ಹಾಲುಣಿಸುವ ಹಬ್ಬವಾದ ಪಂಚಮಿ

7

ಹಾಲುಣಿಸುವ ಹಬ್ಬವಾದ ಪಂಚಮಿ

Published:
Updated:
ಹಾಲುಣಿಸುವ ಹಬ್ಬವಾದ ಪಂಚಮಿ

ಹುಬ್ಬಳ್ಳಿ: ನಗರದ ಬಹುತೇಕ ಜನರು ಮನೆಯಲ್ಲಿಯ ಮಣ್ಣಿನ ನಾಗಪ್ಪನಿಗೆ ಹಾಲು ಎರೆದು ನಂತರ ಹುತ್ತಗಳನ್ನು ಹುಡುಕಿಕೊಂಡು ಹೋದರು. ಆದರೆ ನಗರದ ಗೋಕುಲ ರಸ್ತೆಯ ಬಸವ ಕೇಂದ್ರದ ಪದಾಧಿಕಾರಿಗಳು ಮದರ್ ತೆರೆಸಾ ಆರಂಭಿಸಿದ `ಮಿಷನರಿಸ್ ಆಫ್ ಚಾರಿಟಿ~ ಸಂಸ್ಥೆ ನಡೆಸುವ  ಕೇಶ್ವಾಪುರದಲ್ಲಿಯ ಸ್ನೇಹ ಸದನ ಎಂಬ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಹಾಲು ನೀಡಿದರು. ಈ ಮೂಲಕ ನಾಗರ ಪಂಚಮಿ ಎಂದರೆ, ಹಾಲು ಎರೆಯುವ ಹಬ್ಬವಲ್ಲ. ಹಾಲು ಉಣಿಸುವ ಹಬ್ಬವೆಂದು ಸಾರಿದರು.ಸದನದಲ್ಲಿಯ 70 ನಿರಾಶ್ರಿತರಿಗೆ ಮೊದಲಿಗೆ ಸಿರಾ ಹಾಗೂ ಉಪ್ಪಿಟ್ಟು ನೀಡಿದ ನಂತರ ಹಾಲು ನೀಡಿದರು. ಈ ಕಾರ್ಯಕ್ರಮ ಪ್ರಾಯೋಜಕತ್ವವನ್ನು ರಾಜು ಅಣ್ಣಪ್ಪನವರ ವಹಿಸಿಕೊಂಡಿದ್ದರು. ಬಸವ ಕೇಂದ್ರದ ಪದಾಧಿಕಾರಿಗಳಾದ ಡಾ.ಬಿ.ವಿ. ಶಿರೂರ, ಪ್ರೊ.ಜಿ.ಬಿ. ಹಳ್ಯಾಳ, ಪ್ರಭು ಅಂಗಡಿ, ಎಸ್.ಜಿ. ಅಂಗಡಿ ಹಾಗೂ ಸ್ನೇಹ ಸದನದ ಉಸ್ತುವಾರಿ ವಹಿಸಿಕೊಂಡಿರುವ ಸಿಸ್ಟರ್ ಅಲ್‌ಬ್ರಿಯಾ ಹಾಜರಿದ್ದರು.ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಅವರು `ಹಾಲು ಕಂದಲು ತುಪ್ಪದ ಮಡಕೆಗೆ ಬೋಡು ಮುಕ್ಕೆನಬೇಡ~ ಎಂಬ ಬಸವಣ್ಣನವರ ವಚನವನ್ನು ವಿಶ್ಲೇಷಿಸಿದರು. `ಅಂಗವಿಕಲರು ಎಲ್ಲರಿಗಿಂತ ದೊಡ್ಡ ಶರಣರು. ಅವರು ದೇವರ ಮಕ್ಕಳು. ಹೀಗಾಗಿ ಅವರಿಗೆ ಹಾಲು ಉಣಿಸಿದರೆ ದೇವರಿಗೆ ಸಮರ್ಪಿಸಿದಂತೆ~ ಎಂದರು.`ಕಲ್ಲು ನಾಗರಕ್ಕೆ ಹಾಲು ಉಣಿಸಿದರೆ ವ್ಯರ್ಥ ಜೊತೆಗೆ ನಿಜನಾಗರವು ಹಾಲು ಕುಡಿಯುವುದಿಲ್ಲ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ರೀತಿ ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು. ನಂತರ ಮದರ್ ತೆರೆಸಾ ಕುರಿತು ಸ್ವರಚಿತ ಕವಿತೆಯನ್ನು ವಾಚಿಸಿದರು.ಬಸವ ಕೇಂದ್ರದ ಸಂಚಾಲಕ ಪ್ರೊ. ಜಿ.ಬಿ. ಹಳ್ಯಾಳ ಮಾತನಾಡಿ, `ಬಸವಣ್ಣನವರು ಶ್ರಾವಣದ ಪಂಚಮಿಯ ದಿನದಂದು ಬಯಲಾದರು. ಈ ದಿನವನ್ನು `ಬಸವ ಪಂಚಮಿ~ ಎಂದು ಹುಬ್ಬಳ್ಳಿಯ ಬಸವ ಕೇಂದ್ರ ಆಚರಿಸುತ್ತಿದೆ. ಹೀಗಾಗಿ ಬಸವ ಪಂಚಮಿ ದಿನವೆಂದು ಹಾಲು ಉಣಿಸುವ ಹಬ್ಬವನ್ನಾಗಿ ಆಚರಿಸುತ್ತಿದೆ~ ಎಂದು ಹೇಳಿದರು.`ಕಳೆದ ಮೂರು ವರ್ಷಗಳಲ್ಲಿ ಹುಬ್ಬಳ್ಳಿಯ ದೇವಾಂಗಪೇಟೆಯಲ್ಲಿರುವ ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ತರಬೇತಿ ಹಾಗೂ ಪುನರ್ವಸತಿ ಕೇಂದ್ರ, ಆನಂದನಗರದ ಕಿವುಡ ಮತ್ತು ಮೂಗ ಮಕ್ಕಳ ಕೇಂದ್ರ ಹಾಗೂ ಸಿದ್ಧಾರೂಢಮಠದಲ್ಲಿರುವ ಅಂಧ ಮಕ್ಕಳಿಗೆ ಬಿಸ್ಕತ್ತು ಮತ್ತು ಬದಾಮಿ ಹಾಲನ್ನು ನೀಡುವ ಮೂಲಕ ಹಾಲು ಉಣಿಸುವ ಹಬ್ಬವಾಗಿ ಆಚರಿಸಲಾಗಿದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry