ಹಾಲು ಕರೆಯುವ ಸ್ಪರ್ಧೆ
ಶ್ರೀರಂಗಪಟ್ಟಣ: ಸಮೀಪದ ಗಂಜಾಂನಲ್ಲಿ ಭಾನುವಾರ ವರಸಿದ್ಧಿ ವಿನಾಯಕ ಕೃಷಿಕರ ಸ್ವಸಹಾಯ ಸಂಘ ಹಾಗೂ ಪಶು ವೈದ್ಯಕೀಯ ಇಲಾಖೆ ಏರ್ಪಡಿಸಿದ್ದ ಹಾಲು ಕರೆಯುವ ಸ್ಪರ್ಧೆ ಗಮನ ಸೆಳೆಯಿತು.
ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಕರೆದ ಹಾಲನ್ನು ತೂಕ ಹಾಕಿ ಪ್ರಶಸ್ತಿಗೆ ಹಸುಗಳನ್ನು ಆಯ್ಕೆ ಮಾಡಲಾಯಿತು. ಸ್ಪರ್ಧೆಯಲ್ಲಿ ಪುಟ್ಟಸ್ವಾಮಿ ಅವರ ಹಸು ಎರಡೂ ಹೊತ್ತಿನಿಂದ 30.910 ಕೆ.ಜಿ ಹಾಲು ನೀಡಿ ಪ್ರಥಮ ಸ್ಥಾನ ಪಡೆಯಿತು.
ಈ ಹಸು ಬೆಳಿಗ್ಗೆ 16.120 ಕೆ.ಜಿ. ಹಾಲು ಕರೆದಿತ್ತು. ರಾಜೇಂದ್ರ ಅವರ ಹಸು 26.45 ಕೆ.ಜಿ ಹಾಲು ಕರೆದು ಎರಡನೇ ಸ್ಥಾನ ಪಡೆಯಿತು. ಸೋನಿಕಾಗೌಡ ಅವರ ಹಸು 21.07 ಕೆ.ಜಿ ಹಾಲು ಕರೆದು ಮೂರನೇ ಸ್ಥಾನ ಗಳಿಸಿತು. ನಂಜುಂಡಪ್ಪ ಅವರ ಹಸು 20.855 ಕೆ.ಜಿ ಹಾಗೂ ಸೋಮಶೇಖರ್ ಅವರ ಹಸು 19.015 ಕೆ.ಜಿ ಹಾಲು ಕರೆದು ಗಮನ ಸೆಳೆದವು.
ಪ್ರಥಮ ಬಹುಮಾನವಾಗಿ ರೂ.20 ಸಾವಿರ, ದ್ವಿತೀಯ-ರೂ.15 ಸಾವಿರ, ತೃತೀಯ-ರೂ.10 ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆದ ಹಸುವಿನ ಮಾಲೀಕರಿಗೆ ರೂ. 5 ಸಾವಿರ ನಗದು ಮತ್ತು ಸ್ಮರಣಿಕೆ ನೀಡಲಾಯಿತು. ಗಂಜಾಂನ ನವಗ್ರಹ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಈ ಹಾಲು ಕರೆಯುವ ಸ್ಪರ್ಧೆಯನ್ನು ವೀಕ್ಷಿಸಲು ಸುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು. ಶನಿವಾರ ಸಂಜೆಯೇ ಹಸುಗಳನ್ನು ಸ್ಪರ್ಧೆ ಏರ್ಪಡಿಸಿದ್ದ ಸ್ಥಳಕ್ಕೆ ಕರೆತರಲಾಗಿತ್ತು.
ಪ್ರತಿ ಹಸುವಿನ ಬಗ್ಗೆ ನಿಗಾ ವಹಿಸಲು ಪಶು ವೈದ್ಯರನ್ನು ನಿಯೋಜಿಸಲಾಗಿತ್ತು. ಹಾಲು ಕರೆಯುವ ಅವಧಿಯನ್ನು 20 ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು. ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿಕುಮಾರ್, ವೈದ್ಯಾಧಿಕಾರಿ ಡಾ.ನಂಜೇಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.