ಹಾರಿದ ಗಾಳಿಪಟ; ಮೇರೆ ಮೀರಿದ ಉತ್ಸಾಹ

7

ಹಾರಿದ ಗಾಳಿಪಟ; ಮೇರೆ ಮೀರಿದ ಉತ್ಸಾಹ

Published:
Updated:

ಧಾರವಾಡ: ನಗರದಲ್ಲಿ ಇದೇ ಮೊದಲ ಬಾರಿಗೆ ನಡೆದ `ಗಾಳಿಪಟ ಉತ್ಸವ'ದಲ್ಲಿ ಸಾವಿರಾರು ಜನರು ಭಾಗವಹಿಸಿ ತಮ್ಮ ಗಾಳಿಪಟಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಬಳಿ ಬೆಟ್ಟದಲ್ಲಿ ಹಾರಿಬಿಡುವ ಮೂಲಕ ಸಂಭ್ರಮಿಸಿದರು.ಟೈವಾಕ್ ಕಂಪೆನಿ ಬಳಿ ಇರುವ ಬೆಟ್ಟದತ್ತ ಬೆಳಿಗ್ಗೆಯಿಂದಲೇ  ಯುವಕ-ಯುವತಿಯರು ಮುಖ ಮಾಡಿದ್ದರು. 300, 500 ಹಾಗೂ 700 ರೂಪಾಯಿಗೆ ದೊರೆಯುವ ಗಾಳಿಪಟಗಳನ್ನು ಖರೀದಿಸಿ ಹಾರಿ ಬಿಡಲು ಶುರು ಮಾಡಿದರು. ಸಂಘಟಕರು ನಿರೀಕ್ಷಿಸಿದಂತೆ ಸಾವಿರಾರು ಜನರು ಇಡೀ ಬೆಟ್ಟದ ತುಂಬ ಗಾಳಿ ಪಟ ಹಾರಿಸಲು ತೊಡಗಿದ್ದರು. ಸಂಜೆಯವರೆಗೂ ಸುಮಾರು 2 ಸಾವಿರ ಗಾಳಿಪಟಗಳು ಮಾರಾಟವಾಗಿದ್ದವು. ಅವುಗಳಲ್ಲಿ ಹೆಚ್ಚಿನವು ರೂ 300 ಬೆಲೆಯ ಪಟಗಳು.ಕಾರು, ಬೈಕ್‌ನಲ್ಲಿ ಕುಟುಂಬ ಸಮೇತ ಬಂದು ಗಾಳಿಯಲ್ಲಿ ಗಂಟೆಗಟ್ಟಲೇ ತೇಲುವ ಪಟಗಳನ್ನು ನೋಡುತ್ತ ಆನಂದಪಟ್ಟರು.

ನಗರದ ರೋಟರಿ ಶಾಲೆಯಲ್ಲಿ ಓದುತ್ತಿರುವ ಬಾಲಕ ಸೂರಜ್ ತನ್ನ ತಂದೆಯ ಜೊತೆಗೆ ಬಂದಿದ್ದ. ಹಲವು ಗಾಳಿ ಪಟಗಳನ್ನು ದಾರಕ್ಕೆ ಸಿಕ್ಕಿಸಿದ್ದನ್ನು ಕಂಡು ಖುಷಿಯಿಂದಲೇ ಹಾರಿಸಲು ಶುರು ಮಾಡಿದ. ಈ ಮೊದಲೂ ಗಾಳಿ ಪಟ ಹಾರಿಸಿದ್ದೆ. ಆದರೆ ಇಂಥದ್ದಲ್ಲ ಎಂದು ಪ್ರತಿಕ್ರಿಯೆ ನೀಡಿದ ಸೂರಜ್‌ನಂತೆಯೇ ಹೊಸ ಅನುಭವ ಕಂಡು ಕೊಂಡವರು ಹಲವು ಮಕ್ಕಳು.ಪಟ ಖರೀದಿಸಿದ ತಕ್ಷಣವೇ ಹಾರಿಸಲು ಮುಂದಾದ ಕೆಲವರಿಗೆ ನಿರಾಸೆ ಕಾದಿತ್ತು. ಗಾಳಿ ಸಾಕಷ್ಟು ಇಲ್ಲದೇ ಇದ್ದುದರಿಂದ ಮೇಲಕ್ಕೇರುತ್ತಲೇ ಇರಲಿಲ್ಲ. ಆಗ ಆ ಬಾಲಕ/ ಬಾಲಕಿಯ ತಂದೆ-ತಾಯಿ ಅದನ್ನು ಎತ್ತುರಕ್ಕೇರಿಸುವ ಯತ್ನ ಮಾಡಿದರು.ಬೆಳಿಗ್ಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಉತ್ಸವವನ್ನು ಸಂಘಟಿಸಿದ್ದ ಪುರ ಟ್ರಸ್ಟ್‌ನ ಪದಾಧಿಕಾರಿಗಳು ಹಾಜರಿದ್ದರು. ಭಾರತೀಯ ಕಲಾಕೇಂದ್ರದ ವಿದ್ಯಾರ್ಥಿಗಳು ಗಾಳಿಪಟಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸ್ಥಳದಲ್ಲೇ ರಚಿಸಿದರು. ಅವುಗಳ ಮಾರಾಟವೂ ಇತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry