ಶುಕ್ರವಾರ, ಮೇ 7, 2021
19 °C
ಗ್ರಾಮ ಸಂಚಾರ

ಹಾರನಹಳ್ಳಿ: ಬಗೆಹರಿಯದ ಸಮಸ್ಯೆಗಳು

ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಹಾರನಹಳ್ಳಿ: ಬಗೆಹರಿಯದ ಸಮಸ್ಯೆಗಳು

ಅರಸೀಕೆರೆ: ಒಂದು ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಹಾರನಹಳ್ಳಿ ಜಿಲ್ಲೆಯ ರಾಜಕೀಯ ಚಟುವಟಿಕೆಗಳಿಗೆ ಸಾಕಷ್ಟು ತಿರುವು ನೀಡಿದ ಗ್ರಾಮವಾಗಿದ್ದರೂ, ಇಂದಿಗೂ ಅನೇಕ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ.ತಾಲ್ಲೂಕು ಕೇಂದ್ರದಿಂದ 6 ಕಿ.ಮೀ ದೂರ ಇರುವ ಈ ಗ್ರಾಮ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದೆ. ಮಾಜಿ ಸಚಿವ ರಾಮಸ್ವಾಮಿ ಹಾಗೂ ದೇಶದಲ್ಲಿಯೇ ಹೆಸರು ಪಡೆದಿರುವ  ಕೋಡಿಮಠ ಹೊಂದಿರುವ ಹಾರನಹಳ್ಳಿಯಲ್ಲಿ 3ಸಾವಿರ ಜನಸಂಖ್ಯೆ ಇದ್ದು ಸಾವಿರ ಕುಟುಂಬಗಳಿವೆ. ಹೊಯ್ಸಳರ ಕಾಲದ ಚನ್ನಕೇಶವ ಹಾಗೂ ಲಕ್ಷ್ಮೀನರಸಿಂಹ ದೇವಾಲಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ.`ಸುವರ್ಣಗ್ರಾಮ' ಯೋಜನೆಗೆ ಆಯ್ಕೆಯಾಗಿದ್ದು, ರಸ್ತೆಗಳಿಗೆ ಡಾಂಬರೀಕರಣ ಮಾಡಿದ್ದರೂ ಅವು ಈಗಾಗಲೇ ಕಿತ್ತು ಹೋಗಿದೆ. ರಸ್ತೆ ಬದಿ ಚರಂಡಿ ನಿರ್ಮಿಸಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದೆ. ಯಾರೂ ಇತ್ತ ಗಮನಹರಿಸಿಲ್ಲ.ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಮನೆಗಳಿಂದ ಹೊರ ಸೂಸುವ ತ್ಯಾಜ್ಯ ಸಂಗ್ರಹವಾಗಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ. ಸುಮಾರು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಚರಂಡಿಗಳು ವೈಜ್ಞಾನಿಕವಾಗಿಲ್ಲದೆ ನೀರು ಸರಾಗವಾಗಿ ಹರಿಯುತ್ತಿಲ್ಲ.ಗ್ರಾಮ ನೈರ್ಮಲ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಒತ್ತು ನೀಡಿದ್ದರೂ ಜನಪ್ರತಿನಿಧಿಗಳಾಗಲಿ ಅಥವಾ ಗ್ರಾಮ ಪಂಚಾಯಿತಿ ಆಡಳಿತವಾಗಲಿ ಈ ಬಗ್ಗೆ ಗಮನಹರಿಸದೇ ಇರುವುದು ಮಾತ್ರ ದುರದೃಷ್ಟಕರ.ಶುದ್ದ ಕುಡಿಯುವ ನೀರು ಪೂರೈಕೆಗೆ ಯಗಚಿ ನದಿ ಮೂಲದಿಂದ ನೀರು ತರುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿನ ಚನ್ನಕೇಶವ ದೇವಾಲಯ ಪಕ್ಕದಲ್ಲಿರುವ ಕಿರು ನೀರು ಸರಬರಾಜಿನ ಪೈಪು ಒಡೆದು ನೀರು ಚರಂಡಿ ಸೇರುತ್ತಿದೆ. ನೀರಿನ ಸರಬರಾಜು ನಿಂತಾಗ ಮೋರಿಯ ನೀರು ಪುನಃ ಪೈಪ್ ಮೂಲಕ ಟ್ಯಾಂಕ್‌ಗೆ ಸೇರುತ್ತದೆ.`ಒಡೆದ ಪೈಪ್ ಮೂಲಕ ಮೂರು ಸಿಸ್ಟ್‌ನಗಳೀಗೆ ನೀರು ಪೂರೈಕೆಯಾಗುತ್ತಿದ್ದು, ಚರಂಡಿಯ ಪಕ್ಕದಲ್ಲಿಯೇ ಈ ನೀರಿನ ಪೈಪ್ ಹಾದು ಹೋಗಿದೆ. ಇಲ್ಲಿನ ಅವ್ಯವಸ್ಥೆಯನ್ನು ನೀರು ಬಿಡುವ ಸಿಬ್ಬಂದಿ  ಹಾಗೂ ಅಭಿವೃದ್ಧಿ ಅಧಿಕಾರಿಗೆ ತೋರಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ' ಎಂದು ಗ್ರಾಮಸ್ಥರು ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.