ಗುರುವಾರ , ಮೇ 19, 2022
20 °C

ಹಾಲು ಸಂಗ್ರಹ: ಸ್ವಾವಲಂಬನೆಯತ್ತ ದಾಪುಗಾಲು

ಪ್ರಜಾವಾಣಿ ವಾರ್ತೆ, ಶಿವರಂಜನ್ ಸತ್ಯಂಪೇಟೆ. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆರು ತಿಂಗಳ ಹಿಂದಿದ್ದ ಕೇವಲ 8,000 ಲೀಟರ್ ಹಾಲು ಉತ್ಪಾದನಾ ಸಾಮರ್ಥ್ಯವನ್ನು 55,000 ಲೀಟರ್‌ಗೆ ಏರಿಸುವ ಜತೆಗೆ, ಹಾಲು ಉತ್ಪಾದನೆಯಲ್ಲಿ ರೈತರಲ್ಲಿ ಸ್ವಾವಲಂಬನೆ ಮೂಡಿಸುವತ್ತ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಹತ್ವದ ಹೆಜ್ಜೆಯಿಟ್ಟಿದೆ.ನಬಾರ್ಡ್‌ನ ಸಬ್ಸಿಡಿಯೊಂದಿಗೆ ಈ ಸಹಕಾರ ಬ್ಯಾಂಕ್ ರೈತರಿಗೆ ಹೈನುಗಾರಿಕೆಗೆಂದು ಸಾಲ ನೀಡಿದ್ದು, `ಕಾಮಧೇನು~ ಹೈನುಗಾರಿಕೆ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಹಾಲು ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಸತತ ಆರು ತಿಂಗಳು ಕಾಲ `ಹಾಲು ಉತ್ಪಾದಕರ ಸಂಘ~ಕ್ಕೆ ಹಾಲು ಸರಬರಾಜು ಮಾಡಿದ ಒಬ್ಬೊಬ್ಬ ರೈತರಿಗೆ ಎರಡು ಆಕಳ ಖರೀದಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡುವ ಮೂಲಕ ಜಿಲ್ಲೆಯ 700 ರೈತರಿಗೆ ಶೇ 3ರ ಬಡ್ಡಿ ದರದಲ್ಲಿ ಒಟ್ಟು 7 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್ ನೀಡಿದೆ.ಗುಲ್ಬರ್ಗ-ಬೀದರ್ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಈ ಹಿಂದೆ ಬಳ್ಳಾರಿ, ಶಿವಮೊಗ್ಗ, ಕೋಲಾರದಿಂದ ಹಾಲನ್ನು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿತ್ತು. ಆದರೆ ಸಹಕಾರ ಬ್ಯಾಂಕಿನ ಈ ಸಾಲ ಯೋಜನೆಯಿಂದಾಗಿ ಜಿಲ್ಲೆಗೆ ಅಗತ್ಯವಿರುವ 60,000 ಲೀಟರ್  ಹಾಲು ಪೂರೈಕೆ ಸಾಮರ್ಥ್ಯವನ್ನು ಈಗ ಜಿಲ್ಲೆಯ ಒಕ್ಕೂಟ ಪಡೆಯುವಂತಾಗಿದೆ.ಎಷ್ಟೆಷ್ಟು ಸಾಲ-ಸಬ್ಸಿಡಿ?: ಸಾಮಾನ್ಯ ವರ್ಗದ ರೈತರಿಗೆ ಶೇ 25, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ 33ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಮೇ 2011ರಿಂದ ಆರಂಭವಾಗಿರುವ `ಕಾಮಧೇನು~ ಸಾಲ ಯೋಜನೆಯಿಂದಾಗಿ   ಜಿಲ್ಲೆಯಲ್ಲಿ ಈವರೆಗೆ ಸುಮಾರು 1,400 ಹಸು -ಎಮ್ಮೆಗಳನ್ನು ಖರೀದಿಸಲಾಗಿದೆ.

ಹೈನುಗಾರಿಕೆಯಿಂದಾಗಿ ಉಪ ಉತ್ಪನ್ನವೂ ಹೆಚ್ಚಾಗಿದೆ. ಪ್ರತಿಯೊಬ್ಬ ರೈತ ವಾರಕ್ಕೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಗಳಿಸುತ್ತಿದ್ದಾರೆ.ಹಾಲು ಪೂರೈಕೆ ಮಾಡುವ ರೈತರಿಗೆ ಉತ್ತಮ ದರ ಸಿಗುತ್ತಿದ್ದು. ಸರ್ಕಾರದಿಂದ ಶೇ 2ರಷ್ಟು ಸಹಾಯಧನವೂ   ಲಭಿಸುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಬೆಣ್ಣೂರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಕಾಮಧೇನು~ ಯೋಜನೆಯಿಂದ ಜಿಲ್ಲೆಯ ಗುಲ್ಬರ್ಗ ತಾಲ್ಲೂಕಿನ ಪಟ್ಟಣ, ಭೀಮಳ್ಳಿ, ಓಕಳಿ, ಮಹಾಗಾಂವ, ದಸ್ತಾಪುರ, ಮೇಳಕುಂದಾ, ಕಿಣ್ಣಿ ಸಡಕ್, ಜೀವಣಗಿ, ಸೊಂತ, ಚಿಂಚೋಳಿ ತಾಲ್ಲೂಕಿನ ಐನಾಪುರ, ಮಿರಿಯಾಣ, ಆಳಂದ ತಾಲ್ಲೂಕಿನ ಕಡಗಂಚಿ, ಸಕ್ಕರಗಾ, ಮಾಡ್ಯಾಳ, ಸರಸಂಬಾ, ಕರಹರಿ, ಚಿತ್ತಾಪುರ ತಾಲ್ಲೂಕಿನ ಬೆಡಸೂರ, ಅರಣಕಲ್ ಮುಂತಾದ ಗ್ರಾಮಗಳಲ್ಲಿ ಹಾಲು ಉತ್ಪಾದಿಸುವ ರೈತರು ಹೆಚ್ಚಾಗುತ್ತಿದ್ದಾರೆ.ಜಿಲ್ಲೆಯಲ್ಲಿ ಈ ಹಿಂದೆ ಪ್ರತಿ ದಿನ ಕೇವಲ 8,000 ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈ ಯೋಜನೆ ಜಾರಿಗೆ ತಂದಿರುವುದರಿಂದ ಈಗ ಪ್ರತಿದಿನಕ್ಕೆ 55,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.ಒಟ್ಟು ಬೇಡಿಕೆಯಿರುವ 60,000 ಲೀಟರ್ ಹಾಲಿನ ಪೈಕಿ 5,000 ಲೀಟರ್ ಕೊರತೆಯಿದ್ದು, ಇದನ್ನು ಮುಂದಿನ ಒಂದು ವಾರದಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ರೈತರು ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.