ಹಾಲಪ್ಪ- ಗ್ರಾ.ಪಂ. ಅಧ್ಯಕ್ಷರ ಮಧ್ಯೆ ಚಕಮಕಿ

7

ಹಾಲಪ್ಪ- ಗ್ರಾ.ಪಂ. ಅಧ್ಯಕ್ಷರ ಮಧ್ಯೆ ಚಕಮಕಿ

Published:
Updated:

ಸೊರಬ:ತಾಲ್ಲೂಕಿನ ಹರೀಶಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಸಂದರ್ಭ ಶಾಸಕ ಎಚ್. ಹಾಲಪ್ಪ ಮತ್ತು ಗ್ರಾ.ಪಂ. ಅಧ್ಯಕ್ಷ ಎಂ. ಉಮಾಪತಿ ಹಾಗೂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ರಕರಣ ಬುಧವಾರ ನಡೆದಿದೆ.

ಬೆಳಿಗ್ಗೆ ಕೇಂದ್ರದ ಉದ್ಘಾಟನೆಗೆ ಶಾಸಕರು ತೆರಳಿದಾಗ ಗ್ರಾ.ಪಂ. ಅಧ್ಯಕ್ಷ ಉಮಾಪತಿ ಹಾಗೂ ಇತರರು ಕಟ್ಟಡಕ್ಕೆ ಬೀಗ ಹಾಕಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.ಆಸ್ಪತ್ರೆಗೆ ಇನ್ನೂ ಮೂಲಸೌಕರ್ಯ ಒದಗಿಸಿಲ್ಲ. ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ನೀಡಿಲ್ಲ. ಈ ಸಮಸ್ಯೆ ಬಗೆಹರಿಸುವವರೆಗೆ ಉದ್ಘಾಟನೆಗೆ ಆಸ್ಪದ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.ಅವರೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ, ಆಸ್ಪತ್ರೆಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಸಮೀಪದ ಬಾವಿಯಿಂದ ನೀರು ಸರಬರಾಜಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿಯೇ ಸಂಪೂರ್ಣ ವ್ಯವಸ್ಥೆ ಮಾಡಲಾಗುವುದು. ಹಾಗಾಗಿ ಉದ್ಘಾಟನೆಗೆ ಸಹಕರಿಸಲು ಮನವಿ ಮಾಡಿದರು.ಆದರೆ, ಪ್ರತಿಭಟನಾಕಾರರು ಇದಕ್ಕೆ ಒಪ್ಪದೇ ಇದ್ದಾಗ ಉಮಾಪತಿ ಹಾಗೂ ಶಾಸಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು. ಪರಸ್ಪರ ತಳ್ಳಾಟ, ನಿಂದನೆ ನಡೆಯಿತು.ಪೊಲೀಸರು ಮಧ್ಯೆ ಪ್ರವೇಶಿಸಿ ಗದ್ದಲವನ್ನು ನಿಯಂತ್ರಣಕ್ಕೆ ತಂದರು.ನಂತರ ಬೀಗ ಮುರಿದು ಉದ್ಘಾಟನೆ ನೆರವೇರಿಸಿದ ಶಾಸಕರು ಮಾತನಾಡಿ, ’ಇದು ಅಭಿವೃದ್ಧಿ ಸಹಿಸದವರು ಮಾಡಿದ ಕುಕೃತ್ಯ.  ಗಣಿಗಾರಿಕೆಯ ದರ್ಪವನ್ನು ಈ ರೀತಿ ತೋರಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ವಿರೋಧಿ ಕಾರ್ಯವನ್ನು ನಾನು ಎಂದಿಗೂ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ’ಇದಕ್ಕೆ ಕಾರಣ ಆಗಿರುವವರು ಬೆಂಗಳೂರಿನ ಸದಾಶಿವ ನಗರದಲ್ಲಿ ಬೆಚ್ಚಗೆ ಕುಳಿತಿದ್ದಾರೆ’ ಎಂದು ಮಾರ್ಮಿಕವಾಗಿ ಆರೋಪ ಮಾಡಿದರು.ಗ್ರಾ.ಪಂ. ಅಧ್ಯಕ್ಷ ಉಮಾಪತಿ

ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕರಿಗೆ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಿದ ನಂತರವೇ ಉದ್ಘಾಟನೆ ಮಾಡಿ ಎಂದು ಮನವಿ ಮಾಡಲಾಗಿದ್ದು, ಅದಕ್ಕೆ ಸ್ಪಂದಿಸದ ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.ಹಾಲಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ ವರದಿ:  ಸೊರಬ ತಾಲ್ಲೂಕಿನ ಹರಿಶಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಪತಿ ಮೇಲೆ ಶಾಸಕ ಎಚ್. ಹಾಲಪ್ಪ ಹಲ್ಲೆ ನಡೆಸಿರುವುದು ಖಂಡನೀಯ. ಶಾಸಕರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry