ಸೋಮವಾರ, ಆಗಸ್ಟ್ 26, 2019
21 °C
ಶಾಲೆ, ಅಂಗನವಾಡಿಗಳಲ್ಲಿ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ

ಹಾಲು ವಿತರಣೆ: ಬೇಜವಾಬ್ದಾರಿ ತೋರಿದರೆ ಕಠಿಣ ಕ್ರಮ

Published:
Updated:

ದಾವಣಗೆರೆ: ಸರ್ಕಾರವು ಶಾಲೆ ಹಾಗೂ ಅಂಗನವಾಡಿಗಳ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು `ಕ್ಷೀರಭಾಗ್ಯ' ಯೋಜನೆ ಜಾರಿಗೊಳಿಸಿದ್ದು, ಅನುಷ್ಠಾನದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಭಾಷ್ ಎಸ್.ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಎಂಎಫ್ ವತಿಯಿಂದ ಶಾಮನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ `ಕ್ಷೀರಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳು ಮತ್ತು ಶಿಕ್ಷಕರು ಕಳಕಳಿಯಿಂದ ಜವಾಬ್ದಾರಿ ನಿರ್ವಹಿಸಬೇಕು. ಮನೆಯ ಮಕ್ಕಳಂತೆಯೇ ಶಾಲೆಯ ಮಕ್ಕಳನ್ನು ಕಾಣಬೇಕು. ಕಾಟಾಚಾರದಿಂದ ವರ್ತಿಸಿ ಹಾಲು ಹಾಳು ಮಾಡಬಾರದು ಎಂದರು.ಜಿ.ಪಂ. ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಮಾತನಾಡಿ, ಯೋಜನೆಯಿಂದ ಶಿಕ್ಷಕರಿಗೆ ಹೊರೆಯಾಗಬಹುದು. ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಡಿಡಿಪಿಐ ಡಿ.ಕೆ.ಶಿವಕುಮಾರ್ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಯ 1,53,056 ಹಾಗೂ ಅನುದಾನಿತ ಶಾಲೆಯ 55,764 ಮಕ್ಕಳು ಸೇರಿ 1ರಿಂದ 10ನೇ ತರಗತಿಯ ಒಟ್ಟು 2,08,820 ಮಕ್ಕಳು ಯೋಜನೆಗೆ ಒಳಪಡುತ್ತಾರೆ. ಪ್ರತಿ ಮಗುವಿಗೆ ದಿನವೊಂದಕ್ಕೆ ್ಙ 4.64ರಂತೆ ತಿಂಗಳಿಗೆ ಜಿಲ್ಲೆಗೆ 1,16,27,098 ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.ಜಿಲ್ಲೆಗೆ ತಿಂಗಳಿಗೆ 56 ಟನ್ ಹಾಲಿನ ಪುಡಿ ಬೇಡಿಕೆಯಿದ್ದು, 28 ಟನ್ ಸರಬರಾಜಾಗಿದೆ. ಎಲ್ಲ ಶಾಲೆಗಳಿಗೂ ಹಾಲಿನ ಪುಡಿ ಪೂರೈಸಲಾಗಿದೆ. ಅಡುಗೆಯವರಿಗೆ ಮಾಸಿಕ ್ಙ 100 ಗೌರವಧನ ಹೆಚ್ಚುವರಿಯಾಗಿ ದೊರೆಯಲಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಾಸುದೇವ ಮಾತನಾಡಿ, ಅಂಗನವಾಡಿಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಹಿಂದಿನಿಂದಲೂ ಕ್ರಮ ವಹಿಸಲಾಗಿದೆ. ಸರ್ಕಾರದಿಂದ ಹಾಲಿನ ಪುಡಿ ಪೂರೈಸಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಇಒ ಎಲ್.ಎಸ್.ಪ್ರಭುದೇವ, ಕೆಎಂಎಫ್ ವ್ಯವಸ್ಥಾಪಕ ಸುರೇಶ್ ಮಾತನಾಡಿದರು. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಕೆಎಂಎಫ್ ಉಪ ವ್ಯವಸ್ಥಾಪಕ ಗುರುಶೇಖರ್, ಆರ್‌ಎಂಎಸ್ ಡಿವೈಪಿಸಿ ಗುರುಪ್ರಸಾದ್, ಎಸ್‌ಎಸ್‌ಎ ಉಪ ಸಮನ್ವಯಾಧಿಕಾರಿ ಗಂಗಾಧರಸ್ವಾಮಿ, ಎಸ್‌ಡಿಎಂಸಿ ಉಪಾಧ್ಯಕ್ಷ ಎಚ್.ಆರ್.ಲಿಂಗರಾಜ್, ಪಾಲಿಕೆ ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ್, ಸಿಡಿಪಿಒ ಚಂದ್ರಪ್ಪ ಹಾಗೂ ಶಾಲೆಯ ಶಿಕ್ಷಕರು ಹಾಜರ್ದ್ದಿದರು.ದಕ್ಷಿಣ ವಲಯ ಬಿಇಒ ಸಿದ್ದಪ್ಪ ಸ್ವಾಗತಿಸಿದರು. ಶಿವಲಿಂಗಪ್ಪ ವಂದಿಸಿದರು.ಮಕ್ಕಳ ಆರೋಗ್ಯ ವೃದ್ಧಿಗೆ `ಕ್ಷೀರಭಾಗ್ಯ'

ಹರಿಹರ:
ದೇಶದ ಸಂಪತ್ತಾಗಿರುವ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವ ಉದ್ದೇಶದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರ `ಕ್ಷೀರಭಾಗ್ಯ' ಯೋಜನೆ ಜಾರಿಗೆ ತಂದಿದೆ ಎಂದು ತಹಶೀಲ್ದಾರ್ ಜಿ.ನಜ್ಮಾ ತಿಳಿಸಿದರು.ನಗರದ ಹೊಸಪೇಟೆ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಕ್ಷೀರಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಬಡ ಪೋಷಕರು ಮಕ್ಕಳಿಗೆ ನಿಯಮಿತವಾಗಿ ಹಾಲು ನೀಡುವುದು ಕಷ್ಟವಾಗಬಹುದು. ಸರ್ಕಾರವೇ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಿಸುತ್ತಿರುವುದು ಪೋಷಕರಿಗೆ ಸಂತಸ ತಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಇಒ ಡಾ.ಎಸ್.ರಂಗಸ್ವಾಮಿ ಮಾತನಾಡಿ, ಮಕ್ಕಳನ್ನು ನಿರಂತವಾಗಿ ಕಾಡುತ್ತಿರುವ ರಕ್ತಹೀನತೆ ಮತ್ತು ಅಪೌಷ್ಟಿಕತೆ ಸಮಸ್ಯೆ ತೊಡೆದು ಹಾಕಲು ಸರ್ಕಾರ `ಕ್ಷೀರಭಾಗ್ಯ' ಯೋಜನೆ ಜಾರಿಗೊಳಿಸಿದೆ ಎಂದರು.ಹಾಲಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಿವೆ. ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.ಬಿಇಒ ಬಿ.ಆರ್.ಬಸವರಾಜಪ್ಪ ಮಾತನಾಡಿ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ ಪ್ರಾರ್ಥನೆಗೂ ಮುನ್ನ ವಿದ್ಯಾರ್ಥಿಗಳಿಗೆ 150 ಮಿ.ಲೀ. ಹಾಲು ನೀಡಲಾಗುವುದು. ಮಕ್ಕಳ ಹಿಂದಿನ ದಿನದ ಹಾಜರಾತಿ ಆಧಾರದ ಮೇಲೆ ಹಾಲು ತಯಾರಿಸಲಾಗುತ್ತದೆ. ಮಕ್ಕಳು ನಿತ್ಯವೂ ಶಾಲೆಗೆ ತಪ್ಪದೇ ಹಾಜರಾಗಬೇಕು ಎಂದು ಹೇಳಿದರು.`ಅಕ್ಷರ ದಾಸೋಹ' ಯೋಜನೆ ಉಪ ನಿರ್ದೇಶಕ ಸಂಜೀವಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ರೇಣು ಎಂ. ತಾಮ್ರೆ, ಎಸಿಡಿಪಿಒ ಚಂದ್ರಕಲಾ, ಮುಖ್ಯಶಿಕ್ಷಕಿ ಕೆ. ಮಲ್ಲಿಕಾ, ನಿವೃತ್ತ ಮುಖ್ಯಶಿಕ್ಷಕ ಮಲ್ಲಿಕಾರ್ಜುನಪ್ಪ ಹಾಜರ್ದ್ದಿದ್ದರು.

ವಿದ್ಯಾರ್ಥಿನಿ ಸಹನಾ ಪ್ರಾರ್ಥಿಸಿದರು. ಶಿಕ್ಷಕ ಕೆ.ಸಿದ್ದಲಿಂಗಪ್ಪ ಸ್ವಾಗತಿಸಿದರು.ಪಕ್ಕದ ಶಾಲೆಯಿಂದ ಹಾಲು ಪೂರೈಕೆ!

ಆದರ್ಶ ಸ್ವಯಂ ಸೇವಾ ಸಂಸ್ಥೆಯಿಂದ ಜಿಲ್ಲೆಯ 84 ಶಾಲೆಗಳ 13,543 ಮಕ್ಕಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಈ ಸಂಸ್ಥೆ ಹಾಲು ವಿತರಿಸುವ ಕಂಟೆನರ್ ಹಾಗೂ ಸ್ಟೀಮರ್ ವ್ಯವಸ್ಥೆ ಮಾಡಲು 20ರಿಂದ 25 ದಿನ ಕಾಲಾವಕಾಶ ಕೋರಿದೆ.ಹೀಗಾಗಿ, ಅಂಥ ಶಾಲೆಗಳ ಮಕ್ಕಳಿಗೆ ಪಕ್ಕದ ಶಾಲೆಗಳಿಂದ ಹಾಲು ಪಡೆದು ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯೋಜನೆ ಶೇ 100ರಷ್ಟು ಅನುಷ್ಠಾನ ಕಂಡಿದೆ ಎಂದು ಡಿಡಿಪಿಐ ಡಿ.ಕೆ.ಶಿವಕುಮಾರ್ ತಿಳಿಸಿದರು.ಸೀತಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕರೇ ಮುಂದೆ ಬಂದು ಹಾಲು ವಿತರಣೆಗೆ ವ್ಯವಸ್ಥೆ ಕೈಗೊಂಡಿದ್ದಾರೆ ಎಂದು ಬಿಇಒ ಸಿದ್ದಪ್ಪ ತಿಳಿಸಿದರು.

Post Comments (+)