ಗುರುವಾರ , ಅಕ್ಟೋಬರ್ 17, 2019
27 °C

ಹಾರಕದ ಊರಲ್ಲಿ ರೈತನ ಮಿತ್ರರ ಸಂತೆ

Published:
Updated:
ಹಾರಕದ ಊರಲ್ಲಿ ರೈತನ ಮಿತ್ರರ ಸಂತೆ

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿ `ಹಾರಕ~ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರಿಂದ ಊರಿಗೆ ಈ ಹೆಸರು ಬಂದಿದ್ದು ಇಲ್ಲಿ ಶನಿವಾರ ಪವಾಡಪುರುಷ ಚನ್ನಬಸವ ಶಿವಯೋಗಿಗಳ 60ನೇ ಜಾತ್ರೆ ಅಂಗವಾಗಿ ಬೃಹತ್ ಪಶು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ತಮವಾದ ಮೂರು ಜೋಡಿ ಎತ್ತುಗಳಿಗೆ ವಿಶೇಷ ಬಹುಮಾನ ನೀಡಲಾಯಿತು.ಹಾರಕ ಧಾನ್ಯಕ್ಕೆ ಸಂಬಂಧಿಸಿದಂತೆ ಇಲ್ಲಿ ಹಿಂದಿನ ಕಾಲದಲ್ಲಿ ಒಂದು ಘಟನೆ ನಡೆದಿದೆ. ಹೊಲದ ಮಾಲೀಕನೊಬ್ಬ ತಾನೊಬ್ಬನೇ ಹಾರಕದ ರಾಶಿ ಮಾಡಿ ಸತ್ಯಪ್ಪ ಎಂಬ ಪಾಲುದಾರನಿಗೆ ಏನೂ ಬೆಳೆದಿಲ್ಲ ಎಂದು ಹೇಳುತ್ತಾನೆ. ಆಗ ಸತ್ಯಪ್ಪ ಇನ್ನೊಮ್ಮೆ ಬೂಸಾದ ರಾಶಿ ನಡೆಸುತ್ತಾನೆ. ಅಗ ದುಪ್ಪಟ್ಟು ಹಾರಕ ಧಾನ್ಯ ದೊರೆಯುತ್ತದೆ. ಈ ಘಟನೆಯಿಂದಾಗಿ ಗ್ರಾಮಕ್ಕೆ `ಹಾರಕೂಡ~ ಎಂಬ ಹೆಸರು ಪ್ರಾಪ್ತವಾಗಿದೆ.ಇಲ್ಲಿ ಸತ್ಯಪ್ಪನ ಗುಡಿ ನಿರ್ಮಿಸಲಾಗಿದೆ. ನಂತರದ ಕಾಲದಲ್ಲಿ ಪವಾಡಪುರುಷ ಚನ್ನಬಸವ ಶಿವಯೋಗಿಗಳು ಇಲ್ಲಿ ನೆಲೆಸಿ ತನ್ನ ಯೋಗ ಶಕ್ತಿಯಿಂದಾಗಿ ಊರಿನ ಕೀರ್ತಿ ಎಲ್ಲೆಡೆ ಹರಡುವಂತೆ ಮಾಡಿದ್ದಾರೆ.ಶಿವಯೋಗಿಗಳು ಕೃಷಿಕರಿಗೆ ಸಹಾಯ, ಸಹಕಾರ ಕೊಡುತ್ತಿದ್ದರು. ತತ್ವಪದಕಾರರ ಮತ್ತು ಕುಸ್ತಿಪಟುಗಳ ಆಶ್ರಯದಾತರಾಗಿದ್ದರು. ಆದ್ದರಿಂದ ಜಾತ್ರೆಯ ಮರುದಿನ ಕುಸ್ತಿ ಸ್ಪರ್ಧೆ ಮತ್ತು 3ನೇ ದಿನ ಪಶು ಪ್ರದರ್ಶನ ನಡೆಸಲಾಗುತ್ತದೆ. ಪ್ರದರ್ಶನದಲ್ಲಿ ಉತ್ತಮ ಪಶುಗಳನ್ನು ಆಯ್ಕೆ ಮಾಡಿ ಮಠದಿಂದ ಮೊದಲಿನಿಂದಲೂ ಬಹುಮಾನ ಕೊಡಲಾಗುತ್ತದೆ. ಈಚೆಗೆ ಕೃಷಿ ಮಾರಾಟ ಮಹಾಮಂಡಳಿ ಮತ್ತು ತಾಲ್ಲೂಕು ಎಪಿಎಂಸಿಯಿಂದಲೂ ಸಹಕಾರ ಕೊಡುತ್ತಿರುವ ಕಾರಣ ಪ್ರದರ್ಶನದಲ್ಲಿ ಹೆಚ್ಚಿನ ಪಶುಗಳು ಪಾಲ್ಗೊಳ್ಳುತ್ತಿವೆ.ಶನಿವಾರ ನಡೆದ ಪ್ರದರ್ಶನದಲ್ಲಿ ಹಣಮ, ದೇವಣಿ, ಲಾಲಕಾಂದಾರಿ, ಕಿಲ್ಲಾರಿ, ಜವಾರಿ ತಳಿಯ ಸಾವಿರಾರು ಎತ್ತುಗಳು ಪಾಲ್ಗೊಂಡಿದ್ದವು. ಜಾತ್ರೆಯ ಮೊದಲ ದಿನದಿಂದಲೇ ದೂರದೂರದಿಂದ ಇಲ್ಲಿಗೆ ಎತ್ತುಗಳನ್ನು ತರಲಾಗುತ್ತದೆ. ಪ್ರದರ್ಶನದ ಜತೆಗೆ ಮಾರಾಟವೂ ನಡೆಯುತ್ತದೆ.ಪ್ರದರ್ಶನದಲ್ಲಿನ ಖೇರ್ಡಾ ಗ್ರಾಮದ ಜಗನ್ನಾಥ ರೂಪಲಾ ಅವರ ದೇವಣಿ ಎತ್ತುಗಳಿಗೆ ರೂ. 5 ಸಾವಿರದ ಪ್ರಥಮ ಬಹುಮಾನ, ಆಳಂದ ತಾಲ್ಲೂಕಿನ ದೇಗಾಂವದ ರೇವಣಸಿದ್ದಪ್ಪ ಅವರ ಕಿಲ್ಲಾರಿ ಎತ್ತಿನ ಜೋಡಿಗೆ ರೂ. 3 ಸಾವಿರದ ದ್ವಿತೀಯ ಹಾಗೂ ಸದಲಾಪುರದ ವೀರಣ್ಣ ಜಮಾದಾರ ಅವರ ದೇವಣಿ ಎತ್ತುಗಳಿಗೆ ರೂ. 2 ಸಾವಿರದ ತೃತೀಯ ಬಹುಮಾನ ಕೊಡಲಾಯಿತು. ಇದಲ್ಲದೆ ಎಪಿಎಂಸಿ ವತಿಯಿಂದ 20 ಜೋಡಿ ಹಾಗೂ ಮಠದ ವತಿಯಿಂದ 50 ಜೋಡಿ ಎತ್ತುಗಳನ್ನು ಅಯ್ಕೆ ಮಾಡಿ ಕೃಷಿ ಪರಿಕರ ವಿತರಿಸಲಾಯಿತು.ಮಠಾಧಿಪತಿ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರ ನಾರಾಯಣಪುರ, ಡಾ.ನಾಗರಾಜ ಕಂಗಳೆ, ಡಾ.ನರಸಪ್ಪ ಹುಮನಾಬಾದ್, ಡಾ.ಕಿರಣ ಬಿರಾದಾರ, ಡಾ.ಗೌತಮ ಕಾಂಬಳೆ, ಶಶಿಕಾಂತ, ಡಾ.ಸತೀಶ ಬಿರಾದಾರ, ನಾಗಪ್ಪ ಪೆದ್ದೆ, ಶರಣಬಸಪ್ಪ ಅತ್ತೆ, ರಾಜಕುಮಾರ ಹಾರಕೂಡೆ ಅವರು ಪಶುಗಳ ತಪಾಸಣೆ ನಡೆಸಿ ಬಹುಮಾನಕ್ಕೆ ಆಯ್ಕೆ ಮಾಡಿದರು.

Post Comments (+)