ಭಾನುವಾರ, ಅಕ್ಟೋಬರ್ 20, 2019
21 °C

ಹಾಲಿನಲ್ಲಿ ಯೂರಿಯಾ, ಅಡಿಕೆ ಚೀಟಿನಲ್ಲಿ ಚರ್ಮ

Published:
Updated:
ಹಾಲಿನಲ್ಲಿ ಯೂರಿಯಾ, ಅಡಿಕೆ ಚೀಟಿನಲ್ಲಿ ಚರ್ಮ

ಹುಬ್ಬಳ್ಳಿ: `ಕುಡಿಯುವ ಹಾಲಿನಲ್ಲಿ ಯೂರಿಯಾ ಹೇರಳವಾಗಿದ್ದರೆ, ತಿನ್ನುವ ಅಡಿಕೆ ಚೀಟಿನಲ್ಲಿ ಅಷ್ಟೇ ಪ್ರಮಾಣದ ಚರ್ಮದ ತುಂಡುಗಳಿವೆ. ಕಲಬೆರಕೆಯಾಗದ ಯಾವ ಆಹಾರ ಪದಾರ್ಥವೂ ಸದ್ಯ ಮಾರುಕಟ್ಟೆಯಲ್ಲಿ ನಮಗೆ ದೊರೆಯುವುದಿಲ್ಲ~ ಎಂದು ಕರ್ನಾಟಕ ವಿಜ್ಞಾನ ಪರಿಷತ್ತಿನ ಸದಸ್ಯ ಆರ್.ಕೆ. ಮೋನೆ ವಿಷಾದಿಸಿದರು.ಮಹಾನಗರ ಪಾಲಿಕೆ ಹಾಗೂ ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಸಂಸ್ಥೆ ಜಂಟಿಯಾಗಿ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ `ಆಹಾರ ಕಲಬೆರಕೆ ಗುರುತಿಸುವುದು ಹೇಗೆ~ ಕುರಿತ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.`ನಾವು ಖರೀದಿ ಮಾಡುವ ಎಲ್ಲ ಬಗೆಯ ಪ್ಯಾಕೇಟ್ ಹಾಲಿನಲ್ಲಿ ನೀರು, ಅಡುಗೆ ಸೋಡಾ, ಯೂರಿಯಾ, ಬೋರಿಕ್ ಆ್ಯಸಿಡ್, ಆಕ್ಸಿಟೋಸಿನ್ ಎಂಬ ಅಪಾಯಕಾರಿ ರಾಸಾಯನಿಕ ಇರುತ್ತದೆ. ಇಂತಹ ಹಾಲು ಸೇವನೆಯಿಂದ ಸಣ್ಣ ಹುಡುಗಿಯರು ಬೇಗನೆ ಋತುಮತಿಯಾದರೆ, ಮಾಂಸ-ಖಂಡಗಳ ಶಕ್ತಿ ಕುಂದುತ್ತದೆ. ಬೇಗನೆ ಮುಪ್ಪು ಸಹ ಆವರಿಸುತ್ತದೆ~ ಎಂದು ಅವರು ವಿವರಿಸಿದರು.`ಚಹದ ಪುಡಿಯಲ್ಲಿ ಮರದ ಹೊಟ್ಟು, ಕೋಲಟಾರ್ ಬಣ್ಣ ಮತ್ತು ರೆಡ್ ಆಕ್ಸೈಡ್ ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದ ಮಾನಸಿಕ ಅಸ್ವಸ್ಥತೆ, ಅಲರ್ಜಿ ಹಾಗೂ ಆಮ್ಲೀಯತೆ ಸಮಸ್ಯೆಗಳು ತಲೆದೋರುತ್ತವೆ~ ಎಂದು ಅವರು ಎಚ್ಚರಿಸಿದರು.`ಅಡಿಕೆ ಚೀಟಿನಲ್ಲಿ ಚರ್ಮದ ತುಂಡುಗಳಲ್ಲದೆ ಹುಣಸೆಬೀಜ, ನಿಷೇಧಿತ ಬಣ್ಣ ಮತ್ತು ವಾಸನೆ ರಾಸಾಯನಿಕ ಬಳಸಲಾಗುತ್ತದೆ. ಇಂತಹ ಅಡಿಕೆ ಸೇವನೆಯಿಂದ ಹಲ್ಲುಗಳು ಹುಳುಕಾಗುವುದಲ್ಲದೆ ಜಠರದ ತೊಂದರೆ ಕೂಡ ಬಾಧಿಸುತ್ತದೆ. ಮೊಸರು, ಲಸ್ಸಿಯಲ್ಲಿ ಪತ್ರಿಕೆಗಳ ಮಿಶ್ರಣ ಹಾಕಲಾಗುತ್ತದೆ. ಖಾರದ ಪುಡಿಯಲ್ಲಿ ಸುಡಾನ್ ಎಂಬ ರಾಸಾಯನಿಕವನ್ನು ಸುರಿಯಲಾಗುತ್ತದೆ~ ಎಂದು ಹೇಳಿದರು.`ಮೃದು ಪಾನೀಯಗಳಲ್ಲಿ ಬ್ರೊಮಿನೇಟಿಕ್ ವೆಜಿಟೇಬಲ್ ಆಯಿಲ್ (ಬಿವಿಒ) ಪ್ರಮಾಣ ಹೆಚ್ಚಾಗಿದ್ದು, ಟಾಯ್ಲೆಟ್‌ಗಳ ಸ್ವಚ್ಛತೆಗೆ ಬಳಸುವ ಕ್ಲೀನರ್‌ಗಳಿಗಿಂತ ಅಧಿಕ ಪ್ರಮಾಣದ ಆ್ಯಸಿಡ್ ತಂಪು ಪಾನೀಯದಲ್ಲಿ ಇರುತ್ತದೆ. ಕ್ಲೀನರ್‌ಗಳಿಗಿಂತ ತಂಪು ಪಾನೀಯಗಳೇ ಟಾಯ್ಲೆಟ್ ಸ್ವಚ್ಛತೆಗೆ ಒಳ್ಳೆಯ ಸಾಧನಗಳಾಗಿವೆ. ಆದರೆ, ಅಂತಹ ಪದಾರ್ಥವನ್ನು ನಾವು ಕುಡಿಯುತ್ತೇವೆ~ ಎಂದು ವಿಷಾದಿಸಿದರು.`ಖಾದ್ಯ ತೈಲಗಳಲ್ಲೂ ಕಲಬೆರಕೆ ವ್ಯಾಪಕವಾಗಿದ್ದು, ಅಂತಹ ತೈಲದಲ್ಲಿ ತಯಾರಾದ ಪದಾರ್ಥಗಳ ಸೇವನೆಯಿಂದ ಗ್ಲುಕೋಮಾ, ಕ್ಯಾನ್ಸರ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉತ್ತರ ಭಾರತೀಯ ಹಾಗೂ ಚೈನೀಸ್ ಆಹಾರ ಪದಾರ್ಥಗಳಲ್ಲಿ ಅಜಿನೊಮೊಟೊ, ಮಲಾಜಿಟ್ ಗ್ರೀನ್, ಲೀಡ್ ಕ್ರೊಮೈಟ್ ಎಂಬ ಅಪಾಯಕಾರಿ ರಾಸಾಯನಿಕ ಇದ್ದು, ಸ್ಥೂಲಕಾಯ ಮತ್ತು ಉಸಿರಾಟದ ತೊಂದರೆಗಳು ಕಾಡುತ್ತವೆ. ಆಹಾರದ ಸುವಾಸನೆ ಹೆಚ್ಚಿದ್ದರೆ ಅದೇ ಕಲಬೆರಕೆ ಲಕ್ಷಣವಾಗಿದೆ~ ಎಂದು ಅವರು ವಿಶ್ಲೇಷಿಸಿದರು.`ಬಾಳೆಕಾಯಿ ಹಾಗೂ ಮಾವಿನಕಾಯಿಯನ್ನು ದಿನದಲ್ಲೇ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡುತ್ತಾರೆ. ಈ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ವೆಲ್ಡಿಂಗ್ ಮಾಡುವಾಗ ಬಳಸುತ್ತಾರೆ. ಈ ವಸ್ತು ನರಮಂಡಲಕ್ಕೆ ತೀವ್ರಹಾನಿ ಮಾಡುವಂತಹ ಸಾಮರ್ಥ್ಯ ಹೊಂದಿದೆ. ತೊಗರಿ ಬೇಳೆಯಲ್ಲಿ ಚೆನ್ನಂಗಿ ಬೇಳೆ ಹಾಕುತ್ತಾರೆ. ಇದಕ್ಕೆ ಬಳಸುವ ಮೆಟಾನಿಲ್ ಎಂಬ ಕೃತಕ ಹಳದಿ ಬಣ್ಣ ಅತ್ಯಂತ ಅಪಾಯಕಾರಿಯಾಗಿದೆ~ ಎಂದು ಹೇಳಿದರು.`ಮಾರುಕಟ್ಟೆಯಲ್ಲಿ ದೊರೆಯುವ ಶೇ 90ರಷ್ಟು ಜೇನುತುಪ್ಪ ಕಲಬೆರಕೆಯಿಂದ ಕೂಡಿದೆ. ಬೆಲ್ಲ, ಸಕ್ಕರೆ, ಕಾಕಂಬಿ ಮೊದಲಾದವುಗಳನ್ನು ಅದಕ್ಕೆ ಬಳಸುತ್ತಾರೆ. ನಾಯಿ ಎಂದಿಗೂ ಜೇನುತುಪ್ಪವನ್ನು ತಿನ್ನುವುದಿಲ್ಲ. ಮಾರುಕಟ್ಟೆಯಿಂದ ತಂದ ಜೇನುತುಪ್ಪವನ್ನು ನಾಯಿಗೆ ಹಾಕಿದಾಗ, ಅದು ತಿಂದರೆ ಖರೀದಿಸಿ ತಂದ ಜೇನುತುಪ್ಪ ನಕಲಿ ಎಂಬುದು ರುಜುವಾತು ಆಗುತ್ತದೆ~ ಎಂದು ಅವರು ವಿವರಿಸಿದರು.`ಗ್ರಾಹಕರು ಜಾಗೃತರಾಗಿ ನಿಂತರೆ ಮಾತ್ರ ಇಂತಹ ಕಲಬೆರಕೆ ತಡೆಗಟ್ಟಲು ಸಾಧ್ಯ~ ಎಂದ ಅವರು, ಎಫ್‌ಬಿಒ, ಆಗ್ಮಾ ಹಾಗೂ ಸಿಎಫ್‌ಟಿಆರ್‌ಐ ಗುರುತು ಇರುವ ಆಹಾರ ಪದಾರ್ಥಗಳನ್ನು ಖರೀದಿಸುವುದು ಒಳ್ಳೆಯದು~ ಎಂದು ಸಲಹೆ ನೀಡಿದರು.ಡಾ. ಸುಭಾಷ ಬಬ್ರುವಾಡ ಮಾತನಾಡಿದರು. ರೋಟರಿ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಪಿ.ಸತೀಶ ರಾವ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಪಿ.ಎನ್. ಬಿರಾದಾರ, ನಾಗರಾಜ ಬಡಿಗೇರ, ಪಾಲಿಕೆ ಅಧಿಕಾರಿಗಳು ಹಾಗೂ ಬಾಸೆಲ್ ಮಿಷನ್ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.

Post Comments (+)