ಹಾಲಿನ ದರ ಇಳಿಕೆ: ಮಂಡ್ಯ ಜಿಲ್ಲೆ ರೈತರಿಗೆ ಮತ್ತೊಂದು ಬರೆ

7

ಹಾಲಿನ ದರ ಇಳಿಕೆ: ಮಂಡ್ಯ ಜಿಲ್ಲೆ ರೈತರಿಗೆ ಮತ್ತೊಂದು ಬರೆ

Published:
Updated:

ಮಂಡ್ಯ: ಮಳೆರಾಯನ ಅವಕೃಪೆ, ತಮಿಳುನಾಡಿನ ಮುನಿಸು, ಕಾವೇರಿ ನದಿ ಪ್ರಾಧಿಕಾರದ ತೀರ್ಪಿನಿಂದ ಕಂಗಾಲಾಗಿರುವ ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಒಂದು ರೂಪಾಯಿ ಇಳಿಸುವ ಮೂಲಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಮನ್‌ಮುಲ್) ಬರೆ ಎಳೆದಿದೆ.ಈ ಬರೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಕರ್ನಾಟಕ ಹಾಲು ಒಕ್ಕೂಟವೂ ಪ್ರತಿ ಟನ್ ಪಶು ಆಹಾರದ ಬೆಲೆಯಲ್ಲಿ 2 ಸಾವಿರ ರೂಪಾಯಿ ಹೆಚ್ಚಳ ಮಾಡಿದೆ.  ಪಶುಸಂಗೋಪನೆಯನ್ನು ಉಪ ಕಸುಬಾಗಿಸಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.ಮಳೆ ನಾಪತ್ತೆಯಿಂದಾಗಿ ಜಿಲ್ಲೆಯ ಏಳು ತಾಲ್ಲೂಕುಗಳು ಬರ ಪೀಡಿತವಾಗಿವೆ. ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿದೆ. ಇದರಿಂದಾಗಿ ಮುಖ್ಯ ಉದ್ಯೋಗ ಕೃಷಿ ಚಟುವಟಿಕೆಗೆ ಪೆಟ್ಟುಬಿದ್ದಿದೆ.ಹಸು, ಎಮ್ಮೆ ಸಾಕಿಕೊಂಡು ಉಪಕಸುಬಿನ ಮೂಲಕ ಕುಟುಂಬ ಸಾಗಿಸಿಕೊಂಡು ಹೊರಟಿದ್ದ ಸಾವಿರಾರು ಕುಟುಂಬಗಳಿಗೆ ಹಾಲಿನ ಬೆಲೆ ಕಡಿಮೆ ಮಾಡುವ ಮೂಲಕ ಮನ್‌ಮುಲ್ ಗಾಯದ ಮೇಲೆ ಬರೆ ಎಳೆದಿದೆ.

ಪ್ರತಿ ಲೀಟರ್‌ಗೆ 18.75 ರೂಪಾಯಿ ಇದ್ದ ಹಾಲಿನ ಬೆಲೆಯನ್ನು 17.75 ರೂಪಾಯಿಗೆ ಅ.1 ರಿಂದಲೇ ಜಾರಿಯಾಗುವಂತೆ ಇಳಿಕೆ ಮಾಡಿದೆ. ಇದರಿಂದಾಗಿ ರೈತ ಸಮೂಹ ಕಂಗಾಲಾಗಿದೆ.ಪ್ರತಿನಿತ್ಯ 5 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಮನ್‌ಮುಲ್‌ಗೆ ಬರುತ್ತದೆ. ಆದರೆ, ಅದಕ್ಕೆ ತಕ್ಕಂತೆ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನಾಲ್ಕು ತಿಂಗಳ ಹಿಂದೆಯಷ್ಟೇ ಹಾಲಿನ ಪುಡಿ ಹಾಗೂ ಬೆಣ್ಣೆ ಸಂಗ್ರಹ ಹೆಚ್ಚಾಗಿದೆ ಎಂದು ಪ್ರತಿ ಲೀಟರ್‌ಗೆ 1.75 ರೂಪಾಯಿ ಕಡಿಮೆ ಮಾಡಲಾಗಿತ್ತು. ಈಗ ಮತ್ತೆ 1 ರೂಪಾಯಿ ಕಡಿಮೆ ಮಾಡಿದೆ.ಹಣ ಪಾವತಿಸಿಲ್ಲ:

ಜಿಲ್ಲೆಯಲ್ಲಿ 11 ಸಾವಿರ ಹಾಲಿನ ಸಂಘಗಳಿವೆ. ಅವುಗಳ ಮೂಲಕ ಲಕ್ಷಾಂತರ ಕುಟುಂಬಗಳು 5 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ನಿತ್ಯ ಪೂರೈಸುತ್ತಿವೆ. ಹಾಲು ಪೂರೈಸಿದ ಸಂಘಗಳಿಗೆ ಎರಡು ವಾರಕ್ಕೊಮ್ಮೆ ಹಣ ಪಾವತಿಸಲಾಗುತ್ತಿತ್ತು.ಮನ್‌ಮುಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಆರು ವಾರಗಳಿಂದ ಹಣ ಪಾವತಿಸಿಲ್ಲ. ಸಂಘಗಳಿಗೆ ಪಾವತಿಸಬೇಕಿದ್ದ 48 ಕೋಟಿ ರೂಪಾಯಿ ಬಾಕಿ ಉಳಿದುಕೊಂಡಿದೆ.ಪಶು ಆಹಾರ ಬೆಲೆ:

ಹಾಲಿನ ಉತ್ಪಾದನೆ ಹೆಚ್ಚಿಸುವ ಕ್ರಮವಾಗಿ ಕರ್ನಾಟಕ ಹಾಲು ಒಕ್ಕೂಟವು ಪಶು ಸಾಕಿದ ಕುಟುಂಬಗಳಿಗೆ ವಿವಿಧ ನಮೂನೆಯ ಪೌಷ್ಟಿಕ ಆಹಾರ ಪೂರೈಸುತ್ತದೆ. ಟೈಪ್ ಆಹಾರ-1ರ ಬೆಲೆಯನ್ನು ಪ್ರತಿ ಟನ್‌ಗೆ 10,300 ರಿಂದ 12,300 ರೂಪಾಯಿಗೆ ಹಾಗೂ ಬೈಪಾಸ್-1ರ ಬೆಲೆಯನ್ನು 11,700 ರಿಂದ 13,700 ರೂಪಾಯಿಗೆ ಹೆಚ್ಚಳವಾಗಿದೆ.ಗೋಶಾಲೆ: ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಜಾನುವಾರುಗಳಿಗೆ ಬೇಕಾದ ಮೇವಿನ ಕೊರತೆ ಎದುರಾಗಿದೆ. ಜಿಲ್ಲೆಯ ಆರು ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಅಲ್ಲದೇ, ಹಲವಾರು ಕಡೆಗಳಲ್ಲಿ ಮೇವು ವಿತರಿಸಲಾಗಿದೆ. ಮೇವಿನ ಬೆಲೆಯಲ್ಲಿಯೂ ಪ್ರತಿ ಟನ್‌ಗೆ 6 ಸಾವಿರದಿಂದ 10 ಸಾವಿರ ರೂಪಾಯಿಗೆ ಏರಿದೆ.ಪಶುಗಳ ಸಾಕಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗುತ್ತಿದ್ದರೆ, ಹಾಲಿನ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನ್‌ಮುಲ್‌ನಲ್ಲಿ 2,610 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 600 ಮೆಟ್ರಿಕ್ ಟನ್ ಪ್ರಮಾಣದ ಬೆಣ್ಣೆ ದಾಸ್ತಾನಿದೆ. ಪ್ರತಿ ಕೆಜಿ ಉತ್ಪಾದನೆಗೆ ಮನ್‌ಮುಲ್‌ಗೆ 165 ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕೆಜಿಗೆ 145 ರೂಪಾಯಿ ಆಸುಪಾಸಿನಲ್ಲಿದೆ. ಈ ಬೆಲೆಗೆ ಮಾರಿದರೆ ಮನ್‌ಮುಲ್‌ಗೆ 12.13 ಕೋಟಿ ರೂಪಾಯಿ ನಷ್ಟವಾಗಲಿದೆ.ಹಾಲಿನ ಪುಡಿ ಹಾಗೂ ಬೆಣ್ಣೆ ಮಾರಾಟ ಮಾಡಲು ಸಾಧ್ಯವಾಗದ್ದರಿಂದ ತೊಂದರೆ ಎದುರಿಸುತ್ತಿದ್ದೇವೆ. ಒಂದು ತಿಂಗಳ ಹಿಂದೆ ಮನ್‌ಮುಲ್‌ಗೆ 40 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಕೊಂಡಿದ್ದೇವೆ. ಇಲ್ಲಿಯವರೆಗೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಬೆಲೆ ಇಳಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅಧ್ಯಕ್ಷ ಎಂ.ಬಿ. ಹರೀಶ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry