ಹಾಲಿನ ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು

7

ಹಾಲಿನ ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು

Published:
Updated:
ಹಾಲಿನ ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲಿಗಲ್ಲು

ಬೆಂಗಳೂರು: ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹೊಸ ಮೈಲಿಗಲ್ಲು ಸ್ಥಾಪಿಸಿದೆ.ರಾಜ್ಯದಲ್ಲಿ ಒಂದು ವಾರದಿಂದ ಪ್ರತಿದಿನ 52 ಲಕ್ಷ ಲೀಟರ್‌ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ. ಈ ಮೂಲಕ ಕೆಎಂಎಫ್ ಒಂದು ವರ್ಷ ಮೊದಲೇ ತನ್ನ ಗುರಿಯನ್ನು ತಲುಪಿದೆ.ಮೂರು ದಿನಗಳ ಹಿಂದೆ ದಾಖಲೆಯ 52.70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಗುರುವಾರ 52.37 ಲಕ್ಷ ಲೀಟರ್ ಉತ್ಪಾದನೆಯಾಗಿದೆ. ರಾಜ್ಯದ ಮಟ್ಟಿಗೆ ಇದೊಂದು ದಾಖಲೆ. ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿನಿತ್ಯ 10 ಲಕ್ಷ ಲೀಟರ್ ಅಧಿಕ ಹಾಲು ಉತ್ಪಾದನೆಯಾಗುತ್ತಿದೆ~ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎನ್. ವೆಂಕಟರಾಮು `ಪ್ರಜಾವಾಣಿ~ಗೆ ಶುಕ್ರವಾರ ತಿಳಿಸಿದರು.`2011-12ನೇ ಸಾಲಿನಲ್ಲಿ ಹಾಲಿನ ಉತ್ಪಾದನಾ ಪ್ರಮಾಣ 46 ಲಕ್ಷ ಲೀಟರ್ ಇತ್ತು. ನವೆಂಬರ್ 11ರಂದು ದಾಖಲೆಯ 46.49 ಲಕ್ಷ ಲೀಟರ್ ಉತ್ಪಾದನೆಯಾಗಿತ್ತು. 15 ದಿನಗಳ (ಮೇ 18ರಂದು) ಹಿಂದೆ 50 ಲಕ್ಷ ಲೀಟರ್ ಗಡಿ ದಾಟಿತ್ತು. ಈ ವರ್ಷ 50 ಲಕ್ಷ ಲೀಟರ್ ಹಾಗೂ 2013-14ನೇ ಸಾಲಿನಲ್ಲಿ 52 ಲಕ್ಷ ಲೀಟರ್‌ನ ಗಡಿ ದಾಟಬೇಕು ಎಂದು ಸಂಕಲ್ಪಿಸಲಾಗಿತ್ತು. ಈಗ ಗುರಿ ಮೀರಿದ ಸಾಧನೆಯಾಗಿದೆ~ ಎಂದು ಅವರು ಸಂತಸ ವ್ಯಕ್ತಪಡಿಸಿದರು.`ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಿನಿ ಡೇರಿ ಪರಿಕಲ್ಪನೆ ಹೆಚ್ಚುತ್ತಿದೆ. ಉತ್ತಮ ಶಿಕ್ಷಣ ಪಡೆದವರು ಹಳ್ಳಿಗಳಲ್ಲಿ 5-10 ದನಗಳನ್ನು ಸಾಕಿ ಮಿನಿ ಡೇರಿಗಳನ್ನು ಸ್ಥಾಪಿಸಿ ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲೇ ಇಂತಹ 150 ರೈತರು ಇದ್ದಾರೆ. ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಮಿನಿ ಡೇರಿಗಳ ಕೊಡುಗೆ ದೊಡ್ಡದು. ಮಿನಿ ಡೇರಿ ಸ್ಥಾಪಿಸುವವರಿಗೆ ಕೇಂದ್ರ, ರಾಜ್ಯ ಸರ್ಕಾರ, ನಬಾರ್ಡ್‌ನಿಂದ ನೆರವು ನೀಡಲಾಗುತ್ತಿದೆ. ಐದು ದನಗಳನ್ನು ಸಾಕಲು ನಬಾರ್ಡ್ 5.25 ಲಕ್ಷ ಸಾಲ ನೀಡುತ್ತಿದೆ. ಇದರಲ್ಲಿ ಶೇ 25ರಷ್ಟು ಸಬ್ಸಿಡಿ. ಇಂತಹ ರೈತಸ್ನೇಹಿ ನಡೆ ಹೈನುಗಾರಿಕೆಗೆ ಲಾಭದಾಯಕವಾಗಿದೆ~ ಎಂದು ಅವರು ಮಾಹಿತಿ ನೀಡಿದರು.`ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ 2,300 ಸಿಬ್ಬಂದಿ ಈ ಕಾರ್ಯ ಮಾಡುತ್ತಿದ್ದು, ಈ ಕೆಲಸಕ್ಕಾಗಿಯೇ ಅವರಿಗೆ ತಿಂಗಳಿಗೆ ತಲಾ ರೂ ಒಂದು ಸಾವಿರ ನೀಡಲಾಗುತ್ತಿದೆ. ಇಂತಹ ಅನೇಕ ಉತ್ತೇಜನ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ 13 ಜಿಲ್ಲಾ ಒಕ್ಕೂಟಗಳಿದ್ದು, ಅಂದಾಜು 13,000 ಹಾಲು ಉತ್ಪಾದಕ ಸಹಕಾರಿ ಸಂಘಗಳು ನೋಂದಣಿಯಾಗಿವೆ. 11,568 ಸಂಘಗಳು ಸಕ್ರಿಯವಾಗಿವೆ. ಮುಂದಿನ ದಿನಗಳಲ್ಲಿ ಸಂಘಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದು ಅವರು ವಿವರಿಸಿದರು.    

`ಹಾಲು ಪೂರೈಕೆ ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿರುವುದು ಉತ್ಪಾದನಾ ಪ್ರಮಾಣದ ಹೆಚ್ಚಳಕ್ಕೆ ಪ್ರಮುಖ ಕಾರಣ. ಮೂರು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಲೀಟರ್ ಹಾಲಿನ ದರ 16 ರೂಪಾಯಿ ಇತ್ತು. ಸರ್ಕಾರದ ಬೆಂಬಲ ಬೆಲೆ ಸೇರಿದಂತೆ ಈಗ ಲೀಟರ್‌ಗೆ 22 ರೂಪಾಯಿ ಪಾವತಿಯಾಗುತ್ತಿದೆ. ಬೇರೆ ಕೃಷಿಗೆ ಹೋಲಿಸಿದರೆ ಹೈನುಗಾರಿಕೆಯಲ್ಲಿ ಲಾಭ ಬೇಗ ಸಿಗುತ್ತದೆ. ಹಾಗಾಗಿ ಹೈನುಗಾರಿಕೆಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ರಾಜ್ಯದಲ್ಲಿ ಪ್ರತಿನಿತ್ಯದ ಹಾಲಿನ ಬೇಡಿಕೆ 60 ಲಕ್ಷ ಲೀಟರ್. ಕೆಎಂಎಫ್‌ನಿಂದ 52 ಲಕ್ಷ ಲೀಟರ್ ಪೂರೈಕೆ ಮಾಡಲಾಗುತ್ತಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಖಾಸಗಿ ಕಂಪೆನಿಗಳು ಉಳಿದ ಎಂಟು ಲಕ್ಷ ಲೀಟರ್ ಹಾಲು ಪೂರೈಕೆ ಮಾಡುತ್ತಿವೆ. ರಾಜ್ಯದ ಬೇಡಿಕೆಗೆ ಬೇಕಾಗುವಷ್ಟು ಹಾಲನ್ನು ಇನ್ನೆರಡು ವರ್ಷಗಳಲ್ಲಿ ಮಹಾಮಂಡಲ ಉತ್ಪಾದನೆ ಮಾಡಲಿದೆ~ ಎಂದು ಕೆಎಂಎಫ್ ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry