ಹಾಲಿನ ಹಣಕ್ಕೆ ಆಗ್ರಹ: ಧರಣಿ

7

ಹಾಲಿನ ಹಣಕ್ಕೆ ಆಗ್ರಹ: ಧರಣಿ

Published:
Updated:

 


ಕೋಲಾರ: ರೈತರಿಗೆ ಬಾಕಿ ಇರುವ ಹಾಲಿನ ಖರೀದಿ ಹಣವನ್ನು ಕೆಎಂಎಫ್ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪಶು ಆಹಾರದ ದರವನ್ನು ಯದ್ವಾತದ್ವಾ ಏರಿಕೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಬಡ ರೈತರು ಹೈನುಗಾರಿಕೆಯಿಂದ ದೂರ ಸರಿಯುವಂತಾಗಿದೆ. ಸಾಲ ವಸೂಲಾತಿ ನೆಪದಲ್ಲಿ ಅನ್ನದಾತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲದಿಂದ ನರಳುತ್ತಿರುವ ಜಿಲ್ಲೆಗಳಲ್ಲಿ ಸಾಲ ವಸೂಲಿ ಮಾಡಬಾರದು. ನಾಲ್ಕು ವರ್ಷಗಳಿಂದ ಬರದಿಂದ ಜಿಲ್ಲೆಯ ರೈತಾಪಿ ಜನ ತತ್ತರಿಸಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಆದರೆ ಬ್ಯಾಂಕುಗಳು ಇದೇ ಸಂದರ್ಭದಲ್ಲಿ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದರು.ರೈತರು ಪಡೆದಿರುವ ಕೃಷಿ ಸಾಲವನ್ನು ಸರ್ಕಾರ ಕೂಡಲೆ ಮನ್ನಾ ಮಾಡಬೇಕು. ಜಿಲ್ಲೆಯ ಎಲ್ಲ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕಾರ್ ಮೇಳ, ಲಾರಿ ಮೇಳ ಮತ್ತು ಸ್ಕೂಟರ್ ಮೇಳ ಮಾಡುವುದನ್ನು ಬಿಡಬೇಕು ಎಂದು ಟೀಕಿಸಿದರು.

ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸರ್ಕಾರವೆ ನಿಗದಿ ಮಾಡಬೇಕು. ರಾಗಿ, ಮೆಕ್ಕೆಜೋಳಕ್ಕೆ ಸರ್ಕಾರದ ಬೆಂಬಲ ಬೆಲೆ 3500 ರೂಪಾಯಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.ಮುಖಂಡರಾದ ನಾರಾಯಣಗೌಡ, ಹುಲ್ಕೂರು ಹರಿಕುಮಾರ್, ಕೆ.ಶ್ರೀನಿವಾಸಗೌಡ, ನಾಗರಾಜ್‌ಗೌಡ, ಹೂಹಳ್ಳಿ ನಾಗರಾಜ್, ಮುಳಬಾಗಲು ರಂಜಿತ್‌ಕುಮಾರ್, ಮುನಿಸ್ವಾಮಿಗೌಡ,  ತೆರ‌್ನಹಳ್ಳಿ ಆಂಜಿನಪ್ಪ, ಮಾಸ್ತಿ ಬಾಬು, ಕೆಂಬೋಡಿ ಕೃಷ್ಣೇಗೌಡ, ಮುನಿಕೃಷ್ಣ, ನೀಲಕಂಠಪುರ ಮುನೇಗೌಡ, ಬಿಸ್ನಹಳ್ಳಿ ಮುಕುಂದಗೌಡ ರಜನಿಕಾಂತ್, ಬೈರೇಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ವೆಂಕಟೇಶ್ ಮೂರ್ತಿ ಹಾಗೂ ಅಪಾರ ಸಂಖ್ಯೆ ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry