`ಹಾಲು ಕುಡಿದಷ್ಟೇ ಸಂತಸ ಆಗೇತಿ'

ಶುಕ್ರವಾರ, ಜೂಲೈ 19, 2019
22 °C
ರಾಜ್ಯದಿಂದ ಕಾಲ್ತೆಗೆದ ಪೋಸ್ಕೊ ಕಂಪೆನಿ, ರೈತರ ಮೊಗದಲ್ಲಿ ಹರ್ಷ

`ಹಾಲು ಕುಡಿದಷ್ಟೇ ಸಂತಸ ಆಗೇತಿ'

Published:
Updated:

ಗದಗ: `ರಾಜ್ಯದಿಂದ ಪೋಸ್ಕೊ ಕಾಲ್ಕಿತೈತಿ ಅಂತಾ ಸುದ್ದಿ ಪೇಪರ್‌ನಲ್ಲಿ ನೋಡಿ ಹಾಲು ಕುಡಿದಷ್ಟೇ ಸಂತೋಷಾಯ್ತು, ನಮ್ ಹೊಲ್ದಾಗ ಉಳುಮೆ ಮಾಡ್ಕೊಂಡು ಅರಾಮಾಗಿ ಬದುಕ್ತಿವಿ..'ಪೋಸ್ಕೊ ಕಂಪೆನಿ ವಿರುದ್ಧ ಹಳ್ಳಿಗುಡಿ ರೈತರ ಪರವಾಗಿ ಹೋರಾಟದ ನೇತೃತ್ವ ವಹಿಸಿದ್ದ ಮುಖಂಡ ಹನುಮಂತಪ್ಪ ಗಡ್ಡದ ಅವರು `ಪ್ರಜಾವಾಣಿ' ಜತೆ ಸಂತಸ ಹಂಚಿಕೊಂಡಿದ್ದು ಹೀಗೆ.`ಹೊಲಾ ವಶಪಡಿಸಿಕೊಂಡಿದ್ರೆ ರೈತರು ಅತಂತ್ರರಾಗಿ ಅಲೆಮಾರಿ ಬದುಕು ಸಾಗಿಸಬೇಕಿತ್ತು.  ಪೋಸ್ಕೊ ಹೋಗಿದ್ದ ಚಲೋ ಆಯ್ತು. ಭೂಮಿ ಇಲ್ದ ದುಡ್ಡು ಇಟ್ಕೊಂಡ್ ಏನ್ ಮಾಡೋದ್ ರೀ. ಮೇಧಾ ಪಾಟ್ಕರ್, ಮಠಾಧೀಶರು, ಸಂಘ ಸಂಸ್ಥೆಗಳು ಮತ್ತು ಮಾಧ್ಯಮಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ರು. ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಯಾದರೆ ನೀರ್ ಸಿಗುತ್ತೆ. ಬೆಳೆ ಬೆಳೆದು ನಮ್ ಜೀವನಾ ನಡೆಸಿಕೊಂಡು ಹೋಗ್ತಿವಿ' ಎಂದು ಹೇಳಿದರು.ಹಳ್ಳಿಗುಡಿ ರೈತರಷ್ಟೇಲ್ಲದೆ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದ  ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ, ಜಂತ್ಲಿಶಿರೂರ ಗ್ರಾಮಗಳ ರೈತರು ಸಹ ಪೋಸ್ಕೊ ರಾಜ್ಯದಿಂದ ಹೊರ ಹೋದ ಸುದ್ದಿ ತಿಳಿದು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.ಹಿನ್ನೆಲೆ: 2010ರಂದು ಸರ್ಕಾರ ನಡೆಸಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಐದು ಸಾವಿರ ಎಕರೆ ಭೂಮಿ ನೀಡುವುದಾಗಿ ಒಪ್ಪಿಗೆ ನೀಡಿತ್ತು.   2011ರಲ್ಲಿ ಪೋಸ್ಕೊ ಭೂ ಸ್ವಾಧೀನ ವೆಚ್ಚ ಹಾಗೂ ಸೇವಾ ಶುಲ್ಕವಾಗಿ ರೂ. 60 ಕೋಟಿ ಕೆಐಎಡಿಬಿ ಗೆ ಪಾವತಿಸಿತ್ತು. ಭೂಮಿ ಕಳೆದುಕೊಳ್ಳುತ್ತಿದ್ದ ಹಳ್ಳಿಗುಡಿ, ಹಳ್ಳಿಕೇರಿ, ಜಂತ್ಲಿಶಿರೂರ ಗ್ರಾಮಗಳ ರೈತರು ಮಠಾಧೀಶರ ನೇತೃತ್ವದಲ್ಲಿ ಹೋರಾಟ ರೂಪಿಸಿದರು. ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೆಂಬಲವೂ ದೊರೆಯಿತು.ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಅಂದಿನ ಸರ್ಕಾರ 2011ರ ಜುಲೈ 13ರಂದು ಹೋರಾಟದ ನೇತೃತ್ವ ವಹಿಸಿದ್ದ ಡಾ. ಸಿದ್ದಲಿಂಗ ಸ್ವಾಮೀಜಿಗೆ ಗದಗ ಡಿಸಿ ಮೂಲಕ, `ಸರ್ಕಾರ ಗದಗ ಜಿಲ್ಲೆಯಲ್ಲಿ ಪೋಸ್ಕೊ ಸ್ಥಾಪನೆಯಿಂದ ಹಿಂದೆ ಸರಿದಿದೆ' ಎಂದು ಪತ್ರ ರವಾನಿಸಿತ್ತು.ಈ ನಡುವೆ ಪೋಸ್ಕೊ ಪರ ಮತ್ತು ವಿರುದ್ಧ ಹೋರಾಟ ನಡೆದವು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕೆ ಬೇಕು. ಅದಕ್ಕಾಗಿ ಭೂಮಿ ನೀಡಲು ಸಿದ್ದರಿದ್ದೇವೆ ಎಂದು ವಿವಿಧ ಗ್ರಾಮಗಳ ರೈತರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಭೂಮಿ ನೀಡಲು ಸಿದ್ದರಿಲ್ಲದ ರೈತರು ತಡೆಯಾಜ್ಞೆಗೆ ಕೋರಿ ಪತ್ಯೇಕ ದಾವೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ 2012ರ ಜ.13ರಂದು ಎರಡು ಕಡೆಯ ರೈತರ ಅರ್ಜಿ ವಜಾಗೊಳಿಸಿ, ಸರ್ಕಾರದ ಹಂತದಲ್ಲಿ ಆಗಬೇಕಾಗಿರುವುದರಿಂದ, ಅಲ್ಲಿಯೇ ಪ್ರಶ್ನೆ ಮಾಡಬೇಕು ಎಂದು ಆದೇಶ ನೀಡಿತು.

ಪರಿಸರ ಸ್ನೇಹಿ ಕೈಗಾರಿಕೆ ಸ್ಥಾಪಿಸಲಿ

ಪರಿಸರ ನಾಶದಿಂದ ಉತ್ತರ ಕರ್ನಾಟಕ ಈಗಾಗಲೇ ಬರಗಾಲಕ್ಕೆ ತುತ್ತಾಗಿದೆ. ಅಳಿದುಳಿದ ಪರಿಸರ ನಾಶ ಮಾಡಿ ಕಬ್ಬಿಣದ ಅದಿರಿಗಾಗಿ ಗುಡ್ಡ ಮತ್ತು ನೀರಿಗಾಗಿ ನದಿಗಳನ್ನು ಗುರಿಯಾಗಿರಿಸಿಕೊಂಡು  ಪೋಸ್ಕೊ ಕಂಪೆನಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಿಂದ ಹಿಂದೆ ಸರಿದಿರುವುದು ಉಚಿತವಾಗಿದೆ.

  ಪಶ್ಚಿಮಘಟ್ಟ ಎನಿಸಿಕೊಂಡಿರುವ ಕಪ್ಪತಗುಡ್ಡ ನಾಶವಾದರೆ ಮಳೆ ಬರುವುದಿಲ್ಲ. ವಿವಿಧ ಯೋಜನೆಗಳಿಂದ ಭೂಮಿ ಕಳೆದುಕೊಂಡ ಉತ್ತರ ಕರ್ನಾಟಕ ರೈತರು ಗೋವಾ, ಮಂಗಳೂರು, ಮುಂಬೈಗಳಲ್ಲಿ ಬೀದಿ ಪಾಲಾಗಿದ್ದಾರೆ.  ನಿಸರ್ಗ ಸಂಪತ್ತು ಲೂಟಿ ಮಾಡಿ ಕಂಪೆನಿ ಗಳಿಸಿದ ಲಾಭವನ್ನು ತಾಯ್ನಾಡಿಗೆ ಕಳುಹಿಸಿದರೆ ನಮ್ಮ ಜನರಿಗೆ ಸಿಗುವ ಲಾಭವೇನು?. ಬದಲಿಗೆ ಪರಿಸರ ಸ್ನೇಹಿ  ಕೈಗಾರಿಕೆ ಸ್ಥಾಪಿಸಲು ಸರ್ಕಾರ ಮುಂದಾಗಬೇಕು.

-ಡಾ.ಸಿದ್ದಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ .

ಪೋಸ್ಕೋ ಕಂಪೆನಿಗೆ ಪಾಠ ಕಲಿಸಿದ ರೈತರು

`ಕೈಗಾರಿಕೆ ಹೆಸರಿನಲ್ಲಿ ವಾಮ ಮಾರ್ಗದಿಂದ ಕಡಿಮೆ ಬೆಲೆಯಲ್ಲಿ ರೈತರ ಜಮೀನು ಪಡೆದು ಪರಿಸರ ನಾಶಕ್ಕೆ ಮುಂದಾಗುವ ಕಂಪೆನಿಗಳಿಗೆ ರೈತರು ಉತ್ತಮ ಪಾಠ ಕಲಿಸಿದ್ದಾರೆ.ರೈತರಿಗೆ ಅನ್ಯಾಯ ವಾಗುವ ಯೋಜನೆಗಳನ್ನು ಜಾರಿಗೆ ತಂದಲ್ಲಿ ಮತ್ತೆ ಹೋರಾಟ ಕೈಗೊಳ್ಳಲಾಗುವುದು.  ಬೃಹತ್ ಕೈಗಾರಿಕಾ ಘಟಕಗಳು ಸ್ಥಾಪನೆಯಾದರೆ ರೈತರು ಜಮೀನು ಕಳೆದುಕೊಂಡು ಗುಳೆ ಹೋಗಬೇಕಾಗುತ್ತದೆ. ಅನ್ನದ ಅಭಾವ ಉಂಟಾಗುವ ಸಾಧ್ಯತೆ ಇದೆ.ಕೈಗಾರಿಕೋದ್ಯಮಿಗಳ ಕಣ್ಣು ಕಪ್ಪತಗುಡ್ಡದ ಮೇಲೆ ಬಿದ್ದಿದ್ದು, ಅದರಲ್ಲಿರುವ ಖನಿಜ ನಾಶ ಮಾಡಲು ಹವಣಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡುವುದಿಲ್ಲ'.

-ಡಾ.ಅನ್ನದಾನೀಶ್ವರ ಸ್ವಾಮೀಜಿ, ಅನ್ನದಾನೀಶ್ವರ ಮಠದ ಪೀಠಾಧಿಪತಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry