ಹಾರಂಗಿ ಜಲಾಶಯ: 2 ಅಡಿ ನೀರು ಏರಿಕೆ

ಕುಶಾಲನಗರ: ಕೊಡಗಿನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಬೀಳುತ್ತಿರುವುದರಿಂದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ದಿನೇ ದಿನೇ ಹೆಚ್ಚಾಗತೊಡಗಿದೆ.
ಗರಿಷ್ಟ 8.5 ಟಿ.ಎಂ.ಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ 8 ಕ್ಕೆ 2847.62 ಅಡಿಗಳಷ್ಟು ನೀರಿನ ಏರಿಕೆ ಪ್ರಮಾಣ ದಾಖಲಾಗಿತ್ತು.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ತೀವ್ರಗೊಂಡಂತೆ ಜಲಾಶಯದಲ್ಲಿ ಮಧ್ಯಾಹ್ನದ ವೇಳೆಗೆ 2847.95 ಅಡಿಯಷ್ಟು ನೀರು ಏರಿಕೆಯಾಗಿತ್ತು.
ಶನಿವಾರ ಜಲಾಶಯದಲ್ಲಿ 2845.64 ನೀರು ಸಂಗ್ರಹಗೊಂಡಿತ್ತು. ಜಲಾಶಯದ ಗರಿಷ್ಟ ಮಟ್ಟ 2859 ಅಡಿಗಳಾಗಿದ್ದು, ಅಣೆಕಟ್ಟೆಗೆ ಒಂದೇ ದಿನದಲ್ಲಿ ಎರಡು ಅಡಿಗಳಷ್ಟು ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಭಾನುವಾರ ಬೆಳಿಗ್ಗೆ 8 ಕ್ಕೆ ಜಲಾಶಯಕ್ಕೆ 1105 ಕ್ಯೂಸೆಕ್ಸ್ಗಳಷ್ಟು ನೀರಿನ ಒಳ ಹರಿವು ಇತ್ತು. ಜಲಾನಯನ ಪ್ರದೇಶದಲ್ಲಿ ಇಂದು 36.3 ಮೀ.ಮೀ. ಮಳೆ ದಾಖಲಾಗಿದೆ.
ಅಣೆಕಟ್ಟೆ ಭರ್ತಿಗೆ ಇನ್ನೂ 11.38 ಅಡಿಗಳಷ್ಟು ನೀರು ಬರಬೇಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯಕ್ಕೆ ಈ ಬಾರಿ ಈ ತನಕ 33 ಅಡಿಯಷ್ಟು ನೀರು ಹೆಚ್ಚು ಬಂದಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಈ ತನಕ 156 ಮೀ.ಮೀ. ಮಳೆ ದಾಖಲಾಗಿದೆ. ಮುಂಗಾರು ಮಳೆ ಹೀಗೆ ಬಿರುಸುಗೊಂಡರೆ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಲಿದೆ.
ಈ ವರ್ಷದ ಉತ್ತಮ ಮಳೆ ನೀರಾವರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ತಂದಿದೆ. ಕಳೆದ ವರ್ಷ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿಕ್ಲಿಹೊಳೆ ಜಲಾಶಯಕ್ಕೆ ಕೂಡ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯ ಅರ್ಧಚಂದ್ರಾಕೃತಿಯ ತಡೆಗೋಡೆ ಮೇಲೆ ಈಗಾಗಲೇ ನೀರು ಹಾಲ್ನೊರೆಯಂತೆ ಹರಿಯತೊಡಗಿರುವ ದೃಶ್ಯವೈಭವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಹಾರಂಗಿ, ಚಿಕ್ಲಿಹೊಳೆ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಜುಲೈ ಮೊದಲ ವಾರದಲ್ಲಿ ಈ ಅಣೆಕಟ್ಟೆಗಳಿಂದ ರೈತರ ಕಾಲುವೆಗೆ ನೀರು ಹರಿಯಬಿಡುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಧಾರಾಕಾರವಾಗಿ ಬೀಳುತ್ತಿರುವ ಮಳೆಯಿಂದ ಜೀವನದಿ ಕಾವೇರಿ ಮೈದುಂಬುತ್ತಿದೆ. ಪ್ರವಾಸಿ ಕೇಂದ್ರ ದುಬಾರೆ ಸಾಕಾನೆ ಶಿಬಿರದ ಬಳಿ ಭೋರ್ಗರೆಯುತ್ತಾ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಪ್ರವಾಸಿಗರಿಗೆ ರಿವರ್ ರ್ಯಾಫ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.