ಶುಕ್ರವಾರ, ಫೆಬ್ರವರಿ 26, 2021
25 °C
ಕನಕಪುರ ಸಮೀಪ 44 ಎಕರೆ ಪ್ರದೇಶದಲ್ಲಿ ₹ 350 ಕೋಟಿ ವೆಚ್ಚದ ಕಾರ್ಯಯೋಜನೆ

ಹಾಲು ಸಂಸ್ಕರಣೆ ಘಟಕ ಶೀಘ್ರ:ಅಪ್ಪಯ್ಯಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲು ಸಂಸ್ಕರಣೆ ಘಟಕ ಶೀಘ್ರ:ಅಪ್ಪಯ್ಯಣ್ಣ

ದೊಡ್ಡಬಳ್ಳಾಪುರ: ಕನಕಪುರ ಸಮೀಪ 44 ಎಕರೆ ಪ್ರದೇಶದಲ್ಲಿ ₹ 350 ಕೋಟಿ ಅಂದಾಜು ವೆಚ್ಚದಲ್ಲಿ ಹಾಲು ಸಂಸ್ಕರಣೆ ಹಾಗೂ ಉಪ ಉತ್ಪನ್ನಗಳ ತಯಾರಿಕಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.ಇದು ಸಾಕಾರಗೊಂಡರೆ ರೈತರ ಹಾಲಿಗೆ ಉತ್ತಮ ಬೆಲೆ ಬರಲಿದೆ ಎಂದು ‘ಬಮೂಲ್‌’ ನಿರ್ದೇಶಕ ಎಚ್‌.ಅಪ್ಪಯ್ಯಣ್ಣ ಹೇಳಿದರು.ಅವರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಗುರುವಾರ ನಡೆದ ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದರು.

ಪ್ರತಿದಿನ ಬೆಂಗಳೂರು ಹಾಲು ಒಕ್ಕೂಟಕ್ಕೆ 15 ಲಕ್ಷ ಲೀಟರ್‌ ಹಾಲು ಬರುತ್ತಿದೆ. ಇದರಲ್ಲಿ 10 ಲಕ್ಷ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪುಡಿ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.ಪ್ರಾದೇಶಿಕ ಸಭೆಯಲ್ಲಿ ಮಾತನಾಡಿದ ಕಸಾಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಗ್ರಪ್ಪ, ಗುಜರಾತ್‌ನಲ್ಲಿ ಪ್ರತಿ ಲೀಟರ್‌ ಹಾಲಿಗೆ ರೈತರಿಗೆ ₹ 33 ನೀಡುತ್ತಿದ್ದಾರೆ. ಈ ಬೆಲೆಯು ಸಹ ಕಡಿಮೆಯಾಗಿದೆ.ಅಸಮರ್ಥ ಅಧಿಕಾರಿಗಳು:  ಹಾಲಿಗೆ ವೈಜ್ಞಾನಿಕ  ಬೆಲೆ ನಿಗದಿಯಾಗಬೇಕು ಎನ್ನುತ್ತಾರೆ ಅಲ್ಲಿನ ರೈತರು. ‘ಅಮೂಲ್‌’ ನಂತೆ ಕೆಎಂಎಫ್‌ ನವರು ತಮ್ಮ ಉತ್ಪನ್ನಗಳನ್ನು ಬ್ರ್ಯಾಂಡ್‌ ಮಾಡುವಲ್ಲಿ ವಿಫಲರಾಗಿದ್ದಾರೆ. ಕಂಚಿಗನಾಳ ಗ್ರಾಮದ ಎಂಪಿಸಿಎಸ್‌ ಕಾರ್ಯದರ್ಶಿ ಪಿಳ್ಳೇಗೌಡ ಮಾತನಾಡಿ, ಹಾಲು ಸರಬರಾಜು ಮಾಡುವ ರೈತರಿಗೆ ಬ್ಯಾಂಕ್‌ಗಳ ಖಾತೆಗಳಿಗೆ ಅನ್‌ಲೈನ್‌ ಮೂಲಕ ಹಣ  ಸಂದಾಯಮಾಡಲಾಗುತ್ತಿದೆ.ಆದರೆ ರೈತರ ಹಾಲಿನ ಹಣವನ್ನು ಬ್ಯಾಂಕ್‌ನಲ್ಲಿನ ಬೆಳೆ ಸಾಲಗಳಿಗೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದ್ದು ಸಂಘದಲ್ಲೇ ಹಣ ನೀಡಬೇಕು ಎಂದು ಒತ್ತಡಹಾಕಲಾಗುತ್ತಿದೆ. ರೈತರ ಹಣವನ್ನು ಬೆಳೆ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಒಕ್ಕೂಟದಿಂದ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.ಮೇಳೇಕೋಟೆ ಎಂಪಿಸಿಎಸ್‌ ಕಾರ್ಯದರ್ಶಿ ಮುನಿಯಪ್ಪ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಅಪಘಾತಗಳಿಗೆ ನಿಧನ ಹೊಂದಿದ ಸಂದರ್ಭದಲ್ಲಿ ಕುಟುಂದವರಿಗೆ ನೀಡಲಾಗುವ ಆಮ್‌ ಆದ್ಮಿ ವಿಮಾ ಹಣ ಪಡೆಯಲು ಎಫ್‌ಐಆರ್‌, ಮರಣೋತ್ತರ ಪರೀಕ್ಷಾ ವರದಿ ಜೊತೆಗೆ ಠಾಣೆಯ ಅಂತಿಮ ವರದಿಯನ್ನು ನೀಡುವ ಕ್ರಮ ಸರಿಯಲ್ಲ. ಇದರಿಂದ ಆಮ್‌ ಆದ್ಮಿ ವಿಮಾ ಹಣ ಪಡೆಯಲು ಸಾಧ್ಯ ಇಲ್ಲದಾಗಿದೆ. ಇದನ್ನು ಸರಿಪಡಿಸಬೇಕು ಎಂದರು.ಬಚ್ಚಹಳ್ಳಿ ಎಂಪಿಸಿಎಸ್‌ ಕಾರ್ಯದರ್ಶಿ ಸತೀಶ್‌ ಮಾತನಾಡಿ, ಹಾಲಿನ ಗುಣಮಟ್ಟ ಕಡಿಮೆ ಇದ್ದರೆ ಹಾಲಿಗೆ ಬೆಲೆ ಕಡಿಮೆ ನೀಡಲಾಗುತ್ತದೆ. ಅದೇ ರೀತಿ ಕಾರ್ಯದರ್ಶಿಗಳ ಸಂಬಳವನ್ನು ಕಡಿತ ಮಾಡಲಾಗುತ್ತದೆ. ಆದರೆ ಬಮೂಲ್‌ನ ಹಾಲಿಗೆ ಸೂಕ್ತ ಮಾರುಕಟ್ಟೆ ವಿಸ್ತರಣೆ ಮಾಡದೇ ಕಾಲಾಹರಣ ಮಾಡುತ್ತಿರುವ ಅಧಿಕಾರಿಗಳ ಸಂಬಳವನ್ನು ಕಡಿತಮಾಡಬೇಕು ಎಂದು ಒತ್ತಾಯಿಸಿದರು.‘ಬಮೂಲ್‌’ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ರೈತರ ಹಾಗೂ ಕಾರ್ಯದರ್ಶಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಆಮ್‌ ಆದ್ಮಿ ವಿಮಾ ಹಣ ಪಡೆಯಲು ಇರುವ ತೊಡಕುಗಳನ್ನು ಹಾಗೂ ಬ್ಯಾಂಕ್‌ಗಳಲ್ಲಿನ ರೈತರ ಹಾಲಿನ ಹಣವನ್ನು ಕೃಷಿ ಸಾಲಕ್ಕೆ ಜಮಾ ಮಾಡಿಕೊಳ್ಳುವ ಕ್ರಮವನ್ನು ಸರಿಪಡಿಸಿ ಒಕ್ಕೂಟದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ನೀಡಲಾಗುವುದು. ಯಾವುದೇ ಕಾರಣಕ್ಕೂ ರೈತರ ಹಾಲಿನ ಹಣವನ್ನು ಕೃಷಿ ಹಾಗೂ ಇತರೆ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದರು.ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘದ ಅಧ್ಯಕ್ಷ ಟಿ.ಎಸ್‌.ರುದ್ರಪ್ಪ, ಕಾರ್ಯದರ್ಶಿ ಎಚ್‌.ನಾರಾಯಣಪ್ಪ ಮನವಿ ಸಲ್ಲಿಸಿದರು.ಸಭೆಯಲ್ಲಿ ಸಹಕಾರಿ ಯೂನಿಯನ್‌ ನಿರ್ದೇಶಕ ಸುಬ್ಬರಾಯಪ್ಪ, ಬಮೂಲ್‌ ಉಪಾಧ್ಯಕ್ಷ ಬಿ.ಡಿ.ನಾಗಪ್ಪ, ಬಮೂಲ್‌ ದೊಡ್ಡಬಳ್ಳಾಪುರ ಶಾಖೆಯ ಉಪವ್ಯವಸ್ಥಾಪಕ ಡಾ.ಎಂ.ಶ್ರೀನಿವಾಸ್‌, ಡಾ.ಎಲ್‌.ಬಿ.ನಾಗರಾಜು, ಎಂ.ಎಸ್‌.ಅನಂತಮೂರ್ತಿ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು.***

ಕೆಎಂಎಫ್‌ನ ಅಸಮರ್ಥ ಅಧಿಕಾರಿಗಳು ಹಾಗೂ ಆಡಳಿತಗಾರರಿಂದಾಗಿ ರೈತರ ಹಾಲಿಗೆ ಉತ್ತವ ಬೆಲೆ ದೊರೆಯುತ್ತಿಲ್ಲ. ಈ ವ್ಯವಸ್ಥೆ ಸರಿಹೋಗದ ಹೊರತು ರೈತರ ಹಾಲಿಗೆ ವೈಜ್ಞಾನಿಕ ಬೆಲೆ ದೊರೆಯಲು ಸಾಧ್ಯ ಇಲ್ಲ.

-ಎಚ್‌.ಅಪ್ಪಯ್ಯಣ್ಣ, ‘ಬಮೂಲ್‌’ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.