪಡೆಯಿರಿ ಎಂದು ಒತ್ತಾಯ ಮಾಡಿ ಟಿಕೆಟ್ ಕೊಡಬೇಕಾಗುತ್ತದೆ. ಕೆಲವರು ಮಕ್ಕಳ ವಯಸ್ಸನ್ನು ಸರಿಯಾಗಿ ಹೇಳುವುದಿಲ್ಲ. ಪೋಷಕರು ತಾವಾಗಿಯೇ ಮಕ್ಕಳಿಗೆ ಟಿಕೆಟ್ ಕೊಂಡರೆ ಸಮಸ್ಯೆಯಾಗುವುದಿಲ್ಲ' ಎಂಬುದು ಬಿಎಂಟಿಸಿ ನಿರ್ವಾಹಕಿ ಜಯಮ್ಮ ಅವರ ಅಭಿಪ್ರಾಯ.ಮಕ್ಕಳ ಶಾಪಿಂಗ್

ಬೇಸಿಗೆ ಎಂದರೆ ಕಾರ್ಯಕ್ರಮಗಳೂ ಹೆಚ್ಚು. ಮದುವೆ, ಪೂಜೆ, ಗೃಹಪ್ರವೇಶ, ಎಂಗೇಜ್‌ಮೆಂಟ್ ಪಾರ್ಟಿಗಳಲ್ಲಿ ಬಣ್ಣದ ಅಂಗಿ ತೊಟ್ಟ ಮಕ್ಕಳದೇ ಕಲರವ. ಮಾಲ್, ಶಾಪಿಂಗ್ ಸೆಂಟರ್‌ಗಳಲ್ಲಿ ಅಮ್ಮ-ಮಕ್ಕಳೇ ಪ್ರಮುಖ ಗ್ರಾಹಕರು. ಐಸ್‌ಕ್ರೀಮ್ ಪಾರ್ಲರ್, ಹಣ್ಣಿನ ಗಾಡಿ, ಚಾಟ್ ಅಂಗಡಿಗಳಲ್ಲಿ ಮಕ್ಕಳದೇ ಕಾರುಬಾರು. ಬಟ್ಟೆ ಅಂಗಡಿಗಳಲ್ಲಿ ಅಪ್ಪ-ಅಮ್ಮನನ್ನು ಕಾಡಿಸಿ, ಪೀಡಿಸಿ ಇಷ್ಟದ ಬಟ್ಟೆ, ಮ್ಯಾಚಿಂಗ್ ಓಲೆ, ಬಳೆ, ಸರ ಕೊಳ್ಳುವ ಹೆಣ್ಣುಮಕ್ಕಳು ಕಾಣಸಿಗುತ್ತಾರೆ.ನಗರದ ಎಲ್ಲ ಪಾರ್ಕ್‌ಗಳೂ ಸಂಜೆ ಹೊತ್ತು ಗಿಜಿಗುಡುತ್ತಿವೆ. ಮನೆಗೆ ಬಂದ ನೆಂಟರ ಮಕ್ಕಳನ್ನೆಲ್ಲಾ ಬಡಾವಣೆಯ ಪಾರ್ಕ್‌ಗಳಿಗೆ ಕರೆತರುವ ಅಜ್ಜ-ಅಜ್ಜಿಯರು ತಾವೂ ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಮನೋರಂಜನಾ ತಾಣಗಳಲ್ಲಿ, ಸಿನಿಮಾ ಥಿಯೇಟರ್‌ಗಳಲ್ಲಿ ಮಕ್ಕಳೇ ಕಾಣುತ್ತಿದ್ದಾರೆ. ಮಕ್ಕಳನ್ನೇ ಅವಲಂಬಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಮಕ್ಕಳಿಗೆ ಟಿಕೆಟ್ ಮೇಲೆ ವಿಶೇಷ ರಿಯಾಯಿತಿ ಇದೆ. ಒಂದರ್ಥದಲ್ಲಿ ಇದು ಮಕ್ಕಳ ಕಾಲ.

 

ಪ್ರತಿಕ್ರಿಯಿಸಿ (+)