ಮಂಗಳವಾರ, ಅಕ್ಟೋಬರ್ 15, 2019
25 °C

ಹಾಲು ಉತ್ಪಾದಕರ ಮನೆಯಂಗಳಕ್ಕೆ ಬೈಹುಲ್ಲು

Published:
Updated:

ಮಂಗಳೂರು: ರೈತರ ವಲಯದಲ್ಲಿ ಕೇಳಿ ಬರುತ್ತಿರುವ ದೊಡ್ಡ ಕೂಗು ಬೈ ಹುಲ್ಲಿನದ್ದು. ಜಾನುವಾರು ಸಾಕುವವರ ಸಂಖ್ಯೆ ಕಡಿಮೆಯಾಗಲು ಬೈ ಹುಲ್ಲಿನ ಕೊರತೆಯೂ ಕಾರಣ. ಇದೀಗ ಹೈನುಗಾರರ ನೆರವಿಗೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘ ಧಾವಿಸಿದೆ.ರೈತರಿಗೆ ಕೈಗೆಟಕುವ ದರದಲ್ಲಿ, ಸಾಗಣೆ ವೆಚ್ಚವಿಲ್ಲದೆ ಬೈಹುಲ್ಲು ಪೂರೈಸಲು ಸಂಸ್ಥೆ ಮುಂದಾಗಿದೆ. ರಾಜ್ಯದಲ್ಲಿ ವಿನೂತನ ಯೋಜನೆ ಈ ಬಾರಿ ಅನುಷ್ಠಾನಕ್ಕೆ ಬಂದಿದ್ದು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ವತಿಯಿಂದ ಉಭಯ ಜಿಲ್ಲೆಯ ರೈತರಿಗೆ ಬೈ ಹುಲ್ಲು ಪೂರೈಸಲಾಗುತ್ತಿದೆ.ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ 4-5 ವರ್ಷಗಳಲ್ಲಿ ಬೈ ಹುಲ್ಲಿನ ಕೊರತೆಯದ್ದು ದೊಡ್ಡ ಸಮಸ್ಯೆಯಾಗಿತ್ತು. ಗದ್ದೆಗಳನ್ನು ಹಡಿಲು ಬಿಡುವವರ ಪ್ರಮಾಣ ಹೆಚ್ಚಳವಾದುದು, ಈ ಹಿಂದೆ ಎರಡು- ಮೂರು ಬೆಳೆ ಮಾಡುತ್ತಿದ್ದವರು ಈಗ ಕಾರ್ತಿ ಬೆಳೆ ಮಾತ್ರ ಮಾಡಲು ಆರಂಭಿಸಿದ್ದು, ಕಟಾವು ಸಂದರ್ಭದಲ್ಲಿ ಮಳೆ ಬಂದು ಬೈಹುಲ್ಲು ನಾಶವಾದುದು, ಕಟಾವಿನ ಯಾಂತ್ರೀಕರಣದ ಕಾರಣ ಬೈ ಹುಲ್ಲಿನ ಸಮಸ್ಯೆ ಬಿಗಡಾಯಿಸಿತ್ತು. ಕಟಾವು ಯಾಂತ್ರೀಕರಣದಿಂದ ಶೇ 50ರಷ್ಟು ಮಾತ್ರ ಬೈ ಹುಲ್ಲು ರೈತರಿಗೆ ದೊರಕುತ್ತಿದೆ. ಈ ನಡುವೆ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಹೈನುಗಾರಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕರಾವಳಿಯಲ್ಲಿ ಲೀಟರ್ ಹಾಲಿಗೆ ಉತ್ಪಾದನಾ ವೆಚ್ಚ ರೂಪಾಯಿ 25 ದಾಟಿದ್ದರೆ, ರೈತರಿಗೆ ಹಾಲು ಉತ್ಪಾದಕರ ಸಂಘದ ಸಬ್ಸಿಡಿ ಸೇರಿ ಸಿಗುವುದು ರೂ 20. ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಬೈ ಹುಲ್ಲಿನ ಸಮಸ್ಯೆಯಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗಲಾರಂಭಿಸಿದರು. ರೈತರಿಗೆ ಉತ್ತೇಜನ ನೀಡಲು ಇದೀಗ ಬೈ ಹುಲ್ಲು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತಂದಿದೆ.

 

ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರತಿದಿನ 3.25 ಲಕ್ಷ ಲೀಟರ್ ಹಾಲಿನ ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರುವುದು 2.2 ಲಕ್ಷ ಲೀಟರ್‌ನಷ್ಟು ಮಾತ್ರ. ದಕ್ಷಿಣ ಕನ್ನಡದಲ್ಲಿ 345 ಸೇರಿದಂತೆ ಎರಡೂ ಜಿಲ್ಲೆಗಳಲ್ಲಿ 646 ಹಾಲು ಉತ್ಪಾದಕ ಸೊಸೈಟಿಗಳಿವೆ. ಈ ಸೊಸೈಟಿಗಳ ಮೂಲಕ ರೈತರಿಗೆ ಬೈ ಹುಲ್ಲು ಪೂರೈಸಲಾಗುತ್ತಿದೆ. ರೈತರು ಬೇಡಿಕೆ ಸಲ್ಲಿಸಿ ನಿರಾಳರಾಗಬಹುದು.`ಡಿಸೆಂಬರ್‌ನಿಂದ ಯೋಜನೆ ಜಾರಿಗೆ ಬಂದಿದ್ದು, ರೈತರಿಗೆ ಈಗಾಗಲೇ 50 ಟನ್ ಬೈಹುಲ್ಲು ಪೂರೈಕೆ ಮಾಡಲಾಗಿದೆ. 1000 ಟನ್ ಅಧಿಕ ಬೈ ಹುಲ್ಲಿಗೆ ಬೇಡಿಕೆ ಬಂದಿದೆ. ಶಿವಮೊಗ್ಗದಿಂದ ಬೈ ಹುಲ್ಲು ತರಿಸಿಕೊಡಲಾಗುತ್ತಿದೆ. ಮಂಗಳೂರು ತಾಲ್ಲೂಕಿನ ರೈತರಿಗೆ ಒಂದು ಟನ್ ಬೈ ಹುಲ್ಲಿಗೆ ರೂ 6,200 ಹಾಗೂ ಇತರ ತಾಲ್ಲೂಕಿನವರಿಗೆ ರೂ 5,800 ನಿಗದಿ ಮಾಡಲಾಗಿದೆ. ಸಾಗಣೆ ವೆಚ್ಚವನ್ನು ಕೆಎಂಎಫ್ ವತಿಯಿಂದ ಭರಿಸಲಾಗುತ್ತಿದೆ~ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ಮೂಲಗಳು ತಿಳಿಸಿವೆ.`ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸಾಕಲು ಹೊರ ಜಿಲ್ಲೆಗಳಿಂದ ಹೈಬ್ರಿಡ್ ಕರುಗಳನ್ನು ತರುವ ಮಂದಿಗೆ ಪ್ರೋತ್ಸಾಹಧನವಾಗಿ ರೂ 2 ಸಾವಿರ ನೀಡಲಾಗುತ್ತಿದೆ. ಈ ಹಿಂದೆ ರೂ ಒಂದು ಸಾವಿರ ನೀಡಲಾಗುತ್ತಿತ್ತು.ಕೊಯಿಲದ 80 ಎಕರೆ ಪ್ರದೇಶದಲ್ಲಿ ಹಸಿ ಹುಲ್ಲು ಬೆಳೆಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ~ ಎಂದು ಸಂಘದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು. ಕರು ಸಾಕಣೆಗೆ ಉತ್ತೇಜನ: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ವತಿಯಿಂದ ಮಿಶ್ರ ತಳಿ ಕರು ಸಾಕಣೆಗೆ ಉತ್ತೇಜನ ನೀಡಲಾಗುತ್ತಿದೆ.ಈಗಾಗಲೇ 5000 ಕರುಗಳ ನೋಂದಣಿ ಆಗಿದ್ದು, ಗುರಿ ಮೀರಿದ ಸಾಧನೆ ಆಗಿದೆ. ಕರು ಸಾಕಣೆಗೆ ಕೆಎಂಎಫ್‌ನಲ್ಲಿ ನೋಂದಣಿ ಆದ ಕೂಡಲೇ ಆಹಾರ ಪೂರೈಸಲಾಗುತ್ತದೆ. ಮಿಶ್ರ ತಳಿಯ ಹಸು ಕರು ಹಾಕಿದ ಕೂಡಲೇ ಸ್ಥಳೀಯ ಪಶು ವೈದ್ಯಾಧಿಕಾರಿ ಅಲ್ಲಿಗೆ ತೆರಳಿ ವೀಕ್ಷಿಸಿ ಪೌಷ್ಟಿಕಾಂಶದ ಪಟ್ಟಿ ಕೊಡಬೇಕು. ಪ್ರತಿ ಕರುವಿಗೆ ರೂ. 500 ಆಹಾರ ನೀಡಲಾಗುತ್ತದೆ. ಆ ಜಾನುವಾರು ಕರು ಹಾಕಿದಾಗ ಪ್ರೋತ್ಸಾಹಧನವಾಗಿ ರೂ 2 ಸಾವಿರ ನೀಡಲಾಗುತ್ತದೆ ಎಂದರು.500 ಕರು ಗುರಿ:  ಜಿಲ್ಲೆಯಲ್ಲಿ ಪ್ರಸ್ತುತ 30 ಕರುಗಳಿಗೆ ಮಿಶ್ರ ತಳಿ ಕರುಗಳ ಸಾಕಣೆಗೆ ಜಿಲ್ಲಾ ಪಶು ಸಂಗೋಪನೆ ಇಲಾಖೆಯಿಂದ ಉತ್ತೇಜನ ನೀಡಲಾಗುತ್ತಿದ್ದು, ಒಂದು ಕರುವಿಗೆ ರೂ 9,600 ನೀಡಲಾಗುತ್ತಿದೆ. ಇದರಲ್ಲಿ ಶೇ 50 ಸಬ್ಸಿಡಿ ನೀಡಲಾಗುತ್ತಿದೆ. ಮುಂದಿನ ಸಾಲಿನಿಂದ 500 ಕರುಗಳಿಗೆ ನೀಡಬೇಕು ಎಂಬ ಗುರಿ ಇದ್ದು, ರೂ 25 ಲಕ್ಷ ವೆಚ್ಚವಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಕೆ.ವಿ. ಹಲಗಪ್ಪ ಪ್ರಜಾವಾಣಿಗೆ ಶುಕ್ರವಾರ ತಿಳಿಸಿದರು.ಹಸಿ ಹುಲ್ಲು ಉತ್ಪಾದನೆಗೆ ಒತ್ತು ನೀಡಲಿ:  ರೈತರಿಗೆ ಕೈಗೆಟಕುವ ದರದಲ್ಲಿ ಬೈಹುಲ್ಲು ದೊರಕಬೇಕು. ದೊಡ್ಡ ಮೊತ್ತ ನಿಗದಿಪಡಿಸಿದರೆ ರೈತರಿಗೆ ನಷ್ಟವೇ. ಬೈ ಹುಲ್ಲು ಕೊರತೆ ನೀಗಿಸಲು ಹಸಿ ಹುಲ್ಲು ಬೆಳೆಸಲು ರೈತರಿಗೆ ಉತ್ತೇಜನ ನೀಡಬೇಕು. ಆಗ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ಪ್ರಗತಿಪರ ಕೃಷಿ ಕುದಿ ಶ್ರೀನಿವಾಸ ಭಟ್ ಅವರ ಸಲಹೆ.ಮಳೆಗಾಲದಲ್ಲಿ ಸಿಗುವ ಹುಲ್ಲುಗಳನ್ನು ರಸಮೇವುಗಳನ್ನಾಗಿ ಪರಿವರ್ತಿಸಬಹುದು. ಈ ಹುಲ್ಲುಗಳನ್ನು ಮೂರು- ನಾಲ್ಕು ತಿಂಗಳು ದಾಸ್ತಾನು ಇಡಬಹುದು. ಇದಕ್ಕೆ ಹೈಟೆಕ್ ತಂತ್ರಜ್ಞಾನ ಬೇಕಿಲ್ಲ. ಸಾಮಾನ್ಯ ತಂತ್ರಜ್ಞಾನ ಬಳಸಿ ರಸಮೇವು ಉತ್ಪಾದಿಸಬಹುದು. ಈ ಮೂಲಕವೂ ಹುಲ್ಲಿನ ಕೊರತೆ ನೀಗಿಸಬಹುದು ಎಂದು ಅವರು ತಿಳಿಸಿದರು. 

Post Comments (+)