ಹಾರದ ಕಿಂಗ್‌ಫಿಷರ್: ಪ್ರಯಾಣಿಕರ ಪರದಾಟ

7

ಹಾರದ ಕಿಂಗ್‌ಫಿಷರ್: ಪ್ರಯಾಣಿಕರ ಪರದಾಟ

Published:
Updated:

ಮಂಗಳೂರು:  ಕಿಂಗ್‌ಫಿಷರ್ ಏರ್‌ಲೈನ್ಸ್ ವಿಮಾನಗಳು ಕಾರಣಾಂತರದಿಂದ ಹಾರಾಟವನ್ನು ಗುರುವಾರ ರದ್ದುಪಡಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.ಕಿಂಗ್‌ಫಿಷರ್ ಮತ್ತು ತೈಲ ಕಂಪೆನಿಯೊಂದರ ನಡುವೆ ಇಂಧನ ಪೂರೈಸುವ ಒಪ್ಪಂದವಾಗಿದ್ದು, ಕಿಂಗ್‌ಫಿಷರ್ ಕಂಪೆನಿ ಭಾರಿ ಪ್ರಮಾಣದಲ್ಲಿ ದುಡ್ಡು ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದೆ.ಇದೇ ಕಾರಣಕ್ಕೆ ದೇಶದ ಹಲವು ಭಾಗಗಳಲ್ಲಿ ಗುರುವಾರ ಇಂಧನ ತುಂಬಿಸಲು ತೈಲ ಕಂಪೆನಿ ನಿರಾಕರಿದ್ದರಿಂದ ವಿಮಾನ ಹಾರಾಟ ವಿಳಂಬವಾಯಿತು, ಕೆಲವೆಡೆ ವಿಮಾನ ಹಾರಾಟ ರದ್ದಾಯಿತು.ಮುಂಬೈಯಿಂದ ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ಯಾಹ್ನ 2.55ಕ್ಕೆ ಆಗಮಿಸಬೇಕಿದ್ದ ವಿಮಾನ ಎರಡು ಗಂಟೆ ವಿಳಂಬವಾಗಿ ಅಂದರೆ ಸಂಜೆ 4.55ಕ್ಕೆ ಆಗಮಿಸಿತು. ಆದರೆ ಇಂಧನ ಇಲ್ಲದ ಕಾರಣ ಅದರ ಮರುಪ್ರಯಾಣ ಸಾಧ್ಯವಾಗಲಿಲ್ಲ.ದಿನದ ಮಟ್ಟಿಗೆ ಮುಂಬೈಗೆ ತೆರಳುವ ಕೊನೆಯ ವಿಮಾನ ಇದಾಗಿದ್ದು, 90 ಮಂದಿ ಈ ವಿಮಾನದಲ್ಲಿ ತೆರಳಲು ಟಿಕೆಟ್ ಖರೀದಿಸಿ ಸಜ್ಜಾಗಿದ್ದರು. ಏಕಾಏಕಿಯಾಗಿ ವಿಮಾನ ಹಾರಾಟ ರದ್ದಾದ ವಿಚಾರ ತಿಳಿದು ಅವರು ಗಲಿಬಿಲಿಗೊಂಡರು. ಕೆಲವರು ರಂಪಾಟವನ್ನೂ ಮಾಡಿದರು. ಆದರೆ ಕಂಪೆನಿಗೆ ಬೇರೆ ದಾರಿಯೇ ಇಲ್ಲದೆ ಪ್ರಯಾಣಿಕರಿಗೆ ಟಿಕೆಟ್ ದುಡ್ಡು ವಾಪಸ್ ನೀಡಬೇಕಾಯಿತು.ಸಾಧ್ಯವಾದರೆ ರಾತ್ರಿ ಹೊತ್ತಿಗೆ ಬದಲಿ ತೈಲ ಕಂಪೆನಿಯಿಂದ ಇಂಧನ ಪಡೆದು ವಿಮಾನ ಹಾರಾಟ ನಡೆಸುವ ಬಗ್ಗೆ ಕಿಂಗ್‌ಫಿಷರ್ ಕಂಪೆನಿ ಪ್ರಯಾಣಿಕರಿಗೆ ಭರವಸೆ ನೀಡಿದೆ ಎಂದು ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ.

ಮಂಗಳೂರಿನಂತೆ ಬೆಂಗಳೂರು ವಿಮಾನನಿಲ್ದಾಣದಲ್ಲಿ ಸಹ ಕಿಂಗ್‌ಫಿಷರ್ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry