ಭಾನುವಾರ, ಮಾರ್ಚ್ 7, 2021
31 °C
ಬಿಬಿಎಂಪಿ: ಜಾಗತಿಕ ಟೆಂಡರ್‌ಗೆ ಆಡಳಿತ ಪಕ್ಷದ ಸದಸ್ಯರ ಒತ್ತಾಯ

ಹಾರೋಹಳ್ಳಿ: ಕಸಾಯಿಖಾನೆ ನಿರ್ಮಾಣಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರೋಹಳ್ಳಿ: ಕಸಾಯಿಖಾನೆ ನಿರ್ಮಾಣಕ್ಕೆ ಒಪ್ಪಿಗೆ

ಬೆಂಗಳೂರು: ಹೊಸದಾಗಿ ಜಾಗತಿಕ ಟೆಂಡರ್‌ ಕರೆಯಬೇಕು ಎಂಬ ಆಡಳಿತ ಪಕ್ಷದ ಸದಸ್ಯರ ಒತ್ತಾಯದ ನಡುವೆಯೂ ಹಾರೋಹಳ್ಳಿಯಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಬಾಕಿ ಇರುವ ಹಾಗೂ ಹೊಸ ವಿಷಯಗಳಿಗೆ ಒಪ್ಪಿಗೆ ನೀಡಲು ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಅಧ್ಯಕ್ಷತೆ­ಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಈ ಒಪ್ಪಿಗೆ ನೀಡಲಾಯಿತು.

ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣ ಗೌಡ ವಿಷಯ ಮಂಡಿಸಿ, ‘ಕ್ಯಾಪ್ರಿ ಮೀಟ್‌ ಹೌಸ್‌ ಸಂಸ್ಥೆಯವರು ಹಾರೋಹಳ್ಳಿಯ 40 ಎಕರೆ ಕೆಐಎಡಿಬಿ ಜಾಗದಲ್ಲಿ ಕಸಾ­ಯಿಖಾನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈ ಯೋಜ­ನೆ ಟೆಂಡರ್‌ ಸಿಂಧುತ್ವದ ಅವಧಿಯನ್ನು 5 ವರ್ಷ­ಗಳ ಅವಧಿಗೆ ಮುಂದುವರಿಸಲು ಒಪ್ಪಿಗೆ ನೀಡಬೇಕಿದೆ’ ಎಂದರು.

ಬಿಜೆಪಿಯ ಡಾ.ಎಸ್‌.ರಾಜು, ‘ನಗರದಲ್ಲಿ ಪ್ರಾಣಿಗಳ ವಧೆ ಮಾಡಿ ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆಯಲಾಗುತ್ತಿದೆ.  ಹಾಗಾಗಿ ಕಸಾಯಿಖಾನೆಗಳನ್ನು ಹೊರವಲಯಕ್ಕೆ ಸ್ಥಳಾಂತರಿ­ಸಲು ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಆಯುಕ್ತ ಎಂ.ಲಕ್ಷ್ಮಿನಾರಾಯಣ ಪ್ರತಿಕ್ರಿಯಿಸಿ, ‘ಹಾರೋ­ಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ವೈಜ್ಞಾನಿಕವಾಗಿ  ಕಸಾಯಿ­ಖಾನೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.  ಆಹಾರ ಸುರ­ಕ್ಷತಾ ಕಾಯ್ದೆಯಡಿ ಇದು ಬಿಬಿಎಂಪಿಯ ಜವಾಬ್ದಾರಿಯೂ ಹೌದು’ ಎಂದರು.

ಬಿಜೆಪಿಯ ಎಸ್‌.ಹರೀಶ್‌, ‘ಕ್ಯಾಪ್ರಿ ಮೀಟ್‌ ಸಂಸ್ಥೆಯ ಗುತ್ತಿಗೆ ಅವಧಿ 2010ಕ್ಕೆ ಮುಗಿದಿದೆ. ಈಗ ಬಿಬಿಎಂಪಿ ವತಿಯಿಂದಲೇ ₨5 ಕೋಟಿ ವೆಚ್ಚದಲ್ಲಿ  ಕಸಾಯಿಖಾನೆಗೆ ತಡೆಗೋಡೆ ನಿರ್ಮಿಸಿ ಕೊಡಲಾಗುತ್ತಿದೆ. ಜೊತೆಗೆ ಸಂಸ್ಥೆಗೆ ಪ್ರತಿವರ್ಷ ₨19 ಕೋಟಿ ನೀಡಬೇಕಿದೆ. ನಾವೇ ತಡೆಗೋಡೆ ನಿರ್ಮಿಸಿ ಪ್ರತಿವರ್ಷ ಹಣ ನೀಡಿ ನಾವೇನು ಸಾಧನೆ ಮಾಡಲು ಹೊರಟಿದ್ದೇವೆ’ ಎಂದು ಪ್ರಶ್ನಿಸಿದರು.

‘ಕಸಾಯಿಖಾನೆ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಆದರೆ, ಜಾಗತಿಕ ಟೆಂಡರ್‌ ಕರೆದು ಕಾಮಗಾರಿ ನಡೆಸಬೇಕು’ ಎಂದು ಒತ್ತಾಯಿಸಿದರು. ಆಯುಕ್ತರು ಉತ್ತರಿಸಿ, ‘ನಗರ ಮಧ್ಯದಲ್ಲಿ­ರುವ ಕಸಾಯಿಖಾನೆಗಳಿಂದ ಬಿಬಿಎಂಪಿಗೆ ಹೆಚ್ಚು ಆದಾಯ ಬರುತ್ತಿಲ್ಲ. ನಿರ್ವಹಣೆ ದೃಷ್ಟಿಯಿಂದ ಗಮನಿಸಿದರೆ ಹಾರೋ­ಹಳ್ಳಿಯ ಕಸಾಯಿಖಾನೆ ವೆಚ್ಚ ಜಾಸ್ತಿ ಆಗುವುದಿಲ್ಲ’ ಎಂದರು. ಜೆಡಿಎಸ್‌ ಪಕ್ಷದ ನಾಯಕ ಆರ್‌.ಪ್ರಕಾಶ್‌, ‘ಹಾರೋಹಳ್ಳಿಯ ಕಸಾಯಿಖಾನೆಯ ಸುತ್ತಮುತ್ತಲಿನ ಜನರು ಬಿಬಿಎಂಪಿಗೆ ಶಾಪ ಹಾಕುತ್ತಿದ್ದಾರೆ. ಜಾಗತಿಕ ಟೆಂಡರ್‌ ಕರೆದು ಕಾಮಗಾರಿ ನಡೆಸುವುದು ಉತ್ತಮ’ ಎಂದು ಸಲಹೆ ನೀಡಿದರು. ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ್‌, ‘ಹೈಕೋರ್ಟ್‌ ಸೂಚನೆ­ ಪಾಲಿಸಲೇ­ಬೇಕಿದೆ. ಹೀಗಾಗಿ ಕಾಮಗಾರಿಗೆ ಒಪ್ಪಿಗೆ ನೀಡಬೇಕು’ ಎಂದರು.

ಆಯುಕ್ತರು ಮಾತನಾಡಿ, ‘ಕಸಾಯಿಖಾನೆಗಳ ನಿರ್ಮಾ­ಣದ ಸಂಬಂಧ ಎಂಟು ದಿನಗಳ ಹಿಂದೆ ಹೈಕೋರ್ಟ್‌ ಛೀಮಾರಿ ಹಾಕಿದೆ. ತಡೆಗೋಡೆಗೆ ₨5 ಕೋಟಿ ನೀಡಿದ ಬಳಿಕ ಸಂಸ್ಥೆ ₨150 ಕೋಟಿ ವೆಚ್ಚದಲ್ಲಿ ಘಟಕ  ನಿರ್ಮಾಣ ಮಾಡಲಿದೆ.

ಸಂಸ್ಥೆಗೆ ಪ್ರತಿವರ್ಷ ₨19 ಕೋಟಿಯಂತೆ 15 ವರ್ಷಗಳ ಕಾಲ ಬಿಬಿಎಂಪಿ ಪಾವತಿಸಬೇಕಿದೆ. ಬಳಿಕ ಈ ಜಾಗ ಬಿಬಿಎಂಪಿಗೆ ಸೇರಲಿದೆ’ ಎಂದರು.

ಬಿಜೆಪಿಯ ಬಿ.ವಿ.ಗಣೇಶ್, ‘ಹಾರೋಹಳ್ಳಿಯಲ್ಲಿ ಘಟಕ ನಿರ್ಮಿಸಿದ ಬಳಿಕ ನಗರದಲ್ಲಿರುವ ಕಸಾಯಿಖಾನೆಗಳನ್ನು ಮುಚ್ಚುತ್ತೀರಾ’ ಎಂದು ಪ್ರಶ್ನಿಸಿದರು. ಎಸ್‌.ಹರೀಶ್‌, ‘ಸಂಸ್ಥೆಗೆ 15 ವರ್ಷಗಳಲ್ಲಿ ₨285 ಕೋಟಿ ನೀಡುವ ಅಗತ್ಯ ಏನಿದೆ. ಅಲ್ಲಿ ಕುರಿ ಕಡಿಯಲು ₨160 ವಸೂಲಿ ಮಾಡುತ್ತಾರೆ. ಇದರ ಬದಲು ಜಾಗತಿಕ ಟೆಂಡರ್‌ ಕರೆಯುವುದೇ ಉತ್ತಮ’ ಎಂದರು. ಆಯುಕ್ತರು ಪ್ರತಿಕ್ರಿಯಿಸಿ, ‘ಇದು ಹೊಸ ಟೆಂಡರ್‌ ಅಲ್ಲ. ಇದೇ ಕೌನ್ಸಿಲ್‌ನಲ್ಲಿ ಟೆಂಡರ್‌ಗೆ ಒಪ್ಪಿಗೆ ನೀಡಲಾಗಿತ್ತು. ಟೆಂಡರ್‌ ಅವಧಿ ವಿಸ್ತರಣೆ ಮಾಡಬೇಕಿದೆ. ಅದಕ್ಕೆ ಒಪ್ಪಿಗೆ ಬೇಕು’ ಎಂದರು.

ಕರೀಂ ಖಾನ್‌ ಹೆಸರಿಡಲು ವಿಳಂಬ: ಪ್ರತಿಭಟನೆ

ಇಂದಿರಾನಗರದ 100 ಅಡಿ ರಸ್ತೆಗೆ ಜನಪದ ತಜ್ಞ ಕರೀಂ ಖಾನ್‌ ಅವರ ಹೆಸರು ಇಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮೇಯರ್‌ ಕೆ.ಚಂದ್ರಶೇಖರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಎದುರು ಪ್ರತಿಭಟನೆ ನಡೆಸಿದರು.

ನಗರದ ವಿವಿಧ ರಸ್ತೆಗಳಿಗೆ ಹೆಸರಿಡುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸುವ ವೇಳೆ ಮಾತನಾಡಿದ ಚಂದ್ರಶೇಖರ್‌ ಅವರು, ‘ಮಹಾನ್‌ ವ್ಯಕ್ತಿಯ ಬಗ್ಗೆ ಬಿಬಿಎಂಪಿ ಉದಾಸೀನ ತಾಳುವುದು ಸರಿಯಲ್ಲ’ ಎಂದರು.  ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಉತ್ತರಿಸಿ, ‘ರಸ್ತೆಗೆ ಹೆಸರಿಡುವ ಸಂಬಂಧ ಶಾಸಕರಾದ ಎಸ್‌.ರಘು ಹಾಗೂ ಶಾಸಕ ಎನ್‌.ಎ. ಹ್ಯಾರಿಸ್‌ ಅವರೊಂದಿಗೆ ಸಭೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.  ಇದಕ್ಕೆ ಒಪ್ಪದ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದ ಎದುರು ಪ್ರತಿಭಟನೆ ನಡೆಸಿದರು.‘

'ಆರೋಪ ಸಾಬೀತಾದರೆ ರಾಜೀನಾಮೆ’

‘ಜಿಂಕೆ ಉದ್ಯಾನ ಕಾಮಗಾರಿಯಲ್ಲಿ ಅವ್ಯವಹಾರ ಆಗಿಲ್ಲ. ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡಲು ಸಿದ್ಧ. ಇಲ್ಲದಿದ್ದರೆ ಆರೋಪ ಮಾಡಿದವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ’ ಎಂದು ಮಾಜಿ ಮೇಯರ್‌ ಕೆ.ಚಂದ್ರಶೇಖರ್‌ ಪ್ರಶ್ನಿಸಿದರು.

ಬಿಬಿಎಂಪಿ ಬಜೆಟ್‌ ಕುರಿತ ಚರ್ಚೆ ವೇಳೆ, ‘ಒಂದೇ ಕಾಮಗಾರಿಗೆ ಹಲವು ಸಲ ಅನುದಾನ ನೀಡಿ ಅವ್ಯವಹಾರ ನಡೆಸಲಾಗಿದೆ. ಜಿಂಕೆ ವನಕ್ಕೆ ನೀಡಿರುವ ಅನುದಾನ ಎಷ್ಟು’ ಎಂದು ಬಿಜೆಪಿಯ ಎನ್‌.ಆರ್‌.ರಮೇಶ್‌ ಪ್ರಶ್ನಿಸಿ­ದ್ದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ್‌, ‘ಮೇಯರ್‌ ಆಗಿದ್ದ ವೇಳೆ ನಿಧಿಯ ಅನುದಾನ ₨12 ಕೋಟಿ ಇತ್ತು. ಅದನ್ನು ಎಲ್ಲ 100 ವಾರ್ಡ್‌ಗಳಿಗೆ ಸಮಾ­ನ­ವಾಗಿ ಹಂಚಿದ್ದೆ. ಜಿಂಕೆ ವನಕ್ಕೆ ₨34 ಕೋಟಿ ಖರ್ಚು ಮಾಡಿಲ್ಲ. ಈ ವರೆಗೆ ಜಿಂಕೆ ವನಕ್ಕೆ ₨10.60 ಕೋಟಿ ಖರ್ಚು ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಸದಸ್ಯ ಗಂಗಬೈರಯ್ಯ ಮಾತನಾಡಿ, ಈ ವಿವಾದದಿಂದ ಚಂದ್ರಶೇಖರ್‌ ಅವರಿಗೆ ಬೇಸರವಾಗಿದ್ದರೆ ಬಿಜೆಪಿ ಸದಸ್ಯರ ಪರವಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.

‘ಪೌರಕಾರ್ಮಿಕರ ಮನೆ ಸಿಮೆಂಟ್‌ ಎಂಜಿನಿಯರ್‌ ಮನೆಗೆ’

‘ಈಜಿಪುರ, ಶಾಂತಿನಗರ ಮತ್ತಿತರ ಕಡೆಗಳಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಿದ ಮನೆಗಳು ಬೀಳುತ್ತಿವೆ. ಪೌರಕಾರ್ಮಿಕರ ಮನೆ ನಿರ್ಮಾಣಕ್ಕಾಗಿ ಬಳಸಬೇಕಿದ್ದ ಸಿಮೆಂಟ್‌ ಎಂಜಿನಿಯರ್‌ಗಳ ಮನೆಗೆ ಹೋಗುತ್ತಿದೆ’ ಎಂದು ಬಿಜೆಪಿಯ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಸಿ.ವಿ.ರಾಮನ್‌ ನಗರದ ವ್ಯಾಪ್ತಿಯ ಕದಿರೇಯ್ಯನ­ಪಾಳ್ಯ­ದಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಿಸಲು ಉದ್ದೇಶಿ­ಸಿ­ರುವ ಬಹು ಮಹಡಿ ಕಟ್ಟಡದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಕಟ್ಟಡ ನೆಲಸಮವಾದರೆ ಬಿಬಿಎಂಪಿಗೆ ಕೆಟ್ಟ ಹೆಸರು. ಹೀಗಾಗಿ ಉತ್ತಮ ಗುತ್ತಿಗೆ­ದಾರರಿಗೆ ಕಾಮಗಾರಿಯನ್ನು ವಹಿಸಬೇಕು’ ಎಂದು ಸಲಹೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.