ಹಾರ್ಮೋನಿಯಂ `ವಸಂತ'

7

ಹಾರ್ಮೋನಿಯಂ `ವಸಂತ'

Published:
Updated:
ಹಾರ್ಮೋನಿಯಂ `ವಸಂತ'

ಹಾರ್ಮೋನಿಯಂ ನಾದದ ಒಲವು ನಿಮಗೆ ಅಂಟಿಕೊಂಡಿದ್ದು ಹೇಗೆ?

ನಾನು ನಾಕ ವರ್ಷದವ್ನಿದ್ದಾಗ ಹಾರ್ಮೋನಿಯಂ ಮಾಸ್ತರೊಬ್ರು ನಮ್ಮನೀಗ್ ಬಂದು ನಮ್ಮಕ್ಕನಿಗೆ ಟ್ಯೂಷನ್ ಹೇಳ್ತಿದ್ರು. ಎಷ್ಟ ಸಲಾ ಹೇಳಿದ್ರೂ ಅಕ್ಕಾಗ ಬಾರ‌್ಸಾಕ್ ಬರ್ತಿಲಿಲ್ಲಾ. ಒಂದು ಮುಂಜಲೆ ಮಾಸ್ತರ‌್ಗೆ ಗಂಟ್ ಬಿದ್ದೆ. `ಅಕಿಗೆ ಹೇಳ್ಕೊಡೂದು ದಂಡ. ಬದ್ಲಾಗಿ ನಂಗ್ ಹೇಳ್ಕೊಡ್ರಿ, ನಾ ಕಲೀತಿನಿ' ಅಂದೆ. ಅದಕ್ಕವ್ರ `ಬ್ಯಾಡಪಾ. ನಿಮ್ಮಪ್ಪಾ ಹಾರ್ಮೋನಿಯಂ ಮುಟ್ಟಿಸ್ಬ್ಯಾಡ ಅಂದಾರಾ' ಅಂದ್ರು. `ಹಂಗ್ ಹೇಳ್ಬ್ಯಾಡ್ರಿ ನಾ ಬಾರ್ಸಿ ತೋರಸ್ತೀನಿ' ಅಂತ ದುಂಬಾಲು ಬಿದ್ದೆ. `ಏನ್ ತಲಿ ಬಾರಿಸ್ತೀಯೋ. ಕೈ ಹಿಡ್ದು ಹೇಳ್ಕೊಡಾಕತ್ತಿನಿ, ಆದ್ರೂ ಅಕೀಗ್ ಬರವಲ್ದು. ಸಣ್ಣ ಕೂಸ್ ನೀ ಏನ್ ಬಾರಿಸ್ತಿ' ಅಂದ್ರು. ನಾ ಅಲ್ಲೇ ಅಳಾಕ್ ಕುಂತೆ. ಇವಾ ನನ್ನ ಬಿಡಾಂಗಿಲ್ಲ ಅಂತ `ತೊಗೊ ಬಾರ್ತಿಗೀರ್ತಿ ಕೆಡಿಸಿಟ್ಟಿ ಹುಷಾರು' ಅಂತ ಕೊಟ್ರು. ಆಗ ಇಷ್ಟ ದಿನ ಅಕ್ಕಂಗ ಏನ್ ಕಲ್ಸ್‌ಕೊಟ್ಟಿದ್ರೊ ಅದ್ನೆಲ್ಲಾ ಬಾರಿಸಿ ತೋರ‌್ಸಿಬಿಟ್ಟೆ. ಅವ್ರಿಗೆ ಆಶ್ಚರ್ಯ. ಆ ಹುಡಿಗ್ಗೆ ಎಲ್ಲಾ ಹೇಳ್ಕೊಟ್ಟೆ. ಅಕಿ ಏನೂಬಾರ್ಸ್‌ವಲ್ಲಳು. ಅದು ಗುಡ್ಡಕ್ಕ ಕಲ್ಲು ಹೊತ್ತಾಂಗ. ಇವ್ನಿಗೆ ಯಾಕ ಹೇಳಿಕೊಡಬಾರ‌್ದು ಅಂತ ಅನಿಸಿ, ನಮ್ಮಪ್ಪಾ ಮನೀಗ್ ಬಂದಾಗ, `ಭೀಮರಾಯ್ರೇ, ಮೂರ್ತಿ ಪೆಟ್ಟಿಗಿ ಬಾರಿಸ್ತಾನಾ' ಅಂದ್ರು. ನಮ್ಮಪ್ಪಾ, `ಏ ಕತ್ತಿಗೆ ಜ್ವರಾ ಬರೋ ಮಾತಾಡ್ತಿ ನೀನು' ಅಂದ್ರು. ಅದಕ್ಕವ್ರ, `ಇಲ್ಲಪಾ, ಅವ್ನ ಚೊಲೋ ಪೆಟಿಗಿ ಬಾರಿಸ್ತಾನ, ಒಂದ್ ಮಿನಿಟ ನಿಂತ್ ಕೇಳ್ರಿ' ಅಂತ ಗಂಟ ಬಿದ್ರು. ಹಂಗಾಗಿ ಆತಪಾ ಅಂತ ಒಪ್ಪಿಗಿ ಕೊಟ್ರು. ನಾ ಹಾರ್ಮೋನಿಯಂ ಹಿಡಿದ ತಕ್ಷಣ ನಮ್ಮಪ್ಪಾ. `ಏ ಇಂತಾ ಚೊಲೋ ಪೆಟಿಗಿ ಕೊಟ್ರ ಹಾಳ್ ಮಾಡ್ತಾನ' ಅಂತ ಭಯ ಬಿದ್ರು. ನಾನು ಅವತ್ತಿನ ಮಟ ಹೇಳ್ಕೊಟ್ಟಿದ್ನೆಲ್ಲಾ ಚಾಚೂ ತಪ್ಪದಾಂಗ ಬಾರ‌್ಸಿ ಬಿಟ್ಟೆ. ನಮ್ಮಪ್ಪುಗೂ ಆಶ್ಚರ್ಯ ಆಗಿ ಚೊಲೋ ಬಾರಿಸ್ತಾನಲ್ಲ ಹುಡುಗ. ಇವಂಗ ಕಲಸು' ಅಂತ ಹೇಳಿದ್ರು.

ಕಲಿಕೆಯ ಆರಂಭದ ದಿನಗಳು ಹೇಗಿದ್ದವು?

ಅಪ್ಪನ ಮುಂದೆ ಬಾರ‌್ಸಿ ತೋರ್ಸಿದ ಮರು ದಿವಸದಿಂದ್ಲ ಕಲಿಸಾಕ ಸುರು ಮಾಡಿ ವರ್ಷದೊಳಗ ಅವ್ರ ವಿದ್ಯೇನ ನಂಗ ಧಾರಿ ಎರದಬಿಟ್ರು. ಜೊತಿಗೆ ನನ್ ಸಾಲಿ ಪಾಲಿ ಎಲ್ಲಾ ಬಂದ್ ಆತು. `ನೋಡ್ರಿ ಅವಂದು ಸಾಲಿ ಎಲ್ಲಾ ಹಾಳಾತು' ಅಂತ ನಮ್ಮಪ್ಪಾ ಅಂದಾಗ, `ಅಂವ ಪ್ರತಿಭಾವಂತ ಇದ್ದಾನಾ. ಆರ್ಟಿಸ್ಟ್ ಆಗ್ತಾನಾ' ಅಂತ ಮಾಸ್ತರ‌್ರು ಭರವಸೆ ಕೊಟ್ರು. ಆಮೇಲೆ ಬ್ರಾಹ್ಮಣ ಸಭಾದಾಗ ನಂದೊಂದು ಏಕ ವ್ಯಕ್ತಿ ಕಾರ್ಯಕ್ರಮ ಇಟ್ರು. ಅ್ಲ್ಲಲಿಂದ ಒಂದಾದ್ ಮೇಲೊಂದ್ ಕಾರ್ಯಕ್ರಮ ಆಗಾಕ್ ಹತ್ತಿದ್ವು. ಹಂಗಾಗಿ ಸಾಲೀನ ಬಿಟ್ಟೆ. ಆಗ ಎಲ್ಲಾರೂ, `ಆತು ಬಿಡು ಇಂವಾ ಉಡಾಳ ಆದ' ಅಂದ್ರು.ವಸಂತ ಮೂರ್ತಿ ಅಂತಿದ್ದವ್ರ `ಉಡಾಳ ಮೂರ್ತಿ' ಅಂತ ಕರಿಯಾಕತ್ರು. ಹೀಂಗ ನಡೆದಾಗ, ನಮ್ ತಂದೆ ಹುಷಾರ್ ತಪ್ಪಿ ತೀರ‌್ಕೊಂಡ್ರು. ಮುಂದ ನಮ್ಮ ತಾಯಿ ಗದಗಿಗೆ ಕರ‌್ಕೊಂಡ್ ಹೋಗಿ, ಸ್ಕೂಲೀಗೆ ಹೆಸ್ರು ಹಚ್ಚಿಸಿದ್ರು. ನನ್ ಸ್ವಾದರ ಮಾವ `ಇಂವಾ ಸಂಗೀತಕ್ಕ ಬಿದ್ರ ಹಾಳಾಗ್ ಹೋಗ್ತಾನಾ' ಅಂತ ಬೈಯಾಕತ್ತಿದ್ರು. ನಮ್ ತಾಯಿ ಬ್ಯಾಸ್ರಾ ಮಾಡ್ಕೊಂಡು ಊರ ಬಿಟ್ಟು ಧಾರವಾಡಕ್ಕ ಬಂದ್ರು. ಧಾರವಾಡಂದ್ರ ಕಲಾವಿದರಿಗೆ ಹೇಳಿ ಮಾಡಿಸಿದ ಜಾಗ. ಅಲ್ಲಿ ನನ್ನ ಸಾಲಿ ಸಂಗೀತ ಎರಡೂ ನಡೀತು. ಏನೇನೋ ಮಾಡಿ ಕೊನೆಗೂ ಎಸ್‌ಎಸ್‌ಎಲ್‌ಸಿ ಪಾಸಾದೆ. ಆಮೇಲೆ ಕಾಲೇಜಿಗೆ ಹೋಗ್ಬೇಕಲ್ಲ. ಅಲ್ಲಿ ವಿ.ಕೆ. ಗೋಕಾಕ್ ಪ್ರಿನ್ಸಿಪಾಲರಾಗಿದ್ರು. ನಂಗ ಕಾಲೇಜಿನ್ ಮ್ಯಾಲೆ ಮನಸ್ಸ ಇದ್ದಿರ‌್ಲಿಲ್ಲಾ. ಆದ್ರೂ ಅವರ ಒತ್ತಾಯಕ್ಕಷ್ಟ ಮುಂದುವರ‌್ಸಿದೆ. ಮುಂದ ಕಾಲೇಜಿನ್ಯಾಗಿದ್ದ ಯುವ ಉತ್ಸವದ ಸಲುವಾಗಿ ದಿಲ್ಲಿಗೆ ಕರ‌್ಕೊಂಡ್ ಹೋಗ್ತಾರಂತ ಅಷ್ಟ ಕಾಲೇಜಿಗೆ ಹೊಂಟೆ. ದಿಲ್ಯಾಗೆಲ್ಲಾ ಬಾರ್ಸಿ ಗೆದ್ದು ಬಂದ್ ಮ್ಯಾಲೆ ಮತ್ತ ಕಾಲೇಜಿನ ಕಡೆ ಮುಖಾ ಹಾಕ್ಲಿಲ್ಲಾ.ಮುಂದಿಂದೇನಪಾ ಅಂತ ನಮ್ ತಾಯಿ ಕೇಳ್ದಾಗ `ಟ್ಯೂಷನ್ ಮಾಡಿ ನಿನ್ನ ಹೊಟ್ಟಿ ತುಂಬುಸ್ತೇನಿ' ಅಂತಂದು ಟ್ಯೂಷನ್ ಮಾಡಾಕತ್ತೆ. ಅದ್ರಿಂದ ರೊಕ್ಕಾ ಬರಾಕತ್ವು. ಆಮ್ಯಾಲ ಸಂಗೀತ ಸಂಯೋಜನೆ ಮಾಡ್ಬೇಕಂತ ಮನ್ಸಾತು. ಒಂದ್ ರಾತ್ರಿ ನಮ್ ತಾಯಿದು ಟ್ರಂಕ್ ಮುರ‌್ದು, ರೊಕ್ಕಾ ತುಡುಗ ಮಾಡ್ಕೊಂಡ್ ಬಾಂಬೇಕ ಓಡಿಹೋದೆ. ಅಲ್ಲಿ ಅಂದ್ಕೊಡಿದ್ದಂಗ ಅವಕಾಶನೂ ಸಿಕ್ವು. ಉಡಾಳನಂಗ ತಿರ‌್ಗೋಕೂ ಆತು. ಅಲ್ಲಿಂದ ಒಳ್ಳೆ ರೊಕ್ಕಾ ಸಿಗ್ಲಿಕತ್ವು. ಮೂರು ವರ್ಷ ಆದ್ಮೇಲ ಧಾರವಾಡಕ್ಕ ವಾಪಸ್ ಬಂದೆ. ತುಡುಗ ಮಾಡಿದ್ ರೊಕ್ಕಾ, ಮ್ಯೋಲ ಇನ್ನೊಂದಷ್ಟ್ ರೊಕ್ಕಾ ಸೇರ‌್ಸಿ ತಾಯಿಗೆ ಕೊಟ್ಟೆ. ಆಗವ್ರ, `ನಿಂಗ ಬಾಂಬೆ ಬೇಕಂದ್ರ ನನ್ನ ಬಿಟ್ ಹೋಗ್ಬಿಡು. ಇಲ್ಲಾಂದ್ರ ಮನ್ಯಾಗ ಇದ್ದು ಏನಾರ ಮಾಡು' ಅಂದ್ರು. ಅಲ್ಲೇ ಕುಂತೆ.ಬಾಂಬೆದಾಗ ಸುನಂದಾ ಸಿರಾಳ ಅನ್ನುವಕಿಗೆ ಸಂಗೀತ ಕಲ್ಸಿಸ್ತಿದೆ. ಅಕಿ ತನಗ ಗೊತ್ತಿದ್ದವ್ರ ಕಡೆ ಕರ‌್ಕೊಂಡ್ ಹೋಗಿ `ಭಾಳ ಪ್ರತಿಭಾವಂತ ಅದಾರ ಇವ್ರ. ಶಾಸ್ತ್ರೀಯ ಸಂಗೀತ ಕಲಾವಿದರು. ಸೋಲೋ ಹಾರ್ಮೋನಿಯಂ ಬಾರಿಸ್ತಾರಾ' ಅಂದಾಗ ಅಂವ ನನ್ನ ಪರೀಕ್ಷೆ ಮಾಡಿ ರವಿ ಅನ್ನೋ ಸಂಗೀತ ನಿರ್ದೇಶಕರ ಕಡೆ ಕರ‌್ಕೊಂಡ್ ಹೋದ್ರು. ಅಲ್ಲಿ ಸಂಗೀತ ಸಂಯೋಜನೆ ಮಾಡೂದು ಸುರು ಆತು. ನಂತ್ರ ಸಿ. ರಾಮಚಂದ್ರ ಅನ್ನೋ ಸಂಗೀತ ನಿರ್ದೇಶಕರು ಪರಿಚಯ ಆದ್ರು. ಅವ್ರ ಹತ್ರ ಕೆಲ್ಸಾ ಮಾಡಿದೆ. ಮುಂದಿನ ಸಿನಿಮಾನ ನನಗ ಕೊಡಬೇಕಂತ ನಿರ್ಧಾರಾ ಮಾಡಿ, `ತರಾಸು ಅವ್ರ ಸಿನಿಮಾನೂ ಕೊಡಿಸ್ತೀವಿ' ಅಂದಿದ್ರು. ಅಷ್ಟರೊಳಗ ನಮ್ಮ ತಾಯಿ ನನ್ನ ಕರ‌್ಸೊಂಡಿದ್ರಿಂದ ಅಲ್ಲೇ ಉಳೀಬೇಕಾತು. ಆಮ್ಯಾಲ ಉದ್ಯೋಗ ಇಲ್ದಾಂಗಾಗಿ ರೊಕ್ಕದ ಸಲ್ವಾಗಿ ಯಾವುದ್ಯಾವ್ದೋ ಕೆಲ್ಸ ಮಾಡಿದೆ.ಹೀಗೆ ಕೆಲ್ಸದ್ ಮ್ಯಾಲೆ ದಾಂಡೇಲಿಗೆ ಕಳಿಸಿದ್ರು. ಅಲ್ಲಿ ಹನ್ನೆರಡು ವರ್ಷ ಕೆಲ್ಸ ಮಾಡಿದೆ. ಅಷ್ಟೊತ್ತಿಗೆ ಜವಾಬ್ದಾರಿಗಳೂ ಬೆಳದಿದ್ದ ನನ್ನ ಹಿಂಗ ಬಿಟ್ರ ಕೆಟ್ಟ್ ಹೋಗ್ತಾನಿವಾ ಅಂತ ಇಕಿನ್ನ (ಪತ್ನಿ ಬನಶಂಕರಿ) ಗಂಟ್ ಹಾಕ್ಬಿಟ್ರು. ಜೊತೀಗೆ ಕಾರ್ಯಕ್ರಮ ಅಂತ ತಿರುಗೋ ಹೊತ್ತಿಗೆ ಸಂಗೀತಗಾರ ಅಂತ ಗುರುತಿಸಾಕತ್ರು. ಆಮೇಲೆ ಸಂಗೀತ ಸಂಯೋಜನೆಯ ಆಡಿಷನ್‌ನಲ್ಲಿ ಭಾಗವಹಿಸಿ, ಏಕ್‌ದಮ್ `ಎ' ಶ್ರೇಣಿಯಲ್ಲಿ ಪಾಸಾದೆ. ಹಾಗಾಗಿ ಸಂಗೀತ ಸಂಯೋಜಕ ಆದೆ. ಅಲ್ಲೇ, ನಿಲಯದ ಕಲಾವಿದರಾಗಿ ನನ್ನ ಕರದ್ರು. ಅಲ್ಲಿಂದ ಎಲ್ಲೂ ನಿಂತಿದ್ದೇ ಇಲ್ಲ.

ನೀವು ಕಂಡ ಶ್ರೇಷ್ಠ ಸಂಗೀತಗಾರ?

ಪಂ. ಭೀಮಸೇನ ಜೋಶಿ. ದೇವ್ರಂಥಾ ಮನುಷ್ಯ. ಎಲ್ಲಾ ಸಂಗೀತಗಾರರಿಗೂ ಸ್ಫೂರ್ತಿ. ನಾನೂ ಮೂರ‌್ನಾಕ್ ವರ್ಷ ಅವ್ರ ಕಡೆ ಇದ್ದಾಂವ. ಅವ್ರ ನನ್ನ ಸದಾ ಅವ್ರ ಜೊತೆ ಇರ್ಬೇಕು ಅಂತ ಬಯಸೋರು. ಆದ್ರೆ ಆದ್ನ ಮುಂದ್‌ವರ್ಸೋಕ್ ಆಗ್ಲಿಲ್ಲಾ.

ಸಮಾಜಕ್ಕೆ ಸಂಗೀತ ಎಷ್ಟು ಅವಶ್ಯಕ?

ಮನುಷ್ಯಾನ ಜೀವ್ನಕ್ಕೊಂದು ರೂಪ ಕೊಡೊ ದೊಡ್ಡ ಪಾತ್ರ ಸಂಗೀತದ್ದು. ಸಂಗೀತ ಇಲ್ಲಾಂದ್ರ ಎಲ್ಲಾ ಅಪೂರ್ಣ. ಸಂಗೀತ ಇಲ್ಲದ ಸಮಾಜ ಇಲ್ಲ. ಅದ್ರಾಗ ಕಟ್ಟುವಿಕೆ ಅಂಶ ಅದ. ಕ್ರಿಯಾಶೀಲತೆ ಅದ. ಕಲಾವಿದ್ರಾದ ನಾವು ಮಂದಿಗೆ ಸಂತೋಷ ಕೊಡ್ತೀವಿ.

ಯುವ ಸಂಗೀತಗಾರರ ಬಗ್ಗೆ ನಿಮ್ಮ ಅಭಿಪ್ರಾಯ...

ಆವಾಗಿನ ಸಂಗೀತಗಾರರು ಸಂಗೀತದ ಸಲ್ವಾಗೇ ಜೀವ್ನಾ ಮಾಡ್ತಿದ್ರು. ಅದರ ಸಲ್ವಾಗೇ ಬದ್ಕ್‌ತಿದ್ರು. ಈಗಿನ ಜನಾ ಸಂಗೀತದ ಸಲ್ವಾಗಿ ಬದುಕೂದಿಲ್ಲಾ. ಸಂಗೀತಾ ಬ್ಯಾಡಾ ಇವ್ರಿಗೆ. ಬಾಕಿ ಚಟುವಟಿಕೆಗಳ ಬೇಕು.

ನೀವು, ಧಾರವಾಡ ಮತ್ತು ಸಂಗೀತ. ಈ ನಂಟಿನ ಬಗ್ಗೆ ಹೇಳಿ...

ಸಂಗೀತದ ಕಾರ್ಯಕ್ರಮಗಳ ಬಿಟ್ಟು ಬೇರೆ ರೀತಿಯಾದಂಥ ತೃಪ್ತಿ ನಂಗ ಧಾರವಾಡದಾಗ ಅದ. ಅದೊಂದು ಸಂಗೀತದ ತಪಸ್ಸಾಶ್ರಮ ಇದ್ಹಾಂಗ . ಅಲ್ಲಿದ್ದಾಂಗ ಬಾಕಿ ಕಡೆ ಇದ್ಕ ಮನ್ನಣೆ ಸಿಗಾಂಗಿಲ್ಲ. ಅಲ್ಲಿ ಕೂತ್ರು ಸಂಗೀತ ನಿಂತ್ರೂ ಸಂಗೀತ. ಪುಣ್ಯಾಕ ಇದೊಂದ್ ಸಲಾ ಈ ಮನುಷ್ಯಾನ ಜೀವನ ಸಿಕ್ಕದ. ಮುಂದಿಂದ್ರಾಗ ಸಂಗೀತ ಸಿಗ್ತದೋ ಇಲ್ಲೋ ಅನ್ನೋ ಹಪಹಪಿ ನಂಗ ಈಗ ಶುರುವಾಗದ.

 

ಹಿಂದೂಸ್ತಾನಿ ಸಂಗೀತದಲ್ಲಿ ಹಾರ್ಮೋನಿಯಂ ಬಳಕೆಯ ಕುರಿತು ಇರುವ ಅಪಸ್ವರಗಳ ಬಗ್ಗೆ ಏನಂತೀರಿ?


ಸಂಪೂರ್ಣ ಗೊತ್ತಿಲ್ಲದೋರು ಹಂಗ ಹೇಳೂದು. ಅದ್ರಾಗ ಶ್ರುತಿ ಹೊಂಡಂಗಿಲ್ಲಾ, ಮೀಂಡ್ ಇಲ್ಲ, ಕಂಟಿನಿಟಿ ಇರಾಂಗಿಲ್ಲಾ ಅಂತಾರ. ಹಾರ್ಮೋನಿಯಂನಾಗ ನಾ ಆ ನಿರಂತರತೆಯನ್ನ, ತಂತಿ ವಾದ್ಯದಾಗ ತಗ್ಯೋ ಮೀಂಡ್‌ನ ಸಿತಾರ್, ವಯೋಲಿನ್ ಕೆಲ್ಸಾ ತಗೀತೀನಿ. ಇವೆಲ್ಲಾ ನುಡ್ಸೋ ಕಲಾವಿದನ ಕೌಶಲದಾಗ ಇರ‌್ತದ. ವಾದ್ಯ ಮುಖ್ಯ ಅಲ್ಲಾ. ಕಲಾ ಮುಖ್ಯ.

ಇಷ್ಟು ದೀರ್ಘ ಕಾಲದ ಸಂಗೀತದೊಂದಿಗಿನ ಒಡನಾಟ ಹೇಗನ್ನಿಸುತ್ತದೆ?

ತೃಪ್ತಿ ಸಿಕ್ಕದಾ ನಂಗ. ಸಂಗೀತದಿಂದ ಸಾವ್ರಾರ್ ಮಂದಿನ ಹಿಡದಿಟ್ಟೇನಿ. ಸಾವ್ರಾರ್ ಮಂದಿ ಭಾವನೆಗಳಿಗೆ ನಾ ಸ್ಪಂದಿಸೇನಿ. ಹಂಗ ಮಂದೀನೂ ನಮ್ಗ ಸ್ಪಂದಿಸ್ಯಾರ. ಬಾರಿಸ್ಕೋತ ಕೂತನಂದ್ರ ಕೇಳೋ ಜನದಾಗ ಒಂದಾಗಿ ಹೋಗ್ತೀನಿ ನಾನು. ಮತ್ತೇನು ಬೇಕು ಇದ್ಕಿಂತ. ಸಂಗೀತ ನನ್ನನ್ನ ತಂದಿರೊ ಎತ್ತರಾ ಅದ ಅಲ್ಲಾ, ಅದ್ನ ನಾ ಮರೆಯಾಕಾಗಂಗಿಲ್ಲ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry