ಬುಧವಾರ, ಜೂಲೈ 8, 2020
29 °C

ಹಾರ್ಮೋನಿಯಂ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರ್ಮೋನಿಯಂ ಹಬ್ಬ

ಇಂದು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹಾರ್ಮೋನಿಯಂ ಸುಪರಿಚಿತ ವಾದ್ಯವೇ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಂತೂ ಅದು ಅವಶ್ಯಕ ಪಕ್ಕವಾದ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾರ್ಮೋನಿಯಂವನ್ನು ತನಿಯಾಗಿ ನುಡಿಸಬಲ್ಲ ಕೆಲ ಕಲಾವಿದರು ಇದ್ದರು ಹಾಗೂ ಈಗಲೂ ಇದ್ದಾರೆ.ಸುಗಮ ಸಂಗೀತದಲ್ಲಿ ಈಚೆಗೆ ಕೀಬೋರ್ಡ್ ಬರುವವರೆಗೂ ಹಾರ್ಮೋನಿಯಂ ವಾದ್ಯವೇ ಜನಪ್ರಿಯ ಪಕ್ಕವಾದ್ಯವಾಗಿತ್ತು. ನಾಟಕ- ರಂಗ ಸಂಗೀತದಲ್ಲಿ ಹಾರ್ಮೋನಿಯಂ ಇದ್ದರೇ ಒಂದು ಸೊಗಸು.ಅರುಣಾಚಲಪ್ಪ, ಎಚ್. ಭೀಮರಾವ್, ಪಲ್ಲಡಂ ವೆಂಕಟರಮಣರಾವ್, ಶೇಷಗಿರಿರಾವ್, ವಿಠಲರಾವ್ ಕೋರೆಗಾಂವಕರ್, ಶೇಷಾದ್ರಿ ಗವಾಯಿ, ವಸಂತ ಕನಕಾಪುರ, ಆರ್. ಪರಮಶಿವನ್ ಮುಂತಾದವರು ಹಾರ್ಮೋನಿಯಂ ವಾದ್ಯಕ್ಕೆ ಒಂದು ಗೌರವಾನ್ವಿತ ಸ್ಥಾನ ದೊರಕಿಸಿಕೊಟ್ಟವರಲ್ಲಿ ಕೆಲವರು.ಇಂಥ ಜನಪ್ರಿಯ ವಾದ್ಯ ಹಾರ್ಮೋನಿಯಂನ ಭಿನ್ನ ಸಾಧ್ಯತೆಗಳನ್ನು ಹೊರಚೆಲ್ಲಲೋಸುಗ ಪ್ರತಿವರ್ಷ  ಹಾರ್ಮೋನಿಯಂ ಹಬ್ಬವನ್ನು ಡಾ. ರವೀಂದ್ರ ಕಾಟೋಟಿ ಅವರ ಮುಂದಾಳತ್ವದಲ್ಲಿ ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್  ಆಚರಿಸುತ್ತಿದೆ. ಈ ವರ್ಷದ ಉತ್ಸವದಲ್ಲಿ ತನಿ ಹಾರ್ಮೋನಿಯಂ ಅಲ್ಲದೆ, ಜುಗಲ್‌ಬಂದಿ ವಾದನವನ್ನೂ ಏರ್ಪಡಿಸಲಾಗಿತ್ತು.ನಾಂದಿ ಹಾಕಿದ ಯುವಕ ದೀಪಕ್ ಮರಾಠೆ, ಹಿರಿಯರಾದ ಬಿಜಾಪುರೆ ಅವರ ಶಿಷ್ಯ. ಮಿಯಾಕಿ ತೋಡಿಯನ್ನು ತೆಗೆದುಕೊಂಡು ವಿಸ್ತರಿಸಿ, ತನ್ನ ಉತ್ತಮ ಸಾಧನೆಯನ್ನು ಮೆರೆದರು. ಮುಂದಿನದು ಲಲಿತವಾಗಿ ಮೂಡಿತು. ಅವರಿಗೆ ವಿನಾಯಕ ನಾಯಕ್ ತಬಲಾ ಸಾಥ್ ನೀಡಿದರು.ನಂತರ ತನಿ ಹಾರ್ಮೋನಿಯಂ ನುಡಿಸಿದ ವ್ಯಾಸಮೂರ್ತಿ ಕಟ್ಟಿ ಇಂದು ಬಹು ಬೇಡಿಕೆಯುಳ್ಳ ಪಕ್ಕವಾದ್ಯಗಾರರು. ಚಾರುಕೇಶಿ ರಾಗವನ್ನು ವಿಳಂಬಿತ್ (ತಿಲವಾಡ ತಾಳ) ಹಾಗೂ ದ್ರುತ್ (ತೀನ್‌ತಾಳ್) ಗಳಲ್ಲಿ ಆಹ್ಲಾದಕರವಾಗಿ ಅರಳಿಸಿದರು.ಹಿತಮಿತವಾದ ವಾದನ. ಸುನಾದದ ಅಲೆ ಪಸರಿಸುತ್ತಾ ಕಮಚ್‌ನಲ್ಲಿ ಒಂದು ಡಾಗ್ರವನ್ನೂ ಪ್ರಸ್ತುತ ಪಡಿಸಿದರು. ತಬಲದಲ್ಲಿ ಉದಯರಾಜ ಕರ್ಪೂರ ನೆರವಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.