ಹಾರ‌್ಮೋನಿಯಂ ಸಿರಿ ವಜ್ರಪ್ಪ

7

ಹಾರ‌್ಮೋನಿಯಂ ಸಿರಿ ವಜ್ರಪ್ಪ

Published:
Updated:
ಹಾರ‌್ಮೋನಿಯಂ ಸಿರಿ ವಜ್ರಪ್ಪ

`ಪುರುಷ ಪಾತ್ರಧಾರಿಗೆ ಕಪ್ಪು 2ರಲ್ಲಿ ಶ್ರುತಿ ಹಿಡಿದರೆ, ತುಸು ತಾರಕ ಸ್ವರದಲ್ಲಿರುವ ಮಹಿಳಾ ಪಾತ್ರಧಾರಿಗೆ ಕಪ್ಪು 5ರ ಶ್ರುತಿ ಹಿಡಿಯಬೇಕು. ಹಾಡಿನ ಸಾಹಿತ್ಯವನ್ನು ನುಡಿದ ನಂತರ ಗ್ಯಾಪ್ ಇರುತ್ತದೆ. ಆಗ ಬ್ಯಾಲೆನ್ಸ್ ಮಾಡಬೇಕು. ಭಿನ್ನ ಸ್ವರದವರಿಗೆ ಹೊಂದಾಣಿಕೆ ಮಾಡುವುದು ಹಾರ‌್ಮೋನಿಯಂ ಮಾಸ್ತರ್ ಕೈಯಲ್ಲಿದೆ...`ಪಾತ್ರಧಾರಿಗಳಿಗೆ ಅವರವರ ಧ್ವನಿಯ ಸಾಮರ್ಥ್ಯಕ್ಕನುಗುಣವಾಗಿ ವಾದ್ಯ ಸಂಗೀತದ ಸಾಥ್ ನೀಡಬೇಕು. ಹವ್ಯಾಸಕ್ಕಾಗಿ ನಾಟಕದಲ್ಲಿ ಪಾತ್ರ ಮಾಡುವ ಪಾತ್ರಧಾರಿಗೆ ಹೀಗೇ ಮಾಡಬೇಕು ಎಂದು ಷರತ್ತು ವಿಧಿಸಿದರೆ ಪ್ರಯೋಜನವಿಲ್ಲ. ನಾವು ಹೇಳಿದ ಹಾಗೆ ಹಾಡಲು ಸಾಧ್ಯವಿಲ್ಲ ಎಂದು ಹವ್ಯಾಸಿ ಕಲಾವಿದನಿಗೆ ಅನಿಸಿಬಿಟ್ಟರೆ ಮತ್ತೊಮ್ಮೆ ನಾಟಕದ ಬಳಿ ಸುಳಿಯದೆ ಓಡಿ ಹೋಗಿಬಿಡುತ್ತಾನೆ...`ರಂಗ ಸಂಗೀತಕ್ಕೆ ಬೇಕಾದಷ್ಟು ಶಾಸ್ತ್ರೀಯ ಹಿನ್ನೆಲೆ ಇಟ್ಟುಕೊಂಡೇ ನಾಟಕ ಕಳೆಗಟ್ಟಿಸಲು ಸಾಧ್ಯ~.ಹಾರ‌್ಮೋನಿಯಂ ಮಾಸ್ತರಿಕೆಗೆ `ಸ್ಟಾರ್ ವ್ಯಾಲ್ಯೂ~ ತಂದು ಕೊಟ್ಟ ಬೆಂಗಳೂರಿನ ಅತ್ಯಂತ `ಬ್ಯುಸಿ~ ಪೌರಾಣಿಕ ನಾಟಕಗಳ ಮಾಸ್ತರ್ ಪಿ. ವಜ್ರಪ್ಪ ಅವರ ಖಚಿತ ಅಭಿಪ್ರಾಯ ಇದು.`ನಾನೂ ನಾಟಕದಲ್ಲಿ ಅಭಿನಯಿಸಬೇಕು ಎಂಬ ಉಮೇದಿನಿಂದ ಮುಂದೆ ಬರುವ ವ್ಯಕ್ತಿ ಹೇಳಿ ಕೇಳಿ ವೃತ್ತಿ ಕಲಾವಿದ ಅಲ್ಲ. ಅಭಿನಯ ಅವನಿಗೆ ಒಂದು ಹವ್ಯಾಸ. ತನಗೆ ತೋಚಿದಷ್ಟು ಹಾಡುಬಲ್ಲವ ಆಗಿರುತ್ತಾನೆ. ಅವನ ಸಹಜ ಹಾಡುಗಾರಿಕೆಗೆ ತಕ್ಕಮಟ್ಟಿಗೆ ಶ್ರುತಿ, ಲಯ ಹೊಂದಿಸಿ ನಾವು ಹೇಳಿಕೊಟ್ಟರೆ ಮತ್ತಷ್ಟು ಚೆನ್ನಾಗಿ ಹಾಡಬಲ್ಲ.

 

ಸ್ವಲ್ಪ ಚೆನ್ನಾಗಿ ಹಾಡಿದರೂ ನಾವು ಅವನ ಬೆನ್ನು ತಟ್ಟಬೇಕು. ಆಗವನು ಹುರುಪಿನಿಂದ ನಾಟಕದಲ್ಲಿ ಭಾಗವಹಿಸುತ್ತಾನೆ. ಇತರರಿಗೂ ಪ್ರೇರೇಪಿಸುತ್ತಾನೆ. ಮತ್ತೆ ಮತ್ತೆ ನಾಟಕ ಮಾಡಿಸಲು ಮುಂದೆ ಬರುತ್ತಾನೆ. ಒಂದಿದ್ದುದು ಹತ್ತಾಗುತ್ತದೆ, ನೂರಾಗುತ್ತದೆ. ಕಲೆ ಬೆಳೆಯಲು ಅವಕಾಶವಾಗುತ್ತದೆ~.ಪೌರಾಣಿಕ ನಾಟಕ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಲು ವಜ್ರಪ್ಪನಂತಹವರ ಇಂತಹ ಸಕಾರಾತ್ಮಕ ಧೋರಣೆಯೇ ಕಾರಣ. ಉದ್ಯಾನಗಳ ನಗರಿ, ಐಟಿ ನಗರ ಎಂದೆಲ್ಲಾ ವಿಶ್ವ ಖ್ಯಾತಿ ಪಡೆದ ಬೆಂಗಳೂರು ನಗರದ ಬಗ್ಗೆ ಅಷ್ಟಾಗಿ ಪ್ರಚಾರಕ್ಕೆ ಬರದ ಸಂಗತಿಯೊಂದಿದೆ. ರಾಜ್ಯದಲ್ಲೇ ಅತಿ ಹೆಚ್ಚು ಪೌರಾಣಿಕ ನಾಟಕಗಳ ಪ್ರದರ್ಶನ ಕಾಣುವುದು ಇಲ್ಲೇ.ಕಾಸ್ಮೋಪಾಲಿಟನ್ ಸಿಟಿಯೊಂದು ಇಷ್ಟೊಂದು ಪ್ರಮಾಣದಲ್ಲಿ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವುದಕ್ಕೆ ಕರ್ನಾಟಕ ಅಷ್ಟೇ ಅಲ್ಲ, ಭಾರತದಲ್ಲಿಯೇ ಮತ್ತೊಂದು ಉದಾಹರಣೆ ಸಿಗುವುದು ದುರ್ಲಭ. ಪೌರಾಣಿಕ ನಾಟಕಗಳ ಈ ಹೆಗ್ಗಳಿಕೆಗೆ ವಜ್ರಪ್ಪನವರ ಕೊಡುಗೆಯೂ ಕಡಿಮೆಯಿಲ್ಲ.ಬೆಂಗಳೂರಿನ ಪಾರಿಜಾತಪ್ಪ - ನಾರಾಣಮ್ಮ ದಂಪತಿಗೆ 72 ವರ್ಷಗಳ ಹಿಂದೆ ಜನಿಸಿದ ವಜ್ರಪ್ಪ 1953ರಲ್ಲಿ ಕೊಟ್ಟೂರಪ್ಪನವರ ಚಾಮುಂಡೇಶ್ವರಿ ನಾಟಕ ಕಂಪನಿಯನ್ನು ಬಾಲನಟನಾಗಿ ಸೇರಿದರು. ಆ ಕಂಪನಿಯ ಸಂಗೀತ ನಿರ್ದೇಶಕರಾಗಿದ್ದ ಅಚ್ಚಲು ಚಿಕ್ಕವೀರಪ್ಪನವರ ಶಿಷ್ಯನಾಗಿ 1953ರಿಂದ 1960ರವರೆಗೆ ಹಾರ‌್ಮೋನಿಯಂ ಒಲಿಸಿಕೊಂಡರು.ಶಾಲಾ ಶಿಕ್ಷಣದಲ್ಲಿ ಅಮರಕೋಶ ಓದಿದ್ದು, ಮಹಾಭಾರತ, ರಾಮಾಯಣಗಳ ಪರಿಚಯ ಮಾಡಿಕೊಂಡಿದ್ದು ಸಾಹಿತ್ಯದ ಸಿಂಚನ ಮಾಡಿಸಿತು. ಈ ಮಧ್ಯೆ `ಚಂದ್ರಮೌಳೇಶ್ವರ ನಾಟ್ಯ ಸಂಘ~ಎಂಬ ತೆಲುಗು ಕಂಪನಿ ಸೇರಿ ಕಂದ, ಸೀಸ ಪದ್ಯಗಳ ಪರಿಚಯ ಮಾಡಿಕೊಂಡರು. ವಜ್ರಪ್ಪನವರ ಹಾರ‌್ಮೋನಿಯಂ ಪರಿಣತಿ ಗಮನಿಸಿದ ಕಣಗಾಲ್ ಪ್ರಭಾಕರಶಾಸ್ತ್ರಿ ತಮ್ಮ `ಪಂಪಾ ಥಿಯೇಟರ್ಸ್‌~ನ `ಪ್ರಚಂಡ ರಾವಣ~ಕ್ಕೆ ಸಂಗೀತ ಸಂಯೋಜನೆಗೆ ಆಹ್ವಾನಿಸಿದರು. ಚಿತ್ರನಟ ವಜ್ರಮುನಿ ಅವರನ್ನು ಮನೆ ಮಾತಾಗಿಸಿದ್ದು ಇದೇ ನಾಟಕದ ರಾವಣನ ಪಾತ್ರ.`ಪ್ರಚಂಡ ರಾವಣ~ದ ಯಶಸ್ಸಿನ ಎತ್ತರ ತನ್ನೊಂದಿಗೆ ವಜ್ರಪ್ಪನವರನ್ನೂ ಜತೆಗೆ ಎತ್ತಿಕೊಂಡು ನಾಟಕ ಕ್ಷೇತ್ರದ ಮತ್ತೊಬ್ಬ ತಾರೆಯನ್ನು ಪ್ರತಿಷ್ಠಾಪಿಸಿತು.ಬೆಂಗಳೂರು ನಗರದ ಹವ್ಯಾಸಿ ತಂಡಗಳಿಗೆ ಮತ್ತೊಬ್ಬ ನಿರ್ದೇಶಕ ದೊರೆತದ್ದು, ಆತ ಬಿಡುವಿಲ್ಲದೆ ಸ್ಟಾರ್ ಆಗಿದ್ದು ಈ ಹಂತದಿಂದ. ಅದುವರೆಗೂ ಹಲವು ನಿರ್ದೇಶಕರು ಆಗಿ ಹೋಗಿದ್ದರು.

 

ವಜ್ರಪ್ಪನವರಿಗಿಂತ ಪಂಡಿತರೂ ಇದ್ದರು. ಕಲಾವಿದರ ಮಟ್ಟಿಗೆ ಅವರು ಹೊಂದಿಕೊಳ್ಳದೆಯೋ, ಸಂಗೀತ ಮಾಸ್ತರ್ ಮಟ್ಟಕ್ಕೆ ನಟರು ಏರದ ಕಾರಣಕ್ಕೋ ಅವರು ವಜ್ರಪ್ಪನವರಷ್ಟು ಪ್ರಸಿದ್ಧಿ ಹೊಂದಲಿಲ್ಲ.ಬಿ.ಪುಟ್ಟಸ್ವಾಮಯ್ಯನವರ `ಕುರುಕ್ಷೇತ್ರ~, ಕಣಗಾಲರ `ಪ್ರಚಂಡ ರಾವಣ~, ಕೊಟ್ಟೂರಪ್ಪನವರ `ದಾನಶೂರ ಕರ್ಣ~, ಬೆಳ್ಳಾವೆಯವರ `ರಾಮಾಯಣ~ ಮುಂತಾದ ನಾಟಕಗಳು ವಜ್ರಪ್ಪನವರ ನಿರ್ದೇಶನದಲ್ಲಿ ಸುಲಿದ ಬಾಳೆಯ ತೆರದಿ ಪ್ರಯೋಗದ ಸಾಲುಗಟ್ಟಿದವು.ಗ್ರಾಮಾಂತರ ಪ್ರದೇಶವಾದರೆ ಅಲ್ಲಿ ತಿಂಗಳಾನುಗಟ್ಟಲೆ ಮಾಸ್ತರ್ ತಳ ಊರಿ ಪೌರಾಣಿಕ ನಾಟಕಗಳನ್ನು ಕಲಿಸಬೇಕು. ಆದರೆ ವಜ್ರಪ್ಪ ನೆಲೆ ನಿಂತದ್ದು ಮೆಟ್ರೋ ನಗರದಲ್ಲಿ, ಶಿಕ್ಷಿತರಿಂದ ಕೂಡಿದ ಇಲ್ಲಿನ ಕೆಲವು ಹವ್ಯಾಸಿ ತಂಡಗಳ ಕಲಾವಿದರು ಸಂಭಾಷಣೆ, ಅಭಿನಯವನ್ನು ತಾವೇ ರೂಢಿಸಿಕೊಂಡು ಸಂಗೀತಕ್ಕೆ ಮಾತ್ರ ವಜ್ರಪ್ಪನವರನ್ನು ಕರೆತರುತ್ತಿದ್ದರು.

 

ಹಾಗಂತ ಬೆಂಗಳೂರಿಗೆ ಮಾತ್ರ ವಜ್ರಪ್ಪ ಸೀಮಿತವಾಗಲಿಲ್ಲ. ಸುತ್ತಲಿನ ಜಿಲ್ಲೆಗಳ ಹಲವಾರು ಹಳ್ಳಿಪಟ್ಟಣಗಳಿಗೆ ನಾಟಕ ಕಲಿಸಲು ಹೋದರು. ಎಲ್ಲ ತರಹದ ತಂಡಗಳೂ ಅವರಿಗೆ ಎದುರಾದವು. ವಜ್ರಪ್ಪ ಬಿಡುವಿಲ್ಲದ ಸಂಗೀತ ನಾಟಕ ನಿರ್ದೇಶಕರಾಗಿ ಖ್ಯಾತಿವಂತರಾದಾಗ ಮತ್ತೆ ಹಲವರು ನಾಟಕದ ದಿನ ಸಂಗೀತ ನಿರ್ದೇಶನಕ್ಕೆ ಬರಲಿ ಸಾಕು ಎಂದರು.ವಜ್ರಪ್ಪನವರ ಸಂಗೀತದಲ್ಲಿ ತುಸು ಅಬ್ಬರ ಜಾಸ್ತಿ ಎನ್ನುವವರಿದ್ದಾರೆ. ಆದರೆ ವ್ಯಾಸಿ ಕಲಾವಿದನ ತಪ್ಪುಗಳನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳುವುದು ಅನಿವಾರ್ಯ. ಅದಕ್ಕೆ ಅಬ್ಬರ ಅನಿವಾರ್ಯ. ಕೆಲವು ಸಂಗೀತ ಮಾಸ್ತರುಗಳು ಪಾಂಡಿತ್ಯ ಪ್ರದರ್ಶನಕ್ಕಾಗಿ ಬೇಕೆಂತಲೇ ಅಬ್ಬರ ಮಾಡಿ ಎಡವುತ್ತಾರೆ. ವಜ್ರಪ್ಪ ಅಂತಹವರಲ್ಲ.ವಜ್ರಪ್ಪನವರ ಪತ್ನಿ ಚಂದ್ರಿಕಾ ಪೌರಾಣಿಕ ನಾಟಕಗಳ ಕಲಾವಿದೆ. ವಿನಯ, ನವೀನ್ ಪುತ್ರದ್ವಯರನ್ನು ರಂಗ ಪ್ರವೇಶ ಮಾಡಿಸಿದ್ದಾರೆ. `1972ರಿಂದ 81ವರೆಗೆ ನಾಟಕ ಕಂಪನಿ ಆರಂಭಿಸಿ ಪಡಬಾರದ ಕಷ್ಟ ಪಟ್ಟೆ. ಉಳಿದದ್ದೆಲ್ಲ ಸುಖಾಂತವೇ~ ಎನ್ನುವ ವಜ್ರಪ್ಪ ತಮ್ಮನ್ನು ಸಂಪೂರ್ಣ ವೃತ್ತಿರಂಗಭೂಮಿಗೇ ಸಮರ್ಪಿಸಿಕೊಳ್ಳಲಿಲ್ಲ, ನಿಜ. ಆದರೆ ಪೌರಾಣಿಕ ನಾಟಕಗಳ ಮೂಲಕ ಅವರು ಮುಂದಕ್ಕೆ ಕೊಂಡೊಯ್ದದ್ದು ವೃತ್ತಿರಂಗಭೂಮಿ ಪರಂಪರೆಯನ್ನು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry