ಹಾರಂಗಿ ಜಲಾಶಯ: ಮಾಜಿ ಪ್ರಧಾನಿ ದೇವೇಗೌಡ ವೈಮಾನಿಕ ಸಮೀಕ್ಷೆ

7

ಹಾರಂಗಿ ಜಲಾಶಯ: ಮಾಜಿ ಪ್ರಧಾನಿ ದೇವೇಗೌಡ ವೈಮಾನಿಕ ಸಮೀಕ್ಷೆ

Published:
Updated:

ಕುಶಾಲನಗರ: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹಾರಂಗಿ ಜಲಾಶಯದ ನೀರಿನ ಸ್ಥಿತಿಗತಿ ಅರಿಯಲು ವೈಮಾನಿಕ ಪರಿಶೀಲನೆ ನಡೆಸಿದರು.ಮಧ್ಯಾಹ್ನ 1.30ರ ವೇಳೆಗೆ ಜಲಾಶಯ ಪ್ರದೇಶದಲಿಲ್ಲಿ ಹೆಲಿಕಾಫ್ಟರ್ ಮೂಲಕ ಬಂದ ದೇವೇಗೌಡರು ಅಣೆಕಟ್ಟೆಯ ನೀರಿನ ಪ್ರಮಾಣ ವೀಕ್ಷಿಸಿದರು. ಕಾವೇರಿ ನೀರಾವರಿ ಪ್ರದೇಶದಲ್ಲಿನ ನೀರಿನ ಲಭ್ಯತೆ ಕುರಿತು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಕರ್ನಾಟಕದ ನೀರಿನ ಸಮಸ್ಯೆಯ ವಾಸ್ತವಾಂಶದ ಕುರಿತು ವಿವರಿಸುವ ಹಿನ್ನೆಲೆಯಲ್ಲಿ ಈ ವೈಮಾನಿಕ ಸಮೀಕ್ಷೆ ನಡೆಸಲಾಯಿತು.ಜಲಾಶಯಕ್ಕೆ ಬೆಳಿಗ್ಗೆ 11.30 ರ ವೇಳೆಗೆ ದೇವೇಗೌಡ ಅವರು ಆಗಮಿಸುವ ನಿರೀಕ್ಷೆಯಿಂದ ಅಧಿಕಾರಿಗಳು ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಅವರ ಹೆಲಿಕಾಪ್ಟರ್ ಹಾರಂಗಿ ಅಣೆಕಟ್ಟೆ ಬಳಿ ಇಳಿಯಲಿಲ್ಲ.

ಮಾಜಿ ಸಚಿವರಾದ ಎಂ.ಸಿ. ನಾಣಯ್ಯ, ಬಿ.ಎ. ಜೀವಿಜಯ, ಮಾಜಿ ಶಾಸಕ ಡಿ.ಎಸ್. ಮಾದಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ. ಶಶಿಧರ್, ಪಕ್ಷದ ಪ್ರಮುಖರಾದ ವಿ.ಎಂ. ವಿಜಯ್, ಎಚ್.ಬಿ. ಜಯಮ್ಮ, ಯೂಸಫ್, ರಾಜೇಶ್, ಜಿ.ಪಂ. ಸದಸ್ಯೆ ಚಿತ್ರಕಲಾ, ಕೆ.ಎನ್. ಅಶೋಕ್, ವಿ.ಎನ್. ಮಹೇಶ್, ಕೃಷ್ಣೋಜಿರಾವ್ ಇತರರು ಇದ್ದರು.ಬಿಜೆಪಿ ಪತನದಿಂದ ರಾಜ್ಯಕ್ಕೆ ಮುಕ್ತಿ

ಕುಶಾಲನಗರ: ರಾಜ್ಯದ ಬಿಜೆಪಿ ಸರ್ಕಾರ ಬೇಗ ಪತನಗೊಂಡರೆ ರಾಜ್ಯದ ಜನರಿಗೆ ಮುಕ್ತಿ ದೊರಕಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಹೇಳಿದರು.ಮಾಜಿ ಪ್ರಧಾನಿ ದೇವೇಗೌಡರ ವೈಮಾನಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಹಾರಂಗಿಗೆ ಆಗಮಿಸಿದ್ದ ನಾಣಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಸರ್ಕಾರ ಕೆಜೆಪಿಯೊಂದಿಗೆ ಮ್ಯೋಚ್ ಫಿಕ್ಸಿಂಗ್ ಮಾಡಿಕೊಂಡಂತಿದೆ. ಸರ್ಕಾರ 2 ತಿಂಗಳ ಹಿಂದೆಯೇ ತೊಲಗಬೇಕಿತ್ತು. ಇಷ್ಟರಲ್ಲಿ ಹೊಸ ಸರ್ಕಾರ ರಚನೆಯಾಗಬೇಕಿತ್ತು. ಕೆಜೆಪಿ ಹಾಗೂ ಬಿಜೆಪಿಯವರ ಭ್ರಷ್ಟಾಚಾರ ಹಾಗೂ ಅನೈತಿಕ ರಾಜಕಾರಣದಿಂದಾಗಿ ರಾಜ್ಯದ ಜನರು ರೋಸಿಹೋಗಿದ್ದಾರೆ ಎಂದು ದೂರಿದರು.ಹಾರಂಗಿ ಜಲಾಶಯ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಈಚೆಗೆ ಉದ್ಯಾನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಸಚಿವ ಅಪ್ಪಚ್ಚು ರಂಜನ್ ಅವರ ಅಧಿಕಾರದ ಅವಧಿ ಮುಗಿದರೂ ಕಾಮಗಾರಿ ಆರಂಭಗೊಳ್ಳುವುದು ಅನುಮಾನ ಎಂದು ನಾಣಯ್ಯ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry