ಮಂಗಳವಾರ, ಮೇ 24, 2022
31 °C

ಹಾಲೆಂಡ್‌ಗೆ ಗೆಲುವಿನ ಒಂದೇ ಒಂದು ಆಸೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಹಾಲೆಂಡ್‌ಗೆ ಗೆಲುವಿನ ಒಂದೇ ಒಂದು ಆಸೆ. ಆದರೆ ಈ ಕನಸು ನನಸಾಗದಂತೆ ನೋಡಿಕೊಳ್ಳುವುದು ಐರ್ಲೆಂಡ್ ಛಲ.ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನಲ್ಲಿರುವ ಹಾಲೆಂಡ್ ಈವರೆಗೆ ಆಡಿರುವ ಐದರಲ್ಲಿ ಒಂದು ಪಂದ್ಯವನ್ನೂ ಗೆದ್ದಿಲ್ಲ. ಆದರೆ ತನ್ನಂತೆಯೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಹ ಸದಸ್ಯ ರಾಷ್ಟ್ರವಾಗಿರುವ ಐರ್ಲೆಂಡ್ ಎದುರಾದರೂ ಜಯ ಸಾಧಿಸಬೇಕೆಂದು ಅದು ಬಯಸಿದೆ.ಪೀಟರ್ ಬೊರೆನ್ ನಾಯಕತ್ವದಲ್ಲಿ ಹಾಲೆಂಡ್ ಯಾವುದೇ ಅಚ್ಚರಿಯ ಫಲಿತಾಂಶವನ್ನು ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಐರ್ಲೆಂಡ್ ತಂಡದವರು ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದಾರೆ. ಆದ್ದರಿಂದ ಶುಕ್ರವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿ ಪ್ರಖರವಾಗಿ ಹೊಳೆಯುತ್ತಿದೆ.ಕ್ಷೇತ್ರರಕ್ಷಣೆಯಲ್ಲಿ ಭಾರಿ ಬಲವನ್ನು ತೋರಿರುವ ವಿಲಿಯಮ್ ಪೋರ್ಟರ್‌ಫೀಲ್ಡ್ ನೇತೃತ್ವದ ಐರ್ಲೆಂಡ್ ತಂಡದಲ್ಲಿ ಪ್ರಭಾವಿ ಬೌಲರ್‌ಗಳೂ ಇದ್ದಾರೆ. ಅಷ್ಟೇ ಅಲ್ಲ ಶಕ್ತಿಯುತ ಆಟವಾಡಿರುವ ಬ್ಯಾಟ್ಸ್‌ಮನ್‌ಗಳೂ ಇದ್ದಾರೆ. ಆದ್ದರಿಂದ ಅದು ಗುಂಪಿನ ತನ್ನ ಕೊನೆಯ ಪಂದ್ಯವನ್ನು ಗೆದ್ದು ತಕ್ಕಮಟ್ಟಿಗೆ ಉತ್ತಮ ಸ್ಥಿತಿಯಲ್ಲಿ ನಿಂತ ಸಮಾಧಾನದೊಂದಿಗೆ ಸ್ವದೇಶಕ್ಕೆ ಹಿಂದಿರುಗಲು ಬಯಸಿದೆ.ಹಾಲೆಂಡ್ ಹಾಗೂ ಐರ್ಲೆಂಡ್‌ಗೆ ಇದೇ ಕೊನೆಯ ವಿಶ್ವಕಪ್ ಪಂದ್ಯ ಆಗಬಹುದು. ಏಕೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಮುಂಬರುವ ವಿಶ್ವಕಪ್‌ನಲ್ಲಿ ಪ್ರಬಲವಾದ 10 ತಂಡಗಳನ್ನು ಮಾತ್ರ ಉಳಿಸಿಕೊಳ್ಳಲು ಯೋಚನೆ ನಡೆಸಿದೆ.ಹದಿನಾಲ್ಕು ತಂಡಗಳ ಬದಲಿಗೆ ಹತ್ತು ತಂಡಗಳ ಟೂರ್ನಿಯಾಗಿಸಲು ಒತ್ತಡವೂ ಹೆಚ್ಚಿದೆ. ದುರ್ಬಲ ತಂಡಗಳು ಆಡುವ ಪಂದ್ಯಗಳಿಗೆ ಪ್ರೇಕ್ಷಕರಿಂದ ಹಾಗೂ ಟೆಲಿವಿಷನ್ ವೀಕ್ಷಕರಿಂದ ನೀರಸ ಪ್ರತಿಕ್ರಿಯೆ! ಇದೇ ಕಾರಣಕ್ಕೆ ಐಸಿಸಿ ತನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗುವಂತೆ ಮಾಡಿದರೂ ಅಚ್ಚರಿಯಿಲ್ಲ.ಒಂದು ವೇಳೆ ಐಸಿಸಿ ತನ್ನ ಯೋಚನೆಯನ್ನು ನಿರ್ಧಾರವಾಗಿ ಪರಿವರ್ತಿಸಿದಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಅಂಬೇಗಾಲು ಇಡುತ್ತಿರುವ ಹಾಲೆಂಡ್ ಹಾಗೂ ಐರ್ಲೆಂಡ್‌ನಂಥ ತಂಡಗಳಿಗೆ ವಿಶ್ವಕಪ್‌ನಂಥ ದೊಡ್ಡ ಟೂರ್ನಿಯಲ್ಲಿ ಆಡುವ ಅವಕಾಶವೇ ಸಿಗದಂತಾಗುತ್ತದೆ. ಅದೇನೇ ಇರಲಿ; ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಹಗಲು ಹೊತ್ತಲ್ಲಿ ನಡೆಯುವ ಈ ಪಂದ್ಯಕ್ಕೆ ಪ್ರೇಕ್ಷಕರಿಂದ ಸ್ವಲ್ಪ ಮಟ್ಟಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಏಕೆಂದರೆ ಸುಮಾರು 50 ಸಾವಿರದಷ್ಟು ಟಿಕೆಟ್ ಮಾರಾಟವಾಗಿವೆ ಎನ್ನುವುದು ಲೆಕ್ಕಾಚಾರ.ದಕ್ಷಿಣ ಆಫ್ರಿಕಾ, ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದಂಥ ಕ್ರಿಕೆಟ್ ಶಕ್ತಿಗಳು ಇರುವ ‘ಬಿ’ ಗುಂಪಿನಲ್ಲಿ ಐರ್ಲೆಂಡ್ ತಂಡದವರು ಪ್ರೇಕ್ಷಕರನ್ನು ರಂಜಿಸುವಂಥ ಆಟವನ್ನು ಆಡಿದ್ದಾರೆ ಎನ್ನುವುದೇ ಇದಕ್ಕೆ ಕಾರಣ ಇರಬಹುದು.ಪೋರ್ಟರ್‌ಫೀಲ್ಡ್ ಪಡೆಯು ಆ್ಯಂಡ್ರ್ಯೂ ಸ್ಟ್ರಾಸ್ ಬಳಗವನ್ನು ಮಣಿಸಿದ್ದು, ಕನಸಿನಲ್ಲಿಯೂ ನಿರೀಕ್ಷೆ ಮಾಡಿರದ ಫಲಿತಾಂಶ. ಗಮನ ಸೆಳೆಯುವ ಅಂಶವೆಂದರೆ ಐರ್ಲೆಂಡ್‌ನವರು ಪ್ರತಿಯೊಂದು ಪಂದ್ಯದಲ್ಲಿಯೂ ಪೈಪೋಟಿ ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಚ್ಚಿನ ಅನುಭವ ಇಲ್ಲದಿದ್ದರೂ, ಅಂಗಳದಲ್ಲಿ ಐರ್ಲೆಂಡ್‌ನವರು ತೋರುವ ಛಲ ಮೆಚ್ಚುವಂಥದು.ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿಯೂ ಉನ್ನತ ಮಟ್ಟದ ಪ್ರದರ್ಶನವನ್ನು ನೀಡುವ ಮೂಲಕ ಎರಡು ಪಾಯಿಂಟುಗಳನ್ನು ಗಿಟ್ಟಿಸುವ ಕನಸು ಕಂಡಿದೆ ಐರ್ಲೆಂಡ್. ನಿರೀಕ್ಷೆಯಂತೆ ಹಾಲೆಂಡ್ ಎದುರು ಜಯ ಪಡೆದರೆ ಈ ತಂಡಕ್ಕೆ ಗುಂಪಿನಲ್ಲಿ ಆರನೇ ಸ್ಥಾನ ಸಿಗುತ್ತದೆ. ಅಷ್ಟು ಸಾಕು! ಅದೇ ದೊಡ್ಡ ಸಂತಸ. ಆದರೆ ಹಾಲೆಂಡ್ ತನ್ನ ಕೊನೆಯ ಹಣಾಹಣಿಯಲ್ಲಿ ನಿರಾಸೆ ಹೊಂದಬಾರದೆಂದು ಆಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.