ಹಾಲಕ್ಕಿ ಮಹಿಳೆಯರ ‘ತಣ್ಣೀರುಕುಳಿ' ತರಕಾರಿ

7

ಹಾಲಕ್ಕಿ ಮಹಿಳೆಯರ ‘ತಣ್ಣೀರುಕುಳಿ' ತರಕಾರಿ

Published:
Updated:

ಆಗಸ್ಟ್ ತಿಂಗಳಲ್ಲಿ ಮಳೆ ನಿಧಾನವಾಗಿ ಕಡಿಮೆಯಾದಂತೆ ಕುಮಟಾ ಪಟ್ಟಣದಲ್ಲಿ ಸಮೀಪದ ತಣ್ಣೀರುಕುಳಿ ಗ್ರಾಮದ ನಾಟಿ ತಳಿಯ ತಾಜಾ ತರಕಾರಿ ಸುಗ್ಗಿ ಆರಂಭವಾಗುತ್ತದೆ. ಈ ಗ್ರಾಮ ಕುಮಟಾ ಪಟ್ಟಣದಿಂದ ಕೇವಲ ಐದಾರು ಕಿ.ಮೀ. ದೂರದಲ್ಲಿದೆ. ಇಲ್ಲಿನ ತರಕಾರಿ ಪಟ್ಟಣದ ಜನರಿಗೆ ವಿಶೇಷ ಆಕರ್ಷಣೆ.

ತಣ್ಣೀರುಕುಳಿ ತರಕಾರಿ ಕೃಷಿಗೆ ಒಂದು ಪರಂಪರೆ ಇದೆ. ರಾಜ್ಯದ ಉಳಿದ ಭಾಗಗಳಂತೆ ಇಲ್ಲಿ ಯಾವುದೇ ಕೃಷಿಗೆ ಹೆಕ್ಟೇರ್‌ಗಟ್ಟಲೆ ಜಮೀನು ಲಭ್ಯವಿಲ್ಲ.ಮನೆಯ ಸುತ್ತಲಿನ ಹಿತ್ತಲು ಅಥವಾ ಬೇಣದಲ್ಲಿ (ಇಳಿಜಾರು ಖಾಲಿ ಜಾಗ) ಮಳೆಗಾಲದ ತರಕಾರಿ ಬೆಳೆಯಲಾಗುತ್ತದೆ. ಬೇಸಿಗೆಯಲ್ಲಿ ಈ ಗ್ರಾಮದ ಹಾಲಕ್ಕಿ ಸಮಾಜದ ಮಹಿಳೆಯರು ತರಕಾರಿ ಬೀಜ ಸಂಗ್ರಹಿಸಿ ಜೋಪಾನವಾಗಿಟ್ಟುಕೊಳ್ಳುತ್ತಾರೆ. ಮಳೆ ಆರಂಭವಾಗುತ್ತಿದ್ದಂತೆಯೇ ನೆಲ ಅಗೆದು ಓಳಿ ಮಾಡಿ (ಸಾಲು) ಹಸಿರು ಗೊಬ್ಬರ ಇಟ್ಟು ತರಕಾರಿ ಬೀಜ ನೆಡುತ್ತಾರೆ. ಮಳೆ ಜೋರಾದಂತೆ ತರಕಾರಿ ಗಿಡಗಳೂ ಬೆಳೆಯತೊಡಗಿ ಅದಕ್ಕೆ ಮತ್ತೆ ಸಗಣಿ ಗೊಬ್ಬರ ಹಾಕುತ್ತಾರೆ. ಮಳೆ ನಿಧಾನವಾಗಿ ಕಡಿಮೆಯಾದಂತೆ ತರಕಾರಿ ಬಿಡಲಾರಂಭವಾಗುತ್ತದೆ.ಗ್ರಾಮಕ್ಕೆ ವಾಹನ ಸೌಕರ್ಯವಿಲ್ಲದ ಕಾಲದಲ್ಲಿ ಮಹಿಳೆಯರು ನಸುಕಿನಲ್ಲಿ ತೋಟದಿಂದ ತರಕಾರಿ ಕಿತ್ತು ಬುಟ್ಟಿ ತುಂಬಿ ತಲೆಯ ಮೇಲಿಟ್ಟುಕೊಂಡು ಐದಾರು ಮೈಲು ದೂರದ ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಜನ ಹೆಚ್ಚಾಗಿ ಓಡಾಡುವ ಪಟ್ಟಣದ ಬಸ್ ನಿಲ್ದಾಣ, ರೇಲ್ವೆ ಸೇತುವೆ ಕೆಳಭಾಗ, ತಹಶೀಲ್ದಾರ್ ಕಚೇರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿ ಮುಂತಾದ ಜಾಗ ಇರವ ಮಾರಾಟ ಸ್ಥಳ. ರಸ್ತೆ ಬದಿ ತರಕಾರಿ ಓರಣವಾಗಿಟ್ಟು ಮಾರಾಟಕ್ಕೆ ಕುಳಿತುಕೊಳ್ಳುತ್ತಾರೆ. ಆಗಷ್ಟೇ ತೋಟದಿಂದ ಕಿತ್ತು ತಂದ ತಾಜಾ ತರಕಾರಿ ಸೂರ್ಯನ ಬೆಳಕು ಕಾಣುವುದು ಪಟ್ಟಣಕ್ಕೆ ಬಂದ ಮೇಲೆಯೇ. ಓರಣವಾಗಿ ಮಾರಾಟಕ್ಕಿಟ್ಟ ಹೀರೆ, ಬೆಂಡೆ, ಹಾಗಲ, ಸೌತೆ, ಮಗೆ, ಪಡವಲಕಾಯಿ ಹಸಿರಿನಿಂದ ನಳನಳಿಸುವ ತಾಜಾತನದಿಂದಲೇ ಜನರನ್ನು ಸೆಳೆಯುತ್ತವೆ. ಅವುಗಳ ಆಕರ್ಷಣೆಗೊಳಗಾಗುವರು ಮನೆಗೆ ತರಕಾರಿ ಕೊಳ್ಳುವ ಮನಸ್ಸು ಮಾಡುತ್ತಾರೆ.ಮಧ್ಯವರ್ತಿಗಳ ಹಾವಳಿಯಿಲ್ಲ

ತಾವು ಕಷ್ಟಪಟ್ಟು ಬೆಳೆದ ತರಕಾರಿ ನೇರವಾಗಿ ಕೊಳ್ಳುಗರನ್ನೇ ತಲುಪಬೇಕು ಎನ್ನುವುದು ಹಾಲಕ್ಕಿ ಮಹಿಳೆಯರ ಸದುದ್ದೇಶ. ಇವರು ಕಡಿಮೆ ದರಕ್ಕೆ ಮಧ್ಯವರ್ತಿಗಳಿಗೆ ತಮ್ಮ ಉತ್ಪನ್ನ ಮಾರಾಟ ಮಾಡಿ ಮನೆಗೆ ಹೋಗುವುದಿಲ್ಲ. ತಾವು ತಂದ ತರಕಾರಿಯನ್ನು ಸಂಜೆಯಾಗುವವರೆಗೂ ಮಾರಾಟ ಮಾಡುತ್ತಾರೆ. ಇವರ ದೃಷ್ಟಿಯಲ್ಲಿ ಮಧ್ಯವರ್ತಿಗಳೂ ಗ್ರಾಹಕರೇ. ತಮ್ಮಿಂದ ತಾಜಾ ತರಕಾರಿ ಕೊಂಡ ಗ್ರಾಹಕರು ನಾಳೆ ಮತ್ತೆ ತರಕಾರಿ ಕೊಳ್ಳಲು ತಮ್ಮ ಬಳಿ ಬರುತ್ತಾರೆ ಎನ್ನುವುದು ಇವರ ನಿರೀಕ್ಷೆ.ಶ್ರಾವಣ ಮಾಸದಲ್ಲಿ ಜನರು ತಣ್ಣೀರುಕುಳಿ ತರಕಾರಿಗೆ ಕಾದಿರುತ್ತಾರೆ. ಕ್ರಿಮಿನಾಶಕ ಬಳಸದೆ, ಹೆಚ್ಚಾಗಿ ಸಗಣಿ ಗೊಬ್ಬರ ಹಾಕಿ ತರಕಾರಿ ಬೆಳೆಯುವುದು ಈ ಮಹಿಳೆಯರ ಕೃಷಿ ಪದ್ಧತಿಯ ವಿಶೇಷ. ದೂರದ ಊರುಗಳಿಂದ ಬರುವ ತರಕಾರಿಗೆ ಹೋಲಿಸಿದರೆ ತಣ್ಣೀರುಕುಳಿ ತರಕಾರಿ ದರವೂ ಕಡಿಮೆ, ಹೆಚ್ಚು ಆರೋಗ್ಯಕರ. ಎಲ್ಲಕ್ಕಿಂತ ಮಿಗಿಲಾಗಿ ಈ ಅನಕ್ಷರಸ್ಥ ಮಹಿಳೆಯರು ತಮ್ಮ ಮನೆಯ ಖಾಲಿ ಜಾಗ ಬಳಸಿಕೊಂಡು ಬೆಳೆದ ತರಕಾರಿಯನ್ನು ಪಟ್ಟಣದಲ್ಲಿ ತಾವೇ ಮಾರಾಟ ಮಾಡಿ ಆರ್ಥಿಕವಾಗಿ ಸ್ವಾವಲಂಬಿ­ಗಳಾಗುವ ಪರಂಪರೆ ಅತ್ಯಂತ ವಿಶಿಷ್ಟವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry