ಮಂಗಳವಾರ, ನವೆಂಬರ್ 19, 2019
27 °C
ಪಕ್ಷೇತರರ ಹದಿನಾಲ್ಕು ನಾಮಪತ್ರ ಸಲ್ಲಿಕೆ

ಹಾಲಿ, ಮಾಜಿ ಶಾಸಕರು ಸಲ್ಲಿಸಿಲ್ಲ ಇನ್ನೂ ನಾಮಪತ್ರ!

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ಬಾಗೇಪಲ್ಲಿ ಹೊರತುಪಡಿಸಿ ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ.

ಬಾಗೇಪಲ್ಲಿಯಲ್ಲಿ ಶನಿವಾರವೊಂದೇ ದಿನ 12 ನಾಮಪತ್ರಗಳು ಸಲ್ಲಿಕೆಯಾದವು. ನಾಮಪತ್ರ ಸಲ್ಲಿಸಿದ ಅಷ್ಟೂ ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವುದು ವಿಶೇಷ.ನಾಮಪತ್ರ ಸಲ್ಲಿಕೆ ಮೂರನೇ ದಿನವಾದ ಶನಿವಾರ ವಿವಿಧ ಕ್ಷೇತ್ರಗಳಲ್ಲಿನ ಘಟಾನುಘಟಿಗಳು ನಾಮಪತ್ರಗಳು ಸಲ್ಲಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಬಹುತೇಕ ಮಂದಿ ಆಕಾಂಕ್ಷಿಗಳು ಏಪ್ರಿಲ್ 15 ರಿಂದ 17ರ ಅವಧಿಯಲ್ಲಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರಿಂದ ಕೆಲ ಪಕ್ಷಗಳ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೌನಕ್ಕೆ ಶರಣಾಗಿ ತಮ್ಮ ಮಾತಿಗೆ ಒಪ್ಪಿಗೆ ಸೂಚಿಸಿದರು. ಈ ಕಾರಣದಿಂದಲೇ ಆಯಾ ಕ್ಷೇತ್ರಗಳ ತಾಲ್ಲೂಕು ಕಚೇರಿಗಳಲ್ಲಿ ಪಕ್ಷದ ಕಾರ್ಯಕರ್ತರ ದಟ್ಟಣೆ ಕಾಣಸಿಗಲಿಲ್ಲ.ಜಿಲ್ಲೆಯಲ್ಲಿ ಈವರೆಗೆ 14 ನಾಮಪತ್ರಗಳು ಅಧಿಕೃತವಾಗಿ ಸಲ್ಲಿಕೆಯಾಗಿವೆ. ಚಿಂತಾಮಣಿಯಲ್ಲಿ ಹಾಲಿ ಶಾಸಕ ಡಾ. ಎಂ.ಸಿ.ಸುಧಾಕರ್ ಪರವಾಗಿ ಅವರ ಸೂಚಕರು ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ಬಾಗೇಪಲ್ಲಿಯಲ್ಲಿ ಒಂದೇ ದಿನಕ್ಕೆ 12 ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ ಶಿಡ್ಲಘಟ್ಟದಲ್ಲಿ ಮಾತ್ರ ಈವರೆಗೆ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ. ಹಾಲಿ ಅಥವಾ ಮಾಜಿ ಶಾಸಕರ‌್ಯಾರೂ ಈವರೆಗೆ ನಾಮಪತ್ರ ಸಲ್ಲಿಸದಿರುವುದು ಮತ್ತೊಂದು ವಿಶೇಷ.ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಘಟಾನುಘಟಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತಹ ಬೆಳವಣಿಗೆ ಕಾಣದಿರುವುದು ಕೆಲ ಪಕ್ಷಗಳ ಕಾರ್ಯಕರ್ತರಿಗೆ ಅಚ್ಚರಿ ಮೂಡಿಸಿದೆ. ಇನ್ನೂ ಕೆಲ ಪಕ್ಷಗಳ ಕಾರ್ಯಕರ್ತರು ಸೋಮವಾರ ತಮ್ಮ ನಾಯಕರು ಸಲ್ಲಿಸುವ ನಾಮಪತ್ರ ಪ್ರಕ್ರಿಯೆಗೆ ಇನ್ನಷ್ಟು ರಂಗೇರಿಸಲು ಸಿದ್ಧತೆ ನಡೆಸಿದ್ದಾರೆ.ಕಾರ್ಯಕರ್ತರ ಮತ್ತು ಬೆಂಬಲಿಗರ ಭಾರಿ ಮೆರವಣಿಗೆ ಕೈಗೊಳ್ಳುವ ಮೂಲಕ ನಾಮಪತ್ರಗಳನ್ನು ಸಲ್ಲಿಸಲು ಕೆಲ ನಾಯಕರು ನಿರ್ಧರಿಸಿದ್ದರೆ, ಕೆಲ ನಾಯಕರು ಸರಳವಾಗಿ ನಾಮಪತ್ರ ಸಲ್ಲಿಸಲು ಬಯಸಿದ್ದಾರೆ. ವಿವಿಧ ಪಕ್ಷಗಳಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ತಕ್ಕ ಪೈಪೋಟಿ ನೀಡಲೆಂದೇ ಕೆಲವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ. ಗೆದ್ದರೂ-ಸೋತರೂ ಪೈಪೋಟಿ ಮಾತ್ರ ನೀಡಲೇಬೇಕೆಂದು ನಿರ್ಣಯಿಸಿದ್ದಾರೆ.ಈ ಎಲ್ಲ ಬೆಳವಣಿಗೆಗಳ ನಡುವೆ ಕೆಲ ಅನಿರೀಕ್ಷಿತ ಘಟನೆಗಳು ನಡೆಯುವುದನ್ನು ತಳ್ಳಿ ಹಾಕುವುದು ಕಷ್ಟ. ಕೆಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪೂರ್ಣಪ್ರಮಾಣದಲ್ಲಿ ಬಿಡುಗಡೆ ಮಾಡದ ಕಾರಣ ಕೆಲ ಕ್ಷೇತ್ರಗಳಲ್ಲಿ ಇನ್ನೂ ಗೊಂದಲಮಯ ವಾತಾವರಣವಿದೆ. ಕೆಲ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇರುವ ಕಾರಣ ಯಾರಿಗೆ ಬಿ.ಫಾರಂ ನೀಡಲಾಗುವುದು ಎಂದು ಪಕ್ಷದ ವರಿಷ್ಠರು ಸ್ಪಷ್ಟವಾಗಿ ತಿಳಿಸದ ಕಾರಣ ಪರಿಸ್ಥಿತಿ ಇನ್ನಷ್ಟು ಜಟಿಲಗೊಳಿಸಿದೆ. ಇಬ್ಬರು ಆಕಾಂಕ್ಷಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಬಿ.ಫಾರಂ ದೊರಕಿದ್ದಲ್ಲಿ, ಮತ್ತೊಬ್ಬರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಚ್ಚಳವಾಗಿದೆ. ಬಂಡಾಯ ಅಭ್ಯರ್ಥಿಯು ಪಕ್ಷೇತರನಾಗಿ ಇಲ್ಲವೇ ಇನ್ನೊಂದು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಇದು ಅಭ್ಯರ್ಥಿಗಳ ನಡುವೆ ಶೀತಲಸಮರಕ್ಕೂ ಕಾರಣವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಏಪ್ರಿಲ್ 15ರಿಂದ 17ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗುವ ಕಾರಣ ಆಯಾ ಕ್ಷೇತ್ರಗಳಲ್ಲಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಕೈಗೊಳ್ಳುವ ಮೆರವಣಿಗೆ ಮತ್ತು ಸಂಭ್ರಮಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಿರಲಿ ಎಂಬ ಕಾರಣಕ್ಕೆ ಆಯಾ ಕ್ಷೇತ್ರಗಳಲ್ಲಿನ ತಾಲ್ಲೂಕು ಕಚೇರಿಗಳು ಅಲ್ಲದೇ ಇಡೀ ಪಟ್ಟಣ ಮತ್ತು ನಗರಪ್ರದೇಶದಲ್ಲಿ ಬಂದೋಬಸ್ತ್‌ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಚಿಕ್ಕಬಳ್ಳಾಪುರ ಕಾಂಗ್ರೆಸ್ ಟಿಕೆಟ್ ಯಾರಿಗೆ?

ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ. ಟಿಕೆಟ್ ಆಕಾಂಕ್ಷಿಗಳಾದ ಎಂ.ಆಂಜನಪ್ಪ, ಡಾ.ಕೆ.ಸುಧಾಕರ್ ಅವರಿಬ್ಬರೂ ತಮಗೇ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಪಕ್ಷದ ವರಿಷ್ಠರು ಯಾರಿಗೆ ಸ್ಪಷ್ಟವಾದ ಭರವಸೆಯನ್ನು ನೀಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಇಬ್ಬರೂ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯಮಟ್ಟದ ಮುಖಂಡರಲ್ಲಿ ತೀವ್ರ ಲಾಬಿ ನಡೆಸಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಖಚಿತವಾಗಿಲ್ಲ. ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.6.5 ಲಕ್ಷದ ಸೀರೆ, ಪ್ಯಾಂಟ್ ವಶ

ಶಿಡ್ಲಘಟ್ಟ: ಮತದಾರರಿಗೆ ವಿತರಿಸಲು 16 ಮೂಟೆಗಳಲ್ಲಿ ತುಂಬಿಸಿಡಲಾಗಿದ್ದ 6.5 ಲಕ್ಷ ರೂಪಾಯಿ ಮೌಲ್ಯದ ಟಿ-ಶರ್ಟು, ಸೀರೆ, ಪ್ಯಾಂಟುಗಳನ್ನು ಚುನಾವಣೆ ವಿಚಕ್ಷಣಾ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಶಿಡ್ಲಘಟ್ಟ-ಎಚ್ ಕ್ರಾಸ್ ರಸ್ತೆಯ ಹಾರಾಡಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕರ್ನಾಟಕ ಜನತಾ ಪಕ್ಷಕ್ಕೆ (ಕೆಜೆಪಿ) ಸೇರಿದ 16 ಮೂಟೆಗಳಷ್ಟು ಉಡುಪುಗಳನ್ನು ಕರ್ಣಶ್ರೀ ಚಾರಿಟೇಬಲ್ ಟ್ರಸ್ಟ್ ಗೋದಾಮಿನಲ್ಲಿ ಇಡಲಾಗಿತ್ತು. 14 ಮೂಟೆಗಳಲ್ಲಿ ಟಿ-ಶರ್ಟುಗಳಿದ್ದರೆ, ಉಳಿದೆರಡು ಮೂಟೆಗಳಲ್ಲಿ ಸೀರೆ, ಶರ್ಟು ಮತ್ತು ಪ್ಯಾಂಟು ಬಟ್ಟೆಗಳಿವೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು.`ಕೆಜೆಪಿ ಅಭ್ಯರ್ಥಿ ಡಿ.ಆರ್.ಶಿವಕುಮಾರ್‌ಗೌಡ ಈ ಉಡುಪುಗಳ ಮೂಟೆಗಳನ್ನು ಕರ್ಣಶ್ರೀ ಚಾರಿಟೇಬಲ್ ಟ್ರಸ್ಟ್‌ನ ಗೋದಾಮಿನಲ್ಲಿ ಕೂಡಿಟ್ಟಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದಾಗ, ಮೂಟೆಗಳು ಇರುವುದು ಬೆಳಕಿಗೆ ಬಂತು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಚುನಾವಣೆ ವಿಚಕ್ಷಣಾ ದಳದ ಅಧಿಕಾರಿ ಕರಗಯ್ಯ ಸುದ್ದಿಗಾರರಿಗೆ ತಿಳಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಹುನುಮಂತಪ್ಪ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)