ಶನಿವಾರ, ಮೇ 21, 2022
26 °C

ಹಾಲು: ಒಬ್ಬ ವಿದ್ಯಾರ್ಥಿಗೆ ರೂ. 4.49 ವೆಚ್ಚ

ಪ್ರಜಾವಾಣಿ ವಾರ್ತೆ/ಎಂ.ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಕ್ಷರ ದಾಸೋಹ ಅಡುಗೆಯವರಿಗೆ ರೂ.100 ಗೌರವಧನ ಹೆಚ್ಚಳ, ಒಬ್ಬ ವಿದ್ಯಾರ್ಥಿಗೆ  ರೂ.4.49 ವೆಚ್ಚ. ಕೆನೆಭರಿತ ಹಾಲನ್ನೇ ನೀಡಲು ಸ್ಪಷ್ಟ ನಿರ್ದೇಶನ. ಕಡ್ಡಾಯವಾಗಿ ಗುಣಮಟ್ಟ ಪರಿಶೀಲಿಸಲು ಸೂಚನೆ.

-ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಜಾರಿಯಾಗಲಿರುವ ಹಾಲು ವಿತರಣೆ ಯೋಜನೆಯ ಸಂಬಂಧ ಸರ್ಕಾರ ರೂಪಿಸಿರುವ ಮಾರ್ಗಸೂಚಿಯ ಮುಖ್ಯಾಂಶಗಳಿವು.ಯೋಜನೆ ಜಾರಿಗೆ ಕೆಲ ದಿನಗಳ ಹಿಂದೆಯಷ್ಟೇ `ಮಾರ್ಗಸೂಚಿ' ಸಿದ್ಧಪಡಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಜಿಲ್ಲಾ ಪಂಚಾಯ್ತಿಗೆ ಕಳುಹಿಸಲಾಗಿದೆ. ಈ ಪ್ರಕಾರ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಮೂರು ದಿನ, ಒಬ್ಬ ವಿದ್ಯಾರ್ಥಿಗೆ 150 ಮಿ.ಮೀ. ಅಥವಾ 18 ಗ್ರಾಂ.ನಂತೆ ಹಾಲಿನ ಪುಡಿ ದೊರೆಯಲಿದೆ. ಹಾಲು ಉತ್ಪಾದಕ ಸಂಘಗಳಿಂದ ಹಾಲು ತಲುಪಿಸಲಾಗದ ಸ್ಥಳಗಳಲ್ಲಿರುವ ಶಾಲೆಗಳಿಗೆ ಮಾತ್ರ ಹಾಲಿನ ಪುಡಿ ಪೂರೈಸಲು ನಿರ್ಧರಿಸಲಾಗಿದೆ.ಈ ಯೋಜನೆಯಿಂದ ರಾಜ್ಯದ 54,804 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 60 ಲಕ್ಷ ಮಕ್ಕಳಿಗೆ ಉಪಯೋಗ ಆಗಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದು ಇಲಾಖೆ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಹೇಗೆ ಅನುಷ್ಠಾನ?: ಸ್ಥಳೀಯ ಹಾಲು ಉತ್ಪಾದಕ ಸಂಘಗಳು ಹಾಲು ಪೂರೈಸಬೇಕು. ಸಂಬಂಧಿಸಿದ ಬಿಇಒ, ಸಂಘಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯವಿರುವ ಹಾಲಿನ ಬೇಡಿಕೆ ಕೊಡಬೇಕು. ಕರ್ನಾಟಕ ಹಾಲು ಒಕ್ಕೂಟ ಅಥವಾ ಹಾಲು ಉತ್ಪಾದಕ ಸಂಘಗಳು `ಸೀಲ್' ಮಾಡಿದ ಕ್ಯಾನ್‌ಗಳಲ್ಲಿ ಹಾಲನ್ನು ನಿಗದಿಪಡಿಸಿದ ದಿನಗಳಂದು ಶಾಲೆ ಪ್ರಾರಂಭಕ್ಕೆ ಮುನ್ನವೇ ತಲುಪಿಸಬೇಕು.ಬಿಸಿಯೂಟ ತಯಾರಿಸುವ ಪಾತ್ರೆಗಳನ್ನು ಹಾಲು ಕಾಯಿಸಲು ಬಳಸಬಾರದು. ಲಭ್ಯವಿರುವ  ಅನುದಾನ ಅಥವಾ ಎಸ್‌ಡಿಎಂಸಿ ನೆರವಿನಿಂದ ಪಾತ್ರೆ, ಹಾಲಿನ ಗುಣಮಟ್ಟ ಪರೀಕ್ಷೆಗೆ 'ಲ್ಯಾಕ್ಟೋಮೀಟರ್' ಸಾಧನ, ಫಿಲ್ಟರ್ (ಸೋಸಲು) ಮೊದಲಾದ ಪರಿಕರಗಳನ್ನು ಖರೀದಿಸಬೇಕು. ಇದಕ್ಕೆ ದಾನಿಗಳ ನೆರವು ಪಡೆಯಬಹುದು. ಅಡುಗೆಯವರಿಗೆ ನೀಡುವ ವೇತನ ಮೊದಲಾದ ಖರ್ಚನ್ನು ಅಕ್ಷರ ದಾಸೋಹ ಯೋಜನೆಯಡಿ ಭರಿಸಬೇಕು ಎಂದು ತಿಳಿಸಲಾಗಿದೆ.ಎಷ್ಟು ಖರ್ಚಾಗುತ್ತದೆ?: ಪ್ರತಿ ಮಗುವಿಗೆ 150 ಮಿ.ಲೀ. ಹಾಲಿಗೆ ತಲಾ ರೂ.3.75, ಸಕ್ಕರೆಗೆ 32 ಪೈಸೆ, ಇಂಧನಕ್ಕೆ 15 ಪೈಸೆ, ಅಡುಗೆ ಮಾಡುವವರಿಗೆ ಗೌರವ ಧನವಾಗಿ 27 ಪೈಸೆ ಸೇರಿ ಒಟ್ಟು ರೂ.4.49 ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಲು ವಿತರಣೆ ಯೋಜನೆಯಿಂದ, ಬಿಸಿಯೂಟ ಅಡುಗೆಯವರಿಗೆ ಹೆಚ್ಚುವರಿ ಮಾಸಿಕ ರೂ.100 ದೊರೆಯಲಿದೆ ಎಂದು ತಿಳಿಸಲಾಗಿದೆ.ಬಿಸಿಯೂಟಕ್ಕೆ 1ರಿಂದ 5ನೇ ತರಗತಿಯ ಪ್ರತಿ ಮಗುವಿಗೆ  ರೂ.3.34, 6ರಿಂದ 8ನೇ ತರಗತಿಯವರಿಗೆ ರೂ.5, 9ರಿಂದ 10ನೇ ತರಗತಿಯವರಿಗೆ ರೂ.6.16 ವೆಚ್ಚ ತಗುಲುತ್ತಿದೆ. ಹೀಗೆ ನೋಡಿದರೆ, ಮಧ್ಯಾಹ್ನದ ಬಿಸಿಯೂಟದಷ್ಟೇ (ಸರಾಸರಿ) ವೆಚ್ಚ ಹಾಲು ನೀಡುವುದರಿಂದಲೂ ಆಗುತ್ತದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.