ಹಾಲಿನ ಹೊಳೆಯ ಹರಿಕಾರ

7

ಹಾಲಿನ ಹೊಳೆಯ ಹರಿಕಾರ

Published:
Updated:
ಹಾಲಿನ ಹೊಳೆಯ ಹರಿಕಾರ

ಪರಕೀಯರ ದಾಸ್ಯದಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕೆಚ್ಚಿನಿಂದ ಹೋರಾಡಿ ಸ್ವಾತಂತ್ರ್ಯಾನಂತರ ಹೊಸನಾಡನ್ನು ಕಟ್ಟುವಲ್ಲಿಯೂ ಆಸಕ್ತಿ ತೋರಿದ ವಿರಳ ಮುಂದಾಳುಗಳಲ್ಲಿ ಎಂ.ವಿ. ಕೃಷ್ಣಪ್ಪನವರೂ ಒಬ್ಬರು.ಉತ್ತಮ ರೈತರೆಂದು ಹೆಸರು ಮಾಡಿದ್ದ ಬೇಸಾಯಗಾರರ ಕುಟುಂಬದಲ್ಲಿ ಜನಿಸಿದ (ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕು ಮೋತರಪಲ್ಲಿ) ಎಂ.ವಿ.ಕೆ. ಆಧುನಿಕ ಶಿಕ್ಷಣದತ್ತ ಹೆಜ್ಜೆ ಇಟ್ಟರೂ ದೇಸಿ ಕಸುಬುಗಳಿಗೆ ಹೆಚ್ಚಿನ ಒತ್ತು ನೀಡಲು ಸದಾ ಆಲೋಚಿಸಿದ್ದವರು.ಕೃಷಿ ಬದುಕಿನ ಮೊದಲ ಪಾಠಗಳನ್ನು ಮನೆಯಲ್ಲೇ ಪಡೆದ ಅವರು ವಿದ್ಯಾರ್ಥಿಯಾಗಿ ಬೆಂಗಳೂರಿಗೆ ಬರುವ ವೇಳೆಗೆ ಬ್ರಿಟೀಷರ ವಿರುದ್ಧದ ಆಂದೋಲನ ಏರುಮಟ್ಟ ತಲುಪಿತ್ತು. 1942 ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ರೋಮಾಂಚನ ಪರ್ವಕಾಲ.

 

ದೇಶಕ್ಕೆ ದೇಶವೇ ಧಿಗ್ಗನೆ ಎದ್ದು ನಿಂತ ಆ ಸಮಯದಲ್ಲಿ ಯುವ ಸಮುದಾಯ ಚಳವಳಿಯ ಮುಂಚೂಣಿಗೆ ಬಂದಿತು. ಆಗ ಮೈಸೂರು ಸಂಸ್ಥಾನದಲ್ಲಿ ಬಾಪೂಜಿ ಮೋಡಿಗೆ ಒಳಗಾಗಿ ಹೋರಾಟಕ್ಕೆ ಇಳಿದರು ಕೃಷ್ಣಪ್ಪ.ಚಲೇಜಾವ್ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಎಂ.ವಿ.ಕೆ. ಮೈಸೂರು ಪ್ರದೇಶದ ಮೂಲೆ ಮೂಲೆ ತಿರುಗಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆ ಕಾಲದಲ್ಲಿ ಸಮೂಹ ಘೋಷಣೆಗಳಿಗೆ ಹೊಸ ನುಡಿ ಕಟ್ಟು ಕಟ್ಟಿದ ಅವರು ರೂಪಿಸಿದ- `ಯಾರದು ಜೈಲು ನಮ್ಮದು ಜೈಲು~, `ಯಾರದು ರೈಲು ನಮ್ಮದು ರೈಲು~ ಘೋಷಣೆ ಬಹುದಿನ ಬಳಕೆಯಲ್ಲಿತ್ತು.ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿ ನಾಯಕ ಕೃಷ್ಣಪ್ಪ ಧೈರ್ಯ ಸಾಹಸಕ್ಕೆ, ಭಾಷಣಕ್ಕೆ ಪ್ರಸಿದ್ಧಿ ಪಡೆದಿದ್ದರು. ಮೈಸೂರಿನ ಆಗಿನ ಸಭೆಗಳು ಅವರ ಭಾಷಣವಿಲ್ಲದೆ ಮುಗಿಯುತ್ತಿರಲಿಲ್ಲ. ಎಂ.ವಿ.ಕೆ. ಅವರೊಂದಿಗೆ ಬೆಂಗಳೂರು ಮೈಸೂರುಗಳಲ್ಲಿ ಓದಿದ ಹಿರಿಯ ಪತ್ರಕರ್ತ ಹಾಗೂ ಪ್ರಧಾನ ಮಂತ್ರಿಗಳ ವಾರ್ತಾ ಸಲಹೆಗಾರರಾಗಿದ್ದ ಎಚ್.ವೈ.ಶಾರದಾ ಪ್ರಸಾದ್ ತಮ್ಮ ಗೆಳೆಯನ ಬಗ್ಗೆ ಹೇಳಿರುವುದು ಹೀಗೆ- `ನಾವು ಓದಿದ ಕಾಲೇಜಿಗಿಂತ ದೊಡ್ಡವಿಶ್ವವಿದ್ಯಾಲಯವಾದ ಜೈಲಿನಲ್ಲಿ ಒಟ್ಟಿಗಿದ್ದೆವು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕೃಷ್ಣಪ್ಪ ಮುಖ್ಯ ಪಾತ್ರ ವಹಿಸಿದರು.ಮೆರವಣಿಗೆಗಳಲ್ಲಿ ಮುಂದು; ಸಭೆಗಳಲ್ಲಿ ಅವರ ಭಾಷಣಗಳಿಂದ ಜನ ಸ್ಫೂರ್ತಿ ಪಡೆಯುತ್ತಿದ್ದರು. ನಾವು ಕೆಲವರು ಬೇಗನೆ ದಸ್ತಗಿರಿಯಾದೆವು. ಕೃಷ್ಣಪ್ಪ ಅಂಡರ್‌ಗ್ರೌಂಡ್ ಆಗಿ ಪೊಲೀಸರಿಗೆ ಕಣ್ಣಾಮುಚ್ಚಾಲೆ ಆಡಿಸಿದರು. ಇವತ್ತು ಈ ಊರಲ್ಲಿ. ಇನ್ನೊಂದು ದಿನ ಇನ್ನೊಂದು ಊರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡವು. ಅನೇಕ ತಿಂಗಳುಗಳ ನಂತರ ಅವರ ಬಂಧನವಾಯಿತು~.ಮೊದಲಿಂದ ಕೃಷ್ಣಪ್ಪನವರಲ್ಲಿ ಮುಂದಾಳುತನದ ಗುಣಗಳಿದ್ದವು. ಅವರ ಧೈರ್ಯವೇ ಧೈರ್ಯ. ಔದಾರ್ಯವೇ ಔದಾರ್ಯ. ಇಂಗ್ಲಿಷಿನಲ್ಲಿ ಮ್ಯಾನ್ ಆಫ್ ದಿ ಪೀಪಲ್ ಎನ್ನುತ್ತಾರಲ್ಲ ಅಂತಹವರು ಅವರು. ಜನಸಾಮಾನ್ಯರ ಸುಖದುಃಖಗಳನ್ನು ಚೆನ್ನಾಗಿ ಅರಿತು, ಅವರೊಡನೆ ಒಬ್ಬರಾಗಿ, ಅವರ ಮಾತಿನಲ್ಲೆ ಮಾತಾಡುತ್ತಾ ಅವರ ಹಿತವನ್ನು ಅಂತಃಕರಣದಿಂದ ಪ್ರತಿಧ್ವನಿಸುತ್ತಿದ್ದರು.ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ನಿರ್ಣಾಯಕ ಸ್ವಾತಂತ್ರ್ಯ ಹೋರಾಟದ ಘಟ್ಟವಾದ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ~ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹದಲ್ಲಿ ಕೃಷ್ಣಪ್ಪ ಮೊಳಗಿಸಿದ ವೀರಘೋಷಕ್ಕೆ ಸಿಕ್ಕ ಮಾರುತ್ತರ ಇಡೀ ಪ್ರಾಂತ್ಯದಲ್ಲಿ ಚಳವಳಿ ಕಾವು ಹೆಚ್ಚಿಸಿತ್ತು. ಚಳವಳಿ ಇಳಿಮುಖವಾಗುತ್ತಲೇ ಇವರು ಸೆರೆಮನೆ ಸೇರಬೇಕಾಯಿತು.ವಿದ್ಯಾರ್ಥಿದೆಸೆ ಮುಗಿಯುವ ಮುನ್ನವೇ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಪ್ರವೇಶ ಪಡೆದ ಎಂ.ವಿ.ಕೆ. ಹೋರಾಟದ ಕಾಲಕ್ಕೆ ಭೂಗತರಾಗಿ ಕೆಲಸ ಮಾಡಿದ್ದು ಬಹಳ ಸಮಯ. ಮಾರುವೇಷ ಅವರಿಗೆ ಅಚ್ಚುಮೆಚ್ಚು. ಮನೆ ಸುತ್ತಲೂ ಪೊಲೀಸ್ ಕಾವಲಿದ್ದರೂ ಇದ್ದಿಲು ಹೊರುವ ಕೂಲಿವೇಷದಲ್ಲಿ ತಪ್ಪಿಸಿಕೊಂಡರು. ಸಾರ್ವಜನಿಕ ಸಭೆಗಳಲ್ಲಿ ಜನರನ್ನು ಹುರಿದುಂಬಿಸುವ ಮಾತನಾಡಿ ವೇದಿಕೆ ಬಳಿ ಪೊಲೀಸರು ಬಂಧಿಸಲು ಬಂದರೆ ಚಳ್ಳೆಹಣ್ಣು ತಿನ್ನಿಸಿ ಮಾಯವಾದ ಪ್ರಸಂಗಗಳನ್ನು ಅವರ ಸಹವರ್ತಿಗಳು ಈಗಲೂ ವರ್ಣಿಸುತ್ತಾರೆ.1942ರಲ್ಲಿ ಹೋರಾಡಿದಷ್ಟೇ ಕೆಚ್ಚಿನಿಂದ 1947ರ ಜವಾಬ್ದಾರಿ ಸರ್ಕಾರ ಒತ್ತಾಯದ `ಮೈಸೂರು ಚಲೊ~ ಚಳವಳಿಯಲ್ಲಿ ತೊಡಗಿದ ಕೃಷ್ಣಪ್ಪ ಸ್ವರಾಜ್ಯ ಬಂದ ಮೇಲೆ ಲೋಕಸಭೆಗೆ ಆರಿಸಿ ಹೋಗಿದ್ದು ಆರು ಬಾರಿ. ಕೇಂದ್ರ - ರಾಜ್ಯ ಸರ್ಕಾರಗಳಲ್ಲಿ ಮಂತ್ರಿಯಾಗಿದ್ದ ಅವರು ಹಲವಾರು ಯೋಜನೆಗಳನ್ನು ರಾಜ್ಯಕ್ಕೆ ತಂದುಕೊಟ್ಟರು.ಉಪಕಸುಬಾಗಿದ್ದ ಹೈನುಗಾರಿಕೆಗೆ ಪ್ರತ್ಯೇಕ ಮಹತ್ವ ತಂದು ಕೊಟ್ಟ ಕೀರ್ತಿ ಎಂ.ವಿ.ಕೆ. ಅವರಿಗೆ ಸಲ್ಲಬೇಕು. ಇಂದು ಪ್ರತಿದಿನ ಸಹಕಾರಿ ಕ್ಷೇತ್ರವೊಂದರಲ್ಲಿ ಹಾಲು ಉತ್ಪಾದನೆಯಾಗುತ್ತಿರುವುದು 40 ಲಕ್ಷ ಲೀಟರ್. ಇದರಿಂದಲೇ ದಿನ ನಿತ್ಯ ಹಳ್ಳಿಗಳ ಕಡೆ ಹೋಗುತ್ತಿರುವ ಹಣ ಸುಮಾರು 10 ಕೋಟಿ ರೂಪಾಯಿ.ರೈತರಿಗೆ ಆರ್ಥಿಕ ದೃಢತೆ ತಂದು ಕೊಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಜಾನುವಾರು ಸಾಕಣೆಗೆ ಕರ್ನಾಟಕದಲ್ಲಿ ನಾಂದಿ ಹಾಡಿದವರೇ ಎಂ.ವಿ.ಕೆ. ಬೆಂಗಳೂರು ಡೈರಿ ಸ್ಥಾಪಕರಾದ ಇವರು ಹೆಸರುಘಟ್ಟದಲ್ಲಿ ಹೈನು ಸಂವರ್ಧನಾ ಕೇಂದ್ರದ ಆರಂಭಕ್ಕೂ ಕಾರಣಕರ್ತರು.ಆಗಿನ ಪ್ರಧಾನಿ ಲಾಲ್‌ಬಹುದ್ದೂರ್ ಶಾಸ್ತ್ರಿ ಅವರಿಂದ ಡೈರಿ ಉದ್ಯಮವನ್ನು ಉದ್ಘಾಟಿಸಿದ ಎಂ.ವಿ.ಕೆ. ಮಿಶ್ರತಳಿ ಹಸುಗಳನ್ನು ರೈತರತ್ತ ಕೊಂಡೊಯ್ದವರಲ್ಲಿ ಆದ್ಯರು. ಬೆಂಗಳೂರಿನಲ್ಲಿ ಅಖಿಲ ಭಾರತ ದನಗಳ ಪ್ರದರ್ಶನವನ್ನು ಪ್ರಥಮವಾಗಿ ಸಂಘಟಿಸಿದ ಅವರು ಹೊಸ ಹೊಸ ವ್ಯವಸಾಯೋಪಕರಣಗಳ ಬಳಕೆಗೂ ಒತ್ತುಕೊಟ್ಟವರು.ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕೆಗಳಿಗೆ ಸಿಗುವಷ್ಟೇ ಪ್ರಾಧಾನ್ಯತೆಯನ್ನು ಕೃಷಿಗೂ ನೀಡಬೇಕೆಂದು ಸಂಸತ್ತಿನಲ್ಲಿ ವಾದ ಮಂಡಿಸಿದ ಕೃಷ್ಣಪ್ಪನವರ ವಾದ ಸರಣಿಗೆ ಮನಸೋತ ಜವಾಹರಲಾಲ್ ನೆಹರೂ ಅವರು ತಮ್ಮ ಸಂಪುಟದಲ್ಲಿ ಕೃಷಿ ಖಾತೆಯ ಉಪಮಂತ್ರಿ ಸ್ಥಾನ ನೀಡಿ ಮನ್ನಣೆ ನೀಡಿದ್ದು ಅವರ ಗಟ್ಟಿತನಕ್ಕೊಂದು ನಿದರ್ಶನ.ನೆಹರೂ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿನ (34 ವರ್ಷ) ಸಚಿವರಾಗಿದ್ದ ಹಳ್ಳಿಹೈದ ಎಂ.ವಿ.ಕೆ. ಹೆಚ್ಚಿನ ಪ್ರೋತ್ಸಾಹ ನೀಡಿದ್ದು ಪಶುಸಂಗೋಪನಾ ಕ್ಷೇತ್ರಕ್ಕೆ. ಬೇಸಾಯ, ರೇಷ್ಮೆ, ಮೀನುಗಾರಿಕೆ ವಲಯಗಳಿಗೆ ಹೊಸ ಚೇತನ ತಂದುಕೊಟ್ಟ ಅವರು ವಿದೇಶಗಳಿಂದ ಕುರಿ - ಹಂದಿ ತಳಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಒದಗಿಸಿದರು. ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದ ಗಂಗಾನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಿದರು.ಬೆಂಗಳೂರಿನಲ್ಲಿ ರಾಸುಗಳ ಮೆರವಣಿಗೆ ಮಾಡಿಸಿ ಉತ್ತಮ ರಾಸುಗಳನ್ನು ಸಾಕಿದ ರೈತರಿಗೆ ಬಹುಮಾನ ಕೊಡುವ ಪದ್ಧತಿ ಆರಂಭಿಸಿದ ಎಂ.ವಿ.ಕೆ. ನಮ್ಮ ರೈತರು ವಿದೇಶಗಳಲ್ಲಿ ಕೃಷಿ ಪ್ರಗತಿ ವೀಕ್ಷಿಸಿ ಬರುವ ಯೋಜನೆಯನ್ನು ಭಾರತ ಸರ್ಕಾರದಿಂದ ಜಾರಿಗೊಳಿಸಿದವರಲ್ಲಿ ಮೊದಲಿಗರು.ಅಪ್ರತಿಮ ಸಂಘಟನೆ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರದ ನೆಮ್ಮದಿ ಕೆಡಿಸಿದ್ದ ಎಂ. ವಿ. ಕೃಷ್ಣಪ್ಪ ಸ್ವತಂತ್ರ ಭಾರತದ ರೈತರ ನೆಮ್ಮದಿಯ ಬದುಕಿಗಾಗಿ ರೂಪಿಸಿ ಅನುಷ್ಠಾನಗೊಳಿಸಿದ ಯೋಜನೆಗಳು ಹತ್ತು ಹಲವು.ನಾಡಿನಲ್ಲಿ ಸಮೃದ್ಧವಾಗಿ ಹಾಲಿನ ಹೊಳೆ ಹರಿಸಲು ಕಾರಣರಾಗಿ, ನಾಡಿನಪ್ರಭು ರೈತರ ಜೀವನವನ್ನು ಸಂಪನ್ನಗೊಳಿಸಲು ಅನವರತ ಶ್ರಮಿಸಿದ ಎಂ. ವಿ. ಕೃಷ್ಣಪ್ಪ ಕಣ್ಮರೆಯಾಗಿ ನಾಲ್ಕು ದಶಕಗಳಾದರೂ ಸ್ವಾತಂತ್ರ್ಯದ ನಾಯಕನಾಗಿ, ಬೇಸಾಯಗಾರರ ಹಿತ ಚಿಂತಕರಾಗಿ ಅವರಿಗಿರುವ ಜನಾದರಣೆ ಈಗಲೂ ತಗ್ಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry