ಹಾರಾಡಿದ ಜೆಡಿಎಸ್, ಬಿಜೆಪಿ ಬಾವುಟ

7

ಹಾರಾಡಿದ ಜೆಡಿಎಸ್, ಬಿಜೆಪಿ ಬಾವುಟ

Published:
Updated:

ಮೈಸೂರು:ಮೈಸೂರು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಇವೆರಡು ಪಕ್ಷಗಳ ಕಾರ್ಯಕರ್ತ ರು ಶುಕ್ರವಾರ ವಿಜಯೋತ್ಸವ ಆಚರಿಸಿ ಖುಷಿಪಟ್ಟರು.ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಸೇರಿದ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೆಡಿಎಸ್ ಮತ್ತು ಬಿಜೆಪಿ ಬಾವುಟಗಳನ್ನು ಒಟ್ಟಿಗೆ ಹಿಡಿದರು. ಎರಡೂ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ   ಸಂಭ್ರಮಿಸಿ ಜೈಕಾರ ಹಾಕಿದರು.ಎಚ್.ಡಿ.ಕುಮಾರಸ್ವಾಮಿ ವಚನ ಭ್ರಷ್ಟರಾದ ನಂತರದಲ್ಲಿ ಜೆಡಿಎಸ್ ಮತ್ತು  ಬಿಜೆಪಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದವು. ಆದರೆ ಶುಕ್ರವಾರ ಮಾತ್ರ ಚಿತ್ರಣ ಬೇರೆಯೇ ಆಗಿತ್ತು.ಸೋತವರೇ ಅಭಿನಂದಿಸಿದರು: ಕಾಂಗ್ರೆಸ್ ಸದಸ್ಯರು ಮಂಜುಳಾರಾಜ್ ನೇತೃತ್ವದಲ್ಲಿ ನೂತನ ಅಧ್ಯಕ್ಷೆ ಜೆ.ಸುನೀತಾ ವೀರಪ್ಪಗೌಡ ಹಾಗೂ ಉಪಾಧ್ಯಕ್ಷ ಡಾ.ಶಿವರಾಮ ಅವರನ್ನು ಅಭಿನಂದಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತ ಕಾಂಗ್ರೆಸ್‌ನ ಸುಮಿತ್ರಾ ಗೋವಿಂದರಾಜು ವೇದಿಕೆ ಏರಿ ಸುನೀತಾ ಅವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.‘ಗೈಡ್’ ಸಿ.ಟಿ.ರಾಜಣ್ಣ: ಸತತವಾಗಿ 3ನೇ ಬಾರಿಗೆ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಜೆಡಿಎಸ್‌ನ ಹಿರಿಯ ಸದಸ್ಯ ಸಿ.ಟಿ.ರಾಜಣ್ಣ ಹೊಸ ಸದಸ್ಯರಿಗೆ ಗೈಡ್ ಆಗಿದ್ದರು.ನಾಮಪತ್ರ ವಾಪಸ್ ಪಡೆಯುವಾಗ, ಕೈ ಎತ್ತುವಾಗ ಹಾಗೂ ಇನ್ನಿತರೆ ಸಂದರ್ಭದಲ್ಲಿ ಮುಂದೆ ನಿಂತು ಮಾರ್ಗದರ್ಶನ ನೀಡಿದರು. ಜೆಡಿಎಸ್‌ನ ಯುವ ಸದಸ್ಯ ದ್ವಾರಕೀಶ್ ಸಹ ರಾಜಣ್ಣನ ಜೊತೆ ಚುರುಕಿನಿಂದ ಓಡಾಡಿ ಗಮನ ಸೆಳೆದರು.ಕಾಂಗ್ರೆಸ್ ಮೌನ: ಇಡೀ ಸಭಾಂಗಣ ಮೌನಕ್ಕೆ ಶರಣಾಗಿತ್ತು. ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅಧಿಕಾರ ಗದ್ದುಗೆ ಹಿಡಿಯುವ ಆತ್ಮವಿಶ್ವಾಸದಲ್ಲಿರು. ಆದರೆ ಕಾಂಗ್ರೆಸ್ ಸದಸ್ಯರು ಮಾತ್ರ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದರು. ತಮ್ಮ ಸರದಿ ಬಂದಾಗ ಕೈ ಎತ್ತಿ ಬಲ ಪಕ್ಕಕ್ಕೆ ತಿರುಗಿ ಜೆಡಿಎಸ್‌ನ ಯಾರಾದರೂ ‘ಕ್ರಾಸ್ ಓಟ್’  ಮಾಡಬಹುದೇ ಎಂದು ಕುತೂಹಲದಿಂದಲೇ ನೋಡುತ್ತಿದ್ದರು.ಚುನಾವಣೆ ಪ್ರಕ್ರಿಯೆ ನಡೆಯುವ ಸಮಯದಲ್ಲಿ 46 ಸದಸ್ಯರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಅತ್ಯಂತ ಶಾಂತಚಿತ್ತರಾಗಿದ್ದರು.ಜೆಡಿಎಸ್ ಜಿಲ್ಲಾಧ್ಯಕ್ಷ ಚಿಕ್ಕಮಾದು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜು, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಜಿಲ್ಲಾ ಪಂಚಾಯಿತಿ ಕಚೇರಿಯ ಕೊಠಡಿಯೊಂದರಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಮೂಲಕ ಮುಂದೆ ಫಲಿತಾಂಶ ಏನಾಗಬಹುದು ಎನ್ನುವ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದರು. ಅಭಿವೃದ್ಧಿಯಷ್ಟೇ ಮುಖ್ಯ

ನಮಗೆ ಗ್ರಾಮೀಣಾಭಿವೃದ್ಧಿ ಅಷ್ಟೇ ಮುಖ್ಯ. ನಮ್ಮೊಂದಿಗೆ ಕಾಂಗ್ರೆಸ್ ಸಹಕರಿಸಲಿಲ್ಲ. ಹೀಗಾಗಿ ಎಲ್ಲ  ಸದಸ್ಯರು ಸೇರಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುಲು ನಿರ್ಧರಿಸಿದೆವು. ಇಲ್ಲಿ ಯಾವುದೇ ರಾಜಕೀಯವಿಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತೇನೆ. ರಾಜ್ಯ ಮಟ್ಟ ದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಹೋರಾಟವೇನಿದ್ದರೂ ದೊಡ್ಡವರಿಗೆ ಬಿಟ್ಟ ವಿಚಾರ. ಅನಿವಾರ್ಯ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಯಾಗಿದೆ.

-ಜೆ.ಸುನೀತಾವೀರಪ್ಪಗೌಡ, ಜಿಪಂ ಅಧ್ಯಕ್ಷೆವರಿಷ್ಠರ ಒಪ್ಪಿಗೆ ಇದೆ

ನಾವು ನಮ್ಮ ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿಯೇ ಜೆಡಿಎಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಇದರಲ್ಲಿ ರಾಜ್ಯ ಮಟ್ಟದ ವರಿಷ್ಠರ ಒಪ್ಪಿಗೆಯೂ ಇದೆ. ಅತಂತ್ರ ಪರಿಸ್ಥಿತಿಯಲ್ಲಿ ಜೊತೆಯಾಗುವುದು ಅನಿವಾರ್ಯವಾಗಿತ್ತು. ಮುಂದೆ ಏನಿದ್ದರೂ ಅಭಿವೃದ್ಧಿ ಅಷ್ಟೆ ಯೋಚನೆ.

 -ಡಾ.ಶಿವರಾಮ, ಜಿಪಂ ಉಪಾಧ್ಯಕ್ಷಎಚ್.ವಿಶ್ವನಾಥ್ ನೇರ ಕಾರಣ

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮುರಿದು ಬೀಳಲು ಸಂಸದ ಎಚ್.ವಿಶ್ವನಾಥ್ ಅವರೇ ನೇರ ಕಾರಣ. ಅವರು ಪದೇ ಪದೇ ನಮ್ಮ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರ ಸ್ವಾ ಹಾಗೂ ಪಕ್ಷ ಕುರಿತು ಹಗುರವಾಗಿ ಮಾತನಾಡುತ್ತಿದ್ದರು. ಅಲ್ಲದೇ ಪಾಲಿಕೆ ಮೇಯರ್ ಚುನಾವಣೆಯಲ್ಲಿ ತುಂಬಾ ತೊಂದರೆ ಕೊಟ್ಟರು. ಕಾಂಗ್ರೆಸ್‌ನ ಕೆಲವು ನಾಯಕರ ಧೋರಣೆಯಿಂದ ಮೈತ್ರಿ ಮುರಿಯಿತು.

 -ಸಾ.ರಾ.ಮಹೇಶ್, ಜೆಡಿಎಸ್ ಶಾಸಕಸ್ಪಷ್ಟ ಬಹುಮತ ಇರಲಿಲ್ಲ

ಮೂರು ಪಕ್ಷಗಳಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಆಡಳಿತದ ದೃಷ್ಟಿಯಿಂದ ಯಾವುದಾದರೂ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಿಜೆಪಿಯು ಜೆಡಿಎಸ್ ಜೊತೆ ಕೈ ಜೋಡಿಸಿದೆ. ಇಲ್ಲಿ ಅಭಿವೃದ್ಧಿ ಕಾರಣಕ್ಕಾಗಿ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

-ಸಿದ್ದರಾಜು, ಬಿಜೆಪಿ ಜಿಲ್ಲಾಧ್ಯಕ್ಷಆಶ್ಚರ್ಯಕರ ಬೆಳವಣಿಗೆ

ಇದು ಆಶ್ಚರ್ಯಕರ ಬೆಳವಣಿಗೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಗೂ ವರಿಷ್ಠರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು, ಅವರ ಹಠಮಾರಿತನದಿಂದಾಗಿ ನಾವು  ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳಬೇಕಾಯಿತು.

-ಚಿಕ್ಕಮಾದು, ಜೆಡಿಎಸ್ ಜಿಲ್ಲಾಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry